Site icon Vistara News

Viral Video: ಒಂದೇ ಕಾಲಲ್ಲಿ ಶಾಲೆಗೆ ಹೋಗುತ್ತಿದ್ದ ಬಾಲಕಿ ನೆರವಿಗೆ ಬಂದ ನಟ ಸೋನು ಸೂದ್‌

Bihar Girl

ಪಾಟ್ನಾ: ಬಿಹಾರದ ಜಮುಯಿ ಜಿಲ್ಲೆಯ 10ವರ್ಷದ ಹುಡುಗಿಯೊಬ್ಬಳು ಒಂದೇ ಕಾಲಲ್ಲಿ ತುಂಬ ಕಷ್ಟಪಟ್ಟು ಶಾಲೆಗೆ ಹೋಗುವ ವಿಡಿಯೋ ನಿನ್ನೆಯಿಂದ ಸೋಷಿಯಲ್‌ ಮೀಡಿಯಾ ಮತ್ತು ಪ್ರಮುಖ ಮಾಧ್ಯಮಗಳಲ್ಲಿ ವೈರಲ್‌ (Bihar Viral News) ಆಗುತ್ತಿದೆ. ಈ ಪುಟ್ಟ ಹುಡುಗಿ ಸಮವಸ್ತ್ರ ಧರಿಸಿ, ಸ್ಕೂಲ್‌ ಬ್ಯಾಗ್‌ ಹಾಕಿಕೊಂಡು ನಡೆದುಕೊಂಡೇ ಶಾಲೆಗೆ ಹೋಗುತ್ತಾಳೆ. ಆದರೆ ಆಕೆಗೆ ಇರುವುದು ಒಂದೇ ಕಾಲು. ಬಲಗಾಲು ಮಾತ್ರ ಇರುವ ಹುಡುಗಿ ಅದೊಂದರ ಮೇಲೆ ಹೆಜ್ಜೆ ಊರುತ್ತ ಹೋಗುವುದನ್ನು ನೋಡಿದರೆ ಎಂಥವರಿಗೂ ಸಂಕಟವಾಗುತ್ತದೆ. ಆದರೆ ತನಗಿರುವ ನ್ಯೂನತೆಯನ್ನು ಮೆಟ್ಟಿನಿಂತು, ಶಾಲೆಗೆ ಹೋಗುವ ಇವಳನ್ನು ನೋಡಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿ, ಮನಸ್ಫೂರ್ತಿ ಹಾರೈಸಿದ್ದಾರೆ. ಇದೆಲ್ಲದರ ಮಧ್ಯೆ ಬಾಲಿವುಡ್‌ ನಟ ಸೋನು ಸೂದ್‌ ಬಾಲಕಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ.

ಬಾಲಕಿಯ ಹೆಸರು ಸೀಮಾ. ಎರಡು ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಒಂದು ಕಾಲು ಕಳೆದುಕೊಂಡಿದ್ದಾಳೆ. ಆಕೆ ಬಡವಳಾಗಿದ್ದರಿಂದ ಕೃತಕ ಕಾಲು ಅಳವಡಿಸಿಕೊಳ್ಳಲಾಗಲಿ, ಶಾಲೆಗೆ ಹೋಗಲು ವಾಹನ ವ್ಯವಸ್ಥೆ ಮಾಡಿಕೊಳ್ಳಲಾಗಲಿ ಸಾಧ್ಯವಾಗಲಿಲ್ಲ. ಹೀಗೆ ಸುಮಾರು 1 ಕಿಲೋಮೀಟರ್‌ಗಳಷ್ಟು ದೂರ ಪ್ರತಿನಿತ್ಯ ಒಂದೇ ಕಾಲಿನಲ್ಲಿ ನಡೆದುಕೊಂಡೇ ಹೋಗುತ್ತಿದ್ದಳು. ಈ ವಿಡಿಯೋವನ್ನು ಶೇರ್‌ ಮಾಡಿಕೊಂಡಿರುವ ಸೋನು ಸೂದ್‌, ಬಾಲಕಿ ಈಗ ಕುಪ್ಪಳಿಸುವಂತೆ ಶಾಲೆಗೆ ಹೋಗುತ್ತಿದ್ದಾಳೆ. ನಾನವಳಿಗೆ ಟಿಕೆಟ್‌ ಕಳಿಸುತ್ತಿದ್ದೇನೆ. ಆಕೆ ತನ್ನ ಎರಡೂ ಕಾಲುಗಳನ್ನು ಊರುತ್ತ, ಎಲ್ಲರಂತೆ ನಡೆದುಕೊಂಡೇ ಶಾಲೆಗೆ ಹೋಗುವ ಸಮಯ ಹತ್ತಿರದಲ್ಲೇ ಇದೆ ಎಂದು ಹೇಳಿದ್ದಾರೆ. ಅಂದರೆ ತಾವೇ ಆಕೆಗೆ ಚಿಕಿತ್ಸೆ ಕೊಡಿಸಿ, ಕೃತಕ ಕಾಲನ್ನು ಅಳವಡಿಸಲು ಸಹಾಯ ಮಾಡುವ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: Viral Video: ಮೊಟ್ಟೆ ಕದಿಯಲು ಬಂದ ಯುವತಿಗೆ ಚೆಂದನೆಯ ಪಾಠ ಕಲಿಸಿದ ನವಿಲು

ಸೋನು ಸೂದ್‌ ಟ್ವೀಟ್‌ ನೋಡಿದ ನೆಟ್ಟಿಗರು ಅವರನ್ನು ಸಿಕ್ಕಾಪಟೆ ಹೊಗಳಿದ್ದಾರೆ. ನೀವು ನಿಜ ಜೀವನದಲ್ಲಿ ಹೀರೋ. ನಿಮ್ಮಂಥವರನ್ನು ನಾನೆಂದೂ ನೋಡೇ ಇಲ್ಲ ಎಂದು ಒಬ್ಬರು ಬರೆದಿದ್ದರೆ, ನಿಮ್ಮನ್ನು ನೋಡಿದೆ ಆ ದೇವತೆಗಳೂ ಅಸೂಯೆ ಪಡುತ್ತವೆ. ನಿಮ್ಮ ಸಂಸ್ಥೆ ಏನೆಲ್ಲ ಒಳ್ಳೆಯ ಕೆಲಸಗಳನ್ನು ಮಾಡುತ್ತಿದೆಯೋ, ಅದಕ್ಕೆ ಪ್ರತಿಯಾಗಿ ಎಲ್ಲವೂ ಒಳ್ಳೆಯದೇ ಆಗುತ್ತದೆ ಎಂದು ಇನ್ನೊಬ್ಬರು ಬರೆದಿದ್ದಾರೆ. 

ಹುಡುಗಿಯ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಜಮುಯಿ ಜಿಲ್ಲಾಧಿಕಾರಿ ಕೂಡ ಆಕೆಗೆ ಸಹಾಯ ಮಾಡಿದ್ದಾರೆ. ಸೀಮಾಳಿಗೆ ಒಂದು ತ್ರಿಚಕ್ರ ವಾಹನ ಕೊಡಿಸಿದ್ದಾರೆ. ವಿಡಿಯೋ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಗಮನವನ್ನೂ ಸೆಳೆದಿದ್ದು, ಟ್ವೀಟ್‌ ಮಾಡಿರುವ ಅವರು, ಬಾಲಕಿಗೆ ಒಂದು ಕಾಲಿಲ್ಲ.  ಆದರೂ ಒಂದೇ ಕಾಲಿನಲ್ಲಿ ಕುಪ್ಪಳಿಸುತ್ತ ಶಾಲೆಗೆ ಹೋಗುವುದನ್ನು ನೋಡಿ ಮನಸು ತುಂಬಿ ಬಂತು. ಪ್ರತಿ ಹೆಣ್ಣುಮಕ್ಕಳೂ ಶಿಕ್ಷಣ ಪಡೆಯಬೇಕು. ಈ 10 ವರ್ಷದ ಬಾಲಕಿ ಎಲ್ಲರಿಗೂ ಸ್ಫೂರ್ತಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral News: ಆಕೆ 36 ವರ್ಷ ಪುರುಷ ವೇಷದಲ್ಲಿ ಬದುಕಿದರು, ಎಲ್ಲವೂ ಮಗಳಿಗಾಗಿ!

Exit mobile version