Site icon Vistara News

Bilateral Hand Transplant: ದೆಹಲಿ ವೈದ್ಯರ ಅಪರೂಪದ ಸಾಧನೆ; ವ್ಯಕ್ತಿಯೊಬ್ಬರಿಗೆ ದಾನಿಯ ಎರಡೂ ಕೈಗಳ ಯಶಸ್ವಿ ಜೋಡಣೆ

delhi hospital

delhi hospital

ನವದೆಹಲಿ: ದೆಹಲಿಯ ಸರ್‌ ಗಂಗಾ ರಾಮ್ ಆಸ್ಪತ್ರೆ (Sir Ganga Ram Hospital)ಯಲ್ಲಿ ಅಪರೂಪದ ಶಸ್ತ್ರ ಚಿಕಿತ್ಸೆಯೊಂದು ನಡೆದಿದ್ದು, 42 ವರ್ಷದ ವ್ಯಕ್ತಿಯ ದೇಹಕ್ಕೆ ಮೆದುಳು ನಿಷ್ಕ್ರಿಯಗೊಂಡ ಮಹಿಳೆಯಿಂದ ದಾನ ಪಡೆದ ಎರಡು ಕೈಗಳನ್ನು ಯಶಸ್ವಿಯಾಗಿ ಕಸಿ ಮಾಡಲಾಗಿದೆ (Bilateral Hand Transplant). ಇದು ದೆಹಲಿಯ ಮೊದಲ ಎರಡು ಕೈಗಳ ಕಸಿ ಎನಿಸಿಕೊಂಡಿದೆ. ಈ ಮೂಲಕ ಅಪಘಾತದಲ್ಲಿ ಎರಡೂ ಕೈ ಕಳೆದುಕೊಂಡ ಪೈಂಟರ್‌ ಮತ್ತೆ ಬ್ರಷ್‌ ಹಿಡಿಯುವಂತಾಗಿದೆ. ಮಹಿಳೆಯ ಅಂಗಾಂಗ ದಾನ ಒಟ್ಟು ನಾಲ್ವರ ಬದುಕಿಗೆ ನೆರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ʼʼ42 ವರ್ಷದ ವ್ಯಕ್ತಿಗೆ ಯಶಸ್ವಿಯಾಗಿ ಎರಡೂ ಕೈಗಳನ್ನು ಜೋಡಿಸಲಾಗಿದ್ದು ಅವರನ್ನು ಗುರುವಾರ ಡಿಸ್‌ಚಾರ್ಜ್‌ ಮಾಡಲಾಗುವುದುʼʼ ಎಂದು ಸರ್‌ ಗಂಗಾ ರಾಮ್ ಆಸ್ಪತ್ರೆಯ ಮೂಲಗಳು ಹೇಳಿವೆ. ʼʼ2020ರಲ್ಲಿ ನಡೆದ ರೈಲು ಅಪಘಾತವೊಂದರಲ್ಲಿ ಅವರು ತಮ್ಮ ಎರಡೂ ಕೈಗಳನ್ನು ಕಳೆದುಕೊಂಡಿದ್ದರು. ತೀರಾ ಬಡತನ ಹಿನ್ನೆಲೆಯ ಅವರು ಬದುಕಿನ ಬಗ್ಗೆ ಎಲ್ಲ ಭರವಸೆ ಕಳೆದುಕೊಂಡಿದ್ದರು. ಇದೀಗ ಅವರ ಬಾಳಿನಲ್ಲಿಯೂ ಹೊಸ ಬೆಳಕು ಮೂಡಿದೆʼʼ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಯಾರು ಈ ದಾನಿ ?

ಈ ಪೈಂಟರ್ ಬದುಕಿಗೆ ಬೆಳಕು ತಂದವರ ಹೆಸರು ಮೀನಾ ಮೆಹ್ತಾ. ಮೆದುಳು ನಿಷ್ಕ್ರಿಯಗೊಂಡ ದಕ್ಷಿಣ ದೆಹಲಿ ಶಾಲೆಯೊಂದರ ಮಾಜಿ ಆಡಳಿತ ಮುಖ್ಯಸ್ಥೆ ಮೀನಾ ಮೆಹ್ತಾ ಅವರು ತಮ್ಮ ಮರಣದ ನಂತರ ಅಂಗಾಂಗಗಳನ್ನು ದಾನ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದರು. ಅದರಂತೆ ಇದೀಗ ಅವರ ಅಂಗಾಂಗಗಳನ್ನು ದಾನ ಮಾಡಲಾಗಿದೆ. ಮೀನಾ ಮೆಹ್ತಾ ಅವರ ಮೂತ್ರಪಿಂಡ, ಪಿತ್ತಜನಕಾಂಗ ಮತ್ತು ಕಾರ್ನಿಯಾಗಳು ಇತರ ಮೂವರ ಜೀವಕ್ಕೆ ನೆರವಾಗಿದೆ. ಜತೆಗೆ ಕೈಗಳು ಪೈಂಟರ್‌ನ ಕನಸುಗಳನ್ನು ಪುನರುಜ್ಜೀವನಗೊಳಿಸಲಿದೆ.

ವೈದ್ಯರ ಪರಿಶ್ರಮ

ವೈದ್ಯರ ನಿರಂತರ ಪರಿಶ್ರಮ, ಅವಿರತ ದುಡಿಮೆಯಿಂದಾಗಿ ಈ ಅಪರೂಪದ ಶಸ್ತ್ರ ಚಿಕಿತ್ಸೆ ಸಾಧ್ಯವಾಗಿದೆ. 12 ಗಂಟೆಗಳಿಗಿಂತ ಹೆಚ್ಚು ಕಾಲ ನಡೆದ ಶಸ್ತ್ರಚಿಕಿತ್ಸೆಯು ದಾನಿಯ ಕೈಗಳು ಮತ್ತು ಸ್ವೀಕರಿಸುವವರ ತೋಳುಗಳ ನಡುವೆ ಸ್ನಾಯು ಮತ್ತು ನರವನ್ನು ಸಂಪರ್ಕಿಸುವ ಸಂಕೀರ್ಣ ಕಾರ್ಯವನ್ನು ಒಳಗೊಂಡಿತ್ತು. ಸತತವಾಗಿ ಕಾರ್ಯ ನಿರ್ವಹಿಸಿದ ವೈದ್ಯರು ಬಡ ವ್ಯಕ್ತಿಯ ಬಾಳಿಗೆ ಹೊಸ ಭರವಸೆ ಮೂಡಿಸಿದ್ದಾರೆ.

ಇದನ್ನೂ ಓದಿ: Suhani Bhatnagar: ಸುಹಾನಿಯ ಜೀವ ಕಸಿದ ಡರ್ಮಟೊಮೈಯೋಸಿಟಿಸ್‌; ಈ ಕಾಯಿಲೆ ಹೇಗೆ ಕಾಣಿಸಿಕೊಳ್ಳುತ್ತದೆ? ಲಕ್ಷಣಗಳೇನು?

ಕೆಲವು ತಿಂಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿಯೂ ಇಂತಹದ್ದೇ ಅಪರೂಪದ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿತ್ತು. ಪಶ್ಚಿಮ ಬಂಗಾಳದ ಸರ್ಕಾರಿ ಆಸ್ಪತ್ರೆ ಎಸ್‌ಎಸ್‌ಕೆಎಂನಲ್ಲಿನ ವೈದ್ಯರು 27 ವರ್ಷದ ಯುವಕನ ದೇಹಕ್ಕೆ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯಿಂದ ದಾನ ಪಡೆದ ಎರಡು ಕೈಗಳನ್ನು ಯಶಸ್ವಿಯಾಗಿ ಕಸಿ ಮಾಡಿದ್ದರು.

2023ರ ಜುಲೈ 9ರಂದು ಹೌರಾದ ಉಲುಬೇರಿಯಾದಲ್ಲಿ 43 ವರ್ಷದ ವ್ಯಕ್ತಿಯೊಬ್ಬರು ಕಾರು ಡಿಕ್ಕಿ ಹೊಡೆದು ಗಾಯಗೊಂಡಿದ್ದರು. ಅಂತಿಮವಾಗಿ ಮೆದುಳು ನಿಷ್ಕ್ರಿಯಗಿತ್ತುವಾ. ಅದೇ ವೇಳೆ 27 ವರ್ಷದ ಸ್ಥಳೀಯ ಯುವಕನೊಬ್ಬನಿಗೆ ಎರಡು ಕೈಗಳು ಬೇಕಾಗಿದ್ದವು. ಹೀಗಾಗಿ ಅವರ ಕೈಗಳನ್ನು ಯುವಕನಿಗೆ ಜೋಡಿಸಲಾಯಿತು. ಸುಮಾರು 22 ಗಂಟೆಗಳ ಕಾಲ ನಿರಂತರವಾಗಿ ಈ ಶಸ್ತ್ರ ಚಿಕಿತ್ಸೆ ನಡೆದಿತ್ತು. ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಮತ್ತು 32 ವೈದ್ಯರ ತಂಡವನ್ನು ಇದಕ್ಕಾಗಿ ಶ್ರಮಿಸಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version