Site icon Vistara News

Bilkis Bano: ಗೋಧ್ರಾ ಸಬ್‌ ಜೈಲಿಗೆ ಶರಣಾದ ಬಿಲ್ಕಿಸ್‌ ಬಾನೊ ಅತ್ಯಾಚಾರಿಗಳು

bano

bano

ನವದೆಹಲಿ: 2002ರ ಗೋಧ್ರಾ ಹತ್ಯಾಕಾಂಡದ ವೇಳೆ ಬಿಲ್ಕಿಸ್‌ ಬಾನೊ (Bilkis Bano) ಅವರ ಮೇಲೆ ಸಾಮೂಹಿಕವಾಗಿ ಅತ್ಯಾಚಾರಗೈದು, ಅವರ ಕುಟುಂಬಸ್ಥರನ್ನು ಹತ್ಯೆಗೈದ ಪ್ರಕರಣದ 11 ಅಪರಾಧಿಗಳು ಸುಪ್ರೀಂ ಕೋರ್ಟ್‌ (Supreme Court) ನಿಗದಿಪಡಿಸಿದ ಗಡುವಿನ ಪ್ರಕಾರ ಭಾನುವಾರ (ಜನವರಿ 21) ಶರಣಾಗಿದ್ದಾರೆ. ಗುಜರಾತ್‌ನ ಪಂಚಮಹಲ್‌ ಜಿಲ್ಲೆಯ ಗೋಧ್ರಾ ಸಬ್‌ ಜೈಲಿಗೆ ಆಗಮಿಸಿ ಅಪರಾಧಿಗಳು ಶರಣಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಪರಾಧಿಗಳು ತಡರಾತ್ರಿ ಎರಡು ಖಾಸಗಿ ವಾಹನಗಳಲ್ಲಿ ಸಿಂಗ್ವಾಡ್‌ ರಂಧಿಕ್‌ಪುರದಿಂದ ಭಾನುವಾರ ರಾತ್ರಿ 11.30ಕ್ಕೆ ಗೋಧ್ರಾ ಸಬ್‌ ಜೈಲಿಗೆ ಆಗಮಿಸಿ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ ಎಂದು ಅಪರಾಧ ವಿಭಾಗದ ಇನ್ಸ್‌ಪೆಕ್ಟರ್‌ ಎನ್‌.ಎಲ್‌.ದೇಸಾಯಿ ಮಾಹಿತಿ ನೀಡಿದ್ದಾರೆ.

2022ರ ಸ್ವಾತಂತ್ರ್ಯ ದಿನದಂದು ಶಿಕ್ಷೆ ಅವಧಿ ಪೂರ್ವವೇ ಬಿಡುಗಡೆಯಾಗಿದ್ದ ಅಪರಾಧಿಗಳು ಜನವರಿ 21ರೊಳಗೆ ಜೈಲು ಅಧಿಕಾರಿಗಳ ಮುಂದೆ ಶರಣಾಗುವಂತೆ ಸುಪ್ರೀಂ ಕೋರ್ಟ್ ಜನವರಿ 8ರಂದು ತಿಳಿಸಿತ್ತು. ಶರಣಾಗಲು ಹೆಚ್ಚಿನ ಕಾಲಾವಕಾಶ ಕೋರಿ ಮೂವರು ನ್ಯಾಯಾಲಯದ ಕಡ ತಟ್ಟಿದ್ದರು. ಆದರೆ ಕೋರ್ಟ್‌ ಈ ಮನವಿಯನ್ನು ತಿರಸ್ಕರಿಸಿತ್ತು.

ಯಾರು ಈ 11 ಅಪರಾಧಿಗಳು?

ಬಕಾಭಾಯ್ ವೊಹಾನಿಯಾ, ಬಿಪಿನ್ ಚಂದ್ರ ಜೋಶಿ, ಕೇಸರ್ ಭಾಯ್ ವೊಹಾನಿಯಾ, ಗೋವಿಂದಭಾಯಿ ನಾಯ್, ಜಸ್ವಂತ್ ನಾಯ್, ಮಿತೇಶ್ ಚಿಮನ್ ಲಾಲ್ ಭಟ್, ಪ್ರದೀಪ್ ಮೊರ್ಧಿಯಾ, ರಾಧೇಶ್ಯಾಮ್ ಶಾ, ರಾಜುಭಾಯ್ ಸೋನಿ, ರಮೇಶ್ ರೂಪಾಭಾಯ್ ಚಂದನಾ ಮತ್ತು ಶೈಲೇಶ್ ಭಟ್ ಈಗ ಶರಣಾದ 11 ಅಪರಾಧಿಗಳು.

ಮೂವರು ಅಪರಾಧಿಗಳಾದ ಗೋವಿಂದಭಾಯಿ ನಾಯ್, ರಮೇಶ್ ರೂಪಾಭಾಯ್ ಚಂದನಾ ಮತ್ತು ಮಿತೇಶ್ ಚಿಮನ್ ಲಾಲ್ ಭಟ್ ಶರಣಾಗಲು ಸಮಯವನ್ನು ವಿಸ್ತರಿಸುವಂತೆ ಕೋರಿದ್ದರು. ಈ ಪೈಕಿ ಗೋವಿಂದಭಾಯಿ ನಾಯ್ ಶರಣಾಗಲು 4 ವಾರಗಳ ಸಮಯಾವಕಾಶ ಕೇಳಿದರೆ, ಮಿತೇಶ್‌ ಮತ್ತು ರಮೇಶ್‌ ರೂಪಭಾಯಿ 6 ವಾರಗಳ ಹೆಚ್ಚುವರಿ ಸಮಯ ನೀಡುವಂತೆ ಮನವಿ ಮಾಡಿದ್ದರು.

ಈ ಪೈಕಿ ಗೋವಿಂದಭಾಯಿ ನಾಯ್ ತನ್ನ ಮನವಿಯಲ್ಲಿ, 88 ವರ್ಷದ ತಂದೆ ಮತ್ತು 75 ವರ್ಷದ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ತನ್ನ ಮೇಲಿದೆ. ತಂದೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರಿಗೆ ಸದ್ಯದಲ್ಲೇ ಆಪರೇಷನ್‌ ನಡೆಸಬೇಕಿರುವುದರಿಂದ ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದು ಹೇಳಿದ್ದ. ಇನ್ನೊಬ್ಬ ಅಪರಾಧಿ ರಮೇಶ್‌ ರೂಪಭಾಯ್‌, ತನ್ನ ಮಗನ ಮದುವೆ ದಿನ ನಿಗದಿಯಾಗಿದೆ. ಮದುವೆ ಮುಗಿದ ತಕ್ಷಣ ಶರಣಾಗುವುದಾಗಿ ತಿಳಿಸಿದ್ದ. ಇನ್ನು ಮಿತೇಶ್‌ ಮನವಿ ಮಾಡಿ, ತಾನು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಸದ್ಯದಲ್ಲೇ ಬೆಳೆ ಕೊಯ್ಲಿಗೆ ಬರಲಿದೆ. ಇದು ಮುಗಿದ ತಕ್ಷಣ ಹಾಜರಾಗುವುದಾಗಿ ಹೇಳಿದ್ದ. ಆದರೆ ಅಪರಾಧಿಗಳ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ನಿರಾಕರಿಸಿತ್ತು.

ಇದನ್ನೂ ಓದಿ: ಬಿಲ್ಕಿಸ್‌ ಬಾನೊ ಕೇಸ್; ಅಪರಾಧಿಗಳ ಶರಣಾಗತಿಗೆ ಹೆಚ್ಚಿನ ಕಾಲಾವಕಾಶ ಕೊಡದ ಕೋರ್ಟ್

ಏನಿದು ಪ್ರಕರಣ?

2002ರ ಫೆಬ್ರವರಿ 27ರಂದು ಗುಜರಾತ್​​ನಲ್ಲಿ ಸಬರಮತಿ ಎಕ್ಸ್​ಪ್ರೆಸ್​ ರೈಲಿಗೆ ಗೋಧ್ರಾ ರೈಲು ನಿಲ್ದಾಣದಲ್ಲಿ ಬೆಂಕಿ ಹಚ್ಚಲಾಗಿತ್ತು. ಇದರಲ್ಲಿ 59 ಕರಸೇವಕರು ಸಜೀವ ದಹನಗೊಂಡಿದ್ದರು. ಇವರೆಲ್ಲ ಉತ್ತರ ಪ್ರದೇಶದ ಅಯೋಧ್ಯೆಯಿಂದ ಬರುತ್ತಿದ್ದರು. ಗೋಧ್ರಾದಲ್ಲಿ ಗಲಾಟೆ-ಹಿಂಸಾಚಾರ ಹೆಚ್ಚಾದ ಬೆನ್ನಲ್ಲೇ ಅಲ್ಲಿನ ಅನೇಕರು ಊರು ತೊರೆಯಲು ಪ್ರಾರಂಭಿಸಿದರು. ಅಂತೆಯೇ 20 ವರ್ಷದ ಬಿಲ್ಕಿಸ್​ ಬಾನೊ ಕೂಡ ಮಾರ್ಚ್​ 3ರಂದು ತನ್ನ ಪತಿ, ಪುಟ್ಟ ಮಗಳು ಮತ್ತು ಕುಟುಂಬದ ಇತರ 15 ಸದಸ್ಯರೊಂದಿಗೆ ಹಳ್ಳಿಯನ್ನು ಬಿಟ್ಟು ಹೊರಡುತ್ತಿದ್ದರು. ಆಗವರು ಐದು ತಿಂಗಳ ಗರ್ಭಿಣಿ. ಆಗಲೇ ದಾಳಿ ನಡೆಸಿದ 20-30 ಮಂದಿ ಶಸ್ತ್ರಾಸ್ತ್ರಧಾರಿಗಳು ಅವರನ್ನು ಮಾರ್ಗ ಮಧ್ಯೆಯೇ ತಡೆದರು. ಬಿಲ್ಕಿಸ್​ ಬಾನೊ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ, ಆಕೆಯ ಕುಟುಂಬದ ಏಳು ಮಂದಿಯನ್ನು ಕೊಂದು ಹಾಕಿದರು.  2004ರಲ್ಲಿ ಸುಪ್ರೀಂಕೋರ್ಟ್​ ಈ ಕೇಸ್​​ನ ತನಿಖೆಯನ್ನು ಸಿಬಿಐಗೆ ವಹಿಸಿ ಆದೇಶ ನೀಡಿತು. 2004ರಲ್ಲಿ ಎಲ್ಲ ಆರೋಪಿಗಳೂ ಬಂಧಿತರಾಗಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version