Site icon Vistara News

BJP Foundation Day 2023: ಜನಸಂಘದಿಂದ ಇಂದಿನವರೆಗೂ ಬದಲಾಗದ ಮೌಲ್ಯಗಳೇ ಬಿಜೆಪಿಯ ಬಲ

bjp foundation day 2023
ಡಾ. ಎಂ. ಆರ್‌ ವೆಂಕಟೇಶ್

ಡಾ. ಎಂ. ಆರ್‌ ವೆಂಕಟೇಶ್
ಭಾರತದಲ್ಲಷ್ಟೆ ಅಲ್ಲ, ಇದೀಗ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾದ ಭಾರತೀಯ ಜನತಾ ಪಾರ್ಟಿಯು (ಬಿಜೆಪಿ) 1980ರ ಏಪ್ರಿಲ್ 6ರಂದು ಸ್ಥಾಪಿಸಲ್ಪಟ್ಟಿತು. ಪಕ್ಷದ ಆರಂಭದ ದಿನಗಳಿಗೂ ಇಂದಿಗೂ ಹೋಲಿಸಿದರೆ ಬಹಳ ದೂರ ಸಾಗಿ ಬಂದಿದೆ. ಹೊಸತನದ ಕಾರ್ಯತಂತ್ರಗಳು ಮತ್ತು ಭವಿಷ್ಯದ ಕಡೆಗೆ ನೆಟ್ಟಿರುವ ದೃಷ್ಟಿಯೊಂದಿಗೆ ಭಾರತೀಯ ರಾಜಕೀಯವನ್ನು ಪರಿವರ್ತನೆ ಮಾಡುವ ಕಾರ್ಯದಲ್ಲಿ ತೊಡಗಿದೆ. ಸಂಸ್ಥಾಪನಾ ದಿನದ ಈ ಸಂದರ್ಭದಲ್ಲಿ, ಬಿಜೆಪಿಯ ಪಯಣ ಮತ್ತು ಭಾರತೀಯ ರಾಜಕೀಯದ ಮೇಲೆ ಪಕ್ಷವು ಬೀರಿದ ಪ್ರಭಾವವನ್ನು ಒಮ್ಮೆ ಅವಲೋಕಿಸಬಹುದು.

1951ರಲ್ಲಿ ಹಿಂದೂ ರಾಷ್ಟ್ರೀಯವಾದಿ ಚಳವಳಿಯ ನಾಯಕರಾಗಿದ್ದ ಶ್ಯಾಮ ಪ್ರಸಾದ್ ಮುಖರ್ಜಿಯವರು, ಪಂಡಿತ್ ದೀನದಯಾಳ್ ಉಪಾಧ್ಯಾಯರ ನೇತೃತ್ವದಲ್ಲಿ ರಚನೆಯಾದ ಭಾರತೀಯ ಜನಸಂಘವೇ ಬಿಜೆಪಿಯ ಮೂಲ ರೂಪ. 1980ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅಡ್ವಾಣಿಯವರ ನೇತೃತ್ವದಲ್ಲಿ ಪಕ್ಷವನ್ನು ಬಿಜೆಪಿಯಾಗಿ ಪುನರ್ರಚಿಸಲಾಯಿತು. ಪಕ್ಷವು ಜನಸಂಘದ ರೂಪದಲ್ಲಿರಲಿ, ನಂತರ ಬಿಜೆಪಿ ರೂಪಕ್ಕೆ ಬದಲಾಗಲಿ, ಈಗಿನ ಆಧುನಿಕ ಮತ್ತು ಶಕ್ತಿಯುತ ರೂಪದಲ್ಲಿರಲಿ; ಪಕ್ಷವು ಹೊಂದಿರುವ ಮೌಲ್ಯಗಳಲ್ಲಿ ಒಂದಿಂಚೂ ಬದಲಾವಣೆ ಆಗಿಲ್ಲ.

1967ರ ಭಾರತೀಯ ಜನಸಂಘದ ಪ್ರಣಾಳಿಕೆಯಲ್ಲಿ, ಜನಸಂಘದ ಸ್ಥಾಪನೆಯ ಉದ್ದೇಶವನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. “ಇಂದು ದೇಶವು ಒಂದು ಪರ್ಯಾಯ ಪಕ್ಷವನ್ನು ಬಯಸುತ್ತಿದೆ. ಶಾಶ್ವತ ಮೌಲ್ಯಗಳು, ಸ್ಪಷ್ಟ ನೀತಿಗಳು ಹಾಗೂ ನಿರ್ದಿಷ್ಟ ಕಾರ್ಯಕ್ರಮಗಳನ್ನು ಪಕ್ಷವು ಹೊಂದಬೇಕಿದೆ. ಇವೆಲ್ಲವೂ ಈ ಮಣ್ಣಿನ ಆಳದಲ್ಲಿ ಬೇರೂರಿರಬೇಕು ಹಾಗೂ ದೇಶಾದ್ಯಂತ ತನ್ನ ರೆಕ್ಕೆಗಳನ್ನು ಚಾಚಿಕೊಂಡಿರಬೇಕು. ಸಮರ್ಪಿತ, ಸ್ವಾರ್ಥರಹಿತ ಹಾಗೂ ಶಿಸ್ತುಬದ್ಧ ಕಾರ್ಯಕರ್ತರ ತಂಡವಿರಬೇಕು ಹಾಗೂ ನಿರಂತರ ಗುರಿಯೆಡೆಗೆ ಸಾಗುತ್ತಿರಬೇಕು. ಸಮಾಜದ ಪ್ರತಿ ಸಮಸ್ಯೆಗೂ ವಾಸ್ತವಿಕ ಪರಿಹಾರ ಮಾರ್ಗವನ್ನು ಹೊಂದಿರಬೇಕು. ಈ ನಿರೀಕ್ಷೆಯನ್ನು ಈಡೇರಿಸುವ ಕಾರಣಕ್ಕಾಗಿಯೇ ಭಾರತೀಯ ಜನಸಂಘವು ಸ್ಥಾಪನೆಯಾಯಿತು” ಎಂದು ತಿಳಿಸಲಾಗಿತ್ತು. (ಮೂಲ: ಭಾರತೀಯ ಜನಸಂಘ ಪಾರ್ಟಿ ಡಾಕ್ಯುಮೆಂಟ್ಸ್: 1951-1972-1: ಪುಟ: 147)

ವಾರಾಣಸಿಯಲ್ಲಿ ನಡೆದ ಮತ್ತೊಂದು ಪ್ರಣಾಳಿಕೆ ಘೋಷಣೆ ಸಭೆಯಲ್ಲಿ ಮಾತನಾಡಿದ್ದ ಅಂದಿನ ಜನಸಂಘದ ಕಾರ್ಯದರ್ಶಿಯಾಗಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯರು ಹೀಗೆ ಹೇಳಿದ್ದರು: “ಭಾರತೀಯ ಜನಸಂಘವು ದೇಶದ ರಾಜಕೀಯ ಜೀವನದಲ್ಲಿ ಕೆಲವು ನಿಶ್ಚಿತವಾದ ಮೌಲ್ಯ ಹಾಗೂ ಆದರ್ಶಗಳನ್ನು ಬೆಳೆಸುವ ನಿಟ್ಟಿನಲ್ಲಿ ವಚನ ಬದ್ಧವಾಗಿದೆ. ಜನಸಂಘವು ತನ್ನ ಘೋಷಣಾಪತ್ರವನ್ನು ಪ್ರಸ್ತಾಪಿಸುವಾಗ, ಜನರಿಗೆ ರುಚಿಕರವಾದ ಅಥವಾ ಮೋಹಕಗೊಳಿಸುವಂತಹ ಯಾವುದೇ ವಿಷಯವನ್ನು ಗಣನೆಗೆ ತೆಗೆದುಕೊಳ್ಳದೇ ದೇಶದ ಜೀವನಕ್ಕೆ ಯಾವುದು ಹಿತಕರವೋ ಅದನ್ನು ಮಾತ್ರ ಪರಿಗಣಿಸಲಾಗಿದೆ.”

“… ಕೇವಲ ಸ್ಥಾನಗಳಿಗಾಗಿ ನಾವು ಧರ್ಮ ಪ್ರತಿಪಾದಕರಾಗುವುದಿಲ್ಲ. ಬ್ರಿಟಿಷರ ಕಾಲದಿಂದಲೂ ನಮ್ಮೊಂದಿಗಿರುವ ತುಂಬಾ ವಿಷಯಗಳ ಬಗ್ಗೆ ನಿಜವಾಗಲೂ ನಾವು ಜಾಗೃತರಾಗಿರಬೇಕಾಗುತ್ತದೆ. ಎಂತಹ ವಿಷಯಗಳಲ್ಲಿ ಕಾಂಗ್ರೆಸ್‌ ಸರ್ಕಾರವು ಅತ್ಯಂತ ನಿರಾಶಾದಾಯಕವಾಗಿ ವ್ಯವಹರಿಸಿದೆಯೋ ಅಂತಹ ಹಲವಾರು ವಿಷಯಗಳಲ್ಲಿ ಅತ್ಯಂತ ಕ್ರಿಯಾತ್ಮಕವಾಗಿ ವ್ಯಹರಿಸಬಯಸುತ್ತದೆ” ಎಂದು ತಿಳಿಸಿದ್ದರು. (ಮೂಲ: ಪಂಡಿತ್ ದೀನದಯಾಳ್ ಉಪಾಧ್ಯಾಯ ಸಮಗ್ರ. ಸಂಪುಟ 6, ಪುಟ- 222)

ಭಾರತದಲ್ಲಿ ತನ್ನನ್ನು ತಾನು ಸಮರ್ಥ ರಾಜಕೀಯ ಶಕ್ತಿಯಾಗಿ ಸ್ಥಾಪಿಸುವ ಹೋರಾಟವು ಆರಂಭದ ದಿನಗಳಲ್ಲಿ ಬಿಜೆಪಿ ಮುಂದಿತ್ತು. ಸತತ ಪ್ರಯತ್ನ ಹಾಗೂ ಬದ್ಧತೆಯ ಕಾರಣಕ್ಕೆ 1990ರ ದಶಕದಲ್ಲಿ ಪಕ್ಷದ ಭವಿಷ್ಯವು ನಾಟಕೀಯವಾಗಿ ಬದಲಾಯಿತು. ಭಾರತದಲ್ಲಿ ಬಹುಸಂಖ್ಯಾತ ಹಿಂದುಗಳನ್ನು ಒಟ್ಟುಗೂಡಿಸುವ ಪಕ್ಷದ ಪ್ರಯತ್ನಗಳು 1992ರಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂಬ ಐತಿಹಾಸಿಕ ಅಗತ್ಯಕ್ಕೆ ಬೆಂಬಲವಾಗಿ ನಿಲ್ಲುವವರೆಗೂ, ನಂತರವೂ ಸಾಗಿತು. ಈ ಘಟನೆಯ ನಂತರ ಬಿಜೆಪಿಯು ಭಾರತದಲ್ಲಿ ಪ್ರಮುಖ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿತು. 1998 ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ಸರ್ಕಾರವನ್ನು ರಚಿಸಲಾಯಿತು.

ಅಂದಿನಿಂದ, ಬಿಜೆಪಿಯು ಶಕ್ತಿಯುತವಾಗುತ್ತಲೇ ಸಾಗಿದೆ. ಭಾರತದ ಆಡಳಿತ ಪಕ್ಷವಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. 2014 ರಲ್ಲಿ ಭಾರತದ ಪ್ರಧಾನಿಯಾದ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಪಕ್ಷವು ಅಭಿವೃದ್ಧಿ-ಕೇಂದ್ರಿತ ಕಾರ್ಯಸೂಚಿಯನ್ನು ಅನುಸರಿಸುತ್ತ ಮುನ್ನಡೆದಿದೆ. ಸ್ವಚ್ಛ ಭಾರತ ಅಭಿಯಾನ, ಮೇಕ್ ಇನ್ ಇಂಡಿಯಾ ಅಭಿಯಾನ ಮತ್ತು ಡಿಜಿಟಲ್ ಇಂಡಿಯಾದಂತಹ ಪ್ರಮುಖ ಉಪಕ್ರಮಗಳಿಗೆ ಪಕ್ಷವು ಕಾರಣವಾಗಿದೆ. ಭಾರತಕ್ಕೆ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ಒಳಿತನ್ನು ಉಂಟುಮಾಡುವಂತಹ ವಿದೇಶಾಂಗ ನೀತಿಯನ್ನು ಅಳವಡಿಸಿಕೊಂಡು ವಸುಧೈವ ಕುಟುಂಬಕಂ ಎಂಬ ಭಾರತೀಯ ಪ್ರಾಚೀನ ಮೌಲ್ಯಗಳನ್ನೂ ಪ್ರತಿಪಾದಿಸುತ್ತಿದೆ.

ಬಿಜೆಪಿಯು ಅಧಿಕಾರಕ್ಕೇರುವ ಮಾರ್ಗವು ಅಷ್ಟು ಸಲೀಸಾಗಿರಲಿಲ್ಲ. ಮಾರ್ಗದುದ್ದಕ್ಕೂ ಅನೇಕ ಅಡೆತಡೆಗಳನ್ನು ನಿರ್ಮಿಸುವ ಪ್ರಯತ್ನ ನಡೆಯಿತು. ಈ ಕಾರ್ಯ ಇಂದಿಗೂ ಮುಂದುವರಿದಿದೆ. ಆದರೆ ಜನಸಾಮಾನ್ಯರೊಂದಿಗೆ ನಿರಂತರ ಸಂಪರ್ಕ ಸಾಧಿಸುವ ಪಕ್ಷದ ಸಾಮರ್ಥ್ಯ ಮತ್ತು ಅಭಿವೃದ್ಧಿಯ ಮೇಲೆ ನೀಡುತ್ತಿರುವ ಗಮನದಿಂದಾಗಿ ಸಮಸ್ತ ಭಾರತೀಯರ ಅಸ್ಖಲಿತ ಬೆಂಬಲವನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ, ಬೇರೆ ಪಕ್ಷಗಳಿಗಿಂತ ಬಿಜೆಪಿಯನ್ನು ಭಿನ್ನವಾಗಿಸುವುದೇ ಅದು ನಿರಂತರವಾಗಿ ನಿಭಾಯಿಸುತ್ತಾ ಬಂದಿರುವ ಮೌಲ್ಯಗಳ ಪ್ರತಿಪಾದನೆ. ನಾವು ಮತ್ತೊಂದು ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿದ್ದೇವೆ. ಇದೀಗ ರಚನೆಯಾಗುವ ಬಿಜೆಪಿ ಪ್ರಣಾಳಿಕೆಯೂ ಅಂತ್ಯೋದಯ ಪರಿಕಲ್ಪನೆಯ ಕೇಂದ್ರಿತವಾಗಿಯೇ ಇರುತ್ತದೆ ಎಂದು ನಿಸ್ಸಂದೇಹವಾಗಿ ಹೇಳಬಹುದು. ಉಳಿದ ಪಕ್ಷಗಳ ರೀತಿಯಲ್ಲಿ ಜನರನ್ನು ದಾರಿ ತಪ್ಪಿಸುವ, ಉಚಿತ ಘೋಷಣೆಗಳನ್ನು ಮಾಡುತ್ತ ಮೋಸ ಮಾಡುವ ಹಾಗೂ ಕೆಟ್ಟ ಆರ್ಥಿಕ ನಡತೆಗಳನ್ನು ಹುಟ್ಟುಹಾಕುವ ಪಕ್ಷವಲ್ಲ. ಬಿಜೆಪಿಯು ನಾಗರಿಕರನ್ನು ಆತ್ಮನಿರ್ಭರಗೊಳಿಸಲು ಬಯಸುತ್ತದೆಯೇ ವಿನಃ ಫ್ರೀ ಕಿಟ್‌ಗಳನ್ನು ಹಂಚಿ ಪರಾವಲಂಬಿಗಳನ್ನಾಗಿ ಅಲ್ಲ.‌

ಇದನ್ನೂ ಓದಿ: ರಾಜ ಮಾರ್ಗ ಅಂಕಣ | ಭಾರತೀಯ ರಾಜಕಾರಣದ ಅಜಾತಶತ್ರು ಅಟಲ್ ಜೀ: ಇಂದು ಅವರ ಹುಟ್ಟುಹಬ್ಬ

ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಆಶಯಕ್ಕೆ ಅನುಗುಣವಾಗಿ ಪಕ್ಷ ಸಾಗುತ್ತಿದೆ. ಯಾವ ವಿಚಾರಗಳನ್ನು ಕಾಂಗ್ರೆಸ್ ಸರ್ಕಾರಗಳು ಸಂಪೂರ್ಣ ಕಡೆಗಣಿಸಿದ್ದವೋ ಅಂತಹ ವಿಚಾರಗಳತ್ತ ಬಿಜೆಪಿ ಅತ್ಯಂತ ದೃಢವಾದ ಹಾಗೂ ನಿರ್ಧಾರಕ ಹೆಜ್ಜೆಗಳನ್ನು ಇರಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರದಿಂದ ಸಂವಿಧಾನದ 370ನೇ ಪರಿಚ್ಛೇದದ ಅನ್ವಯವನ್ನು ತೆರವುಗೊಳಿಸುವುದು, ಈಶಾನ್ಯ ರಾಜ್ಯಗಳ ಅಭಿವೃದ್ಧಿ, ಐರೋಪ್ಯ ರಾಷ್ಟ್ರಗಳ ಗುಣಮಟ್ಟಕ್ಕೆ ಸರಿಸಾಟಿಯಾಗಿ ಭಾರತದ ಹೆದ್ದಾರಿಗಳನ್ನು ನಿರ್ಮಾಣ ಮಾಡುವುದು, ಪಾರದರ್ಶಕ ವ್ಯವಸ್ಥೆಯನ್ನು ಜಾರಿ ಮಾಡುವ ಮೂಲಕ ಭ್ರಷ್ಟಾಚಾರವನ್ನು ನಿಯಂತ್ರಿಸುವುದು, ಎಂಒ (ಜನಧನ-ಧಾರ್-ಮೊಬೈಲ್) ಸಂಪರ್ಕಿಸುವ ಮೂಲಕ ಸಾಮಾಜಿಕ ಪಿಂಚಣಿ ಯೋಜನೆಗಳಲ್ಲಿ ನಡೆಯುತ್ತಿದ್ದ ಸೋರಿಕೆಯನ್ನು ಸಂಪೂರ್ಣ ತಡೆಗಟ್ಟುವುದು, ಅಧಿಕಾರಕ್ಕೆ ಬಂದ ಕೇವಲ 1000 ದಿನದ ಒಳಗಾಗಿ ದೇಶದ ಕೊಟ್ಟ ಕೊನೆಯ ಹಳ್ಳಿಯನ್ನೂ ವಿದ್ಯುತ್ ಸಂಪರ್ಕಕ್ಕೆ ಒಳಪಡಿಸುವುದು, ಇವುಗಳು ಕೆಲವು ಉದಾಹರಣೆಗಳು. ಈ ಎಲ್ಲ ವಿಚಾರಗಳೂ ಕಾಂಗ್ರೆಸ್ ಸಮಯದಲ್ಲಿ ಅವಗಣನೆಗೆ ಒಳಗಾಗಿದ್ದವು.

ಪಕ್ಷವು ಭಾರತೀಯ ರಾಜಕೀಯದಲ್ಲಿ ಒಂದು ಮಾದರಿ ಬದಲಾವಣೆಯನ್ನು ತಂದಿದೆ. ಅದೆಂದರೆ ಜಾತಿ ಆಧಾರಿತ ರಾಜಕೀಯದಿಂದ ದೂರ ಸರಿಯುತ್ತ, ಹೆಚ್ಚು ಅಭಿವೃದ್ಧಿ-ಆಧಾರಿತ ವಿಧಾನಕ್ಕೆ ಜನರ ಗಮನವನ್ನು ಬದಲಾಯಿಸಿದೆ. ಇದು ದೇಶದ ಜನರಲ್ಲಿ ಹೆಮ್ಮೆಯ ಮತ್ತು ಸ್ವಾಭಿಮಾನದ ಭಾವನೆಯನ್ನು ಪ್ರಕಟಪಡಿಸುವಲ್ಲಿ ಸಾಧ್ಯವಾಗಿದೆ. ಈ ಭಾವನೆಯು ಒಂದು ಜಾತಿ, ಸಮುದಾಯಕ್ಕೆ ಸೀಮಿತವಾಗಿರದೆಯೇ ಎಲ್ಲರನ್ನೂ ಒಳಗೊಳ್ಳುವಿಕೆಯ (ಸಬ್ ಕಾ ಸಾಥ್) ನೀತಿಯನ್ನು ಅಳವಡಿಸಿಕೊಂಡಿದೆ. ಜನಸಂಘದ ಪ್ರಯಾಣವು ಅವಕಾಶಗಳು, ಸವಾಲುಗಳು, ಸಾಧನೆಗಳೆಲ್ಲವನ್ನೂ ಒಳಗೊಂಡಿವೆ. ನಿರಂತರವಾಗಿ ಹೊಸತನಕ್ಕೆ ತೆರೆದುಕೊಳ್ಳುತ್ತಲೇ ಸಾಗಿದೆ. ಆದರೆ ಇಷ್ಟೂ ವರ್ಷಗಳಲ್ಲಿ ಬದಲಾಗದೇ ಇರುವುದು ಎಂದರೆ ಮೌಲ್ಯಗಳ ಕುರಿತು ಇರುವ ಬದ್ಧತೆ. ಇದೇ ಅಂಶವು ಬಿಜೆಪಿಯನ್ನು ದೇಶದ ಜನರಲ್ಲಿ ಅತ್ಯಂತ ಪ್ರೀತಿಪಾತ್ರವನ್ನಾಗಿಸಿದೆ.‌

(ಲೇಖಕರು ಬಿಜೆಪಿ ಪ್ರಮುಖರು, ಬಿಎಂಟಿಸಿ ಮಾಜಿ ಉಪಾಧ್ಯಕ್ಷರು)

ಇದನ್ನೂ ಓದಿ: ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಜನ್ಮದಿನ | ಏಕಾತ್ಮ ಮಾನವತಾವಾದ ಮಾತ್ರವೇ ಸಮಾಜವನ್ನು ಮುನ್ನಡೆಸಬಲ್ಲದು: ಪಿ. ರಾಜೀವ್‌ ವಿಶೇಷ ಲೇಖನ

Exit mobile version