ಗಾಂಧಿನಗರ: ಗುಜರಾತ್ ವಿಧಾನಸಭೆ ಚುನಾವಣೆಗೆ (Gujarat Election) ಕೆಲವೇ ದಿನ ಬಾಕಿ ಇರುವುದರಿಂದ ಸರ್ವಪಕ್ಷಗಳು ಚುನಾವಣೆ ರಣತಂತ್ರ ರೂಪಿಸುತ್ತಿವೆ. ಇದರ ಭಾಗವಾಗಿಯೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ‘I Have Made This Gujarat’ (ನಾನು ಈ ಗುಜರಾತ್‌ಅನ್ನು ರೂಪಿಸಿದ್ದೇನೆ) ಎಂಬ ಚುನಾವಣೆ ಘೋಷಣೆ ಮಾಡಿದ್ದು, ಇದೇ ಘೋಷಣೆ ಅಡಿಯಲ್ಲಿ ಬಿಜೆಪಿಯು ಅಭಿಯಾನ ಆರಂಭಿಸಿದೆ.
ಚುನಾವಣೆ ಅಭಿಯಾನದ ಭಾಗವಾಗಿ ಬಿಜೆಪಿ ಗುಜರಾತ್ ಘಟಕದ ಅಧ್ಯಕ್ಷ ಸಿ.ಆರ್.ಪಾಟೀಲ್ ಅವರು ರಾಜ್ಯದಲ್ಲಿ ಬಿಜೆಪಿ ಮಾಡಿರುವ ಅಭಿವೃದ್ಧಿಯ ಕುರಿತು ಕಿರುಚಿತ್ರವೊಂದನ್ನು ಬಿಡುಗಡೆಗೊಳಿಸಿದರು. ಹಾಗೆಯೇ, ಸುಮಾರು 10 ಸಾವಿರ ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪಿಸಲಿದ್ದು, ಜನ ಸೆಲ್ಫಿ ಅಪ್‌ಲೋಡ್ ಮಾಡಬಹುದಾಗಿದೆ. ಚುನಾವಣೆ ಅಭಿಯಾನದಲ್ಲಿ ಯುವಜನರೂ ಪಾಲ್ಗೊಳ್ಳುವಂತೆ ಮಾಡುವುದು ಬಿಜೆಪಿ ಉದ್ದೇಶವಾಗಿದೆ.
ಮತ್ತೊಂದೆಡೆ, “ನಾನು ಈ ಗುಜರಾತ್‌ಅನ್ನು ರೂಪಿಸಿದ್ದೇನೆ” (Aa Gujarat, mai banavyu chhe) ಎಂಬ ಅಭಿಯಾನವು ಪ್ರತಿಯೊಬ್ಬ ಗುಜರಾತಿಗೂ ಮಾಡಿದ ಅವಮಾನ ಎಂದು ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ. ಗುಜರಾತನ್ನು ಯಾರೋ ಒಬ್ಬರು ರೂಪಿಸಿದ್ದಾರೆ ಎಂಬುದು ಜನರಿಗೆ ಮಾಡಿದ ಅಪಮಾನವಾಗಿದೆ. ಬಿಜೆಪಿಯು ಇನ್ನಾದರೂ ಕ್ರೆಡಿಟ್ ತೆಗೆದುಕೊಳ್ಳುವ ತಂತ್ರ ಬಿಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ರಾಜ್ಯದಲ್ಲಿ ಡಿಸೆಂಬರ್ 1 ಹಾಗೂ ಡಿಸೆಂಬರ್ 5ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ | Opinion Poll | ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಮತ್ತೆ ಬಿಜೆಪಿಗೇ ಅಧಿಕಾರ? ಸಮೀಕ್ಷೆ ಹೇಳುವುದೇನು?