ನವದೆಹಲಿ: ರಾಹುಲ್ ಗಾಂಧಿ (Rahul Gandhi) ಲೋಕಸಭೆ ಸದಸ್ಯತ್ವ ರದ್ದು ಕುರಿತು ಜರ್ಮನ್ (Germany) ಪ್ರತಿಕ್ರಿಯೆಗೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಧನ್ಯವಾದ ಸಲ್ಲಿಸಿದ ಟ್ವೀಟ್ ಬಗ್ಗೆ ಬಿಜೆಪಿ (BJP) ವ್ಯಗ್ರವಾಗಿದೆ. ಕಾಂಗ್ರೆಸ್ (Congress) ದೇಶಕ್ಕೆ ಅವಮಾನ ಮಾಡಿದೆ ಎಂದು ಕಟುವಾಗಿ ಟೀಕಿಸಿದೆ.
ಇದು ದೇಶಕ್ಕೆ ಮಾಡಿದ ಅವಮಾನ. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರಿಗೆ ದೇಶದಲ್ಲಿ ಪ್ರಜಾಪ್ರಭುತ್ವ, ರಾಜಕೀಯ ಮತ್ತು ಕಾನೂನು ಹೋರಾಟದಲ್ಲಿ ನಂಬಿಕೆ ಇಲ್ಲ. ಆದ್ದರಿಂದ, ನಮ್ಮ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ವಿದೇಶಿ ಶಕ್ತಿಗಳನ್ನು ಆಹ್ವಾನಿಸುತ್ತಾರೆ. ಆದರೆ ನರೇಂದ್ರ ಮೋದಿ ನೇತೃತ್ವದ ನವ ಭಾರತವು ಯಾವುದೇ ವಿದೇಶಿ ಹಸ್ತಕ್ಷೇಪವನ್ನು ಸಹಿಸುವುದಿಲ್ಲ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ಅನರ್ಹತೆ ಕುರಿತು ಜರ್ಮನ್ ಹೇಳಿದ್ದೇನು?
ರಾಹುಲ್ ಗಾಂಧಿ ಅನರ್ಹತೆ ಪ್ರಕರಣದಲ್ಲಿ ಪ್ರಜಾಸತ್ತಾತ್ಮಕ ಮೂಲ ತತ್ವಗಳು ಅನ್ವಯವಾಗಬೇಕು ಎಂದು ಹೇಳುವ ಮೂಲಕ ಜರ್ಮನ್ ರಾಹುಲ್ ಗಾಂಧಿ ಅವರ ಬೆಂಬಲಿಕ್ಕೆ ನಿಂತಿದೆ. ಎರಡು ದಿನಗಳ ಹಿಂದೆಯಷ್ಟೇ ಅಮೆರಿಕ ಕೂಡ ಇದೇ ರೀತಿಯ ಬೆಂಬಲದ ನುಡಿಗಳನ್ನಾಡಿತ್ತು.
ಭಾರತದ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧದ ಮೊದಲ ಪ್ರಕರಣದ ತೀರ್ಪು ಹಾಗೂ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿದ ಪ್ರಕರಣವನ್ನು ನಾವು ಗಮನಿಸಿದ್ದೇವೆ. ನಮಗೆ ತಿಳಿದಿರುವಂತೆ, ತೀರ್ಪಿನ ವಿರುದ್ಧ ರಾಹುಲ್ ಗಾಂಧಿ ಅವರು ಮೇಲ್ಮನವಿ ಸಲ್ಲಿಸುವ ಸ್ಥಿತಿಯಲ್ಲಿದ್ದಾರೆ. ಆ ಮೇಲಷ್ಟೇ ಈ ತೀರ್ಪು ಊರ್ಜಿತವಾಗುತ್ತದಯೇ ಮತ್ತು ಅವರ ಅನರ್ಹತೆಗೆ ಆಧಾರ ಇದೆಯೇ ಎಂಬುದು ಸ್ಪಷ್ಟವಾಗಲಿದೆ ಎಂದು ಜರ್ಮನಿಯ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದರು.
ಜರ್ಮನಿಗೆ ಧನ್ಯವಾದ ಹೇಳಿದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್
ರಾಹುಲ್ ಗಾಂಧಿ ಅವರ ಕಿರುಕುಳದ ಮೂಲಕ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಹೇಗೆ ರಾಜಿ ಮಾಡಿಕೊಳ್ಳಲಾಗುತ್ತಿದೆ ಎಂಬುದನ್ನು ಗಮನಿಸಿದ ಜರ್ಮನಿಯ ವಿದೇಶಾಂಗ ಸಚಿವಾಲಯ ಮತ್ತು ರಿಚರ್ಡ್ ವಾಕರ್ ಅವರಿಗೆ ಧನ್ಯವಾದಗಳು ಎಂದು ದಿಗ್ವಿಜಯ ಸಿಂಗ್ ಟ್ವೀಟ್ ಮಾಡಿದ್ದರು. ಇದಕ್ಕೆ ಕಾಯುತ್ತಿದ್ದ ಬಿಜೆಪಿ ಮತ್ತೆ ಕಾಂಗ್ರೆಸ್ ವಿರುದ್ದ ತಿರುಗಿ ಬಿದ್ದಿದೆ. ಕಾಂಗ್ರೆಸ್ ವಿದೇಶಿ ಶಕ್ತಿಗಳ ಹಸ್ತಕ್ಷೇಪಕ್ಕೆ ಎದುರು ನೋಡುತ್ತಿದೆ. ಆದರೆ, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇರುವವರೆಗೂ ಇದು ಸಾಧ್ಯವಿಲ್ಲ ಎಂದು ಹೇಳಿದೆ.
Rahul Gandhi ಅನರ್ಹತೆ ಬಗ್ಗೆ ಅಮೆರಿಕ ಏನು ಹೇಳಿತ್ತು?
ರಾಹುಲ್ ಗಾಂಧಿ ಕೇಸ್ ಬಗ್ಗೆ ಪ್ರತಿಕ್ರಿಯೆ ನೀಡಿದ ಯುಎಸ್ ಡಿಪಾರ್ಟ್ಮೆಂಟ್ ಸ್ಟೇಟ್ನ ಉಪವಕ್ತಾರ ವೇದಾಂತ್ ಪಟೇಲ್, ‘ಭಾರತದಲ್ಲಿ ರಾಹುಲ್ ಗಾಂಧಿ ವಿಷಯದಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಸೇರಿ ಪ್ರಜಾಪ್ರಭುತ್ವದ ಎಲ್ಲ ಮೌಲ್ಯಗಳನ್ನೂ ಗೌರವಿಸಬೇಕು ಎಂಬುದು ನಮ್ಮ ಆಶಯ ಮತ್ತು ಬದ್ಧತೆ. ಇದನ್ನು ನಾವು ಸದಾ ಭಾರತದೊಂದಿಗೆ ವ್ಯಕ್ತಪಡಿಸುತ್ತಿದ್ದೇವೆ. ಪ್ರಜಾಪ್ರಭುತ್ವದ ತತ್ವದ ಮಹತ್ವ ಮತ್ತು ಮಾನವಹಕ್ಕುಗಳ ರಕ್ಷಣೆಯನ್ನು ಬಲಪಡಿಸುವ ವಿಷಯದಲ್ಲಿ ಅಮೆರಿಕ ಮತ್ತು ಭಾರತದ ಆಸಕ್ತಿಗಳು ಒಂದೇ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Rahul Gandhi: ಮೋದಿ ಉಪನಾಮ ಹೇಳಿಕೆ ನೀಡಿದ್ದ ಕೋಲಾರದಿಂದಲೇ ರಾಹುಲ್ ಗಾಂಧಿ ಪ್ರಚಾರ ಆರಂಭ
ರಾಹುಲ್ ಗಾಂಧಿಯವರು 2019ರಲ್ಲಿ ಕೋಲಾರದಲ್ಲಿ ಮಾತನಾಡುತ್ತ ‘ಎಲ್ಲ ಕಳ್ಳರ ಉಪನಾಮವೂ ಮೋದಿ ಎಂದೇ ಇರುತ್ತದೆ ಎಂದಿದ್ದರು. ಅದೇ ವಿಷಯವೀಗ ದೊಡ್ಡದಾಗಿದೆ. ರಾಹುಲ್ ಗಾಂಧಿ ವಿರುದ್ಧ ಗುಜರಾತ್ ಶಾಸಕ ಪೂರ್ಣೇಶ್ ಮೋದಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ತೀರ್ಪು ಕೊಟ್ಟ ಸೂರತ್ ಕೋರ್ಟ್ ರಾಹುಲ್ ಗಾಂಧಿಯನ್ನು ದೋಷಿ ಎಂದು ಹೇಳಿದೆ. 2 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅದರ ಬೆನ್ನಲ್ಲೇ ರಾಹುಲ್ ಗಾಂಧಿಯನ್ನು ಲೋಕಸಭೆಯಿಂದ ಅನರ್ಹಗೊಳಿಸಲಾಗಿದೆ. ಕಾಂಗ್ರೆಸ್ ನಾಯಕರು ಸದ್ಯ ಭಾರತದೆಲ್ಲೆಡೆ ಹೋರಾಟ ಕೈಗೊಂಡಿದ್ದಾರೆ. ಸಂಸತ್ತಿಗೆ ನಿನ್ನೆ ಅವರು ಕಪ್ಪು ಬಟ್ಟೆ ಧರಿಸಿ ಬಂದಿದ್ದರು. ಇದೀಗ ಯುಎಎಸ್ ಕೂಡ ಪ್ರತಿಕ್ರಿಯೆ ನೀಡಿ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲೇಖಿಸಿದ್ದಾರೆ.