Site icon Vistara News

Hema Malini: ಪ್ರಚಾರದ ಮಧ್ಯೆಯೇ ಗದ್ದೆಗೆ ಇಳಿದು ಗೋಧಿ ಕಟಾವು ಮಾಡಿದ ಹೇಮಾಮಾಲಿನಿ!

Hema Malini

BJP's Hema Malini harvests wheat crop during poll campaign in Mathura

ಲಖನೌ: ಬಾಲಿವುಡ್‌ ನಟಿ, ಡ್ರೀಮ್‌ ಗರ್ಲ್‌ ಖ್ಯಾತಿ ಚೆಲುವೆ, ಉತ್ತರ ಪ್ರದೇಶದ ಮಥುರಾ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೇಮಾಮಾಲಿನಿ (Hema Malini) ಅವರು ಅಬ್ಬರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಜನರೊಂದಿಗೆ ಬೆರೆತು, ಕೇಂದ್ರ ಸರ್ಕಾರದ ಸಾಧನೆ, ತಾವು ಕ್ಷೇತ್ರಕ್ಕೆ ತಂದ ಅನುದಾನದ ಕುರಿತು ಜನರಿಗೆ ಮನವರಿಕೆ ಮಾಡುವ ಮೂಲಕ ಲೋಕಸಭೆ ಚುನಾವಣೆಯಲ್ಲಿ (Lok Sabha Election) ಗೆಲುವು ಸಾಧಿಸಲು ರಣತಂತ್ರ ರೂಪಿಸುತ್ತಿದ್ದಾರೆ. ಚುನಾವಣೆ ಪ್ರಚಾರದ ಭರಾಟೆ ಮಧ್ಯೆಯೇ ಹೇಮಾಮಾಲಿನಿ ಅವರು ತಮ್ಮ ಕ್ಷೇತ್ರದಲ್ಲಿ ಗದ್ದೆಗೆ ಇಳಿದು, ಗೋಧಿಯ ಕಟಾವು ಮಾಡಿದ್ದಾರೆ. ಈ ಫೋಟೊಗಳು ಈಗ ಭಾರಿ ವೈರಲ್‌ ಆಗಿವೆ.

ಗೋಧಿ ಕಟಾವು ಮಾಡಿರುವ ಫೋಟೊಗಳನ್ನು ಹೇಮಾಮಾಲಿನಿ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಿದ್ದಾರೆ. “ನಾನು ರೈತರೊಂದಿಗೆ ಮಾತುಕತೆ ನಡೆಸಲು ಇಂದು ಜಮೀನುಗಳಿಗೆ ಭೇಟಿ ನೀಡಿದೆ. ಕಳೆದ 10 ವರ್ಷಗಳಿಂದ ನಿರಂತರವಾಗಿ ನಾನು ರೈತರೊಂದಿಗೆ ಸಂಪರ್ಕದಲ್ಲಿದ್ದೇನೆ. ರೈತರು ಕೂಡ ನಾನು ಅವರನ್ನು ಭೇಟಿ ಮಾಡುವುದನ್ನು ಇಷ್ಟಪಡುತ್ತಾರೆ. ನಾನು ಕಟಾವು ಮಾಡಿದ ಗೋಧಿಯೊಂದಿಗೆ ಪೋಸ್‌ ನೀಡುವಂತೆ ಕೂಡ ಅವರೇ ಸೂಚಿಸಿದರು” ಎಂಬುದಾಗಿ ಹೇಮಾಮಾಲಿನಿ ಬರೆದುಕೊಂಡಿದ್ದಾರೆ.

ಹೇಮಾಮಾಲಿನಿ ಅವರು ಗೋಧಿ ಕಟಾವು ಮಾಡಿ, ಹಲವು ರೀತಿಯ ಪೋಸ್‌ ಕೊಟ್ಟ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಲೇ ಸಾವಿರಾರು ಜನ ಪ್ರತಿಕ್ರಿಯಿಸಿದ್ದಾರೆ. “ಸಂಸದೆಯಾಗಿ ರೈತರನ್ನು ಭೇಟಿಯಾಗುವುದು ಒಳ್ಳೆಯ ಕೆಲಸ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. “ಇದೆಲ್ಲ ಚುನಾವಣೆ ಗಿಮಿಕ್‌. ಚುನಾವಣೆ ಬಂದಾಗ ಮಾತ್ರ ನಿಮಗೆ ರೈತರು, ಗದ್ದೆಗಳು ನೆನಪಾಗುತ್ತವೆ” ಎಂಬುದಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗೆ, ಒಬ್ಬರೊಬ್ಬರು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಮಥುರಾ ಲೋಕಸಭೆ ಕ್ಷೇತ್ರದಿಂದ ಹೇಮಾಮಾಲಿನಿ ಅವರು ಸತತ ಮೂರನೇ ಬಾರಿ ಸ್ಪರ್ಧಿಸುತ್ತಿದ್ದಾರೆ. 2014ರಲ್ಲಿ ಮೊದಲ ಬಾರಿ ಸ್ಪರ್ಧಿಸಿದ ಅವರು ಗೆಲುವು ಸಾಧಿಸಿದ್ದರು. 2019ರಲ್ಲಿ ಹೇಮಾಮಾಲಿನಿ ಪತಿ ಧರ್ಮೇಂದ್ರ ಅವರು ಕೂಡ ಸಕ್ರಿಯವಾಗಿ ಪತ್ನಿ ಪರ ಪ್ರಚಾರ ಕೈಗೊಂಡರು. ಹಾಗಾಗಿ, ಸುಲಭವಾಗಿ ಹೇಮಾಮಾಲಿನಿ ಗೆಲುವು ಸಾಧಿಸಿದರು. ಈಗ ಮೂರನೇ ಬಾರಿಗೆ ನಟಿಯು ಚುನಾವಣೆ ಕಣಕ್ಕೆ ಇಳಿದಿದ್ದಾರೆ. ಮಥುರಾ ಕ್ಷೇತ್ರದಲ್ಲಿ ಜಾಟ್‌ ಸಮುದಾಯದವರು ಶೇ.35ರಷ್ಟಿದ್ದು, ಇವರೇ ನಿರ್ಣಾಯಕರಾಗಿದ್ದಾರೆ.

ಇದನ್ನೂ ಓದಿ: Hema Malini: ಹೇಮಾ ಮಾಲಿನಿ ಆಸ್ತಿ ಎಷ್ಟು? ಎಷ್ಟೊಂದು ಫ್ಲ್ಯಾಟ್‌ಗಳ ಒಡತಿ ಈಕೆ!

Exit mobile version