ಹೈದರಾಬಾದ್: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರನ್ನು ʻಪೋಚ್‌ಗೇಟ್ ಪ್ರಕರಣʼದಲ್ಲಿ ಆರೋಪಿಯಾಗಿ ತೆಲಂಗಾಣ ಪೊಲೀಸರು ಹೆಸರಿಸಿದ್ದಾರೆ. ಜತೆಗೆ ಇನ್ನಿಬ್ಬರನ್ನೂ ಹೆಸರಿಸಿದ್ದು, ಒಟ್ಟಾರೆಯಾಗಿ ಆರೋಪಿಗಳ ಸಂಖ್ಯೆ ಏಳಕ್ಕೇರಿದೆ.
ತೆಲಂಗಾಣ ರಾಷ್ಟ್ರ ಸಮಿತಿಯ ಶಾಸಕರನ್ನು ಬಿಜೆಪಿ ಖರೀದಿಸಲು ಮುಂದಾಗಿದೆ ಎಂದು ಟಿಆರ್‌ಎಸ್ ಶಾಸಕರು ಆರೋಪಿಸಿದ್ದ ಹಿನ್ನೆಲೆಯಲ್ಲಿ, ಸಂತೋಷ್ ಅವರಿಗೆ ತೆಲಂಗಾಣದ ವಿಶೇಷ ತನಿಖಾ ತಂಡ (SIT) ಸಮನ್ಸ್ ಜಾರಿಗೊಳಿಸಿತ್ತು. ನವೆಂಬರ್ 21ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಎಸ್‌ಐಟಿ ಸೂಚಿಸಿತ್ತು. ಜತೆಗೆ ತುಷಾರ್ ವೆಲ್ಲಪಳ್ಳಿ ಮತ್ತು ಜಗ್ಗು ಸ್ವಾಮಿ ಎಂಬ ಇಬ್ಬರಿಗೂ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿತ್ತು. ಆದರೆ ವಿಚಾರಣೆಗೆ ಗೈರು ಹಾಜರಾಗಿದ್ದರಿಂದ ಲುಕ್ಔಟ್ ನೋಟಿಸ್ ಹೊರಡಿಸಲಾಗಿತ್ತು.
ತೆಲಂಗಾಣದಲ್ಲಿ ಬಿಜೆಪಿಯು “ಆಪರೇಷನ್ ಕಮಲ”ಕ್ಕೆ ಯತ್ನಿಸುತ್ತಿದ್ದು, ತೆಲಂಗಾಣ ರಾಷ್ಟ್ರ ಸಮಿತಿ (TRS) ಪಕ್ಷದ ನಾಲ್ವರು ಶಾಸಕರಿಗೆ 100 ಕೋಟಿ ರೂ. ಆಫರ್ ನೀಡಿದೆ ಎಂದು ಶಾಸಕರು ಆರೋಪಿಸಿದ್ದರು. ಶಾಸಕರ ಖರೀದಿಗೆ ಆಫರ್ ನೀಡಿದ ಹಿನ್ನೆಲೆಯಲ್ಲಿ ಈಗಾಗಲೇ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ತನಿಖೆ ಮುಂದುವರಿಸಲು ಹೈಕೋರ್ಟ್ ಅನುಮತಿ ನೀಡಿದ್ದಲ್ಲದೆ, ಒಬ್ಬ ನ್ಯಾಯಮೂರ್ತಿಯು ಪ್ರಕರಣದ ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ಹೇಳಿತ್ತು.