ಹೊಸದಿಲ್ಲಿ: ಇತ್ತೀಚಿನ ದಿನಗಳಲ್ಲಿ ಶಾಲೆ, ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ ಕರೆ(Bomb Threat)ಗಳು ಆಗಾಗ ಬರುತ್ತಲೇ ಇರುತ್ತವೆ. ಎಲ್ಲಾ ಪರಿಶೀಲನೆ ಮಾಡಿ ನೋಡಿದಾಗ ಅದೊಂದು ಹುಸಿಬಾಂಬ್ ಕರೆ ಅಂತಾ ಬಯಲಾಗುತ್ತದೆ. ಅತ್ತ ಆರೋಪಿಗಳೂ ಪೊಲೀಸರ ಕೈಗೆ ಸಿಗದೇ ಚಳ್ಳೆ ಹಣ್ಣು ತಿನ್ನಿಸುತ್ತಿರುತ್ತಾರೆ. ಇದೀಗ ದಿಲ್ಲಿ ವಿಮಾನ ನಿಲ್ದಾಣ(Delhi Airport)ಕ್ಕೆ ಬೆದರಿಕೆಯೊಡ್ಡಿದ್ದ ಬಾಲಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. 13 ವರ್ಷದ ಬಾಲಕನೋರ್ವ ದಿಲ್ಲಿ ವಿಮಾನ ನಿಲ್ದಾಣಕ್ಕೆ ಇ-ಮೇಲ್ ಮೂಲಕ ಹುಸಿಬಾಂಬ್ ಕರೆ ಮಾಡಿದ್ದ ಎನ್ನಲಾಗಿದೆ.
ಡೆಪ್ಯೂಟಿ ಪೊಲೀಸ್ ಕಮಿಷನರ್ ಉಷಾ ರಂಗ್ನಾನಿ ಮಾಹಿತಿ ನೀಡಿದ್ದು, ದುಬೈನಿಂದ ಬಂದಿದ್ದ ವಿಮಾನದಲ್ಲಿ ಬಾಂಬ್ ಇಟ್ಟಿರೋದಾಗಿ ಬಾಲಕ ಕೆಲವು ದಿನಗಳ ಹಿಂದೆ ಇ-ಮೇಲ್ ಕಳುಹಿಸಿದ್ದ. ತನಿಖೆ ನಡೆಸಿದ ಪೊಲೀಸರು ಬಾಲಕನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ತಮಾಶೆಗಾಗಿ ಮೇಲ್ ಕಳುಹಿಸಿದಾಗ ಹೇಳಿದ್ದಾನೆ. ಇಮೇಲ್ ಕಳುಹಿಸಿದ ಕೆಲವೇ ಗಂಟೆಗಳಲ್ಲಿ ಅದನ್ನು ಡಿಲೀಟ್ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಇತ್ತೀಚೆಗೆ ಪ್ರಮುಖ ನಗರಗಳಲ್ಲಿ ಬಾಂಬ್ ದಾಳಿಗಳ ಬೆದರಿಕೆಗಳು ಜಾಸ್ತಿಯಾಗಿವೆ. ಬೆಂಗಳೂರಿನ ಶಾಲೆಗಳು ಸೇರಿ ಮುಂಬೈ, ದೆಹಲಿ ಏರ್‌ಪೋರ್ಟ್‌ಗಳು, ಸರ್ಕಾರದ ಕಟ್ಟಡಗಳಿಗೆ ಹುಸಿ ಬೆದರಿಕೆ ಕರೆಗಳು, ಇ-ಮೇಲ್‌ಗಳು ರವಾನೆಯಾಗುತ್ತಲೇ ಇವೆ. ಇದರ ಬೆನ್ನಲ್ಲೇ, ಮಂಗಳವಾರ (ಜೂನ್ 18) ಮುಂಬೈನಲ್ಲಿರುವ 50ಕ್ಕೂ ಅಧಿಕ ಆಸ್ಪತ್ರೆಗಳನ್ನು ಸ್ಫೋಟಿಸುವುದಾಗಿ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿತ್ತು.
ಮಂಗಳವಾರವೇ ದೇಶದ 41 ವಿಮಾನ ನಿಲ್ದಾಣಗಳನ್ನು ಸ್ಫೋಟಿಸಲಾಗುವುದು ಎಂಬುದಾಗಿ ಹುಸಿ ಬಾಂಬ್ ಬೆದರಿಕೆ ಹಾಕಲಾಗಿತ್ತು. ಆಗಲೂ ಭದ್ರತಾ ಸಿಬ್ಬಂದಿ, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಯ ಪರಿಶೀಲನೆ ನಡೆಸಿದ್ದರು. ಇದಾದ ಕೆಲವೇ ಗಂಟೆಯಲ್ಲಿ ಮುಂಬೈನ ಆಸ್ಪತ್ರೆಗಳಿಗೂ ಬಾಂಬ್ ಬೆದರಿಕೆ ಹಾಕಲಾಗಿದೆ. ಬಾಂಬ್ ಬೆದರಿಕೆಯ ಕುರಿತು ಪೊಲೀಸರೇ ಮಾಹಿತಿ ನೀಡಿದ್ದಾರೆ. ವಿಪಿಎನ್ ನೆಟ್‌ವರ್ಕ್ ಬಳಸಿ ಬಾಂಬ್ ದಾಳಿಯ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
ಮುಂಬೈನಲ್ಲಿರುವ ಪ್ರತಿಷ್ಠಿತ ಜಸ್ಲೋಕ್ ಹಾಸ್ಪಿಟಲ್, ರಹೇಜಾ ಹಾಸ್ಪಿಟಲ್, ಸೆವೆನ್ ಹಿಲ್ಸ್, ಕೊಹಿನೂರ್, ಕೆಇಎಂ, ಜೆಜೆ ಹಾಸ್ಪಿಟಲ್, ಸೇಂಟ್ ಜಾರ್ಜ್ ಹಾಸ್ಪಿಟಲ್ ಸೇರಿ ಹಲವು ಆಸ್ಪತ್ರೆಗಳ ಮೇಲೆ ಬಾಂಬ್ ದಾಳಿ ಮಾಡಲಾಗುವುದು ಎಂಬುದಾಗಿ ಬೆದರಿಕೆ ಹಾಕಲಾಗಿದೆ. ಇ-ಮೇಲ್ ಮೂಲಕ ಬೆದರಿಕೆ ಒಡ್ಡುತ್ತಲೇ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಯು ಆಸ್ಪತ್ರೆಗಳಿಗೆ ತೆರಳಿ, ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ, ಭದ್ರತೆಯನ್ನು ಕೂಡ ಹೆಚ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಕೆಲ ದಿನಗಳ ಹಿಂದಷ್ಟೇ, ದೇಶದ 13 ವಿಮಾನ ನಿಲ್ದಾಣಗಳನ್ನು ಸ್ಫೋಟಿಸಲಾಗುವುದು ಎಂದು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿಗೆ ಬೆದರಿಕೆಯ ಮೇಲ್ ಬಂದಿತ್ತು. ಬೆಂಗಳೂರು, ದೆಹಲಿ, ಅಹಮದಾಬಾದ್, ಚೆನ್ನೈ ಸೇರಿ ಹಲವು ನಗರಗಳ ಶಾಲೆಗಳನ್ನೂ ಸ್ಫೋಟಿಸುವ ಬೆದರಿಕೆ ಕರೆಗಳು ಬಂದಿದ್ದವು. ಬಳಿಕ ನಕಲಿ ಬಾಂಬ್ ಬೆದರಿಕೆ ಎಂಬುದಾಗಿ ತಿಳಿದುಬಂದಿತ್ತು. ಬೆಂಗಳೂರಿನಲ್ಲಿ ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಾಗಲಂತೂ ಭಾರಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದಾದ ಬಳಿಕ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಭಯಪಡುವಂತಾಗಿತ್ತು.
ಇದನ್ನೂ ಓದಿ: Viral Video: ಅಪ್ರಾಪ್ತೆಯನ್ನು ಕಿಡ್ನಾಪ್ ಮಾಡಿ ಲೈವ್ ವಿಡಿಯೊ ಮೂಲಕ ಧಮ್ಕಿ; ಕಾಮುಕನ ಅಟ್ಟಹಾಸಕ್ಕೆ ನೆಟ್ಟಿಗರು ಆಕ್ರೋಶ