Site icon Vistara News

Boycott Maldives: ಭಾರತದ ಹೈಕಮಿಷನರ್‌ಗೂ ಮಾಲ್ದೀವ್ಸ್‌ ಸಚಿವಾಲಯದಿಂದ ಬುಲಾವ್‌

munu mahawar

ಹೊಸದಿಲ್ಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ವಿರೋಧಿ ಪೋಸ್ಟ್‌ನಿಂದ ಸೃಷ್ಟಿಯಾಗಿರುವ ʼಬಾಯ್ಕಾಟ್‌ ಮಾಲ್ದೀವ್ಸ್‌ʼ (Boycott Maldives) ಕೋಲಾಹಲದ ಹಿನ್ನೆಲೆಯಲ್ಲಿ ಮಾಲ್ದೀವ್ಸ್‌ ಹೈಕಮಿಷನರ್‌ ಅನ್ನು ಕರೆದು ಭಾರತೀಯ ವಿದೇಶಾಂಗ ಇಲಾಖೆ ಬುದ್ಧಿ ಹೇಳಿದೆ. ಬೆನ್ನಲ್ಲೇ, ಭಾರತೀಯ ಹೈಕಮಿಷನರ್‌ಗೂ ಮಾಲ್ದೀವ್ಸ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬುಲಾವ್‌ ನೀಡಿದೆ.

ಮಾಲ್ಡೀವ್ಸ್ ಹೈಕಮಿಷನರ್ ಇಬ್ರಾಹಿಂ ಶಾಹೀಬ್ ಸೋಮವಾರ ದೆಹಲಿಯ ದಕ್ಷಿಣ ಬ್ಲಾಕ್‌ನಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಭೇಟಿ ನೀಡಿದರು. ಶಹೀಬ್ ಅವರ ಸಮನ್ಸ್ ನಂತರ, ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ಹೈಕಮಿಷನರ್ ಮುನು ಮಹಾವರ್ ಅವರನ್ನೂ ಮಧ್ಯಾಹ್ನ 12:30ಕ್ಕೆ ಮಾಲ್ಡೀವ್ಸ್ ವಿದೇಶಾಂಗ ಸಚಿವಾಲಯಕ್ಕೆ ಬರಲು ಕೇಳಲಾಗಿದೆ. ಹೀಗೆಂದು ಅವರ ಸೋಶಿಯಲ್‌ ಮೀಡಿಯಾ X ಖಾತೆ ತಿಳಿಸಿದೆ. ಆದರೂ, “ಮಹಾವರ್ ಅವರು ದ್ವಿಪಕ್ಷೀಯ ವಿಷಯಗಳ ಕುರಿತು ಚರ್ಚಿಸಲು ಮಾಲ್ಡೀವ್ಸ್‌ನ ವಿದೇಶಾಂಗ ಸಚಿವಾಲಯದ ಹಿರಿಯ ರಾಯಭಾರಿ ಹೆಚ್.ಇ ಡಾ. ಅಲಿ ನಾಸೀರ್ ಮೊಹಮ್ಮದ್ ಅವರೊಂದಿಗೆ ಪೂರ್ವ ನಿಗದಿತ ಸಭೆಯನ್ನು ಹೊಂದಿದ್ದರು” ಎಂದು ತಿಳಿಸಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಂಚಿಕೊಂಡ ಲಕ್ಷದ್ವೀಪ ದ್ವೀಪದ ಚಿತ್ರಗಳು ಭಾರತ ಮತ್ತು ಮಾಲ್ಡೀವ್ಸ್ ನಡುವೆ ಸೋಶಿಯಲ್‌ ಮೀಡಿಯಾ ಹಾಗೂ ರಾಜತಾಂತ್ರಿಕ ಯುದ್ಧವನ್ನು ಹುಟ್ಟುಹಾಕಿದೆ. ಪ್ರಧಾನಿ ಮೋದಿ ಅವರು ಮೂಲಸೌಕರ್ಯ ಅಭಿವೃದ್ಧಿ ಮತ್ತು ಪ್ರವಾಸೋದ್ಯಮವನ್ನು (Lakshadweep tourism) ಉತ್ತೇಜಿಸಲು ಕಳೆದ ವಾರ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರು. ತಮ್ಮ ಪೋಸ್ಟ್‌ನಲ್ಲಿ ಪ್ರಧಾನಿ ಮೋದಿ ಅವರು ಲಕ್ಷದ್ವೀಪ ಅದ್ಭುತ ಸೌಂದರ್ಯ ಮತ್ತು ಅದರ ಜನರ ಆತ್ಮೀಯ ಸ್ವಭಾವದ ಬಗೆಗ ಬರೆದಿದ್ದರು. ಆದರೆ ತಮ್ಮ ಪೋಸ್ಟ್‌ನಲ್ಲಿ ಎಲ್ಲಿಯೂ ಮಾಲ್ಡೀವ್ಸ್ ಬಗ್ಗೆ ಪ್ರಸ್ತಾಪಿಸಿರಲಿಲ್ಲ.

ನಂತರ ಮಾಲ್ದೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಸರ್ಕಾರದ ಹಿರಿಯ ಸಚಿವ ಅಬ್ದುಲ್ಲಾ ಮಹಜೂಮ್ ಮಜಿದ್ ಅವರು, ಭಾರತವು ಮಾಲ್ಡೀವ್ಸ್ ಅನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದರು. “ಭಾರತವು ಸುಖಾಸುಮ್ಮನೆ ಮಾಲ್ಡೀವ್ಸ್‌ಅನ್ನು ಟಾರ್ಗೆ ಮಾಡುತ್ತಿದೆ. ಬೀಚ್‌ ಪ್ರವಾಸೋದ್ಯಮದಲ್ಲಿ ಭಾರತವು ಮಾಲ್ಡೀವ್ಸ್‌ಗೆ ಸವಾಲೊಡ್ಡಬೇಕು ಎಂದರೆ ತುಂಬ ಸವಾಲುಗಳನ್ನು ಎದುರಿಸಬೇಕಾಗುತ್ತದೆ” ಎಂದು ಮಜಿದ್ ಪೋಸ್ಟ್‌ ಮಾಡಿದ್ದರು. ಮತ್ತೊಬ್ಬ ಸಹಾಯಕ ಸಚಿವೆ ಮರಿಯಮ್‌ ಶಿವುನಾ, “ಇಸ್ರೇಲ್‌ ಕೈಗೊಂಬೆಯಾಗಿರುವ ನರೇಂದ್ರ ಮೋದಿ ಅವರು ಲೈಫ್‌ ಜಾಕೆಟ್‌ ಧರಿಸಿ ಜಿಗಿಯುತ್ತಾರೆ” ಎಂದು ಉದ್ಧಟತನದ ಪೋಸ್ಟ್‌ ಮಾಡಿದ್ದರು. ಇದೇ ಕಾರಣಕ್ಕೆ ಈಗ ಮೂವರು ಸಚಿವರನ್ನು ಮಾಲ್ಡೀವ್ಸ್‌ ಅಮಾನತುಗೊಳಿಸಿದೆ.

ಮಾಲ್ಡೀವ್ಸ್‌ನ ಮಾಜಿ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಅವರು ಭಾರತದ ವಿರುದ್ಧದ ದ್ವೇಷಪೂರಿತ ಭಾಷೆಯ ಬಳಕೆಯನ್ನು ಖಂಡಿಸಿದ್ದಾರೆ. “ಭಾರತವು ಯಾವಾಗಲೂ ಮಾಲ್ಡೀವ್ಸ್‌ಗೆ ಉತ್ತಮ ಸ್ನೇಹಿತ. ನಮ್ಮ ಎರಡು ದೇಶಗಳ ನಡುವಿನ ಹಳೆಯ ಸ್ನೇಹದ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರುವ ಇಂಥ ಕಠೋರವಾದ ಹೇಳಿಕೆಗಳಿಗೆ ನಾವು ಅನುಮತಿಸಬಾರದು” ಎಂದು ಸೋಲಿಹ್ Xನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದರ ಜೊತೆಗೆ ಭಾರತೀಯರು ಸೋಶಿಯಲ್‌ ಮೀಡಿಯಾದಲ್ಲಿ ಬಾಯ್ಕಾಟ್‌ ಮಾಲ್ದೀವ್ಸ್‌ (Boycott Maldives) ಅಭಿಯಾನ ಆರಂಭಿಸಿದ್ದರು. ಹಲವಾರು ಸೆಲೆಬ್ರಿಟಿಗಳು ಮಾಲ್ದೀವ್ಸ್‌ ಅನ್ನು ಬಹಿಷ್ಕರಿಸಿದ್ದು, ತಾವು ಅಲ್ಲಿಗೆ ಹೋಗುವುದಿಲ್ಲ ಎಂದಿದ್ದಾರೆ. ಹಲವು ಟೂರಿಸಂ ಸೈಟ್‌ಗಳು ಮಾಲ್ದೀವ್ಸ್‌ ಪ್ರವಾಸಗಳನ್ನು ಕೈಬಿಟ್ಟಿವೆ. ಮಾಲ್ದೀವ್ಸ್‌ನ ಪ್ರವಾಸೋದ್ಯಮಕ್ಕೆ ಇದರಿಂದ ತೀವ್ರ ಧಕ್ಕೆಯಾಗಿದೆ.

Exit mobile version