Site icon Vistara News

Boycott Maldives: ಮಾಲ್ಡೀವ್ಸ್ ಜತೆ ವ್ಯಾಪಾರ ಬೇಡ! ಭಾರತೀಯ ವ್ಯಾಪಾರಿಗಳಿಗೆ ಸಿಎಐಟಿ ಫರ್ಮಾನು

Boycott Maldives, CAIT urges to businessmen not engage with Maldives

ನವದೆಹಲಿ: ಸೋಷಿಯಲ್ ಮೀಡಿಯಾಗಳಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಮಾಲ್ಡೀವ್ಸ್‌ ಸಚಿವರು (Maldives Ministers) ಹೀಗಳೆದ ಘಟನೆಯು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಭಾರತ ಮತ್ತು ಮಾಲ್ಡೀವ್ಸ್ (India and Maldives) ನಡುವೆ ರಾಜತಾಂತ್ರಿಕ ಬಿಕ್ಕಟ್ಟು (Diplomatic Crisiss) ಕೂಡ ಸೃಷ್ಟಿಯಾಗಿದ್ದು, ಮಾಲ್ಡೀವ್ಸ್ ಜತೆಗೆ ಯಾವುದೇ ವ್ಯಾಪಾರ ವಹಿವಾಟವನ್ನು ಮಾಡದಂತೆ ಅಖಿಲ ಭಾರತ ವ್ಯಾಪಾರಿಗಳು ಒಕ್ಕೂಟ(Confederation of All India Traders – CAIT)ವು ವ್ಯಾಪಾರಿಗಳಿಗೆ ಆಗ್ರಹಿಸಿದೆ. ಮಾಲ್ಡೀವ್ಸ್ ವಿವಾದಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಬಾಯ್ಕಾಟ್ ಮಾಲ್ಡೀವ್ಸ್ (Boycott Maldives) ಎಂಬ ಅಭಿಯಾನ ಕೂಡ ಟ್ರೆಂಡ್ ಆಗಿತ್ತು.

ಸಿಎಐಟಿ ರಾಷ್ಟ್ರೀಯ ಅಧ್ಯಕ್ಷ ಬಿ ಸಿ ಭಾರ್ತಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಅವರು, ”ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿಕೊಂಡ ಆಕ್ಷೇಪಾರ್ಹ ಹೇಳಿಕೆಗಳು ವ್ಯಾಪಾರ ಸಮುದಾಯಕ್ಕೆ ಸ್ವೀಕಾರಾರ್ಹವಲ್ಲ ಎಂದು ಪರಿಗಣಿಸಿದೆ. ಹಾಗಾಗಿ, ಮಾಲ್ಡೀವ್ಸ್ ವಿರುದ್ಧ ವ್ಯಾಪಾರವನ್ನು ರದ್ದು ಮಾಡುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡುವುದು ಹಾಗೂ ಪ್ರಧಾನಿಗೆ ಅಗೌರವ ತೋರಿದವರಿಗೆ ಅಸಮ್ಮತಿಯನ್ನು ದಾಖಲಿಸುವ ಪ್ರಯತ್ನ ಮಾಡಲಾಗುತ್ತಿದೆ” ಎಂದು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಸಂಬಂಧಗಳು ಪರಸ್ಪರ ಗೌರವ ಮತ್ತು ಸಹಕಾರವನ್ನು ಆಧರಿಸಿರಬೇಕಾದರೆ, ರಾಜಕೀಯ ನಾಯಕರನ್ನು ಗುರಿಯಾಗಿಟ್ಟುಕೊಂಡು ನೀಡುವ ಅವಹೇಳನಕಾರಿ ಹೇಳಿಕೆಗಳು ದ್ವಿಪಕ್ಷೀಯ ಸಂಬಂಧಗಳನ್ನು ಹಾಳು ಮಾಡುತ್ತವೆ ಎಂಬುದನ್ನು ಮರೆಯಬಾರದು. ಈ ಮನವಿಯು ರಾಜತಾಂತ್ರಿಕ ಸಭ್ಯತೆಯನ್ನು ಕಾಪಾಡಿಕೊಳ್ಳುವ ಮತ್ತು ರಾಷ್ಟ್ರಗಳ ನಡುವೆ ಸಕಾರಾತ್ಮಕ ಸಂಬಂಧಗಳನ್ನು ಬೆಳೆಸುವ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ. ತನ್ನ ಕೆಲವು ಜವಾಬ್ದಾರಿಯುತ ಜನರ ಅಬದ್ಧ ಮಾತುಗಳಿಗಾಗಿ ಮಾಲ್ಡೀವ್ಸ್ ಸರ್ಕಾರವು ಭಾರತಕ್ಕೆ ಕ್ಷಮೆಯಾಚಿಸಬೇಕು ಎಂದು ಎಂದು ಖಂಡೇಲ್ವಾಲ್ ಮತ್ತು ಭಾರ್ತಿಯಾ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಾರತದ ಹೈಕಮಿಷನರ್‌ಗೂ ಮಾಲ್ದೀವ್ಸ್‌ ಸಚಿವಾಲಯದಿಂದ ಬುಲಾವ್‌

ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ವಿರೋಧಿ ಪೋಸ್ಟ್‌ನಿಂದ ಸೃಷ್ಟಿಯಾಗಿರುವ ʼಬಾಯ್ಕಾಟ್‌ ಮಾಲ್ದೀವ್ಸ್‌ʼ (Boycott Maldives) ಕೋಲಾಹಲದ ಹಿನ್ನೆಲೆಯಲ್ಲಿ ಮಾಲ್ದೀವ್ಸ್‌ ಹೈಕಮಿಷನರ್‌ ಅನ್ನು ಕರೆದು ಭಾರತೀಯ ವಿದೇಶಾಂಗ ಇಲಾಖೆ ಬುದ್ಧಿ ಹೇಳಿದೆ. ಬೆನ್ನಲ್ಲೇ, ಭಾರತೀಯ ಹೈಕಮಿಷನರ್‌ಗೂ ಮಾಲ್ದೀವ್ಸ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬುಲಾವ್‌ ನೀಡಿದೆ.

ಮಾಲ್ಡೀವ್ಸ್ ಹೈಕಮಿಷನರ್ ಇಬ್ರಾಹಿಂ ಶಾಹೀಬ್ ಸೋಮವಾರ ದೆಹಲಿಯ ದಕ್ಷಿಣ ಬ್ಲಾಕ್‌ನಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಭೇಟಿ ನೀಡಿದರು. ಶಹೀಬ್ ಅವರ ಸಮನ್ಸ್ ನಂತರ, ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ಹೈಕಮಿಷನರ್ ಮುನು ಮಹಾವರ್ ಅವರನ್ನೂ ಮಧ್ಯಾಹ್ನ 12:30ಕ್ಕೆ ಮಾಲ್ಡೀವ್ಸ್ ವಿದೇಶಾಂಗ ಸಚಿವಾಲಯಕ್ಕೆ ಬರಲು ಕೇಳಲಾಗಿದೆ. ಹೀಗೆಂದು ಅವರ ಸೋಶಿಯಲ್‌ ಮೀಡಿಯಾ X ಖಾತೆ ತಿಳಿಸಿದೆ. ಆದರೂ, “ಮಹಾವರ್ ಅವರು ದ್ವಿಪಕ್ಷೀಯ ವಿಷಯಗಳ ಕುರಿತು ಚರ್ಚಿಸಲು ಮಾಲ್ಡೀವ್ಸ್‌ನ ವಿದೇಶಾಂಗ ಸಚಿವಾಲಯದ ಹಿರಿಯ ರಾಯಭಾರಿ ಹೆಚ್.ಇ ಡಾ. ಅಲಿ ನಾಸೀರ್ ಮೊಹಮ್ಮದ್ ಅವರೊಂದಿಗೆ ಪೂರ್ವ ನಿಗದಿತ ಸಭೆಯನ್ನು ಹೊಂದಿದ್ದರು” ಎಂದು ತಿಳಿಸಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಂಚಿಕೊಂಡ ಲಕ್ಷದ್ವೀಪ ದ್ವೀಪದ ಚಿತ್ರಗಳು ಭಾರತ ಮತ್ತು ಮಾಲ್ಡೀವ್ಸ್ ನಡುವೆ ಸೋಶಿಯಲ್‌ ಮೀಡಿಯಾ ಹಾಗೂ ರಾಜತಾಂತ್ರಿಕ ಯುದ್ಧವನ್ನು ಹುಟ್ಟುಹಾಕಿದೆ. ಪ್ರಧಾನಿ ಮೋದಿ ಅವರು ಮೂಲಸೌಕರ್ಯ ಅಭಿವೃದ್ಧಿ ಮತ್ತು ಪ್ರವಾಸೋದ್ಯಮವನ್ನು (Lakshadweep tourism) ಉತ್ತೇಜಿಸಲು ಕಳೆದ ವಾರ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರು. ತಮ್ಮ ಪೋಸ್ಟ್‌ನಲ್ಲಿ ಪ್ರಧಾನಿ ಮೋದಿ ಅವರು ಲಕ್ಷದ್ವೀಪ ಅದ್ಭುತ ಸೌಂದರ್ಯ ಮತ್ತು ಅದರ ಜನರ ಆತ್ಮೀಯ ಸ್ವಭಾವದ ಬಗೆಗ ಬರೆದಿದ್ದರು. ಆದರೆ ತಮ್ಮ ಪೋಸ್ಟ್‌ನಲ್ಲಿ ಎಲ್ಲಿಯೂ ಮಾಲ್ಡೀವ್ಸ್ ಬಗ್ಗೆ ಪ್ರಸ್ತಾಪಿಸಿರಲಿಲ್ಲ.

ಈ ಸುದ್ದಿಯನ್ನೂ ಓದಿ: Lakshadweep: ಮಾಲ್ಡೀವ್ಸ್‌ ಬಿಡಿ, ಲಕ್ಷದ್ವೀಪದಲ್ಲಿ ನೋಡಲೇಬೇಕಾದ ತಾಣಗಳ ಪರಿಚಯ ಇಲ್ಲಿದೆ

Exit mobile version