ಹೊಸದಿಲ್ಲಿ: ಸಾಮಾಜಿಕ ಮಾಧ್ಯಮಗಳಲ್ಲಿ ʼಬಾಯ್ಕಾಟ್ ಮಾಲ್ದೀವ್ಸ್ʼ (Boycott Maldives) ಕರೆ ಜೋರಾಗುತ್ತಿರುವಂತೆ, ಡ್ಯಾಮೇಜ್ ಕಂಟ್ರೋಲ್ ಮಾಡುವ ಮಾಲ್ದೀವ್ಸ್‌ನ ಪ್ರಯತ್ನವೂ ಹೆಚ್ಚುತ್ತಿದೆ. ಇದೀಗ ಮಾಲ್ದೀವ್ಸ್‌ನ ಮಾಜಿ ಸಚಿವೆಯೊಬ್ಬರು, “ಭಾರತವೇ ನಮ್ಮ 911 (ತುರ್ತು ಸಹಾಯವಾಣಿ)ʼʼ ಎಂದು ಹೇಳಿದ್ದಾರೆ.
ಮಾಲ್ಡೀವ್ಸ್ ಅಧ್ಯಕ್ಷ (Maldives president) ಮೊಹಮ್ಮದ್ ಮುಯಿಜ್ಜು (Mohamed Muizzu) ಅವರ ಸರ್ಕಾರದ ಕೆಲವು ಸಚಿವರು ಭಾರತದ ಪ್ರಧಾನಿ ಮೋದಿ (PM Narendra Modi) ವಿರುದ್ಧ ನೀಡಿದ ಅಗೌರವದ ಟೀಕೆಗಳಿಂದ ಉಂಟಾಗಿರುವ ಹಾನಿಯನ್ನು ಸರಿಪಡಿಸಲು ಹಲವು ಮಾಜಿ ಸಚಿವರು, ಮಾಲ್ದೀವ್ಸ್ ಪ್ರವಾಸೋದ್ಯಮ ಸಂಘಟನೆ ಇತ್ಯಾದಿಗಳು ಮುಂದಾಗಿವೆ.
“ಭಾರತದ ಪ್ರಧಾನಿ ಮೋದಿ ವಿರುದ್ಧದ ಅವಹೇಳನಕಾರಿ ಹೇಳಿಕೆಗಳು ಮಾಲ್ದೀವ್ಸ್ ಸರ್ಕಾರಕ್ಕೆ ದೂರದೃಷ್ಟಿ ಇಲ್ಲದಿರುವುದನ್ನು ಪ್ರದರ್ಶಿಸುತ್ತವೆ. ಭಾರತವು ನಮಗೆ ವಿಶ್ವಾಸಾರ್ಹ ಮಿತ್ರರಾಷ್ಟ್ರ. ರಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸದಾ ನೆರವು ನೀಡುತ್ತ ಬಂದಿದೆ” ಎಂದು ಮಾಲ್ದೀವ್ಸ್‌ನ ಮಾಜಿ ರಕ್ಷಣಾ ಸಚಿವೆ ಮರಿಯಾ ಅಹ್ಮದ್ ದೀದಿ (Maria Ahmed Didi) ಹೇಳಿದ್ದು, ಉಭಯ ದೇಶಗಳ ನಡುವಿನ ದೀರ್ಘಕಾಲಿಕ ಸಂಬಂಧವನ್ನು ಹಾಳುಮಾಡುವ ಯಾವುದೇ ಪ್ರಯತ್ನವನ್ನು ಟೀಕಿಸಿದ್ದಾರೆ.
ಸಚಿವರ ಅವಹೇಳನಕಾರಿ ಹೇಳಿಕೆಗಳ ಬಗ್ಗೆ ದೀದಿ ನಿರಾಶೆ ವ್ಯಕ್ತಪಡಿಸಿದ್ದು, ಭಾರತವನ್ನು ಮಾಲ್ಡೀವ್ಸ್‌ನ ʼ911 ಸಹಾಯವಾಣಿʼ ಎಂದಿದ್ದಾರೆ. “ಇದು ಪ್ರಸ್ತುತ ಆಡಳಿತದ ಕಡೆಯಿಂದ ಘಟಿಸಿರುವ ಪ್ರಮಾದವಾಗಿದೆ. ನಾವು ಎಲ್ಲರೊಂದಿಗೆ ಸ್ನೇಹ ಹೊಂದಿರುವ ಒಂದು ಸಣ್ಣ ದೇಶ. ನಾವು ಭಾರತದೊಂದಿಗೆ ಗಡಿಗಳನ್ನು ಹಂಚಿಕೊಳ್ಳುತ್ತೇವೆ ಎಂಬುದನ್ನು ನಾವು ಅಲ್ಲಗಳೆಯುವಂತಿಲ್ಲ. ನಾವು ಇದೇ ರೀತಿಯ ಭದ್ರತಾ ಕಾಳಜಿಗಳನ್ನೂ ಹಂಚಿಕೊಳ್ಳುತ್ತೇವೆ. ಭಾರತ ಯಾವಾಗಲೂ ನಮಗೆ ಸಹಾಯ ಮಾಡಿದೆ. ರಕ್ಷಣಾ ವಲಯದಲ್ಲಿಯೂ ಸಹ ಸಾಮರ್ಥ್ಯ ವೃದ್ಧಿ, ಸಲಕರಣೆಗಳನ್ನು ಒದಗಿಸಿ ನಮ್ಮನ್ನು ಹೆಚ್ಚು ಸ್ವಾವಲಂಬಿಗಳನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ” ಎಂದು ಮರಿಯಾ ಅಹ್ಮದ್ ದೀದಿ ಹೇಳಿದ್ದಾರೆ.
“ಮಾಲ್ಡೀವ್ಸ್ ಮತ್ತು ಭಾರತಗಳು ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ತಮ್ಮ ಅನ್ವೇಷಣೆಯಲ್ಲಿ ಸಮಾನ ಮನಸ್ಕ ದೇಶಗಳಾಗಿವೆ. ಭಾರತದೊಂದಿಗೆ ನಾವು ಯಾವಾಗಲೂ ಹೊಂದಿರುವ ಹಳೆಯ ಸಂಬಂಧವನ್ನು ಕಳಚಿಕೊಳ್ಳಲು ನಾವು ಪ್ರಯತ್ನಿಸಬಹುದು ಎಂದು ಯೋಚಿಸುವುದು ಪ್ರಸ್ತುತ ಸರ್ಕಾರದ ಬಹಳ ತಪ್ಪು ನಡೆಯಾಗಿದೆ” ಎಂದು ಅವರು ಟೀಕಿಸಿದ್ದಾರೆ.
ಒಂದು ದಿನದ ಹಿಂದೆ, ಮಾಲ್ಡೀವ್ಸ್ ವಿದೇಶಾಂಗ ವ್ಯವಹಾರಗಳ ಸಚಿವ ಮೂಸಾ ಜಮೀರ್ ಅವರು ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದರು. “ಭಾರತದ ನಾಯಕರ ವಿರುದ್ಧದ ಈ ಟೀಕೆಗಳು ಸ್ವೀಕಾರಾರ್ಹವಲ್ಲ ಮತ್ತು ಇವು ಮಾಲ್ಡೀವ್ಸ್ ಸರ್ಕಾರದ ಅಧಿಕೃತ ಹೇಳಿಕೆಗಳಲ್ಲ. ಮಾಲ್ಡೀವ್ಸ್ ತನ್ನ ಎಲ್ಲಾ ಪಾಲುದಾರರೊಂದಿಗೆ, ವಿಶೇಷವಾಗಿ ನೆರೆಹೊರೆಯವರೊಂದಿಗೆ ಧನಾತ್ಮಕ ಮತ್ತು ರಚನಾತ್ಮಕ ಸಂವಾದವನ್ನು ಬೆಳೆಸಲು ಬದ್ಧವಾಗಿದೆ” ಎಂದು ಅವರು ಹೇಳಿದ್ದಾರೆ.
ಜನವರಿ 2ರಂದು ಪಿಎಂ ನರೇಂದ್ರ ಮೋದಿ ಅವರು ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರು. ತಮ್ಮ ಸ್ನಾರ್ಕೆಲಿಂಗ್‌ನ ʼಉಲ್ಲಾಸದಾಯಕ ಅನುಭವ’ ಸೇರಿದಂತೆ ಹಲವಾರು ಚಿತ್ರಗಳನ್ನು ಹಂಚಿಕೊಂಡಿದ್ದರು. ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮ ಉತ್ತೇಜಿಸುವ ಬಗ್ಗೆ ಮಾತನಾಡಿದ್ದರು. ಆದರೆ ಮಾಲ್ದೀವ್ಸ್ ಬಗ್ಗೆ ಯಾವುದೇ ಚಕಾರ ಎತ್ತಿರಲಿಲ್ಲ.
ಆದರೆ ಇದನ್ನು ಸಹಿಸದ ಮಾಲ್ಡೀವ್ಸ್‌ನ ಮೂವರು ಸಚಿವರು, ಪ್ರಧಾನಿ ಮೋದಿಯವರ ಲಕ್ಷದ್ವೀಪ ಭೇಟಿಯ ಬಗ್ಗೆ ಅವಹೇಳನಕಾರಿ, ಅಪಹಾಸ್ಯದ ಉಲ್ಲೇಖಗಳನ್ನು ಮಾಡಿದ್ದರು. ಇದರಿಂದ ಭಾರತದಲ್ಲಿ ಭಾರಿ ಕೋಲಾಹಲ ಭುಗಿಲೆದ್ದಿದೆ. ವಿಐಪಿಗಳು ಕೂಡ ಬಾಯ್ಕಾಟ್ ಮಾಲ್ದೀವ್ಸ್ (Boycott Maldeves) ಅಭಿಯಾನದಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: Boycott Maldives: ಮಾಲ್ಡೀವ್ಸ್ ಸರ್ಕಾರದ ವಿರುದ್ಧವೇ ತಿರುಗಿ ಬಿದ್ದ ಅಲ್ಲಿನ ಪ್ರವಾಸೋದ್ಯಮ ಸಂಘ ಹೇಳಿದ್ದೇನು?