ಮುಂಬೈ: ಬದಲಾದ ಕಾಲಘಟ್ಟದಲ್ಲಿ ನಿಜವಾದ ಪ್ರೀತಿ-ಪ್ರೇಮ ಎಂಬುದರ ಅರ್ಥವೇ ಕ್ಷೀಣಿಸುತ್ತಿದೆ. ಕಾಲೇಜು ಓದುವಾಗಲೇ ಪ್ರೀತಿಸುವುದು, ಜಗಳ ಆಡಿ ಒಂದೆರಡು ವರ್ಷದಲ್ಲಿ ದೂರ ಆಗುವುದು, ಬ್ರೇಕಪ್ (Love Breakup) ಬಳಿಕ ಮತ್ತೊಂದು ಲವ್ ಹಿಂದೆ ಓಡುವುದು ಸಾಮಾನ್ಯ ಎಂಬಂತಾಗಿದೆ. ಇನ್ನೂ, ಒಂದು ಹೆಜ್ಜೆ ಮುಂದೆ ಹೋಗಿರುವ ಪ್ರೇಮಿಗಳು, ತಾವು ಇಷ್ಟಪಟ್ಟವರು ಬ್ರೇಕಪ್ ಎಂದರೆ ಅಥವಾ ಇನ್ನೊಂದು ಅಫೇರ್‌ನ ಅನುಮಾನ ಮೂಡಿ ಕೊಲೆಯಂತಹ ಪ್ರಕರಣಗಳು ನಡೆಯುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಮುಂಬೈನಲ್ಲಿ (Mumbai) ಯುವಕನೊಬ್ಬ ತಾನು ಪ್ರೀತಿಸುತ್ತಿದ್ದ 20 ವರ್ಷದ ಯುವತಿಯನ್ನು ಭೀಕರವಾಗಿ ಕೊಲೆ ಮಾಡಿ, ಶವವನ್ನು ಪೊದೆಯಲ್ಲಿ ಎಸೆದಿರುವ ಪ್ರಕರಣ ಬಯಲಾಗಿದೆ.
ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯಶಶ್ರೀ ಶಿಂಧೆ ಎಂಬ 20 ವರ್ಷದ ಯುವತಿಯ ಶವವು ನವಿ ಮುಂಬೈ ರೈಲು ನಿಲ್ದಾಣದ ಬಳಿಯ ಪೊದೆಯಲ್ಲಿ ಪತ್ತೆಯಾಗಿದೆ. ಆಕೆಯ ಬಾಯ್‌ಫ್ರೆಂಡ್‌ನೇ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. “ತಡರಾತ್ರಿ 2 ಗಂಟೆ ಸುಮಾರಿಗೆ ಉರಾನ್ ರೈಲು ನಿಲ್ದಾಣದ ಬಳಿಯ ಪೊದೆಯಲ್ಲಿ ಯುವತಿಯ ಶವ ಬಿದ್ದಿದೆ ಎಂಬುದಾಗಿ ಕರೆ ಬಂದಿತು. ಕೂಡಲೇ ಪೊಲೀಸರು ಸ್ಥಳಕ್ಕೆ ತೆರಳಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಯುವತಿ ಮೈಮೇಲೆ ಭೀಕರ ಗಾಯಗಳಾಗಿವೆ. ಆಕೆಯನ್ನು ಇರಿದು ಕೊಲೆ ಮಾಡಲಾಗಿದೆ” ಎಂದು ನವಿ ಮುಂಬೈ ಡಿಸಿಪಿ ವಿವೇಕ್ ಪನ್ಸಾರೆ ತಿಳಿಸಿದ್ದಾರೆ.
“ಪ್ರಾಥಮಿಕ ತನಿಖೆಯ ಪ್ರಕಾರ, ಯುವಕ ಹಾಗೂ ಯುವತಿಯು ಪ್ರೀತಿಸುತ್ತಿದ್ದರು. ಇತ್ತೀಚೆಗೆ ಇಬ್ಬರ ಮಧ್ಯೆ ಮನಸ್ತಾಪ ಮೂಡಿತ್ತು. ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವತಿಯ ಶವ ಪತ್ತೆಯಾದ ಬಳಿಕ ಯುವಕನ ಮೇಲೆ ಶಂಕೆ ವ್ಯಕ್ತವಾಗಿದೆ. ಯುವಕನು ಈಗ ಪ್ರಾಥಮಿಕ ಆರೋಪಿಯಾಗಿದ್ದಾನೆ. ಕೊಲೆ ಬಳಿಕ ಯುವಕನು ಕೂಡ ನಾಪತ್ತೆಯಾಗಿದ್ದಾನೆ. ಆತನನ್ನು ಪತ್ತೆಹಚ್ಚಲು ಐದು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುತ್ತದೆ” ಎಂಬುದಾಗಿ ಡಿಸಿಪಿ ತಿಳಿಸಿದ್ದಾರೆ.
ಯುವತಿಯು ಉರಾನ್ ಪ್ರದೇಶದ ನಿವಾಸಿಯಾಗಿದ್ದು, ಅಲ್ಲಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಬೇಲಾಪುರದಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಇದೇ ವೇಳೆ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ಆದರೆ, ಇತ್ತೀಚೆಗೆ ಇಬ್ಬರ ಮಧ್ಯೆ ಮನಸ್ತಾಪಗಳು, ಜಗಳಗಳು ಜಾಸ್ತಿಯಾಗಿದ್ದವು ಎಂದು ತಿಳಿದುಬಂದಿದೆ. ಆದಾಗ್ಯೂ, ಯುವತಿಯನ್ನು ಕೊಲೆ ಮಾಡಲು ನಿಖರ ಕಾರಣ ಏನು ಎಂಬುದು ಇದುವರೆಗೆ ಗೊತ್ತಾಗಿಲ್ಲ.
ಇದನ್ನೂ ಓದಿ: Murder in PG: ಪಿಜಿಯಲ್ಲಿ ಯುವತಿ ಕೊಲೆ ಮಾಡಿದ ಪಾತಕಿ ಮಧ್ಯಪ್ರದೇಶದಲ್ಲಿ ಸೆರೆ