ನವದೆಹಲಿ: ಅಮೆರಿಕದ ಸೌಥ್ ಫ್ಲೋರಿಡಾ ಷಾರ್ಲೆಟ್ ಕೌಂಟಿಯ ನಿವಾಸಿಯೊಬ್ಬರು ಫೆ.20ರಂದು ನಲ್ಲಿ ನೀರಿನಿಂದ ಜಲನೇತಿ ಮಾಡಿದ ಬಳಿಕ ಮೃತಪಟ್ಟಿದ್ದರು. ಹಾಗಾಗಿ, ಆರೋಗ್ಯ ಇಲಾಖೆಯ ಸೋಂಕಿನ ಬಗ್ಗೆ ಎಚ್ಚರ ವಹಿಸುವಂತೆ ಸಾರ್ವಜನಿಕರಿಗೆ ಸೂಚಿಸಿತ್ತು. ಆದರೆ, ಆ ವ್ಯಕ್ತಿಯ ಸಾವಿಗೆ ನಿಜವಾದ ಕಾರಣ ಗೊತ್ತಾದ ಮೇಲೆ ಎಲ್ಲರೂ ಆತಂಕಗೊಳ್ಳುವಂತಾಯಿತು. ವಾಸ್ತವದಲ್ಲಿ ಬ್ರೈನ್ ಈಟಿಂಗ್ ಅಮೀಬಾ(Brain Eating Amoeba) ನೇಗ್ಲೇರಿಯಾ ಫೌಲೆರಿಯಿಂದಾಗಿ (Naegleria Fowleri) ಆ ವ್ಯಕ್ತಿ ಮೃತಪಟ್ಟಿದ್ದಾನೆಂದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ. ಇದೇ ಅಮೀಬಾದಿಂದಾಗಿ ಕಳೆದ ವರ್ಷ ದಕ್ಷಿಣ ಕೊರಿಯಾದ ವ್ಯಕ್ತಿಯೊಬ್ಬ ಮೃತಪಟ್ಟಿದ್ದ.
ಮನುಷ್ಯನ ಮೆದುಳು ಸೇರುವ ಇದು ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್(PAM)ಗೆ ಕಾರಣವಾಗುತ್ತದೆ. ಈ ಅಮೀಬಾ ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಈ ಸೋಂಕು, ಮೆದುಳಿನ ಅಂಗಾಂಶವನ್ನು ಹಾನಿಗೊಳಿಸುತ್ತದೆ ಎಂದು ಹೇಳಲಾಗುತ್ತಿದೆ.
ಏನಿದು ಮೆದುಳು ತಿನ್ನುವ ಅಮೀಬಾ?
ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, ನೇಗ್ಲೇರಿಯಾ ಫೌಲೆರಿ ಒಂದು ರೀತಿಯ ಅಮೀಬಾ (ಏಕಕೋಶದ ಜೀವಿ). ಇದು ಸರೋವರಗಳು, ನದಿಗಳು ಮತ್ತು ಬಿಸಿನೀರಿನ ಬುಗ್ಗೆಗಳಂತಹ ಬೆಚ್ಚಗಿನ ಸಿಹಿನೀರಿನ ಪರಿಸರದಲ್ಲಿ ಕಂಡುಬರುತ್ತದೆ. ಅಮೀಬಾ ಇರುವ ನೀರು ಮೂಗಿನಿಂದ ಹಾದುಹೋದಾಗ ಅದು ಮೆದುಳಿಗೆ ಸೋಂಕು ಉಂಟುಮಾಡುತ್ತದೆ . ಹಾಗಾಗಿ, ಇದನ್ನು ಮೆದುಳು ತಿನ್ನುವ ಅಮೀಬಾ (Brain Eating Amoeba) ಎಂದೂ ಕರೆಯುತ್ತಾರೆ.
ನೇಗ್ಲೇರಿಯಾ ಫೌಲೆರಿಯುಕ್ತ ನೀರು ಮೂಗಿನ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ಅಲ್ಲಿಂದ ಘ್ರಾಣ ನರದ ಮೂಲಕ ಮೆದುಳು ತಲುಪತ್ತದೆ. ಆದರೆ, ಈ ಅಮೀಬಾ ಇರುವ ನೀರು ಕುಡಿಯುವುದರಿಂದ, ಅದು ಮೆದಳು ಪ್ರವೇಶಿಸುವುದಿಲ್ಲ. ಅದು ಮೂಗಿನ ಮೂಲಕ ಪ್ರವೇಶಿಸಿದಾಗಲಷ್ಟೇ ಮೆದುಳಿಗೆ ಪ್ರಯಾಣಿಸುತ್ತದೆ ಎನ್ನತ್ತಾರೆ ತಜ್ಞರು.
ಇದನ್ನೂ ಓದಿ: Norovirus Disease: ಕೇರಳದ ಇಬ್ಬರು ಮಕ್ಕಳಿಗೆ ನೊರೊವೈರಸ್ ಸೋಂಕು, ಏನಿದು ನೊರೊವೈರಸ್, ಲಕ್ಷಣಗಳೇನು?
ನೇಗ್ಲೇರಿಯಾ ಫೌಲೆರಿ ಸೋಂಕು ಲಕ್ಷಣಗಳೇನು?
ಒಂದೊಮ್ಮೆ ನೇಗ್ಲೇರಿಯಾ ಫೌಲೆರಿ ಸೋಂಕು ಕಂಡು ಬಂದ ಒಂದು ದಿನದಿಂದ 12 ದಿನದೊಳಗೇ ಗುಣಮುಖರಾಗಬಹುದು. ಲಕ್ಷಣಗಳು ಗೋಚರವಾದ ಒಂದು ದಿನದಿಂದ 18 ದಿನಗಳೊಳಗೇ ಜನರು ಸಾಯಬಹುದು. ತಲೆನೋವು, ಜ್ವರ, ವಾಂತಿ, ಕುತ್ತಿಗೆ ನೋವು, ಕೋಮಾ ಇತ್ಯಾದಿ ಲಕ್ಷಣಗಳು ಗೋಚರಿಸುತ್ತವೆ.