ಪಟನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಬಿಜೆಪಿ ದಾಂಪತ್ಯದಲ್ಲಿ ಒಡಕು ಉಂಟಾಗಿದೆ. ಜೆಡಿಯುನಲ್ಲಿ ನಡೆಯುತ್ತಿರುವ ನೂತನ ಬೆಳವಣಿಗೆಗಳು ಎನ್‌ಡಿಎಯಿಂದ ನಿತೀಶ್ ಪ್ರತ್ಯೇಕವಾಗುವ ಸಾಧ್ಯತೆಯತ್ತ ಬೆಟ್ಟು ಮಾಡುತ್ತಿವೆ.
ಭಾನುವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ನೀತಿ ಆಯೋಗದ ಸಭೆಯಲ್ಲಿ ಬಿಹಾರ ಸಿಎಂ, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು ಭಾಗವಹಿಸಿರಲಿಲ್ಲ. ಇದಾದ ಕೂಡಲೇ, ಮಂಗಳವಾರ ಪಕ್ಷದ ತುರ್ತು ಸಭೆಯನ್ನು ನಿತೀಶ್ ಅವರು ಕರೆದಿದ್ದಾರೆ.
ಆದರೆ ಈ ಸಭೆಯ ಬಗ್ಗೆ ಹೆಚ್ಚಿನ ಊಹಾಪೋಹ ಬೇಕಿಲ್ಲ ಎಂದು ಪಕ್ಷದ ವಕ್ತಾರರು ಹೇಳಿದ್ದಾರೆ. ʼʼಇದು ಪಕ್ಷದ ಸಂಸದೀಯ ಸಭೆ. ಎಲ್ಲ ಸಂಸದರು,ಶಾಸಕರು, ಎಂಎಲ್‌ಸಿಗಳು ಭಾಗವಹಿಸಲಿದ್ದಾರೆ. ಇದೊಂದು ಸಾಮಾನ್ಯ ಸಭೆಯಾಗಿದ್ದು, ಹೆಚ್ಚಿನ ಊಹಾಪೋಹ ಬೇಡʼʼ ಎಂದು ಜೆಡಿಯು ಹಿರಿಯ ನಾಯಕ ಕೆ.ಸಿ.ತ್ಯಾಗಿ ಹೇಳಿದ್ದಾರೆ.
ಆದರೆ ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಬೆಳವಣಿಗೆಗಳು, ಅದಷ್ಟೇ ಅಲ್ಲ ಎಂಬುದನ್ನು ಸೂಚಿಸುತ್ತಿವೆ. ಶನಿವಾರ ಜೆಡಿಯು ನಾಯಕರಾಗಿದ್ದ, ಕೇಂದ್ರ ಸಚಿವರಾಗಿದ್ದ ಆರ್‌ಸಿಪಿ ಸಿಂಗ್ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಭ್ರಷ್ಟಾಚಾರ, ಅಕ್ರಮ ಆಸ್ತಿಯ ಬಗ್ಗೆ ಅವರಿಂದ ಪಕ್ಷ ವಿವರಣೆ ಕೇಳಿತ್ತು. ಈ ವಿಚಾರವನ್ನು ಮಂಗಳವಾರದ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತ್ಯಾಗಿ ತಿಳಿಸಿದ್ದಾರೆ.
ʼʼನಾವು ಕೇಂದ್ರ ಸಂಪುಟದಲ್ಲಿ ಸೇರಿಕೊಳ್ಳುವುದಿಲ್ಲ ಎಂದು 2019ರಲ್ಲೇ ತಿಳಿಸಿದ್ದೆವು. ಈಗಲೂ ನಮ್ಮದು ಅದೇ ನಿಲುವುʼʼ ಎಂದು ಜೆಡಿಯು ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲಾಲ್ ಹೇಳಿದ್ದಾರೆ. ಇದುವರೆಗೂ ಕೇಂದ್ರದಲ್ಲಿ ಜೆಡಿಯುವಿನ ಏಕೈಕ ಪ್ರತಿನಿಧಿಯಾಗಿ ಆರ್‌ಸಿಪಿ ಸಿಂಗ್ ಇದ್ದರು.
ಹಲವು ತಿಂಗಳ ಬಿರುಕು
ಆದರೆ ಕಳೆದ ಹಲವು ತಿಂಗಳುಗಳಿಂದಲೂ ಜೆಡಿಯು- ಬಿಜೆಪಿ ನಡುವಿನ ಮೌನ ಸಂಘರ್ಷ ನಡೆಯುತ್ತಲೇ ಇದೆ ಎಂಬುದಕ್ಕೆ ಹಲವು ಸೂಚನೆಗಳು ಸಿಕ್ಕಿವೆ. ಜುಲೈ 17ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರೆದಿದ್ದ ಮುಖ್ಯಮಂತ್ರಿಗಳ ಸಭೆಗೆ ನಿತೀಶ್ ಗೈರುಹಾಜರಾಗಿದ್ದರು. ತದನಂತರ ಜುಲೈ 19ರಂದು ನಿರ್ಗಮನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಗೌರವಾರ್ಥ ನಡೆಸಿದ ಔತಣಕೂಟಕ್ಕೆ ನಿತೀಶ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆಹ್ವಾನಿಸಿದ್ದರು. ಆದರೆ ನಿತೀಶ್ ಅದರಿಂದಲೂ ದೂರು ಉಳಿದಿದ್ದರು.
ಇದನ್ನೂ ಓದಿ: ನಿತೀಶ್ ಕುಮಾರ್ ಜತೆ ಒಡಕು, ಜೆಡಿಯುಗೆ ಆರ್‌ಸಿಪಿ ಸಿಂಗ್ ರಾಜೀನಾಮೆ
ನಂತರ ಜುಲೈ 22ರಂದು ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ನಿತೀಶ್ ಹೋಗಿರಲಿಲ್ಲ. ಆಗಸ್ಟ್ 7ರ ನೀತಿ ಆಯೋಗದ ಸಭೆಗೂ ಆಗಮಿಸಿರಲಿಲ್ಲ. ಈ ಗೈರುಹಾಜರಿಗೆ ನಿರ್ದಿಷ್ಟ ಕಾರಣವನ್ನು ನಿತೀಶ್ ನೀಡಿಲ್ಲ.
ಜೆಡಿಯು ಒಡೆಯಲು ಬಿಜೆಪಿ ಯತ್ನ?
ಬಿಹಾರದ ರಾಜಕೀಯ ವಲಯದಲ್ಲಿ ಎಲ್ಲರಿಗೂ ಗೊತ್ತಿರುವಂತೆ, ಪದಚ್ಯುತ ಸಚಿವ ಆರ್‌ಸಿಪಿ ಸಿಂಗ್ ಅವರು ಬಿಜೆಪಿ ಜತೆಗೆ ನಿಕಟ ಒಡನಾಟ ಹೊಂದಿದ್ದಾರೆ. ಕಳೆದ ವರ್ಷ ಕೇಂದ್ರ ಸಂಪುಟ ವಿಸ್ತರಣೆಯ ವೇಳೆ ಅವರನ್ನು ಸೇರಿಸಿಕೊಳ್ಳಲಾಗಿತ್ತು. ಆದರೆ ಇದಕ್ಕೆ ನಿತೀಶ್ ಒಪ್ಪಿಗೆ ಇರಲಿಲ್ಲ. ನಂತರ ಸಿಂಗ್ ಅವರಿಗೆ ಮತ್ತೊಂದು ರಾಜ್ಯಸಭೆ ಅವಧಿಗೆ ಪಕ್ಷ ಅವಕಾಶ ನೀಡಿರಲಿಲ್ಲ. ಹೀಗಾಗಿ ಆರ್‌ಸಿಪಿ ಸಿಂಗ್ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಸಿಂಗ್ ಅವರನ್ನು ಉಪಯೋಗಿಸಿಕೊಂಡು, ಜೆಡಿಯು ಪಕ್ಷವನ್ನು ಒಡೆಯಲು ಬಿಜೆಪಿ ಮುಂದಾಗಿದೆ ಎಂಬ ಊಹಾಪೋಹ ದಟ್ಟವಾಗಿತ್ತು. ಇದನ್ನು ತಡೆಯಲು ನಿತೀಶ್ ಕಠಿಣ ಕ್ರಮಗಳನ್ನು ಕೈಗೊಳ್ಳತೊಡಗಿದ್ದಾರೆ ಎನ್ನಲಾಗಿದೆ.
ಆರ್‌ಜೆಡಿ ಜತೆ ಮಾತುಕತೆ
ಇತ್ತ ಬಿಹಾರದ ಇನ್ನೊಂದು ಪ್ರಮುಖ ಪಕ್ಷ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಕೂಡ ಈಗ ನಿತೀಶ್ ಕುರಿತ ತನ್ನ ಕಠಿಣ ನಿಲುವನ್ನು ಸಡಿಲಿಸಿದೆ. ನಿತೀಶ್ ಕುಮಾರ್ ಅವರ ಕುರಿತು ಕಠಿಣ ಹೇಳಿಕೆಗಳನ್ನು ನೀಡದಂತೆ ಪಕ್ಷದ ವಕ್ತಾರರಿಗೆ ಸೂಚನೆಗಳನ್ನು ನೀಡಲಾಗಿದೆ. ನಿತೀಶ್ ಕುಮಾರ್ ಹಾಗೂ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಪರಸ್ಪರ ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಬಿಜೆಪಿಯ ಕೈಬಿಟ್ಟು, ಆರ್‌ಜೆಡಿ ಜತೆಗೆ ನಿತೀಶ್ ಹೋಗುವ ಸಾಧ್ಯತೆಗಳು ದಟ್ಟವಾಗಿವೆ. ಕೆಲವು ಮೂಲಗಳ ಪ್ರಕಾರ, ಬಿಹಾರದಲ್ಲಿ ಜೆಡಿಯು- ಆರ್‌ಜೆಡಿ ಮೈತ್ರಿಯ ಸರ್ಕಾರ ಆಗಸ್ಟ್ 11ಕ್ಕೂ ಮುನ್ನವೇ ರಚನೆಯಾಗಲಿದೆ.
ಇದನ್ನೂ ಓದಿ: NITI Aayog Meet | ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸಭೆ; ನಿತೀಶ್ ಕುಮಾರ್, ಬೊಮ್ಮಾಯಿ ಗೈರು