ಲಂಡನ್: ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಬ್ರಿಟನ್ ಪ್ರಧಾನಿ ರಿಷಿ ಸುನಕ್ (PM Rishi Sunak) ಅವರು ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ನೇಪಥ್ಯದಲ್ಲಿ ಮಾತುಕತೆ ನಡೆಸಿರುವ ಬೆನ್ನಲ್ಲೆ, ಭಾರತದ 3000 ಯುವ ವೃತ್ತಿಪರ ಉದ್ಯೋಗಗಳಿಗೆ ಬ್ರಿಟನ್ ವೀಸಾ (Visa for Indians) ಪರವಾನಗಿ ನೀಡಿದೆ. ಪದವಿ ವಿದ್ಯಾಭ್ಯಾಸ ಹೊಂದಿರುವ, 18ರಿಂದ 30 ವರ್ಷ ವಯೋಮಾನದ 3000 ವೃತ್ತಿಪರರು, ಎರಡು ವರ್ಷಗಳ ಕಾಲ ಬ್ರಿಟನ್‌ನಲ್ಲಿ ನೆಲೆಸಿ, ಕೆಲಸ ಮಾಡಲು ಅನುವಾಗುವಂತೆ ಈ ವೀಸಾ ನಿಯಮಗಳು ರೂಪುಗೊಂಡಿವೆ. ಪ್ರತಿ ವರ್ಷ ಇಷ್ಟೇ ಸಂಖ್ಯೆಯ ಹುದ್ದೆಗಳಿಗೆ ವೀಸಾ ನೀಡಲಾಗುವುದು ಎಂದು ಬ್ರಿಟನ್ ಪ್ರಧಾನಿ ಕಾರ್ಯಾಲಯದ ಮೂಲಗಳು ತಿಳಿಸಿವೆ.
ಭಾರತ-ಬ್ರಿಟನ್ ಯುವವೃತ್ತಿಪರರ ಈ ಯೋಜನೆಯಡಿ ಬ್ರಿಟನ್ ದೇಶದ ವೃತ್ತಿಪರರಿಗೆ ಭಾರತದಲ್ಲಿ ಕಾರ್ಯಾನುಭವದ ಅವಕಾಶ ಕಲ್ಪಿಸಲಾಗುವುದು. ಭಾರತ ಮತ್ತು ಬ್ರಿಟನ್ ನಡುವಿನ ವಲಸೆ ಮತ್ತು ಚಲನಶೀಲತೆಯ ಸಹಭಾಗಿತ್ವವನ್ನು ಬಲಪಡಿಸುವ ಇಂಗಿತವನ್ನು ಕಳೆದ ವರ್ಷವೇ ವ್ಯಕ್ತಪಡಿಸಲಾಗಿತ್ತು ಎಂದು ಬ್ರಿಟನ್ ಹೇಳಿದೆ.
“ಇಂಡೋ-ಪೆಸಿಫಿಕ್ ಪ್ರಾಂತ್ಯದಲ್ಲಿನ ಬಾಂಧವ್ಯ ಹೆಚ್ಚಿಸಿಕೊಳ್ಳುವ ಮತ್ತು ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧ ವೃದ್ಧಿಸಿಕೊಳ್ಳುವ ಬಗೆಗಿನ ಬ್ರಿಟನ್‌ನ ಬದ್ಧತೆ ಈ ಮೂಲಕ ಸ್ಪಷ್ಟವಾಗಿದೆ. ಇದರಿಂದ ಎರಡೂ ದೇಶಗಳ ಆರ್ಥಿಕತೆಗಳು ಬಲಗೊಳ್ಳಲಿವೆ” ಎಂದು ಡೌನಿಂಗ್ ಸ್ಟ್ರೀಟ್ ಮೂಲಗಳು ಹೇಳಿವೆ. ಭಾರತೀಯ ಮೂಲದ ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ಇದೇ ಮೊದಲ ಬಾರಿಗೆ ಮೋದಿ-ಸುನಕ್ ಮಾತುಕತೆ ಜಿ20 ಶೃಂಗದ ನೇಪಥ್ಯದಲ್ಲಿ ನಡೆದಿದೆ.
ಇಂಡೋ- ಪೆಸಿಫಿಕ್ ಪ್ರಾಂತ್ಯದಲ್ಲಿ ಬೇರಾವ ದೇಶಗಳಿಗಿಂತಲೂ ಹೆಚ್ಚಿನ ನಂಟನ್ನು ಭಾರತದೊಂದಿಗೆ ಬ್ರಿಟನ್ ಹೊಂದಿದೆ. ಬ್ರಿಟನ್‌ನಲ್ಲಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಪೈಕಿ ಶೇ. 25ರಷ್ಟು ಭಾರತೀಯರಿದ್ದಾರೆ. ಮಾತ್ರವಲ್ಲ, ಸುಮಾರು 95000ದಷ್ಟು ಉದ್ಯೋಗಗಳು ಭಾರತೀಯ ಹೂಡಿಕೆಯಿಂದ ಬ್ರಿಟನ್‌ನಲ್ಲಿ ಸೃಷ್ಟಿಯಾಗಿವೆ.
ಭಾರತದೊಂದಿಗೆ ವ್ಯಾಪಾರ ಸಂಬಂಧಿ ಮಾತುಕತೆಯಲ್ಲಿ ಬ್ರಿಟನ್ ಈಗಾಗಲೇ ತೊಡಗಿಸಿಕೊಂಡಿದೆ. ಈ ಮಾತುಕತೆ ಫಲಪ್ರದವಾದರೆ, ಭಾರತದ ಜೊತೆ ಈ ರೀತಿಯ ವಹಿವಾಟಿನಲ್ಲಿ ಭಾಗಿಯಾಗುತ್ತಿರುವ ಮೊದಲ ಐರೋಪ್ಯ ದೇಶ ಬ್ರಿಟನ್ ಆಗಲಿದೆ. ಜೊತೆಗೆ, ವಲಸೆ ನೀತಿಗಳನ್ನು ಉಲ್ಲಂಘಿಸುವವರನ್ನು ಗುರುತಿಸಿ, ಮರಳಿ ಕಳಿಸುವ ತನ್ನ ನಿಯಮಗಳನ್ನು ಬಿಗಿ ಮಾಡುತ್ತಿರುವುದಾಗಿ ಬ್ರಿಟನ್ ಹೇಳಿಕೊಂಡಿದೆ.
ಇದನ್ನೂ ಓದಿ | G20 Summit | ಜಿ20 ಶೃಂಗದಲ್ಲಿ ಇಂಡಿಯನ್ ಪಿಎಂ ಮೋದಿ- ಬ್ರಿಟನ್ ಪಿಎಂ ರಿಷಿ ಪರಸ್ಪರ ಭೇಟಿ, ಔಪಚಾರಿಕ ಮಾತುಕತೆ