ಲಂಡನ್: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಪತ್ನಿ, ಬ್ರಿಟನ್‌ನ ಫಸ್ಟ್ ಲೇಡಿ, ಸುಧಾ ಮೂರ್ತಿ ಪುತ್ರಿ ಅಕ್ಷತಾ ಮೂರ್ತಿ (Akshata Murty) ಅವರು ಬ್ರಿಟನ್‌ನಲ್ಲಿಯೇ ಅತ್ಯುತ್ತಮವಾಗಿ ಪೋಷಾಕು ಧರಿಸುವವರಲ್ಲಿ ಅಗ್ರ ಎನಿಸಿದ್ದಾರೆ. ಟೆಟ್ಲರ್ ಮ್ಯಾಗಜಿನ್‌ನ (Tatler Magazine) ಬೆಸ್ಟ್ ಡ್ರೆಸ್ಡ್ ಪೀಪಲ್ ಪಟ್ಟಿಯಲ್ಲಿ ಅಕ್ಷತಾ ಮೂರ್ತಿ ಅಗ್ರ ಸ್ಥಾನ ಪಡೆದಿದ್ದಾರೆ.
ಉದ್ಯಮದ ಜತಗೆ ಫ್ಯಾಷನ್ ಡಿಸೈನರ್ ಕೂಡ ಆಗಿರುವ ಅಕ್ಷತಾ ಮೂರ್ತಿ ಅವರು ಟೆಟ್ಲರ್ ಮ್ಯಾಗಜಿನ್‌ನ ಬೆಸ್ಟ್ ಡ್ರೆಸ್ಡ್ ಪೀಪಲ್ ಪಟ್ಟಿಯಲ್ಲಿ ರಾಣಿ ಬೀಟ್ರೈಸ್ ಅವರ ಪತಿ ಎಡೋರ್ಡೊ ಮಾಪೆಲ್ಲಿ ಮೋಜಿ ಹಾಗೂ ನಟಿ ಬಿಲ್ ನೈ ಅವರ ಜತೆ ಜಂಟಿಯಾಗಿ ಅಗ್ರ ಸ್ಥಾನ ಪಡೆದಿದ್ದಾರೆ.
ಅಕ್ಷತಾ ಮೂರ್ತಿ ಅವರ ಡ್ರೆಸ್ ಸೆನ್ಸ್‌ಅನ್ನು ಟೆಟ್ಲರ್ ಮ್ಯಾಗಜಿನ್‌ನ ಸಂಪಾದಕ ಮಂಡಳಿಯು “ಫಸ್ಟ್ ಲೇಡಿ ಫ್ಯಾಬುಲಸ್” (First Lady Fabulous) ಎಂದು ಕರೆದಿದೆ. “ಅಕ್ಷತಾ ಮೂರ್ತಿ ಅವರು ಆಧುನಿಕ ಸ್ಟೈಲ್‌ಗೆ ತಕ್ಕಂತೆ ಬಟ್ಟೆ ಧರಿಸುತ್ತಾರೆ. ರಾಜತಾಂತ್ರಿಕ ಸಭೆ ಸೇರಿ ಹಲವು ಸಮಾರಂಭಗಳಿಗೆ ಅವರು ಧರಿಸುವ ಪೋಷಾಕುಗಳು ವಿಶಿಷ್ಟವಾಗಿರುತ್ತವೆ” ಎಂದು ಮ್ಯಾಗಜಿನ್ ಬಣ್ಣಿಸಿದೆ.
ಇದನ್ನೂ ಓದಿ: Sudha Murthy: ಸುಧಾ ಮೂರ್ತಿ ನಾನ್- ವೆಜ್ ಹೋಟೆಲ್‌ಗೆ ಹೋಗಲ್ಲ, ಯಾಕಂದ್ರೆ… ಟ್ರೋಲ್ ಆದ ಹೇಳಿಕೆ
ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿಯಾದ ಬಳಿಕ ಅಕ್ಷತಾ ಮೂರ್ತಿ ಅವರು ಹೆಚ್ಚಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಕಿಂಗ್ ಚಾರ್ಲ್ಸ್ III (King Charles III) ಅವರು ಬ್ರಿಟನ್ ಅರಸನಾಗಿ ಪಟ್ಟ ಅಲಂಕರಿಸುವ ಕಾರ್ಯಕ್ರಮದಲ್ಲೂ ಅಕ್ಷತಾ ಮೂರ್ತಿ ವಿಶೇಷ ಉಡುಗೆ ಧರಿಸಿ ಭಾಗವಹಿಸಿದ್ದರು.
ಜಿ-7 ಶೃಂಗಸಭೆಯ ಹಿನ್ನೆಲೆಯಲ್ಲಿ ರಿಷಿ ಸುನಕ್ ಅವರು ಜಪಾನ್‌ಗೆ ತೆರಳಿದ್ದಾಗ, ಅಕ್ಷತಾ ಮೂರ್ತಿ ಕೂಡ ಅವರ ಜತೆ ಹೋಗಿದ್ದರು. ಆಗ, ಅಕ್ಷತಾ ಮೂರ್ತಿ ಧರಿಸಿದ್ದ ಉಡುಗೆ ಕುರಿತು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಸುಧಾ ಮೂರ್ತಿ ಅವರು ಕೆಲ ತಿಂಗಳ ಹಿಂದೆ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಪಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.