ನವ ದೆಹಲಿ: 2024ರ (Budget 2024) ಲೋಕಸಭಾ ಚುನಾವಣೆಗೆ ಮುಂಚಿತವಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಮಧ್ಯಂತರ ಬಜೆಟ್ ಪ್ರಕಟಿಸಿದ್ದಾರೆ. 2024-25ನೇ ಸಾಲಿಗೆ ಭಾರತದ ಬಂಡವಾಳ ವೆಚ್ಚವನ್ನು ಶೇಕಡಾ 11 ರಷ್ಟು ಹೆಚ್ಚಿಸಿ 11.11 ಲಕ್ಷ ಕೋಟಿ ರೂ.ಗೆ ಅಥವಾ ಜಿಡಿಪಿಯ ಶೇಕಡಾ 3.4 ಕ್ಕೆ ಹೆಚ್ಚಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ. ಇದೇ ವೇಳೆ ಅವರು ಇಲಾಖಾವಾರು ಬಜೆಟ್ಗಳ ಹಂಚಿಕೆಯನ್ನು ಪ್ರಕಟಿಸಿದ್ದಾರೆ. ಮಧ್ಯಂತರ ಬಜೆಟ್ನಲ್ಲಿ ರಕ್ಷಣಾ ಸಚಿವಾಲಯಕ್ಕೆ ಹೆಚ್ಚಿನ ಹಂಚಿಕೆ ನೀಡಿರುವುದು ಖಾತರಿಯಾಗಿದ್ದು, ಕೃಷಿ ಇಲಾಖೆ ಕನಿಷ್ಠ ಪಾಲು ಪಡೆದುಕೊಂಡಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯ ಮೇಲೆ ದ್ವಿಗುಣ ಪರಿಣಾಮ ಬೀರಿದೆ ಎಂಬುದಾಗಿ ವಿತ್ತ ಸಚಿವರು ಹೇಳಿದ್ದಾರೆ. ಭಾರತೀಯ ವಿಮಾನಯಾನ ಸಂಸ್ಥೆಗಳು 1,000 ಹೊಸ ವಿಮಾನಗಳಿಗೆ ಆರ್ಡರ್ ನೀಡಿವೆ ಎಂದು ಸಚಿವರು ಇದೇ ವೇಳೆ ಪ್ರಕಟಿಸಿದ್ದಾರೆ.
ರಕ್ಷಣಾ ಕ್ಷೇತ್ರದಲ್ಲಿನ ತಂತ್ರಜ್ಞಾನವನ್ನು ಬಲಪಡಿಸಲು ಹೊಸ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಸೀತಾರಾಮನ್ ಹೇಳಿದ್ದಾರೆ. ಕೃಷಿ ಚಟುವಟಿಕೆಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಯನ್ನು ಸರ್ಕಾರ ಉತ್ತೇಜಿಸುತ್ತದೆ ಎಂಬುದಾಗಿಯೂ ನುಡಿದಿದ್ದಾರೆ. ವಿವಿಧ ಬೆಳೆಗಳ ಮೇಲೆ ನ್ಯಾನೊ ಡಿಎಪಿಯ ಅನ್ವಯವನ್ನು ಕೃಷಿ-ಹವಾಮಾನ ವಲಯಗಳಲ್ಲಿ ವಿಸ್ತರಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : Budget 2024: ಆರ್ಥಿಕತೆಗೆ ಬೂಸ್ಟ್ ನೀಡಿದ ಮೋದಿ; ಗಂಡನ ಹಣ ಕಿತ್ತು ಹೆಂಡ್ತಿಗೆ ಕೊಡ್ತಾರಾ ಸಿದ್ದರಾಮಯ್ಯ ಎಂದ ಬಿಜೆಪಿ!
ಸಿಮೆಂಟ್ ಸೇರಿದಂತೆ ಮೂರು ಪ್ರಮುಖ ರೈಲ್ವೆ ಕಾರಿಡಾರ್ಗಳನ್ನು ನಿರ್ಮಿಸಲಾಗುವುದು. 40,000 ಸಾಮಾನ್ಯ ರೈಲ್ವೆ ಬೋಗಿಗಳನ್ನು ವಂದೇ ಭಾರತ್ ಮಾನದಂಡಕ್ಕೆ ಪರಿವರ್ತಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು.
ಸಚಿವಾಲಯಗಳಿಗೆ ಬಜೆಟ್ ಹಂಚಿಕೆಗಳ ಮಾಹಿತಿ ಇಲ್ಲಿದೆ
- ರಕ್ಷಣಾ ಸಚಿವಾಲಯ: 6.1 ಲಕ್ಷ ಕೋಟಿ ರೂಪಾಯಿ
- ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ: 2.78 ಲಕ್ಷ ಕೋಟಿ ರೂಪಾಯಿ
- ರೈಲ್ವೆ ಸಚಿವಾಲಯ: 2.55 ಲಕ್ಷ ಕೋಟಿ ರೂಪಾಯಿ
- ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ: 2.13 ಲಕ್ಷ ಕೋಟಿ ರೂಪಾಯಿ
- ಗೃಹ ಸಚಿವಾಲಯ: 2.03 ಲಕ್ಷ ಕೋಟಿ ರೂಪಾಯಿ
- ಗ್ರಾಮೀಣಾಭಿವೃದ್ಧಿ ಸಚಿವಾಲಯ: 1.77 ಲಕ್ಷ ಕೋಟಿ ರೂಪಾಯಿ
- ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ: 1.68 ಲಕ್ಷ ಕೋಟಿ ರೂಪಾಯಿ
- ಸಂವಹನ ಸಚಿವಾಲಯ: 1.37 ಲಕ್ಷ ಕೋಟಿ ರೂಪಾಯಿ
- ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ: 1.27 ಲಕ್ಷ ಕೋಟಿ ರೂಪಾಯಿ