ನವದೆಹಲಿ: ಕೇಂದ್ರ ಸರ್ಕಾರವು (Central Government) ಫೆಬ್ರವರಿ 1ರಂದು ಮಧ್ಯಂತರ ಬಜೆಟ್ (Interim budget) ಮಂಡಿಸಲಿದೆ. ಈಗಾಗಲೇ ಈ ಬಗ್ಗೆ ಸಿದ್ಧತೆ ಆರಂಭವಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Union finance minister Nirmala Sitharaman) ಮಂಡಿಸಲಿರುವ ಈ ಚುನಾವಣಾ ಪೂರ್ವ ಬಜೆಟ್ ಮಹಿಳೆಯರು, ಬಡವರು, ಯುವಜನತೆ, ರೈತರು ಮತ್ತು ಬುಡಕಟ್ಟು ಜನಾಂಗದವರು ಸೇರಿ ಸಮಾಜದ ಐದು ಪ್ರಮುಖ ವರ್ಗಗಳ ಕಲ್ಯಾಣ ಯೋಜನೆಗಳಿಗೆ ಆದ್ಯತೆ ನೀಡಲಿದೆ (Budget 2024).
ಅಲ್ಲದೆ ಈ ವರ್ಗಗಳಿಗಾಗಿ ಅಸ್ತಿತ್ವದಲ್ಲಿರುವ ಯೋಜನೆಗಳ ಅನುದಾನ ಹೆಚ್ಚಾಗುವ ಸಾಧ್ಯತೆಯಿದೆ. ಜತೆಗೆ ಇನ್ನೂ ಹೊಸ ಯೋಜನೆಗಳನ್ನು ಘೋಷಿಸುವ ಸಾಧ್ಯತೆಯೂ ಇದೆ ಎಂದು ಊಹಿಸಲಾಗಿದೆ. “ಸಮಾಜದ ಈ ವರ್ಗಗಳಿಗೆ ಮೀಸಲಾಗಿರುವ ಯೋಜನೆಗಳಿಗೆ ಬಜೆಟ್ನಲ್ಲಿ ಒತ್ತು ನೀಡಲಾಗುವುದು. ಉದಾಹರಣೆಗೆ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ. ಈ ಕ್ಷೇತ್ರದತ್ತ ವಿಶೇಷ ಗಮನ ಹರಿಸಲಾಗುವುದು. ಯುವ ಜನತೆಯ ಆಶೋತ್ತರಗಳಿಗೆ ಸ್ಪಂದಿಸಲಾಗುವುದುʼʼ ಎಂದು ಮೂಲಗಳು ತಿಳಿಸಿವೆ.
2023-24ರಲ್ಲಿ ಶಾಲಾ ಶಿಕ್ಷಣ, ಸಾಕ್ಷರತೆ ಮತ್ತು ಉನ್ನತ ಶಿಕ್ಷಣವನ್ನು ನಿರ್ವಹಿಸುವ ಎರಡು ಇಲಾಖೆಗಳಿಗೆ ಕೇಂದ್ರ ಸರ್ಕಾರ 1.12 ಲಕ್ಷ ಕೋಟಿ ರೂ. ಮೀಸಲಿಟ್ಟಿದೆ. ಮಹಿಳಾ ನೇತೃತ್ವದ ಅಭಿವೃದ್ಧಿಯ ಗುರಿ ಹೊಂದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಈ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದ ಪ್ರಮುಖ ಆಧಾರಸ್ತಂಭವಾಗಿ ಮಹಿಳೆಯರ ಕಲ್ಯಾಣವೂ ಇರಲಿದೆ. ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಹಿಳಾ ಮತದಾರರು ನಿರ್ಣಾಯಕರಾಗಿದ್ದರು. ಹೀಗಾಗಿ ಬೆಜೆಪಿ ಮತ್ತು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮಹಿಳೆಯರಿಗಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತರುವ ಪ್ರಸ್ತಾವ ಇಟ್ಟಿದ್ದವು.
ಅನುದಾನ ಹೆಚ್ಚಳ
ʼʼಬುಡಕಟ್ಟು ಸಮುದಾಯದ ಕಲ್ಯಾಣಕ್ಕಾಗಿ ಯೋಜನೆಗಳನ್ನು ಜಾರಿಗೆ ತರುವ ಬುಡಕಟ್ಟು ಅಭಿವೃದ್ಧಿ ಸಚಿವಾಲಯಕ್ಕೆ 2023-24ರ ಸಾಲಿನಲ್ಲಿ ಅನುದಾನವನ್ನು ಹೆಚ್ಚಿಸಲಾಗಿತ್ತು. ಇದು 2024-25ರಲ್ಲಿಯೂ ಮುಂದುವರಿಯಲಿದೆ” ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2023-24ರ ಬಜೆಟ್ನಲ್ಲಿ, ಬುಡಕಟ್ಟು ಅಭಿವೃದ್ಧಿ ಸಚಿವಾಲಯಕ್ಕೆ ಹಂಚಿಕೆಯು ಸುಮಾರು ಶೇ. 71ರಷ್ಟು ಹೆಚ್ಚಳವಾಗಿತ್ತು. ಅದರಲ್ಲಿ ಹೆಚ್ಚಿನ ಭಾಗವನ್ನು ಪರಿಶಿಷ್ಟ ಪಂಗಡದ ಮಕ್ಕಳಿಗೆ ಆರನೇ ತರಗತಿಯಿಂದ ಉಚಿತ ಶಿಕ್ಷಣವನ್ನು ಒದಗಿಸುವ ಏಕಲವ್ಯ ಮಾದರಿ ವಸತಿ ಶಾಲೆಗಳು (EMRS) ಯೋಜನೆಗೆ ವಿನಿಯೋಗಿಸಲಾಗುತ್ತದೆ. ಅಲ್ಲದೆ ಬುಡಕಟ್ಟು ಸಮುದಾಯಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು ಎಲ್ಲ ಅರ್ಹರಿಗೆ ತಲುಪುತ್ತಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ವಿಕಾಸ್ ಭಾರತ್ ಸಂಕಲ್ಪ ಯಾತ್ರೆಯನ್ನು ಆರಂಭಿಸಿದೆ. ಬುಡಕಟ್ಟು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಝಾರ್ಖಂಡ್ನ ಖುಂಟಿ ಗ್ರಾಮದಲ್ಲಿ 2023ರ ನವೆಂಬರ್ 15ರಂದು ಮೋದಿ ಈ ಅಭಿಯಾನಕ್ಕೆ ಚಾಲನೆ ನೀಡಿದ್ದರು.
ಇದನ್ನೂ ಓದಿ: Budget 2024: ಹೊಸ ತೆರಿಗೆ ಪದ್ಧತಿಗೆ 80ಡಿ ವಿಸ್ತರಣೆ; ತೆರಿಗೆ ಕಡಿತದ ಮಿತಿ ಹೆಚ್ಚಳ ಸಾಧ್ಯತೆ!
ರೈತರ ಕಲ್ಯಾಣ
ಶೇ. 33ಕ್ಕೂ ಹೆಚ್ಚಿನ ರೈತರು ಪಿಎಂ-ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ. ಈ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರತಿ ವರ್ಷ 6,000 ರೂ. ಒದಗಿಸಲಾಗುತ್ತದೆ. 2023-24ರಲ್ಲಿ ಕೇಂದ್ರವು ಈ ಯೋಜನೆಗೆ 60,000 ಕೋಟಿ ರೂ.ಗಳನ್ನು ನಿಗದಿಪಡಿಸಿದೆ. ಇದು 2024-25ರಲ್ಲಿ ಹೆಚ್ಚಾಗಲಿದೆ. ವಿವಿಧ ಸಚಿವಾಲಯಗಳಿಗೆ ಅನುದಾನವನ್ನು ಸಮರ್ಪಕವಾಗಿ ಹಂಚಿಕೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.