Site icon Vistara News

Budget Analysis 2024: ಅನ್ನದಾತ, ಗರೀಬ, ಮಹಿಳಾ ಮತ್ತು ಯುವಜನತೆಯ ಅಭಿವೃದ್ಧಿಯನ್ನು ಕೇಂದ್ರೀಕರಿಸಿದ ಬಜೆಟ್

Budget Analysis 2024

Budget Analysis 2024

ನಾರಾಯಣ ಯಾಜಿ
ಒಂದು ಕಾಲವಿತ್ತು, ಕೇಂದ್ರ ಸರ್ಕಾರದ ಬಜೆಟ್ ಮಂಡಿಸುತ್ತಿದ್ದಂತೆ ಅದರ ಕುರಿತು ಜನರು ತಮ್ಮ ಅಭಿಪ್ರಾಯವನ್ನು ಇಂದಿನಷ್ಟು ಬಹಿರಂಗವಾಗಿ ಹೇಳುತ್ತಿರಲಿಲ್ಲ. ಅವರೆಲ್ಲರೂ ಓರ್ವ ವ್ಯಕ್ತಿ ಈ ಬಜೆಟ್ ಕುರಿತು ಏನು ಹೇಳುತ್ತಾರೆ ಎಂದು ಕಾಯುತ್ತಿದ್ದರು. ಆ ವ್ಯಕ್ತಿ ಬೇರೆ ಯಾರೂ ಅಲ್ಲ., ಪ್ರಸಿದ್ಧ ವಕೀಲರಾದ ನಾನಿ ಪಾಲ್ಕೀವಾಲಾ. ಅವರು ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ಬಜೆಟ್ ಕುರಿತು ಭಾಷಣ ಮಾಡುತ್ತಿದ್ದಂತೆ ಅದಕ್ಕೆ ಸರಿಯಾಗಿ ಇಡೀ ದೇಶ ಪ್ರತಿಸ್ಪಂದಿಸುತ್ತಿತ್ತು. ಒಂದೆರಡು ತಿಂಗಳಾದಮೇಲೆ ಅದನ್ನು ಮರೆತೂ ಬಿಡುತ್ತಿದ್ದರು. ಜನಸಾಮಾನ್ಯರ ಬದುಕಿನಲ್ಲಿ ಬಜೆಟ್ ಕುರಿತಾದ ಚರ್ಚೆ ಇಂದಿನಷ್ಟು ಆಗುತ್ತಿರಲಿಲ್ಲ. ಆಗಿನ ಒಂದು ಜೋಕ್ “ಆರ್ಥಿಕ ಸಚಿವರು ನಾನಿ ಪಾಲ್ಕೀವಾಲಾರು ಬಜೆಟ್ ಮೇಲೆ ಭಾಷಣ ಮಾಡಿದಾಗಲೇ ತಾವು ಮಂಡಿಸಿದ ಬಜೆಟ್ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳುತ್ತಿದ್ದರು”. ಮಂಗಳವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಸತತ ಏಳನೆಯ ಸಲ ಬಜೆಟನ್ನು ಮಂಡಿಸುತ್ತಿರುವಂತೆ ಅನೇಕ ಕಡೆಯಿಂದ ಅನೇಕ ಅಭಿಪ್ರಾಯಗಳು ಪುಂಖಾನುಪುಂಖವಾಗಿ ಹಾರಾಡಿತು (Union Budget 2024). ಷೇರು ಮಾರುಕಟ್ಟೆ ಒಮ್ಮೆಲೆ ಎಲ್ಲವನ್ನೂ ಕಳೆದುಕೊಂಡಂತೆ 80,766.41ರಿಂದ ಕೆಳಕ್ಕೆ 1542.09 ಅಂಕಗಳಷ್ಟು ಜಾರಿ ದಿನದ ಕೊನೆಯಲ್ಲಿ 79,224,32 ಬಂದು ಸುಧಾರಿಸಿಕೊಂಡಿತು (Budget Analysis 2024).

ನಿರ್ಮಲಾ ಸೀತಾರಾಮನ್ ಅವರ ಬಜೆಟಿನಲ್ಲಿ ಕಂಡು ಬಂದ ಅಂಶವೆಂದರೆ ಮೊದಲಿಗೆ ಈ ಬಜೆಟಿನಲ್ಲಿ ಯಾವ ಆಕರ್ಷಣೆಯೂ ಇಲ್ಲ. ಇತಿಹಾಸದಲ್ಲಿಯೇ ಬೃಹತ್ತಾದ ರೂ. 47.66 ಲಕ್ಷ ಕೋಟಿ ರೂ.ಯ ಈ ಬಜೆಟ್ ಮೇಲುನೋಟಕ್ಕೆ ನಿರಾಸೆಯಾದಂತೆ ಕಾಣುತ್ತಿದೆ. ಇದಕ್ಕೆ ಕಾರಣ ಮೊದಲನೆಯದು ಬಿಹಾರ ಮತ್ತು ಆಂಧ್ರಪ್ರದೇಶವನ್ನು ಬಿಟ್ಟರೆ ಉಳಿದ ರಾಜ್ಯಗಳಿಗೆ ಯಾವ ಯೋಜನೆಯ ಲಾಭವೂ ಇಲ್ಲದಿರುವುದು. ಎರಡನೆಯದು ಇತ್ತೀಚಿಗೆ ಭಾರತದ ಮಧ್ಯಮ ವರ್ಗ ತಮ್ಮ ಉಳಿತಾಯವನ್ನು ಸಾಂಪ್ರದಾಯಿಕವಾದ ಬ್ಯಾಂಕಿಂಗ್ ವಲಯದಿಂದ ಷೇರು ಮಾರುಕಟ್ಟೆ ಮತ್ತು ಪರಸ್ಪರ ನಿಧಿ (Mutual Fund)ಯತ್ತ ವಾಲಿದ್ದು, ಅವರಿಗೆ ಆಘಾತವಾದಂತೆ ಕಂಡು ಬಂದಿರುವುದು, ನಿರ್ಮಲಕ್ಕ ಇಲ್ಲಿ ಕ್ಯಾಪಿಟಲ್ ಗೇಯ್ನ್‌ ಅನ್ನು ಹೆಚ್ಚಿಸಿರುವುದು. ಒಂದು ವರ್ಷಕ್ಕೂ ಕಿರು ಅವಧಿಯಲ್ಲಿ ಮಾರಿದ ಬಂಡವಾಳ ಏರಿಕೆಯ ಲಾಭಕ್ಕೆ ಮೊದಲಿದ್ದ ಶೇ. 15ರಿಂದ ಇದೀಗ ಶೇ. 20ಕ್ಕೆ ಏರಿಸಲಾಗಿದೆ. ದೀರ್ಘಾವಧಿಯ ಅಂದರೆ ಒಂದು ವರ್ಷಕ್ಕೂ ಮೀರಿದ ಬಂಡವಾಳ ಹೆಚ್ಚಳಕ್ಕೆ ಶೇ. 10ರಿಂದ 12.5ಕ್ಕೆ ಏರಿಸಲಾಗಿದೆ.

ಪೆಟ್ರೋಲಿಯಮ್ ಉತ್ಪನ್ನಗಳು ಜಿಎಸ್‌ಟಿ ವ್ಯಾಪ್ತಿಗೆ ಇಲ್ಲ

ಪೆಟ್ರೋಲಿಯಮ್ ವಸ್ತುಗಳನ್ನು GST ವ್ಯಾಪ್ತಿಗೆ ತರುವ ಯಾವ ಸೂಚನೆಯನ್ನೂ ಈ ಬಜೆಟ್‌ ಕೊಟ್ಟಿಲ್ಲ. ಆದರೆ ಕಳೆದ ಏಳು ವರ್ಷಗಳಿಂದ ಮೋದಿ ಸರ್ಕಾರ ಮಂಡಿಸುತ್ತಿರುವ ಬಜೆಟ್‌ ಗಮನಿಸಿದಾಗ ಒಂದು ವಿಷಯ ಸ್ಪಷ್ಟವಾಗುವುದೇನೆಂದರೆ, ಪ್ರತೀ ಬಜೆಟ್ ಸಹ ಹಿಂದಿನ ಆರ್ಥಿಕ ನೀತಿಯ ಮುಂದುವರಿದ ಭಾಗವಾಗಿದೆ. ಕಳೆದ ಫೆಬ್ರವರಿಯಲ್ಲಿ ಮಂಡಿಸಿದ ಮಧ್ಯಮಕಾಲೀನ (Interim) ಬಜೆಟಿನ ಮುಂದುವರಿದ ಭಾಗವಾಗಿ ಈ ಬಜೆಟ್ ಹೊರಬಂದಿದೆ. ಕಳೆದ ಚುನಾವಣೆಯಲ್ಲಿ ಮೋದಿಯವರ ಕೆಲವೊಂದು ಆರ್ಥಿಕ ನೀತಿಗಳು ಅಪಪ್ರಚಾರಕ್ಕೆ ಗುರಿಯಾಗಿ ಅದರ ಪರಿಣಾಮ ಚುನಾವಣೆಯಲ್ಲಿ ಕಾಣಬಂದಿತ್ತು. ಅದನ್ನು ನಿವಾರಿಸಲೋ ಎಂಬಂತೆ ಈ ಸಾರಿ ತಮ್ಮ ಆಯವ್ಯವನ್ನು ಮುಖ್ಯವಾಗಿ ಅನ್ನದಾತ, ಗರೀಬ್-ಬಡವರ್ಗ, ಮಹಿಳಾವರ್ಗ ಮತ್ತು ಯುವಜನತೆಯನ್ನು ಕೇಂದ್ರೀಕರಿಸಿ ಹಣೆಯಲಾಗಿದೆ (Budget Analysis 2024).

ಮಧ್ಯಮ ವರ್ಗದ ಕಲ್ಯಾಣ

ಈ ಬಜೆಟಿನ ಮುಖ್ಯ ಥೀಮ್ ಉದ್ಯೋಗ ಸೃಷ್ಟಿ, ಕೌಶಲ್ಯಾಭಿವೃದ್ಧಿ, MSME ಮತ್ತು ಮದ್ಯಮ ವರ್ಗದ ಜನರ ಕಲ್ಯಾಣ. ಇದಕ್ಕೆ 9 ವಿಧದ ಮಾರ್ಗಸೂಚಿಯನ್ನು ಹಮ್ಮಿಕೊಂಡು ಇದು ವಿಕಸಿತ ಭಾರತದ ಬಜೆಟ್ ಎಂದು ಘೋಷಿಸಲಾಗಿದೆ. ಮುಖ್ಯವಾದ ಅಂಶಗಳನ್ನು ಗಮನಿಸಬೇಕಾದುದು ಎಂದರೆ ಇಂತಹ ಅನೇಕ ಆಕರ್ಷಕ ಘೋಷಣೆಗಳನ್ನು ಸಾಕಷ್ಟು ನೋಡಿದ್ದೇವೆ. ಉದ್ಯೋಗ ಸೃಷ್ಟಿಯಲ್ಲಿ ಮೊದಲನೆಯದಾದ 15,000 ರೂ. ಮಿತಿಗೆ ಒಳಪಟ್ಟು ಜಾರಿಗೆ ತಂದ ಇನ್ನಿತರ ಯೋಜನೆಗಳನ್ನು ಸರಿಯಾಗಿ ಅಳವಡಿಸದಿದ್ದರೆ ಇವು ಘೋಷಣೆಯಾಗಿಯೇ ಉಳಿಯುವ ಅಪಾಯವಿದೆ. ಆದರೆ ಮುಖ್ಯವಾಗಿ ಮೆಚ್ಚಿಕೊಳ್ಳಲೇ ಬೇಕಾದ ವಿಷಯ ದೇಶದ ಪ್ರಮುಖ 500 ಕಂಪನಿಗಳಲ್ಲಿ ಯುವಜನತೆಗೆ ಇಂಟರ್ನಶಿಪ್ ತರಬೇತಿಯನ್ನು ಕೊಡಿಸುವುದು. ಈ ಕುರಿತು ಸರಿಯಾಗಿ ಜಾರಿಗೆ ತರುವತ್ತ ಒಂದು ಪರಿಣಾಮಕಾರಿಯಾದ ಆಡಳಿತ ಯಂತ್ರವನ್ನು ಕಟ್ಟಬೇಕಾದ ಅವಶ್ಯಕತೆಯಿದೆ. ಇಲ್ಲದಿದ್ದರೆ ಮೋದಿ ಈ ಮೊದಲು ಸರ್ಕಾರ ಜಾರಿಗೆ ತಂದ ಆಯುಷ್ಮಾನ್ ಭಾರತ, ಅಟಲ್ ಪೆನ್ಷನ್ ಯೋಜನೆಗಳೊಂದಿಗೆ ಒಂದಾಗಬಹುದಾದ ಅಪಾಯವೂ ಉಂಟು.

ದುಡಿಯವ ಮಹಿಳೆಯರಿಗೆ ಅನುಕೂಲ

ದುಡಿಯವ ಮಹಿಳೆಯರಿಗೆಂದೇ ತೆರೆಯಲಿರುವ ಹಾಸ್ಟೇಲ್ ಮತ್ತು ಸ್ವಸಹಾಯ ಗುಂಪುಗಳ ಉತ್ಪಾದನೆಗಳಿಗೆ ಸರಿಯಾದ ಮಾರುಕಟ್ಟೆ ಸಿಗುವ ಯೋಜನೆಗಳೂ ಸಹ ಮೆಚ್ಚತಕ್ಕದ್ದೇ. ಈ ದೇಶದಲ್ಲಿ ಸುಧಾರಣೆಗಳನ್ನು ರಾಜಕೀಯ ದೃಷ್ಟಿಯಿಂದ ನೋಡುವ ಕಾರಣ ಇದನ್ನು ಜಾರಿಗೊಳಿಸಿವ ರಾಜ್ಯ ಸರ್ಕಾರಗಳ ಪಾತ್ರವನ್ನು ಕಡೆಗಣಿಸುವಂತಿಲ್ಲ. ಕಲ್ಯಾಣ ಯೋಜನೆಗಳನ್ನು ಈಡೇರಿಸುವತ್ತ ಪಕ್ಷಬೇಧ ಮರೆತು ಎಲ್ಲರೂ ಒಂದಾಗುತ್ತಾರೆ ಎಂದು ಆಶಿಸೋಣ (Budget Analysis 2024).

ವಿರೋಧ ಪಕ್ಷಗಳ ಟೀಕೆ

ಈಗಾಗಲೇ ಮೊದಲ ಸಲ ಉದ್ಯೋಗ ಸಿಕ್ಕಿದವರಿಗೆ 5,000 ರೂ. ತಮ್ಮ ಪ್ರಣಾಳಿಕೆಯಿಂದ ಕದ್ದದ್ದು ಎಂದು ವಿರೋಧ ಪಕ್ಷಗಳು ಹೇಳತೊಡಗಿವೆ. ಒಳ್ಳೆಯ ವಿಚಾರಗಳು ಎಲ್ಲಿಂದಲೂ ಬರಲಿ ತೊಂದರೆ ಏನಂತೆ? ಮುಖ್ಯವಾಗಿ ಈ ಸಲ ಬಜೆಟಿನಲ್ಲಿ ಕೃಷಿಗೆ ಒತ್ತು ನೀಡಿರುವುದು. ಅದರಲ್ಲಿಯೂ ನೈಸರ್ಗಿಕ ಕೃಷಿ ಮತ್ತು ಶಿಗಡಿ ಕೃಷಿಯ ಮತ್ತು ಅದರ ರಪ್ತಿನ ಕುರಿತು ನಬಾರ್ಡಿನ ಸಹಯೋಗದಲ್ಲಿ ಅನುಷ್ಠಾನಗೊಳಿಸುವ ಕ್ರಿಯೆ ಸ್ವಾಗತಾರ್ಹ. ನಬಾರ್ಡ್ ಇಂತಹ ಹಲವಾರು ಯೋಜನೆಗಳನ್ನು ಸದಾ ಜಾರಿಗೊಳಿಸುತ್ತಲೇ ಇದೆ. ಬ್ಯಾಂಕು ಮತ್ತು ಇತರ ಸಂಸ್ಥೆಗಳು ಇದರ ಪ್ರಯೋಜನಕ್ಕೆ ಮುಂದೆ ಬರಬೇಕು. ಕೃಷಿವಲಯಕ್ಕೆ Digital Public Infrastructure ಒಂದು ಕ್ರಾಂತಿಯನ್ನು ತರಬಹುದು. ದಿಜಿಟಲ್ ವೇದಿಕೆಯಲ್ಲಿ ರೈತರಿಗೆ ಕೃಷಿಯ ವಿವಿಧ ಸುಧಾರಣೆ ಮತ್ತು ಕೃಸಿಯೋತ್ಪನ್ನಗಳ ಮಾರುಕಟ್ಟೆಯ ವಿಷಯದಲ್ಲಿ ತಕ್ಷಣಕ್ಕೆ ಮಾಹಿತಿಯನ್ನು ಇದು ಒದಗಿಸುತ್ತದೆ.

ಮುದ್ರಾ ಸಾಲದ ಮೊತ್ತ ಏರಿಕೆ

ಸರಕಾರದ ಮುದ್ರಾ ಸಾಲ ಆರ್ಥಿಕವಾಗಿ ಹಿಂದುಳಿದವರಿಗೆ ಒಂದು ವರದಾನ. ರಸ್ತೆಬದಿಯ ತಳ್ಳುಗಾಡಿಯವರಿಂದ ಹಿಡಿದು ಮದ್ಯಮ ಹಂತದ ಕೈಗಾರಿಕಗಳ ವರೆಗೆ ಸುಲಭದಲ್ಲಿ ಸಾಲ ಸಿಗುವ ವ್ಯವಸ್ಥೆ ಇದಾಗಿದೆ. ಬ್ಯಾಂಕು ವಿಧಿಸುವ ಬಡ್ಡಿಗೆ ಸಹಾಯಧನವೂ ಇದೆ. ಇದೀಗ ಮೊದಲಿದ್ದ 10 ಲಕ್ಷ ರೂಪಾಯಿಯ ಮಿತಿಯನ್ನು 20 ಇಪ್ಪತ್ತು ಲಕ್ಷ ರೂಪಾಯಿಗೆ ಏರಿಸಿದ್ದು ಸ್ವಾಗತಾರ್ಹ (Budget Analysis 2024).

ಸಣ್ಣ ಮತ್ತು ಮಧ್ಯಮ ಹಂತದ ಕೈಗಾರಿಕೆಗಳು ತಮ್ಮ ಉತ್ಪಾದನೆಯನ್ನು ಪೂರೈಸಿದರೂ ಅದರ ಮೊತ್ತ ಖರೀದಿದಾರರಿಂದ ಸರಿಯಾಗಿ ಸಿಗದೇ ಇರುವ ಕುರಿತು ಕಷ್ಟ ಪಡುತ್ತಿದ್ದರು. ಇದರಿಂದ ಅವರ ಬ್ಯಾಲೆನ್ಸ್ ಶೀಟನಲ್ಲಿ ಬರತಕ್ಕ ಬಾಕಿ ಎಂದು ತೋರಿಸಬೇಕಾಗಿತ್ತು. ಇದಕ್ಕ ಉತ್ತರವಾಗಿ ಬಂದಿರುವುದು TReDs (Trade Receivable Discounting System). ಕೇವಲ MSMEಗಳು ಮಾತ್ರ ಈ ವೇದಿಕೆಯಲ್ಲಿ ಭಾಗವಹಿಸಬಹುದಾಗಿದೆ. ದುಡಿಯುವ ಬಂಡವಾಳವನ್ನು ಸ್ಪರ್ಧಾತ್ಮಕ ದರದಲ್ಲಿ ವಿವಿಧ ಹಣಕಾಸು ಸಂಸ್ಥೆಗಳಿಂದ ಪಡೆಯಬಹುದಾದ ಅವಕಾಶ ಇಲ್ಲಿದೆ. ಇಲ್ಲಿ ಉದ್ದಿಮೆದಾರ ಮಾರಾಟ ಮಾಡಿದ ಇನ್ವಾಯಿಸಿನ ಮೇಲೆ ಡಿಸ್ಕೌಂಟ್ ಮಾಡಿ ತನಗೆ ಬರಬೇಕಾದ ಹಣವನ್ನು ಪಡೆದುಕೊಂಡು ಅದನ್ನು ಉದ್ದಿಮೆ ನಡೆಸಲು ಬಳಸಬಹುದಾಗಿದೆ. ಇಷ್ಟು ದಿವಸ ಇದರಲ್ಲಿ ನೋಂದಾಯಿಸಿಕೊಳ್ಳುವ ಖರೀದಿದಾರರ ವ್ಯವಹಾರ 500 ಕೋಟಿ ರೂ. ಇದ್ದಿದ್ದನ್ನು ಇದೀಗ 250 ಕೋಟಿ ರೂ.ಗೆ ಇಳಿಸಲಾಗಿದೆ.

ಇದನ್ನೂ ಓದಿ: Narendra Modi:‌ ದೇಶದ ಸರ್ವಾಂಗೀಣ ಏಳಿಗೆಗೆ ಈ ಬಜೆಟ್‌ ಅಕ್ಷಯಪಾತ್ರೆ; ನರೇಂದ್ರ ಮೋದಿ ಬಣ್ಣನೆ

ಆರ್ಥಿಕಾಭಿವೃದ್ಧಿಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಉದ್ಯೋಗಸೃಷ್ಟಿ ಮತ್ತು ಆದ್ಯತಾವಲಯದ ಅಗತ್ಯಗಳನ್ನು ಪೂರೈಸುವತ್ತ ದೊಡ್ಡ ಹೆಜ್ಜೆಯನ್ನು ಈ ನೀತಿಯ ಅನುಷ್ಠಾನ ಇರಿಸುತ್ತವೆ. ಆತ್ಮನಿರ್ಭರ ಭಾರತಕ್ಕೆ ಸಣ್ಣ ಉದ್ದಿಮೆಗಳು ಅತ್ಯಗತ್ಯ. ಈ ನಿಟ್ಟಿನಲ್ಲಿ ಮಹತ್ವದ ಹೊಸ ಘೋಷಣೆಯನ್ನು ನಿರ್ಮಲಾ ಸೀತಾರಾಮನ್ ಹೇಳಿರುವ ಅಂಶವೆಂದರೆ ನೂರು ಕೋಟಿ ರೂಪಾಯಿವರೆಗಿನ ಉದ್ದಿಮೆ ಸ್ಥಾಪಿಸಲು ಕ್ರೆಡಿಟ್ ಗ್ಯಾರೆಂಟಿ ಸ್ಕೀಮ್ ಒಂದನ್ನು ಸ್ಥಾಪಿಸಲು ಮುಂದೆ ಬಂದಿರುವುದು. ಇದು ತನಕ ಯಾವುದೇ ಉದ್ದಿಮೆದಾರ ಹೊಸ ಉದ್ದಿಮೆಯನ್ನು ಸ್ಥಾಪಿಸಲು ಆತನಲ್ಲಿ ಬ್ಯಾಂಕಿಗೆ ಕೊಡಬೇಕಾದ ಅಡಮಾನ ಅಥವಾ ಜಾಮೀನು ಇಲ್ಲದಿದ್ದರೆ ಈ ಸಂಸ್ಥೆಯಿಂದ 5 ಕೋಟಿ ರೂ.ಯ ತನಕ ಸಾಲ ಪಡೆಯಲು CGTMSE ಎನ್ನುವ ಸಂಸ್ಥೆ ಆ ಭದ್ರತೆಯನ್ನು ತಾನು ಒದಗಿಸುತ್ತದೆ. ಇದಕ್ಕೆ ಪ್ರತೀ ವರ್ಷವೂ ಸಾಲಗಾರ ನಿರ್ಧಿಷ್ಟ ಮೊತ್ತದ ಫೀಯನ್ನು ಕಟ್ಟಬೇಕಾಗುತ್ತದೆ. ಅದನ್ನು ನೂರು ಕೋಟಿ ರೂ.ಗೆ ಏರಿಸಿರುವುದು ಆತ್ಮನಿರ್ಭರ ಭಾರತಕ್ಕೆ ಅವಶ್ಯವಿರುವ Start Upಗಳಿಗೆ ಯಾವ ತೊಂದರೆಯೂ ಆಗುವುದಿಲ್ಲ. Ideaಗಳಿದ್ದರೆ ಯಾರೂ ಉದ್ದಿಮೆಯನ್ನು ಸ್ಥಾಪಿಸಿ ಯಶಸ್ಸನ್ನು ಗಳಿಸಲು ಸಾಧ್ಯವೆನ್ನುವ ಅನೇಕ ಸವಲತ್ತುಗಳನ್ನು CGTMSE ಮತ್ತು TReDS ಪ್ಲಾಟಫಾರ್ಮ್‌ಗಳು ಒದಗಿಸುತ್ತವೆ. ಇವು ಯಶಸ್ವಿಯಾದರೆ ಮೋದಿ 3.0 ಭಾರತದ ಆತ್ಮನಿರ್ಭರ ಮತ್ತು ಸ್ವಾವಲಂಭಿ ಅರ್ಥವ್ಯವಸ್ಥೆಗೆ ದೊಡ್ಡ ಕೊಡುಗೆಯಾಗಲಿದೆ (Budget Analysis 2024).

ಏಂಜೆಲ್ ಟ್ಯಾಕ್ಸ್‌ ರದ್ದು

ಅದೇ ರೀತಿ ಏಂಜೆಲ್ ಕರ (Angel Tax) ವ್ಯವಸ್ಥೆ ಎನ್ನುವುದು 2012ರಿಂದ ಜಾರಿಯಲ್ಲಿತ್ತು. ಯಾವುದೇ ಒಂದು (Unlisted in the stock market) ಉದ್ದಿಮೆ ಅಥವಾ Startupಗಳು ಯಾರನ್ನಾದರೂ ಹೂಡಿಕೆದಾರರನ್ನು ಹೂಡಿಕೆಗೆಂದು ತನ್ನಲ್ಲಿರುವ ಷೇರುಗಳನ್ನು ಮಾರಿ ಹಣ ಹೊಂದಿಸಿದರೆ ಅದರ ನಿವ್ವಳ ಮೊತ್ತಕ್ಕಿಂತ ಹೆಚ್ಚಿಗೆ ಹಣ ಹೂಡಿಕೆಯಾದರೆ ಅದರ ಮೇಲೆ ಶೇ. 30.9ರಷ್ಟು ಆದಾಯ ಕರವನ್ನು ತುಂಬಬೇಕಾಗಿತ್ತು. ಇದೀಗ ಅದನ್ನು ಸಂಪೂರ್ಣವಾಗಿ ತೆಗೆದುಹಾಕಿರುವುದರಿಂದ ಉಳ್ಳವರಿಂದ ಹಣ ಹೊಂದಿಸಲು ಇವುಗಳಿಗೆ ತೊಂದರೆಯಾಗಲಾರದು. ದೊಡ್ಡ ಪ್ರಮಾಣದ ಹೂಡಿಕೆಯನ್ನು ದೇಶದೊಳಗಿನಿಂದ ಮತ್ತು ವಿದೇಶದಿಂದ ವೆಂಚರ್ ಕ್ಯಾಪಿಟಲ್ಸ್ ಗಳನ್ನು ನಿರೀಕ್ಷಿಸಬಹುದಾಗಿದೆ. ಈ ಬಜೆಟಿನ ವಿಶೇಷವೆಂದರೆ ಕೃಷಿ ಮತ್ತು ಆದ್ಯತಾವಲಯ ಹೀಗೆ ಯಾವ ವಿಧಾನದಲ್ಲಿ ನೀಡಬಹುದಾದ ಕೊಡುಗೆಗಳು ಅಂತಿಮವಾಗಿ ಸಣ್ಣ ಉದ್ದಿಮೆಗಳಿಗೆ ಸಹಾಯವಾಗುವಂತಿರಬೇಕೆನ್ನುವುದು. ಸಂಶೋಧನೆ ಮತ್ತು ತಾಂತ್ರಿಕತೆಯ ಮೇಲೆತ್ತುವಿಕೆಯಲ್ಲೂ ಇದಕ್ಕೇ ಒತ್ತು ಕೊಡಲಾಗಿದೆ. ನಗರಾಭಿವೃದ್ಧಿ ಮತ್ತು ಆವಾಸ ಯೋಜನೆಯನ್ನೂ ಧನಾತ್ಮಕ ವಿಧಾನದಲ್ಲಿಯೇ ನೋಡಬೇಕಾಗಿದೆ.

ಇದನ್ನೂ ಓದಿ: Union Budget 2024: ಯುವಜನ, ಉದ್ಯೋಗ, ಉದ್ದಿಮೆಯೇ ಫೋಕಸ್‌; ಇಲ್ಲಿದೆ ಕೇಂದ್ರ ಬಜೆಟ್‌ನ ಸಮಗ್ರ ಚಿತ್ರಣ

ಬಿಹಾರದ ಅಭಿವೃದ್ಧಿಯ ನೆವದಲ್ಲಿ ಇಡೀ ಉತ್ತರಭಾರತದಲ್ಲಿ ಅಮೃತಸರದಿಂದ ಹಿಡಿದು ಆಸಾಮಿನವರೆಗೆ ಔದ್ಯಮಿಕ ಕಾರಿಡಾರು ರೂಪಿಸಲು ಯೋಜನೆಯನ್ನು ಘೋಷಿಸಲಾಗಿದೆ. ಟೆಂಪಲ್ ಟೂರಿಸಮ್ ಯೋಜನೆಯೂ ಸಹ ಇದರ ಭಾಗವಾಗಿ ಮೂಡಿ ಬಂದಿದೆ. ಆಂಧ್ರಪ್ರದೇಶಕ್ಕೆ ಹದಿನೇಳು ಸಾವಿರ ಕೋಟಿ ರೂ.ಯನ್ನು ಕೊಟ್ಟು ಚಂದ್ರಬಾಬು ನಾಯ್ಡು ಖುಷಿಯಿಂದ ಇರುವಂತೆ ಮತ್ತು ಎಲ್ಲ ಹೊಸ ಉದ್ದಿಮೆಗಳು ತಮ್ಮ ರಾಜ್ಯಕ್ಕೆ ಬರುವಂತೆ ಮಾಡುವ ಅವರ ಪ್ರಯತ್ನಕ್ಕೆ ಇನಷ್ಟು ಇಂಬು ಸಿಗಲಿದೆ. ಪೂರ್ವಾಂಚಲದ ಅಭಿವೃದ್ಧಿಗೆ ಅನುದಾನ ಮೀಸಲಿಟ್ಟಿರುವುದು ಅನಿವಾರ್ಯ ಮತ್ತು ಅಗತ್ಯವೂ ಹೌದು. ಈ ಭಾಗದಲ್ಲಿ ಪ್ರವಾಸೋದ್ದಿಮೆ ಹೆಚ್ಚಾದಂತೆ ಅವು ಸ್ವಾವಲಂಬಿಯಾಗಲು ಸಾಧ್ಯ.

ಶಿಕ್ಷಣ ಕ್ಷೇತ್ರಕ್ಕೂ ಒತ್ತು

ಉನ್ನತ ವಿದ್ಯಾಭ್ಯಾಸಕ್ಕಾಗಿ 10 ಲಕ್ಷ ರೂ.ವರೆಗಿನ ಸಾಲದ ಸೌಲಭ್ಯ ಮತ್ತು ಅವುಗಳ ಪ್ರತೀ ವರ್ಷದ ಬಡ್ಡಿಯ ಮೇಲೆ 3 ಲಕ್ಷ ರೂ.ವರೆಗೆ ಸಹಾಯಧನ ಉತ್ತಮ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಕನಸನ್ನು ಹೊತ್ತ ಅನೇಕರಿಗೆ ವರವಾಗಲಿದೆ.

ಆರ್ಥಿಕ ಶಿಸ್ತು

ಈ ವಿಚಾರದಲ್ಲಿ ಈ ಬಜೆಟ್ ಸಾಕಷ್ಟು ಶ್ರಮಪಟ್ಟಿದೆ. ದೇಶದ ಆಂತರಿಕ ಸಾಲ ಮೇರೆ ಮೀರುತ್ತಿದೆ ಎನ್ನುವವರಿಗೆ ಉತ್ತರವಾಗಿ ವಿತ್ತೀಯ ಕೊರತೆಯನ್ನು ಶೇ 4.9ಕ್ಕೆ ಇಳಿಸಲಾಗಿದೆ. ರೆವಿನ್ಯೂ ವೆಚ್ಚವನ್ನು ಬಿಟ್ಟರೆ ಕ್ಯಾಪಿಟಲ್ ವೆಚ್ಚ ಎರಡನೆಯದು. ಒಟ್ಟು 11,11,111 ಕೋಟಿ ರೂಪಾಯಿಯನ್ನು ಕ್ಯಾಪಿಟಲ್ ವೆಚ್ಚಕ್ಕೆ ಮೀಸಲಿಟ್ಟಿದ್ದಾರೆ. ಇದು ದೇಶದ ಅಭಿವೃದ್ಧಿಗೆ ಅಗತ್ಯವಾದ ಮೂಲಭೂತ ಸೌಲಭ್ಯ, ರಸ್ತೆ, ಬಂದರು ಮೊದಲಾದ ರಂಗದಲ್ಲಿ ವಿನಿಯೋಗಿಸಲ್ಪಡುತ್ತದೆ (Budget Analysis 2024).

ಆದಾಯ ಕರದ ವಿಚಾರದಲ್ಲಿಯೂ ಹಾಗೇ ಹೊಸ ಕರದ ಪ್ರಕಾರ ತೆರಿಗೆ ತುಂಬುವವರಿಗೆ Standard Deduction ಮೊತ್ತ ಈಗಿರುವ 5,0000 ರೂ.ಯಿಂದ ರೂ. 7,5000 ರೂ.ಗೆ ಏರಿಸಲಾಗಿದೆ. ಸರ್ಕಾರ ಹಳೆಯ ವಿಧಾನದಲ್ಲಿ ಉಳಿತಾಯಕ್ಕೆ ಪ್ರೋತ್ಸಾಹ ನೀಡುತ್ತಿತ್ತು. ಅದಕ್ಕಿಂತ ತೆರಿಗೆಯನ್ನು ಕಟ್ಟಿಸಿ ಉಳಿದದ್ದನ್ನು ಕರದಾತನ ಇಚ್ಛೆಗೆ ಬಿಡುವ ಆಲೋಚನೆಯನ್ನು ಹೊಂದಿದೆ. ಕಳೆದ ವರ್ಷ ಭಾರತದಲ್ಲಿ ಒಟ್ಟು ಮಾರಟವಾದ ವಾಹನಗಳ ಸಂಖ್ಯೆ 2.38 ಕೋಟಿ. ಈ ದೇಶದಲ್ಲಿ ಆದಾಯ ಕರವನ್ನು ತುಂಬುವವರ ಸಂಖ್ಯೆ 2.34 ಕೋಟಿ. 145 ಕೋಟಿ ಜನಸಂಖ್ಯೆಯಿರುವ ದೇಶದಲ್ಲಿ ಆದಾಯಕರದ ವ್ಯಾಪ್ತಿಯಲ್ಲಿ ಬರುವರ ಸಂಖ್ಯೆಯನ್ನು ಇನ್ನೂ ಕಡಿಮೆ ಮಾಡಲು ಈ ಸರ್ಕಾರ ಸಿದ್ಧವಿಲ್ಲ. ಅದೇ ರೀತಿ, ಹೂಡಿಕೆಯ ಮೇಲಿನ ಬಂಡವಾಳದ ಗಳಿಕೆಯ ವಿಚಾರದಲ್ಲಿಯೂ ಅಷ್ಟೇ. ದೀರ್ಘಾವದಿಯ ಗಳಿಕೆಯನ್ನು ಶೇ 12.5ಕ್ಕೆ ಏಸಿಸಿದರೂ ಇದುತನಕ ಇದ್ದ ಮಿತಿಯನ್ನು 1,00,000 ರೂ.ಯಿಂದ 1,25,000 ರೂ.ಗೆ ಏರಿಸಲಾಗಿದೆ.

ಅನಿಶ್ಚಿತಿತ ಆರ್ಥಿಕ ವ್ಯವಸ್ಥೆಗೆ ಉತ್ತರ

ಈ ಸರ್ಕಾರ ಪ್ರಸ್ತುತ ಪಡಿಸಿರುವ ಬಜೆಟ್ ಅನೇಕ ಧನಾತ್ಮಕ ಅಂಶಗಳನ್ನು ಒಳಗೊಂಡಿದೆ. ಜಾಗತಿಕವಾಗಿ ಕಾಡುತ್ತಿರುವ ಅನಿಶ್ಚಿತಿತ ಆರ್ಥಿಕ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಎದುರಿಸುವತ್ತ ಗಮನ ಹರಿಸಲಾಗಿದೆ. ಚೀನಾದ ಮಾದರಿಯಲ್ಲಿ ಗೃಹ ಮತ್ತು MSME ವಿಭಾಗವನ್ನು ಸಶಕ್ತಗೊಳಿಸುವ ಉದ್ದೇಶವನ್ನು ಕಾಣಬಹುದಾಗಿದೆ. ಆದರೆ ರಾಜ್ಯಗಳಿಗೆ ಅವರ ಪಾಲಿನ GST ವಿಚಾರದಲ್ಲಿ ಯವುದೇ ಒಂದು ನಿರ್ಣಯವನ್ನು ಜಾರಿಗೊಳಿಸುವಲ್ಲಿ ಆಸಕ್ತಿಯನ್ನು ಹೊಂದಿದಂತೆ ಕಾಣಿಸುವುದಿಲ್ಲ. ಮಹತ್ವದ ವಿಚಾರವೆಂದರೆ ರಾಜ್ಯಗಳಿಗೆ ನೀಡುವ ಪ್ರಮಾಣದಲ್ಲಿ ಕಳೆದ ವರ್ಷ ರೂ. 20.98 ಕೋಟಿ ರೂ. ಇದ್ದಿದ್ದು ಈ ವರ್ಷ 23.48 ಕೋಟಿ ರೂ.ಗೆ ಏರಿದೆ. ಆದರೂ ಕೆಲ ರಾಜ್ಯಗಳು ಕಾಲು ಕೆರೆಯುತ್ತಿದೆ. ಸುಪ್ರೀಂ ಕೋರ್ಟ್‌ ಈಗಾಗಲೇ ಮಧ್ಯ ಪ್ರವೇಶಿಸುವ ಸೂಚನೆಯನ್ನು ಕೊಟ್ಟಿದೆ. ಆ ನಿರ್ಣಯದ ಮೇಲೆ ಮತ್ತೊಮ್ಮೆ ಆರ್ಥಿಕ ನೀತಿಯನ್ನು ಪುನಃ ಆಲೋಚಿಸುವ ಕಾಲಬರಬಹುದೋ ಏನೋ (Budget Analysis 2024).

ಇದನ್ನೂ ಓದಿ: Pralhad Joshi: ನವಭಾರತ ನಿರ್ಮಾಣಕ್ಕೆ ಅತ್ಯುತ್ತಮ ಬಜೆಟ್: ಸಚಿವ ಪ್ರಲ್ಹಾದ್‌ ಜೋಶಿ ಶ್ಲಾಘನೆ

Exit mobile version