ನವದೆಹಲಿ: 2050ರ ಹೊತ್ತಿಗೆ ಭಾರತದಲ್ಲಿನ ಸುಮಾರು 3,700 ಡ್ಯಾಮ್‌ಗಳು ತಮ್ಮ ಒಟ್ಟು ನೀರು ಸಂಗ್ರಹಣೆಯ ಸಾಮರ್ಥ್ಯದಲ್ಲಿ ಶೇ.26ರಷ್ಟು ಕಳೆದುಕೊಳ್ಳಲಿವೆ. ಹೆಚ್ಚುತ್ತಿರುವ ಹೂಳಿನಿಂದಾಗಿ ಸಂಗ್ರಹಣಾ ಸಾಮರ್ಥ್ಯವು ಕುಸಿಯಲಿದ್ದು, ಭವಿಷ್ಯದಲ್ಲಿ ನೀರಿನ ಭದ್ರತೆ, ನೀರಾವರಿ ಮತ್ತು ವಿದ್ಯುತ್ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ವಿಶ್ವ ಸಂಸ್ಥೆಯ ಅಧ್ಯಯನ ವರದಿಯೊಂದು ತಿಳಿಸಿದೆ(UN Report).
ಇದೇ ರೀತಿಯ ವರದಿಯನ್ನು ಕೇಂದ್ರ ಜಲ ಆಯೋಗವು 2015ರಲ್ಲೂ ನೀಡಿತ್ತು. 50 ವರ್ಷಗಳಷ್ಟು ಹಳೆಯದಾದ 141 ದೊಡ್ಡ ಜಲಾಶಯಗಳ ಕಾಲುಭಾಗವು ಶೇ.30 ಸ್ಟೋರೇಜ್ ಸಾಮರ್ಥ್ಯವನ್ನು ಕಳೆದುಕೊಳ್ಳಲಿವೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.
ವಿಪರೀತ ಹೂಳಿನಿಂದಾಗಿ ಈಗಾಗಲೇ ಜಗತ್ತಿನ ಸುಮಾರು ಐವತ್ತು ಸಾವಿರ ಡ್ಯಾಮ್‌ಗಳು ತಮ್ಮ ಸಂಗ್ರಹಣಾ ಸಾಮರ್ಥ್ಯದಲ್ಲಿ ಶೇ.13ರಿಂದ 19ರಷ್ಟು ಕಳೆದುಕೊಂಡಿವೆ. ಯುನೈಟೆಡ್ ನೇಷನ್ಸ್ ಯುನಿವರ್ಸಿಟಿ ಇನ್‌ಸ್ಟಿಟ್ಯೂಟ್ ಆನ್ ವಾಟರ್ ಆ್ಯಂಡ್ ಎನ್ವಿರಾನ್ಮೆಂಟ್ ಆ್ಯಂಡ್ ಹೆಲ್ತ್(UNU-INWEH) ಈ ಅಧ್ಯಯನ ವರದಿಯನ್ನು ಬಿಡುಗಡೆ ಮಾಡಿದೆ.
150 ದೇಶಗಳಲ್ಲಿನ ಅಣೆಕಟ್ಟುಗಳು 4,665 ಶತಕೋಟಿ ಘನ ಮೀಟರ್‌ಗೆ ಕುಸಿಯಲಿವೆ. 2050ರ ವೇಳೆಗೆ ಶೇ.26ರಷ್ಟು ಸಂಗ್ರಹ ನಷ್ಟವಾಗಲಿದೆ. 1,650 ಶತಕೋಟಿ ಘನ ಮೀಟರ್ ಶೇಖರಣಾ ಸಾಮರ್ಥ್ಯದ ನಷ್ಟವು ಭಾರತ, ಚೀನಾ, ಇಂಡೋನೇಷ್ಯಾ, ಫ್ರಾನ್ಸ್ ಮತ್ತು ಕೆನಡಾದ ವಾರ್ಷಿಕ ನೀರಿನ ಬಳಕೆಗೆ ಸರಿ ಸಮಾನವಾಗಿರುತ್ತದೆ.
ಇದನ್ನೂ ಓದಿ | ಪೆನ್ನಾರ್ ನದಿ ನೀರು ವಿವಾದ: ನ್ಯಾಯಾಧಿಕರಣ ರಚಿಸಲು ಕೇಂದ್ರಕ್ಕೆ ಸುಪ್ರೀಂ ನಿರ್ದೇಶನ, ಕರ್ನಾಟಕಕ್ಕೆ ಹಿನ್ನಡೆ