ಅಹಮದಾಬಾದ್: ಕೇಂದ್ರ ಗೃಹಸಚಿವ ಅಮಿತ್ ಶಾ(Amith Shah) ಅವರು ಗುಜರಾತ್‌ನಲ್ಲಿರುವ 188 ಪಾಕಿಸ್ತಾನಿ ನಿರಾಶ್ರಿತ ಹಿಂದೂಗಳಿಗೆ ಪೌರತ್ವ ತಿದ್ದುಪಡಿ ಕಾಯ್ದೆಯ (CAA Act) ಅಡಿಯಲ್ಲಿ ಪೌರತ್ವ ನೀಡಿದರು. ಇದೇ ವೇಳೆ ಮಾತನಾಡಿದ ಅವರು, ಕಳೆದ ಹಲವು ದಶಕಗಳಿಂದ ಅಧಿಕಾರದಲ್ಲಿದ್ದ ಕಾಂಗ್ರೆಸ್ ಓಲೈಕೆಯ ರಾಜಕಾರಣ ನೀತಿಯಿಂದಾಗಿ ನಿರಾಶ್ರಿತರಿಗೆ ಪೌರತ್ವ ನೀಡಲು ಹಿಂದೇಟು ಹಾಕಿತ್ತು ಎಂದು ಕಿಡಿಕಾರಿದರು.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಲಕ್ಷಾಂತರ ನಿರಾಶ್ರಿತರಿಗೆ ಹಕ್ಕು ಮತ್ತು ನ್ಯಾಯವನ್ನು ನೀಡುತ್ತಿದೆ. ಸಿಎಎಯಲ್ಲಿ ಯಾರ ಪೌರತ್ವವನ್ನು ಕಸಿದುಕೊಳ್ಳಲು ಯಾವುದೇ ಅವಕಾಶವಿಲ್ಲ ಎಂದು ಅವರು ಮುಸ್ಲಿಮರಿಗೆ ಭರವಸೆ ನೀಡಿದರು. ಸಿಎಎ ಜಾರಿಗೆ ತಂದಿರುವುದು ನೆರೆಯ ರಾಷ್ಟ್ರಗಳಿಂದ ಬಂದು ಇಲ್ಲಿ ನೆಲೆಸಿರುವ ಅಲ್ಲಿನ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಉದ್ದೇಶದಿಂದಾಗಿಯೇ ಹೊರತು ಯಾರ ಪೌರತ್ವವನ್ನು ಕಸಿದುಕೊಳ್ಳಲು ಅಲ್ಲ ಎಂದು ಪುನರುಚ್ಚರಿಸಿದರು.
ಬಾಂಗ್ಲಾದೇಶ ವಿಭಜನೆಯಾದಾಗ ಅಲ್ಲಿ ಶೇಕಡಾ 27 ರಷ್ಟು ಹಿಂದೂಗಳಿದ್ದರು, ಇಂದು ಶೇಕಡಾ 9 ರಷ್ಟು ಇದ್ದಾರೆ. ಇಷ್ಟು ಹಿಂದೂಗಳು ಎಲ್ಲಿಗೆ ಹೋಗಿದ್ದಾರೆ. ಅವರನ್ನು ನೆರೆಯ ದೇಶದಿಂದ ಹಿಂದೂಗಳು ಎಂದು ಕರೆಯಲಾಯಿತು. ನಾವು 2019 ರಲ್ಲಿ ಸಿಎಎ ತಂದಿದ್ದೇವೆ. ಸಿಎಎ ಕಾನೂನಿಂದಾಗಿ ಕೋಟ್ಯಂತರ ಹಿಂದೂಗಳು, ಜೈನರು ಮತ್ತು ಸಿಖ್ ಧರ್ಮದ ಜನರು ಭಾರತೀಯ ಪೌರತ್ವವನ್ನು ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಕೆಲವು ರಾಜಕೀಯ ಪಕ್ಷಗಳು ಸಿಎಎ ವಿಚಾರವನ್ನು ಇಟ್ಟುಕೊಂಡು ಮುಸ್ಲಿಮರನ್ನು ಹಿಂಸೆಗೆ ಪ್ರಚೋದಿಸುತ್ತಿದೆ. ಕೆಲವು ರಾಜ್ಯ ಸರ್ಕಾರಗಳು ಕೂಡ ಇದೇ ವಿಚಾರವಾಗಿ ಜನರನ್ನು ದಾರಿ ತಪ್ಪಿಸುತ್ತಿವೆ. ಭಾರತ ಒಕ್ಕೂಟ ಮತ್ತು ಕಾಂಗ್ರೆಸ್ ಸಿಎಎಗೆ ಸಂಬಂಧಿಸಿದಂತೆ ನಿರಾಶ್ರಿತರನ್ನು ದಾರಿ ತಪ್ಪಿಸುತ್ತಿವೆ ಎಂದು ಕಿಡಿಕಾರಿದರು.
#CAA देश में बस रहे लाखों लोगों को सिर्फ़ नागरिकता देने का कार्यक्रम नहीं है।
— Pradipsinh Jadeja (@PradipsinhGuj) August 18, 2024
यह देश में रह रहे लाखों शरणार्थियों को न्याय और अधिकार देने का कार्यक्रम है।
– केन्द्रीय गृह एवं सहकारिता मंत्री मान. श्री @AmitShah जी#CAA pic.twitter.com/H2q0cS7bNz
ಕೇಂದ್ರ ಸರ್ಕಾರವು ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫಘಾನಿಸ್ತಾನದ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡುವ ಪೌರತ್ವ ತಿದ್ದುಪಡಿ ಕಾಯ್ದೆಯ (CAA) ನಿಯಮಗಳನ್ನು ಬದಲಿಸಿದೆ. ಭಾರತದ ಪೌರತ್ವ ಪಡೆಯಲು ನಿರಾಶ್ರಿತ ಅಲ್ಪಸಂಖ್ಯಾತರು ಇನ್ನು ಮುಂದೆ ಸುಲಭವಾಗಿ ಪೌರತ್ವ ಪಡೆಯುವ ರೀತಿಯಲ್ಲಿ ಸಿಎಎ ಕಾಯ್ದೆಯ ಪರಿಚ್ಛೇದ 1 ಎ ನಿಯಮಗಳನ್ನು ಕೇಂದ್ರ ಸರ್ಕಾರ ಬದಲಿಸಿದೆ.
ಅದರಂತೆ, ನಿರಾಶ್ರಿತರು ಕೇಂದ್ರ ಸರ್ಕಾರ, ಯಾವುದೇ ರಾಜ್ಯ ಸರ್ಕಾರ ಅಥವಾ ನ್ಯಾಯಾಂಗ ನೀಡುವ ದಾಖಲೆ, ಭೂಮಿಯ ದಾಖಲೆ ನೀಡಿದರೂ ಸಾಕು, ಭಾರತದ ಪೌರತ್ವವನ್ನು ಪಡೆಯಬಹುದಾಗಿದೆ. ಇದರ ಜತೆಗೆ ನಿರಾಶ್ರಿತರ ಅಜ್ಜ-ಅಜ್ಜಿ, ಮುತ್ತಜ್ಜ-ಮುತ್ತಜ್ಜಿಯು ಬಾಂಗ್ಲಾ, ಪಾಕ್ ಹಾಗೂ ಅಫಘಾನಿಸ್ತಾನದ ನಿವಾಸಿಗಳು ಎಂಬುದರ ಯಾವುದೇ ದಾಖಲೆ ನೀಡಿದರೂ ಭಾರತದ ಪೌರತ್ವ ಪಡೆಯಬಹುದಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ಎಂದರೇನು?
2014 ರ ಡಿಸೆಂಬರ್ 31 ಕ್ಕಿಂತ ಮೊದಲು ನೆರೆಯ ಮುಸ್ಲಿಂ ಬಹುಸಂಖ್ಯಾತ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ವಲಸೆ ಬಂದ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು, ಬೌದ್ಧರು, ಜೈನರು ಮತ್ತು ಪಾರ್ಸಿಗಳಿಗೆ ಭಾರತೀಯ ಪೌರತ್ವಕ್ಕೆ ಮಾರ್ಗವನ್ನು ಒದಗಿಸಲು ಸಿಎಎ 1955 ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ.
ಇದನ್ನೂ ಓದಿ:CAA Rules: ಪಾಕ್, ಬಾಂಗ್ಲಾ, ಆಘ್ಘನ್ ನಿರಾಶ್ರಿತರಿಗೆ ಸಿಹಿ ಸುದ್ದಿ; ಸಿಎಎ ನಿಯಮ ಸಡಿಲಿಸಿದ ಕೇಂದ್ರ ಸರ್ಕಾರ!