ಹೊಸದಿಲ್ಲಿ: ಪೌರತ್ವ (ತಿದ್ದುಪಡಿ) ಕಾಯಿದೆಯ (Citizenship amendment Act – CAA) ಸಾಂವಿಧಾನಿಕ ಸಿಂಧುತ್ವವನ್ನು ಹಾಗೂ ಕೋರ್ಟ್ ನಿರ್ಧರಿಸುವವರೆಗೆ ಪೌರತ್ವ ತಿದ್ದುಪಡಿ ಕಾಯಿದೆಯ ಅನುಷ್ಠಾನವನ್ನು ತಡೆಯಲು ಕೇಂದ್ರಕ್ಕೆ ನಿರ್ದೇಶನ ನೀಡಲು ಕೋರಿ ಸಲ್ಲಿಸಲಾದ 230ಕ್ಕೂ ಅಧಿಕ ಅರ್ಜಿಗಳ ವಿಚಾರಣೆಯನ್ನು ಇಂದು ಸುಪ್ರೀಂ ಕೋರ್ಟ್ (Supreme court) ಕೈಗೆತ್ತಿಕೊಳ್ಳಲಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಪರವಾಗಿ ವಾದಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರ ಸಲ್ಲಿಕೆಗಳನ್ನು ಗಮನಿಸಿದೆ. ಒಮ್ಮೆ ವಲಸಿಗ ಹಿಂದೂಗಳಿಗೆ ಭಾರತೀಯ ಪೌರತ್ವವನ್ನು ನೀಡಿದರೆ ಅದನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂಬ ಕಾರಣದಿಂದ ಶೀಘ್ರ ವಿಚಾರಣೆಗಾಗಿ ಒತ್ತಾಯಿಸಲಾಗಿದೆ.
ಸಿಎಎ ಕಾಯಿದೆಯನ್ನು 2019ರಲ್ಲಿ ಸಂಸತ್ತು ಅಂಗೀಕರಿಸಿದೆ. ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಡಿಸೆಂಬರ್ 31, 2014ರ ಮೊದಲು ವಲಸೆ ಬಂದ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು ಸೇರಿದಂತೆ ಕಿರುಕುಳಕ್ಕೊಳಗಾದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವವನ್ನು ನೀಡುವ ಉದ್ದೇಶವನ್ನು ಹೊಂದಿದೆ.
ಕೇಂದ್ರವು ಸಿಎಎ ಅಡಿಯಲ್ಲಿ ನಿಯಮಗಳನ್ನು ಹೊರಡಿಸಿದ ಒಂದು ದಿನದ ನಂತರ, ಕೇರಳ ಮೂಲದ ರಾಜಕೀಯ ಪಕ್ಷ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ನಿಯಮಗಳ ಅನುಷ್ಠಾನಕ್ಕೆ ತಡೆಯಾಜ್ಞೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಈ ಕಾನೂನನ್ನು ತಡೆಹಿಡಿಯಬೇಕು; ಈ ಕಾನೂನಿನ ಪ್ರಯೋಜನದಿಂದ ವಂಚಿತರಾಗುವ ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿಗಳ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಒತ್ತಾಯಿಸಿದೆ.
IUML ಜೊತೆಗೆ, ಇತರ ಪಕ್ಷಗಳು ಮತ್ತು ವ್ಯಕ್ತಿಗಳಾದ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (DYFI), ಅಸ್ಸಾಂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ದೇಬಬ್ರತ ಸೈಕಾ, ಅಸ್ಸಾಂನ ಕಾಂಗ್ರೆಸ್ ಸಂಸದ ಅಬ್ದುಲ್ ಖಲೀಕ್ ಮತ್ತು ಇತರರು ಸಹ ಅರ್ಜಿಗಳನ್ನು ಸಲ್ಲಿಸಿದ್ದಾರೆ.
2019ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ CAA ಅನ್ನು ಪ್ರಶ್ನಿಸಿದ ಆರಂಭಿಕ ಪಕ್ಷಗಳಲ್ಲಿ ಒಂದಾದ IUML, ನಿರ್ದಿಷ್ಟ ದೇಶಗಳಿಂದ ಬಂದ ಮುಸ್ಲಿಮೇತರ ವಲಸಿಗರಿಗೆ ಪೌರತ್ವವನ್ನು ನೀಡುವ ಈ ಕಾನೂನು ʼವೇಗದ ಪ್ರಕ್ರಿಯೆʼಯನ್ನು ಸ್ಥಾಪಿಸುತ್ತಿದೆ. ಇದು ಕೇವಲ ಧಾರ್ಮಿಕ ಗುರುತನ್ನು ಆಧರಿಸಿ ತಾರತಮ್ಯಪೂರಿತವಾದ ಆಡಳಿತವನ್ನು ಜಾರಿಗೊಳಿಸುತ್ತದೆ ಎಂದು ವಾದಿಸಿದೆ.
ಕೇಂದ್ರವನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಅರ್ಜಿದಾರರ ನಿಲುವನ್ನು ನಿರಾಕರಿಸಿದ್ದಾರೆ. “ಯಾವುದೇ ಅರ್ಜಿದಾರರಿಗೆ ಪೌರತ್ವ ನೀಡುವಿಕೆಯನ್ನು ಪ್ರಶ್ನಿಸಲು ಯಾವುದೇ ಅಧಿಕಾರವಿಲ್ಲ” ಎಂದು ಹೇಳಿದ್ದಾರೆ. ಸಿಎಎ ವಿರುದ್ಧ 237 ಅರ್ಜಿಗಳು ಬಾಕಿ ಉಳಿದಿದ್ದು, ನಿಯಮಗಳ ಅನುಷ್ಠಾನಕ್ಕೆ ತಡೆ ಕೋರಿ ನಾಲ್ಕು ಮಧ್ಯಂತರ ಅರ್ಜಿಗಳಿವೆ.
ಇದನ್ನೂ ಓದಿ: CAA: ಸಿಎಎ ತಡೆ ಕೋರಿದ ಅರ್ಜಿಗಳು ಮಾ.19ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ