Site icon Vistara News

Khalistan Terrorist: ಕೆನಡಾ ವಾಸಿ ಲಖ್ಬೀರ್ ಸಿಂಗ್ ಲಾಂಡಾ ಭಯೋತ್ಪಾದಕ: ಭಾರತ ಘೋಷಣೆ

Lakhbir Singh Landa

ಹೊಸದಿಲ್ಲಿ: ಕೆನಡಾ ಮೂಲದ ದರೋಡೆಕೋರ ಮತ್ತು ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (Babbar Khalsa internationl – BKI) ನಾಯಕ ಲಖ್ಬೀರ್ ಸಿಂಗ್ ಲಾಂಡಾನನ್ನು (Lakhbir Singh Landa) ಭಾರತ ಸರ್ಕಾರ ʼಭಯೋತ್ಪಾದಕʼ (Khalistan Terrorist) ಎಂದು ಘೋಷಿಸಿದೆ.

ಲಖ್ಬೀರ್ ಸಿಂಗ್ ಲಾಂಡಾನನ್ನು ಭಾರತದ ಗೃಹ ವ್ಯವಹಾರಗಳ ಸಚಿವಾಲಯ (MHA) ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (UAPA) ಅಡಿಯಲ್ಲಿ ʼಒಂಟಿ ಭಯೋತ್ಪಾದಕʼ (individual terrorist) ಎಂದು ಘೋಷಿಸಿದೆ.

ಪಾಕಿಸ್ತಾನದಿಂದ ಭಾರತಕ್ಕೆ ಶಸ್ತ್ರಾಸ್ತ್ರಗಳು ಮತ್ತು ಸುಧಾರಿತ ಸ್ಫೋಟಕ ಸಾಧನಗಳ (ಐಇಡಿ) ಕಳ್ಳಸಾಗಣೆ ಮೇಲ್ವಿಚಾರಣೆ ನಡೆಸುತ್ತಿರುವ ಲಾಂಡಾ, ಕಳೆದ ವರ್ಷ ಮೇ 9ರಂದು ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸ್ ಗುಪ್ತಚರ ಕೇಂದ್ರ ಕಚೇರಿಯಲ್ಲಿ ರಾಕೆಟ್ ಚಾಲಿತ ಗ್ರೆನೇಡ್ (ಆರ್‌ಪಿಜಿ) ದಾಳಿಯ ಮಾಸ್ಟರ್‌ಮೈಂಡ್ ಆಗಿದ್ದು, ಪೊಲೀಸರಿಗೆ ಬೇಕಾಗಿದ್ದಾನೆ. ಈ ಸಂಬಂಧ ಪಂಜಾಬ್ ಪೊಲೀಸರು ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸುತ್ತಿದ್ದಾರೆ.

MHA ಹೊರಡಿಸಿದ ಅಧಿಸೂಚನೆಯ ಪ್ರಕಾರ, ಲಾಂಡಾ ಕೆನಡಾ ಮೂಲದ ಖಲಿಸ್ತಾನ್ ಪರ ಸಂಸ್ಥೆಗಳೊಂದಿಗೆ (PKEs) ನಿಕಟ ಸಂಬಂಧ ಹೊಂದಿದ್ದಾನೆ. ಇದರಲ್ಲಿ ಖಲಿಸ್ತಾನ್ ಟೈಗರ್ ಫೋರ್ಸ್ (KTF) ನಾಯಕ, ಮೃತ ಹರ್ದೀಪ್ ಸಿಂಗ್ ನಿಜ್ಜರ್ ಮತ್ತು ಸಿಖ್ಸ್ ಫಾರ್ ಜಸ್ಟಿಸ್ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ಮತ್ತಿತರರು ಸೇರಿದ್ದಾರೆ. ಪಂಜಾಬ್‌ನ ತರಣ್‌ ತಾರಣ್ ಜಿಲ್ಲೆಯ ಹರಿಕೆ ನಿವಾಸಿಯಾಗಿರುವ ಲಾಂಡಾ ಪ್ರಸ್ತುತ ಕೆನಡಾದ ಆಲ್ಬರ್ಟಾದ ಎಡ್ಮಂಟನ್‌ನಲ್ಲಿ ನೆಲೆಸಿದ್ದಾನೆ.‌

“ಲಖ್ಬೀರ್ ಸಿಂಗ್ ಅಲಿಯಾಸ್ ಲಾಂಡಾ, ಗಡಿಯಾಚೆಯ ಸಂಸ್ಥೆಗಳ ಬೆಂಬಲದೊಂದಿಗೆ, ಮೊಹಾಲಿಯಲ್ಲಿರುವ ಪಂಜಾಬ್ ರಾಜ್ಯ ಗುಪ್ತಚರ ಪ್ರಧಾನ ಕಚೇರಿಯ ಕಟ್ಟಡದ ಮೇಲೆ ರಾಕೆಟ್ ಪ್ರೊಪೆಲ್ಡ್ ಗ್ರೆನೇಡ್ ಮೂಲಕ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದಾನೆ. ಪಂಜಾಬ್‌ನಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಗಡಿಯಾಚೆಗಿನ ವಿವಿಧ ಘಟಕಗಳಿಗೆ ಸುಧಾರಿತ ಸ್ಫೋಟಕ ಸಾಧನಗಳು (ಐಇಡಿ), ಶಸ್ತ್ರಾಸ್ತ್ರಗಳು, ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಸ್ಫೋಟಕಗಳ ಪೂರೈಕೆಯಲ್ಲಿ ತೊಡಗಿಸಿಕೊಂಡಿದ್ದಾನೆ” ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಸುಲಿಗೆ, ಹತ್ಯೆಗಳು, ಐಇಡಿಗಳನ್ನು ಇಡುವುದು, ಶಸ್ತ್ರಾಸ್ತ್ರಗಳು ಮತ್ತು ಮಾದಕವಸ್ತುಗಳ ಕಳ್ಳಸಾಗಣೆ, ಪಂಜಾಬ್ ಮತ್ತು ದೇಶದ ಇತರ ಭಾಗಗಳಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ಹಣ ಪೂರೈಸುವುದಕ್ಕೆ ಸಂಬಂಧಿಸಿದ ವಿವಿಧ ಕ್ರಿಮಿನಲ್ ಪ್ರಕರಣಗಳಲ್ಲಿ ಲಾಂಡಾ ಭಾಗಿಯಾಗಿದ್ದಾನೆ. ಭಾರತದ ವಿವಿಧ ಭಾಗಗಳಲ್ಲಿ ಉದ್ದೇಶಿತ ಹತ್ಯೆಗಳು, ಸುಲಿಗೆ ಮತ್ತು ಇತರ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

2021ರಲ್ಲಿ ಲಾಂಡಾ ವಿರುದ್ಧ ಲುಕ್ ಔಟ್ ಸುತ್ತೋಲೆ ಹೊರಡಿಸಲಾಗಿತ್ತು. ಎನ್‌ಐಎ ಕೂಡ ಆತನ ತಲೆಗೆ ಬಹುಮಾನ ಘೋಷಿಸಿದೆ.

ಇದನ್ನೂ ಓದಿ: India Canada Row: ಕೆನಡಾದಲ್ಲಿ ನಡೆದ ಖಲಿಸ್ತಾನ್‌ ಪರ ರ‍್ಯಾಲಿಗೆ ಜನರೇ ಇಲ್ಲ!

Exit mobile version