ಒಟ್ಟಾವ: ಭಾರತ ಹಾಗೂ ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧವು ಹದಗೆಟ್ಟಿದೆ. ಕೆನಡಾದಲ್ಲಿ ಭಾರತ ವಿರೋಧಿ ಕೃತ್ಯಗಳನ್ನು ನಿಗ್ರಹಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕೋರಿದ್ದಕ್ಕೇ ಕುಪಿತಗೊಂಡಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ (India Canada Row) ಅವರು ಹಲವು ಉಪಟಳ ಮಾಡಿದ್ದಾರೆ. ಕೆನಡಾದಲ್ಲಿರುವ ಭಾರತದ ರಾಜತಾಂತ್ರಿಕರವನ್ನು ವಜಾಗೊಳಿಸುವುದು ಸೇರಿ ಹಲವು ಉದ್ಧಟತನದ ನಿರ್ಧಾರ ತೆಗೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ, “ಭಾರತದ ಜತೆಗಿನ ಸಂಬಂಧವನ್ನು ನಾವು ಮರುಸ್ಥಾಪಿಸಲು ಬಯಸುತ್ತೇವೆ” ಎಂದು ಕೆನಡಾ ಪ್ರತಿಪಕ್ಷ ನಾಯಕ ಪಿಯರೆ ಪೊಯಿಲಿವ್ರೆ (Pierre Poilievre) ಹೇಳಿದ್ದಾರೆ.
ನೇಪಾಳ ಮಾಧ್ಯಮ ಸಂಸ್ಥೆ ಜತೆ ಮಾತನಾಡಿದ ಪಿಯರೆ ಪೊಯಿಲಿವ್ರೆ, “ಕೆನಡಾದಲ್ಲಿರುವ ರಾಜತಾಂತ್ರಿಕರನ್ನು ವಜಾಗೊಳಿಸಿರುವುದು ಸರಿಯಲ್ಲ. ಭಾರತವು ಜಗತ್ತಿನಲ್ಲೇ ಬೃಹತ್ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರವಾಗಿದೆ. ಹಾಗಾಗಿ, ಭಾರತದ ಜತೆ ನಾವು ಉತ್ತಮ ಹಾಗೂ ವೃತ್ತಿಪರ ಸಂಬಂಧವನ್ನು ಹೊಂದಲು ಬಯಸುತ್ತೇವೆ. ಮುಂದಿನ ದಿನಗಳಲ್ಲಿ ನಾನು ಪ್ರಧಾನಿಯಾಗಿ ಆಯ್ಕೆಯಾದರೆ ಭಾರತದ ಜತೆಗಿನ ಸಂಬಂಧವನ್ನು ಪುನರ್‌ಸ್ಥಾಪನೆ ಮಾಡುತ್ತೇವೆ” ಎಂದು ಕನ್ಸರ್ವೇಟಿವ್ ಪಕ್ಷದ ಪಿಯರೆ ಪೊಯಿಲಿವ್ರೆ ಹೇಳಿದ್ದಾರೆ.
#Canada's opposition leader, #PierrePoilievre, has guaranteed the country's Indian population that if he is elected Prime Minister, he will restore a "professional relationship" with India.
— Devendra Jatav (DJ) (@DevendraJatavDJ) October 22, 2023
ಕೆಲ ದಿನಗಳ ಹಿಂದಷ್ಟೇ ಭಾರತದಲ್ಲಿರುವ 41 ಕೆನಡಾ ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳಲಾಗಿದೆ. ಭಾರತದ ಸೂಚನೆ ಮೇರೆಗೆ ವಾಪಸ್ ಕರೆಸಿಕೊಳ್ಳಲಾಗಿದೆ. ಇದರಿಂದ ಮತ್ತಷ್ಟು ಕೆರಳಿರುವ ಕೆನಡಾ, ಬೆಂಗಳೂರು, ಮುಂಬೈ ಹಾಗೂ ಚಂಡೀಗಢದಲ್ಲಿ ವೀಸಾ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಜೂನ್ 18ರಂದು ನಡೆದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆನ್ಸಿಗಳ ಕೈವಾಡ ಇರುವ ಸಾಧ್ಯತೆ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಅವರು ಹೇಳಿಕೆ ನೀಡಿದ್ದರು. ಇದಾದ ಬೆನ್ನಲ್ಲೇ ಭಾರತ ಮತ್ತು ಕೆನಡಾ ಮಧ್ಯೆ ರಾಜತಾಂತ್ರಿಕ ಸಂಘರ್ಷ ಏರ್ಪಟ್ಟಿತ್ತು. ಭಾರತವು ಟ್ರೂಡೋ ಆರೋಪಕ್ಕೆ ಪ್ರತಿಕ್ರಿಯಿಸಿ, ಇದೊಂದು ಆಧಾರ ರಹಿತ ಆರೋಪ ಎಂದು ಹೇಳಿತ್ತು. ಅಲ್ಲದೇ ಉಭಯ ರಾಷ್ಟ್ರಗಳು ರಾಜತಾಂತ್ರಿಕ ಅಧಿಕಾರಿಗಳನ್ನು ವಜಾ ಮಾಡುವ ಮೂಲಕ ಸ್ಪರ್ಧೆಗೆ ಇಳಿದಿದ್ದವು.
ಇದನ್ನೂ ಓದಿ: ರಾಜತಾಂತ್ರಿಕ ಸಿಬ್ಬಂದಿ ವಿಚಾರದಲ್ಲಿ ಕೆನಡಾ ಪರ ನಿಂತ ಅಮೆರಿಕ, ಬ್ರಿಟನ್; ಡೋಂಟ್ ಕೇರ್ ಎಂದ ಭಾರತ
ಭಾರತದ ಜತೆ ಖಾಸಗಿ ಮಾತುಕತೆ ಕುರಿತು ಕೆನಡಾ ಸರ್ಕಾರ ಈಗಾಗಲೇ ಪ್ರಸ್ತಾಪಿಸಿದೆ. “ಭಾರತದ ಜತೆಗಿನ ರಾಜತಾಂತ್ರಿಕ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಲು ಕೆನಡಾ ಬಯಸುತ್ತದೆ. ನಾವು ಕೆನಡಾ ರಾಜತಾಂತ್ರಿಕ ಅಧಿಕಾರಿಗಳು, ರಾಯಭಾರಿಗಳ ಸುರಕ್ಷತೆಯು ಕೆನಡಾ ಆದ್ಯತೆಯಾಗಿದೆ. ಹಾಗೆಯೇ, ಬಿಕ್ಕಟ್ಟು ಬಗೆಹರಿಸಿಕೊಳ್ಳಲು ಖಾಸಗಿಯಾಗಿ ಮಾತುಕತೆ ನಡೆಸುವುದು ಕೆನಡಾ ಉದ್ದೇಶವಾಗಿದೆ. ಇದಕ್ಕಾಗಿ ಭಾರತ ಸರ್ಕಾರದ ಜತೆ ಮಾತುಕತೆ ನಡೆಸಲಾಗುತ್ತಿದೆ” ಎಂದು ಕೆನಡಾ ವಿದೇಶಾಂಗ ಸಚಿವೆ ಮೆಲಾನೀ ಜೋಲಿ (Melanie Joly) ಹೇಳಿದ್ದು, ಯಾವುದೇ ಪ್ರಗತಿ ಕಾಣಿಸಿಲ್ಲ.