ಒಟ್ಟಾವ/ನವದೆಹಲಿ: ಭಾರತ ಹಾಗೂ ಕೆನಡಾ ಬಿಕ್ಕಟ್ಟಿನ (India Canada Row) ಬಳಿಕ ಮಾತುಕತೆಗೆ ಸಿದ್ಧ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಹೇಳಿಕೆ ನೀಡಿದರೂ ಬಿಕ್ಕಟ್ಟು ಮಾತ್ರ ಮುಂದುವರಿದಿದೆ. ಇದಕ್ಕೆ ನಿದರ್ಶನ ಎಂಬಂತೆ, ಭಾರತದಲ್ಲಿರುವ 41 ರಾಜತಾಂತ್ರಿಕರನ್ನು (Canada Diplomats In India) ಕೆನಡಾ ವಾಪಸ್ ಕರೆಸಿಕೊಂಡಿದೆ. ಅಕ್ಟೋಬರ್ 10ರೊಳಗೆ ಭಾರತದಲ್ಲಿರುವ ಹೆಚ್ಚುವರಿ ರಾಜತಾಂತ್ರಿಕ ಅಧಿಕಾರಿಗಳನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಭಾರತ ಖಡಕ್ ಸೂಚನೆ ನೀಡಿದ ಬೆನ್ನಲ್ಲೇ ಕೆನಡಾ ವಾಪಸ್ ಕರೆಸಿಕೊಂಡಿದೆ.
ಭಾರತದಲ್ಲಿ ಕೆನಡಾದ 62 ರಾಜತಾಂತ್ರಿಕ ಅಧಿಕಾರಿಗಳಿದ್ದು, ಗರಿಷ್ಠ ಸಂಖ್ಯೆ ಇದೆ. ಹಾಗಾಗಿ, ಕೆನಡಾ ಅಕ್ಟೋಬರ್ 10ರೊಳಗೆ 40 ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳಬೇಕು. ಇಲ್ಲದಿದ್ದರೆ ಭಾರತವು ರಾಜತಾಂತ್ರಿಕ ವಿನಾಯಿತಿಯನ್ನು (Diplomatic Immunity) ರದ್ದುಗೊಳಿಸುತ್ತದೆ ಎಂದು ಎಚ್ಚರಿಕೆ ನೀಡಲಾಗಿತ್ತು. ಇದರ ಬೆನ್ನಲ್ಲೇ 41 ರಾಜತಾಂತ್ರಿಕರನ್ನು ಕೆನಡಾ ವಾಪಸ್ ಕರೆಸಿಕೊಂಡಿದೆ.
ಆಕ್ರೋಶ ವ್ಯಕ್ತಪಡಿಸಿದ ಕೆನಡಾ ಸಚಿವೆ
Amid India-Canada diplomatic tensions, Canadian Foreign Minister Melanie Joly says "As of now, I can confirm that India has formally conveyed its plan to unethically remove diplomatic immunities for all but 21 Canadian diplomats and dependents in Delhi by October 20. This means… pic.twitter.com/tbqwk9Wv8u
— ANI (@ANI) October 20, 2023
ಭಾರತದಲ್ಲಿರುವ ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳಿ ಎಂಬುದಾಗಿ ಭಾರತ ಸೂಚನೆ ನೀಡಿರುವುದಕ್ಕೆ ಕೆನಡಾ ವಿದೇಶಾಂಗ ಸಚಿವೆ ಮೆಲಾನೀ ಜೋಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಭಾರತವು ಅಕ್ಟೋಬರ್ 20ರೊಳಗೆ ಕೆನಡಾ ರಾಜತಾಂತ್ರಿಕರ ರಾಜತಾಂತ್ರಿಕ ವಿನಾಯಿತಿ ರದ್ದುಗೊಳಿಸಲಾಗುವುದು ಎಂದು ಸೂಚಿಸಿದೆ. ಇದು ಅನೈತಿನಕ ನಿರ್ಧಾರವಾಗಿದೆ. ಇದರಿಂದಾಗಿ ಭಾರತದಲ್ಲಿರುವ 41 ರಾಜತಾಂತ್ರಿಕರು ಹಾಗೂ ಅವರ 42 ಸಿಬ್ಬಂದಿಯು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ, ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳಲಾಗುತ್ತಿದೆ” ಎಂದು ಟ್ವೀಟ್ ಮಾಡಿದ್ದಾರೆ. ಚಂಡೀಗಢ, ಬೆಂಗಳೂರು, ಮುಂಬೈನಲ್ಲಿರುವ ರಾಜತಾಂತ್ರಿಕರನ್ನು ಕೆನಡಾ ವಾಪಸ್ ಕರೆಸಿಕೊಂಡಿದೆ.
ಇದನ್ನೂ ಓದಿ: India Canada Row: ಬಿಕ್ಕಟ್ಟಿನ ಮಧ್ಯೆಯೇ ಹಿಂದುಗಳಿಗೆ ಟ್ರುಡೋ ನವರಾತ್ರಿ ಶುಭಾಶಯ!
ಜೂನ್ 18ರಂದು ನಡೆದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆನ್ಸಿಗಳ ಕೈವಾಡ ಇರುವ ಸಾಧ್ಯತೆ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಅವರು ಹೇಳಿಕೆ ನೀಡಿದ್ದರು. ಇದಾದ ಬೆನ್ನಲ್ಲೇ ಭಾರತ ಮತ್ತು ಕೆನಡಾ ಮಧ್ಯೆ ರಾಜತಾಂತ್ರಿಕ ಸಂಘರ್ಷ ಏರ್ಪಟ್ಟಿತ್ತು. ಭಾರತವು ಟ್ರೂಡೋ ಆರೋಪಕ್ಕೆ ಪ್ರತಿಕ್ರಿಯಿಸಿ, ಇದೊಂದು ಆಧಾರ ರಹಿತ ಆರೋಪ ಎಂದು ಹೇಳಿತ್ತು. ಅಲ್ಲದೇ ಉಭಯ ರಾಷ್ಟ್ರಗಳು ರಾಜತಾಂತ್ರಿಕ ಅಧಿಕಾರಿಗಳನ್ನು ವಜಾ ಮಾಡುವ ಮೂಲಕ ಸ್ಪರ್ಧೆಗೆ ಇಳಿದಿದ್ದವು.
ಮಾತುಕತೆಗೆ ಸಿದ್ಧ ಎಂದಿರುವ ಕೆನಡಾ
“ಭಾರತದ ಜತೆಗಿನ ರಾಜತಾಂತ್ರಿಕ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಲು ಕೆನಡಾ ಬಯಸುತ್ತದೆ. ನಾವು ಕೆನಡಾ ರಾಜತಾಂತ್ರಿಕ ಅಧಿಕಾರಿಗಳು, ರಾಯಭಾರಿಗಳ ಸುರಕ್ಷತೆಯು ಕೆನಡಾ ಆದ್ಯತೆಯಾಗಿದೆ. ಹಾಗೆಯೇ, ಬಿಕ್ಕಟ್ಟು ಬಗೆಹರಿಸಿಕೊಳ್ಳಲು ಖಾಸಗಿಯಾಗಿ ಮಾತುಕತೆ ನಡೆಸುವುದು ಕೆನಡಾ ಉದ್ದೇಶವಾಗಿದೆ. ಇದಕ್ಕಾಗಿ ಭಾರತ ಸರ್ಕಾರದ ಜತೆ ಮಾತುಕತೆ ನಡೆಸಲಾಗುತ್ತಿದೆ” ಎಂದು ಈಗಾಗಲೇ ಕೆನಡಾ ವಿದೇಶಾಂಗ ಸಚಿವೆ ಮೆಲಾನೀ ಜೋಲಿ (Melanie Joly) ಹೇಳಿದ್ದು, ಯಾವುದೇ ಪ್ರಗತಿ ಕಾಣಿಸಿಲ್ಲ.