Site icon Vistara News

India Canada Row: ನಿಜ್ಜರ್‌ ಹತ್ಯೆ ಕುರಿತು ಭಾರತಕ್ಕೆ ನಂಬಲರ್ಹ ಮಾಹಿತಿ ನೀಡಿದ್ದೇವೆ; ಕೆನಡಾ ಹೊಸ ರಾಗ

narendra modi justi Trudeau

Indian Students Skip Canada Amid Political Row, Minister Says 86% Drop

ಒಟ್ಟಾವ: ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ವಿಚಾರದಲ್ಲಿ ಸಾಕ್ಷ್ಯಾಧಾರಗಳನ್ನೂ ಕೊಡದೆ ಸುಖಾಸುಮ್ಮನೆ ಭಾರತದ ವಿರುದ್ಧ ಆರೋಪ (India Canada Row) ಮಾಡುತ್ತಿರುವ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ (Justin Trudeau) ಈಗ ಹೊಸ ರಾಗ ತೆಗೆದಿದ್ದಾರೆ. “ನಿಜ್ಜರ್‌ ಹತ್ಯೆ ವಿಷಯಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಹಲವು ವಾರಗಳ ಹಿಂದೆಯೇ ‘ನಂಬಲರ್ಹ ಆರೋಪಗಳ’ ಕುರಿತು (Credible Allegations) ಮಾಹಿತಿ ನೀಡಿದ್ದೇವೆ” ಎಂದು ಹೇಳಿರುವುದು ಭಾರತ ಹಾಗೂ ಕೆನಡಾ ನಡುವಿನ ರಾಜತಾಂತ್ರಿಕ ಬಿಕ್ಕಟ್ಟನ್ನು ಮತ್ತಷ್ಟು ಬಿಗಿಗೊಳಿಸಿದೆ.

“ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಕುರಿತು ನಾನು ಸೋಮವಾರ ಮಾತನಾಡಿದ್ದೇನೆ. ಆದರೆ, ಆತನ ಹತ್ಯೆಯ ಕುರಿತು ಭಾರತಕ್ಕೆ ತುಂಬ ವಾರಗಳ ಹಿಂದೆಯೇ ನಂಬಲರ್ಹ ಆರೋಪಗಳ ಕುರಿತು ಮಾಹಿತಿಯನ್ನು ಒದಗಿಸಲಾಗಿದೆ. ತುಂಬ ಗಂಭೀರವಾದ ವಿಚಾರದ ಕುರಿತು ಭಾರತ ಹಾಗೂ ಕೆನಡಾ ಒಗ್ಗೂಡಿ ಕಾರ್ಯನಿರ್ವಹಿಸುವ ಕುರಿತು ಕೂಡ ಮನವರಿಕೆ ಮಾಡಲಾಗಿದೆ. ಗಂಭೀರ ಹತ್ಯೆಯ ವಿಚಾರದಲ್ಲಿ ಭಾರತವು ನಮ್ಮ ಜತೆ ಕೈಗೂಡಿಸುತ್ತದೆ ಎಂಬ ಆಶಾಭಾವನೆಯಲ್ಲಿ ಇದ್ದೇವೆ” ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಜೆಲೆನ್‌ಸ್ಕಿ ಜತೆ ಜಂಟಿ ಸುದ್ದಿಗೋಷ್ಠಿ ನಡೆಸುವ ವೇಳೆ ಜಸ್ಟಿನ್‌ ಟ್ರುಡೋ ಹೇಳಿದ್ದಾರೆ.

ಜಸ್ಟಿನ್‌ ಟ್ರುಡೋ ಆರೋಪ

ಇದರೊಂದಿಗೆ ಭಾರತಕ್ಕೆ ನಾವು ಈಗಾಗಲೇ ಸಾಕ್ಷ್ಯ ನೀಡಿದ್ದೇವೆ, ಆದರೆ ಭಾರತ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬಂತೆ ಜಸ್ಟಿನ್‌ ಟ್ರುಡೋ ಬಿಂಬಿಸಿದ್ದಾರೆ. ಆದರೆ, ಅವರು ಬೇರೊಂದು ಸುದ್ದಿಗೋಷ್ಠಿ ನಡೆಸುವ ವೇಳೆ ಭಾರತದ ವಿರುದ್ಧದ ಆರೋಪಗಳಿಗೆ ಸಾಕ್ಷ್ಯ ಇದೆಯೇ ಎಂಬ ಕುರಿತು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಹಾರಿಕೆಯ ಉತ್ತರ ನೀಡಿದ್ದಾರೆ. “ಭಾರತದ ವಿರುದ್ಧ ಆರೋಪ ಮಾಡಲು ಬಲವಾದ ಹಾಗೂ ವಿಶ್ವಾಸಾರ್ಹ ಕಾರಣಗಳಿವೆ” ಎಂದು ಜಸ್ಟಿನ್‌ ಟ್ರುಡೋ ಹೇಳಿದ್ದಾರೆ. ಆದರೆ, ಅವರು ಯಾವುದೇ ಸಾಕ್ಷ್ಯಗಳನ್ನು ನೀಡಿಲ್ಲ ಹಾಗೂ ಇವೆ ಎಂದು ಕೂಡ ಉತ್ತರಿಸಿಲ್ಲ.

ಇದನ್ನೂ ಓದಿ: India Canada Row: ನಿಜ್ಜರ್‌ ಧಾರ್ಮಿಕ ನಾಯಕನಲ್ಲ, 200 ಜನರ ಕೊಲೆಗಾರ; ಕೆನಡಾಗೆ ಭಾರತ ಪ್ರತ್ಯುತ್ತರ

ಹತ್ಯೆಗೀಡಾದ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ನನ್ನು ಕೆನಡಾದ ನಾಗರಿಕ ಎಂದು ಪರಿಗಣಿಸಿ ಜಸ್ಟಿನ್‌ ಟ್ರುಡೋ ಭಾರತದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಆತನ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಆರೋಪಿಸಿದ್ದಾರೆ. “ಕೆನಡಾ ನಾಗರಿಕರ ಹಕ್ಕುಗಳನ್ನು ಹಾಗೂ ದೇಶದ ಮೌಲ್ಯಗಳನ್ನು ರಕ್ಷಿಸುವುದು ನನ್ನ ಕರ್ತವ್ಯವಾಗಿದೆ” ಎಂದು ಅವರು ಹೇಳಿದ್ದಾರೆ. ಆದರೆ, ಅವರು ಭಾರತಕ್ಕೆ ಪ್ರಚೋದನೆ ನೀಡುವುದಿಲ್ಲ ಎಂದು ಹೇಳುತ್ತಲೇ ಇಂತಹ ಆರೋಪ ಮಾಡಿದ್ದಾರೆ. ಮತ್ತೊಂದೆಡೆ, ಜಸ್ಟಿನ್‌ ಟ್ರುಡೋ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಅಮೆರಿಕ, ತನಿಖೆಗೆ ಭಾರತ ಸಹಕಾರ ನೀಡಬೇಕು ಎಂದಿದೆ. ಆದರೆ, ಸರಿಯಾದ ಸಾಕ್ಷ್ಯಾಧಾರ ಬೇಕು ಎಂದು ಭಾರತ ಸ್ಪಷ್ಟಪಡಿಸಿದೆ.

Exit mobile version