ನವದೆಹಲಿ: ಭಾರತ ಹಾಗೂ ಕೆನಡಾ ನಡುವೆ ಕೆಲ ತಿಂಗಳಿಂದ ರಾಜತಾಂತ್ರಿಕ ಬಿಕ್ಕಟ್ಟು (India Canada Row) ಉಂಟಾಗಿದೆ. ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆ ಹಿಂದೆ ಭಾರತದ ಕೈವಾಡ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಆರೋಪಿಸಿದ ಬಳಿಕ ಭಾರತ ದಿಟ್ಟ ಪ್ರತ್ಯುತ್ತರ ನೀಡಿದೆ. ತನಿಖೆಗೆ ಸಹಕರಿಸಲು ಕೂಡ ಸಿದ್ಧ, ಆದರೆ ದಾಖಲೆ ನೀಡಿ ಎಂದು ಆಗ್ರಹಿಸಿದೆ. ಹಾಗೆಯೇ, ಭಾರತದಲ್ಲಿರುವ ಕೆನಡಾ ರಾಜತಾಂತ್ರಿಕರನ್ನು ಕೂಡ ವಾಪಸ್ ಕಳುಹಿಸಿದೆ. ಇದರಿಂದಾಗಿ ಬೆಚ್ಚಿದ ಕೆನಡಾ ಸರ್ಕಾರವು ಭಾರತದ ಜತೆಗೆ ಖಾಸಗಿ ಮಾತುಕತೆಗೆ ಸಿದ್ಧ ಎಂದಿತ್ತು. ಆದರೆ, ಇಷ್ಟೆಲ್ಲ ಆದರೂ ಕೆನಡಾ ಸರ್ಕಾರವು ಭಾರತದ ಜತೆಗಿನ ವ್ಯಾಪಾರ ಒಪ್ಪಂದದ ಕುರಿತು ಮಾತನಾಡುತ್ತಿಲ್ಲ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
“ಭಾರತ ಹಾಗೂ ಕೆನಡಾ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ಕುರಿತ ಮಾತುಕತೆಗೆ ತಡೆ ಬಿದ್ದಿದೆ. ಕೆನಡಾ ರಾಜಕಾರಣಿಗಳಿಗೆ ಭಾರತದ ಕುರಿತು ತಪ್ಪು ಕಲ್ಪನೆಗಳಿವೆ. ಹಾಗೆಯೇ, ಕೆನಡಾ ರಾಜಕಾರಣಿಗಳು ಮಾಡುತ್ತಿರುವ ಆರೋಪಗಳು ನಿರಾಧಾರವಾಗಿವೆ. ಹಾಗಾಗಿ, ವ್ಯಾಪಾರ ಒಪ್ಪಂದದ ಬಗ್ಗೆ ಮಾತುಕತೆ ನಡೆದಿಲ್ಲ. ಆದರೆ, ಬ್ರಿಟನ್ ಜತೆಗಿನ ವ್ಯಾಪಾರ ಒಪ್ಪಂದದ ಮಾತುಕತೆಯು ಚೆನ್ನಾಗಿ ನಡೆಯುತ್ತಿದೆ” ಎಂದು ಹಿಂದುಸ್ತಾನ್ ಟೈಮ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಿಯೂಷ್ ಗೋಯಲ್ ಮಾಹಿತಿ ನೀಡಿದರು. ಹಾಗೆಯೇ, “ಭಾರತ ದೊಡ್ಡ ಮಾರುಕಟ್ಟೆಯಾಗಿದ್ದು, ವ್ಯಾಪಾರ ಒಪ್ಪಂದ ವಿಳಂಬವಾದಷ್ಟು ಕೆನಡಾಗೇ ಜಾಸ್ತಿ ನಷ್ಟ” ಎಂದರು.
Canada halted FTA talks, We didn't stop, they stand to lose more with their move – Minister Piyush Goyal. pic.twitter.com/pSOrEcwjAC
— ChinniPAPPU (@THEANYSENA) November 4, 2023
ದೆಹಲಿಯಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಪಾಲ್ಗೊಂಡು, ಮೋದಿ ಅವರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿ ವಾಪಸಾದ ಕೆಲವೇ ದಿನಗಳಲ್ಲಿ ಭಾರತದ ಜತೆಗಿನ ವ್ಯಾಪಾರ ಒಪ್ಪಂದವನ್ನು ಕೆನಡಾ ಮುಂದೂಡಿದೆ. “ಭಾರತದ ಜತೆಗಿನ ಟ್ರೇಡ್ ಮಿಷನ್‌ಅನ್ನು ಮುಂದೂಡಲಾಗಿದೆ” ಎಂದು ಕೆನಡಾ ವ್ಯಾಪಾರ ಸಚಿವೆ ಮೇರಿ ಎನ್‌ಜಿ ಅವರ ವಕ್ತಾರೆ ಶಾಂಟಿ ಕೊಸೆಂಟಿನೋ ಘೋಷಿಸಿದ್ದರು.
ಇದನ್ನೂ ಓದಿ: ಇಂದಿರಾ ಗಾಂಧಿ ಜನ್ಮದಿನದಂದು ಏರ್ ಇಂಡಿಯಾ ವಿಮಾನ ಸ್ಫೋಟಕ್ಕೆ ಖಲಿಸ್ತಾನಿ ಉಗ್ರರ ಸಂಚು; ವಿಡಿಯೊ ರಿಲೀಸ್!
ಕಳೆದ ಮೇ ತಿಂಗಳಲ್ಲಿ ಭಾರತ ಹಾಗೂ ಕೆನಡಾ ವ್ಯಾಪಾರ ಒಪ್ಪಂದ ಕುರಿತು ಮಾತುಕತೆ ನಡೆದಿತ್ತು. ಭಾರತದ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹಾಗೂ ಕೆನಡಾ ಸಚಿವೆ ಮೇರಿ ಎನ್‌ಜಿ ಅವರು ಜಂಟಿ ಪ್ರಕಟಣೆ ಹೊರಡಿಸಿದ್ದರು. ಭಾರತ ಹಾಗೂ ಕೆನಡಾ ವ್ಯಾಪಾರ ಹಾಗೂ ಹೂಡಿಕೆ ಒಪ್ಪಂದ ಮಾಡಿಕೊಳ್ಳಲಿವೆ. ವರ್ಷಾಂತ್ಯದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಿವೆ ಎಂದು ಘೋಷಣೆ ಮಾಡಿದ್ದರು. ಇದಕ್ಕೆ ಕೆನಡಾ ಬ್ರೇಕ್ ಹಾಕಿದ್ದು, ಮಾತುಕತೆ ಶುರು ಮಾಡಲು ಕೆನಡಾ ಮೊಂಡುತನ ಪ್ರದರ್ಶಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಈ ಸಂಗತಿ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ