Site icon Vistara News

India Canada Row: ಮಣಿಪುರ, ಕಾಶ್ಮೀರಕ್ಕೆ ಹೋಗದಿರಿ; ಕೆನಡಾ ಮತ್ತೊಂದು ಉದ್ಧಟತನ

justin trudeau

ಒಟ್ಟಾವ: ಭಾರತದ ಜತೆಗಿನ ವ್ಯಾಪಾರ ಒಪ್ಪಂದವನ್ನು ಮುಂದೂಡಿ, ಕೆನಡಾದಲ್ಲಿರುವ ಭಾರತದ ರಾಯಭಾರಿಯನ್ನು ಉಚ್ಚಾಟಿಸಿ ಉದ್ಧಟತನ ಮೆರೆದಿದ್ದ ಕೆನಡಾ ಈಗ ಮತ್ತೊಂದು ಉಪಟಳ (India Canada Row) ಮಾಡಿದೆ. “ಜಮ್ಮು-ಕಾಶ್ಮೀರ (Jammu Kashmir) ಹಾಗೂ ಮಣಿಪುರಕ್ಕೆ (Manipur) ಭಾರತದಲ್ಲಿರುವ ಕೆನಡಾ ನಾಗರಿಕರು ಯಾವುದೇ ಕಾರಣಕ್ಕೂ ತೆರಳಬಾರದು” ಎಂದು ಕೆನಡಾ ಸೂಚನೆ (Travel Advisory) ನೀಡಿದೆ. ಆ ಮೂಲಕ ಭಾರತದಲ್ಲಿ ಅಶಾಂತಿ ನೆಲೆಸಿದೆ ಎಂಬಂತೆ ಬಿಂಬಿಸಲು ಹೊರಟಿದೆ.

“ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಹಿಂಸಾತ್ಮಕ ಪ್ರತಿಭಟನೆಗಳು, ನಾಗರಿಕ ಗಲಭೆ ಹಾಗೂ ಉಗ್ರರ ದಾಳಿಯ ಭೀತಿ ಇದೆ. ಉಗ್ರರು ಹಾಗೂ ಸೈನಿಕರ ಮಧ್ಯೆ ನಿತ್ಯ ಸಂಘರ್ಷಗಳು ನಡೆಯುತ್ತಿವೆ. ಭದ್ರತಾ ಸಿಬ್ಬಂದಿ ಮೇಲೆ ಉಗ್ರರು ನಡೆಸುವ ದಾಳಿಯು ನಾಗರಿಕರ ಸಾವಿಗೂ ಕಾರಣವಾಗಿದೆ. ಹಾಗೆಯೇ, ಮಣಿಪುರ ಹಾಗೂ ಅಸ್ಸಾಂನಲ್ಲೂ ತೀವ್ರವಾದಿಗಳ ಹಿಂಸಾಚಾರ ಭುಗಿಲೆದ್ದಿದೆ. ಇಲ್ಲೂ ನಾಗರಿಕ ಅಶಾಂತಿ ತಲೆದೋರಿದೆ. ಹಾಗಾಗಿ, ದಾಳಿ, ಹಿಂಸೆಯ ಭೀತಿಯನ್ನು ಗಮನದಲ್ಲಿಟ್ಟುಕೊಂಡು ಭಾರತದಲ್ಲಿರುವ ಕೆನಡಾ ನಾಗರಿಕರು ಜಮ್ಮು-ಕಾಶ್ಮೀರ, ಮಣಿಪುರ ಹಾಗೂ ಅಸ್ಸಾಂಗೆ ತೆರಳಬಾರದು” ಎಂದು ಟ್ರಾವೆಲ್‌ ಅಡ್ವೈಸರಿ ಹೊರಡಿಸಿದೆ.

ಕೆಲ ದಿನಗಳ ಹಿಂದಷ್ಟೇ ನಡೆದ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಜಸ್ಟಿನ್‌ ಟ್ರುಡೋ ಅವರ ಜತೆ ಪ್ರಧಾನಿ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಮಾತಕತೆ ನಡೆಸಿದ್ದರು. ಇದೇ ವೇಳೆ, “ಕೆನಡಾದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಚಟುವಟಿಕೆಗಳನ್ನು ನಿಗ್ರಹಿಸಬೇಕು” ಎಂದು ಹೇಳಿದ್ದರು. ಖಲಿಸ್ತಾನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪರೋಕ್ಷವಾಗಿ ಆಗ್ರಹಿಸಿದ್ದರು. ಇದೇ ಕಾರಣಕ್ಕಾಗಿ ಕೆನಡಾ ಸರ್ಕಾರವು ಭಾರತದ ಜತೆಗಿನ ಒಪ್ಪಂದವನ್ನು ಮುಂದೂಡಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: India- Canada relations: ಮುಯ್ಯಿಗೆ ಮುಯ್ಯಿ: ಕೆನಡಾ ರಾಯಭಾರಿಗೂ ಭಾರತದಿಂದ ಗೇಟ್‌ಪಾಸ್

ಮತ್ತೊಂದೆಡೆ, ಕೆನಡಾದಿಂದ ಭಾರತೀಯ ರಾಯಭಾರಿಯನ್ನು ಉಚ್ಚಾಟಿಸಿದ ಜಸ್ಟಿನ್‌ ಟ್ರುಡೊ ಕ್ರಮಕ್ಕೆ ಪ್ರತೀಕಾರವಾಗಿ ಕೆನಡಾದ ರಾಯಭಾರಿಯನ್ನು ಭಾರತ ಆಚೆಗಟ್ಟಿದೆ. ಇದರೊಂದಿಗೆ ಭಾರತ- ಕೆನಡಾ ಸಂಬಂಧ (India- Canada relations) ಇನ್ನಷ್ಟು ಬಿಗಡಾಯಿಸಿದೆ. ಇಂದು ಭಾರತೀಯ ವಿದೇಶಾಂಗ ಇಲಾಖೆಯು ಕೆನಡಾದ ರಾಯಭಾರಿಯನ್ನು ಕರೆಸಿಕೊಂಡು, ಇನ್ನು ಐದು ದಿನದಲ್ಲಿ ದೇಶ ಬಿಟ್ಟು ಆಚೆಗೆ ಹೋಗುವಂತೆ ಆದೇಶ ನೀಡಿದೆ. ಭಾರತದ ಆಂತರಿಕ ವ್ಯವಹಾರಗಳಲ್ಲಿ ಕೆನಡಾದ ಹಸ್ತಕ್ಷೇಪವನ್ನು ಖಂಡಿಸಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

Exit mobile version