Site icon Vistara News

Cancer Detector: ಬಾಯಿಯಿಂದ ಊದಿದರೆ ಕ್ಯಾನ್ಸರ್‌ ಪತ್ತೆ ಹಚ್ಚುವ ಉಪಕರಣ! ಭಾರತೀಯ ಉದ್ಯಮಿಯ ಪ್ರಯತ್ನ

breethliser

ನ್ಯೂಯಾರ್ಕ್‌: ಅಮೆರಿಕದ ಸಿಲಿಕಾನ್ ವ್ಯಾಲಿ (silicon valley) ಯಲ್ಲಿರುವ, ಭಾರತೀಯ ಮೂಲದ ಉದ್ಯಮಿಯೊಬ್ಬರು ಹೊಸದೊಂದು ವೈದ್ಯಕೀಯ ಉಪಕರಣದ (medical instrument) ಆವಿಷ್ಕಾರದ ಪ್ರಯತ್ನದಲ್ಲಿದ್ದಾರೆ. ಬಾಯಿಯಿಂದ ಉಸಿರು ಊದಿದರೆ ಕ್ಯಾನ್ಸರ್‌ ಇದೆಯೇ ಇಲ್ಲವೇ ಎಂದು ತಿಳಿಸುವ (cancer detector) ಸರಳ ಪರಿಕಲ್ಪನೆಯ ಉಪಕರಣವಿದು. ಇದು ಬಳಕೆಗೆ ಬಂದರೆ ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಎನಿಸಲಿದೆ.

ಕಳೆದ ಐದು ವರ್ಷಗಳಿಂದ ಈ ಪರಿಕಲ್ಪನೆಯನ್ನು ಇಟ್ಟುಕೊಂಡು ಆವಿಷ್ಕಾರದಲ್ಲಿ ತೊಡಗಿರುವ ಉದ್ಯಮಿ, ಶಿಕ್ಷಣತಜ್ಞರು ವಿವೇಕ್ ವಾಧ್ವಾ (Vivek Wadhwa). ಉಸಿರನ್ನು ಮಾತ್ರ ಬಳಸಿಕೊಂಡು ಜನರಲ್ಲಿ ಕ್ಯಾನ್ಸರ್ ಅನ್ನು ಪತ್ತೆಹಚ್ಚಲು ಊ ಉಪಕರಣ ಬ್ರೀತ್‌ಲೈಜರ್ ಅನ್ನು ಬಳಸುವಂತೆಯೇ ಕೆಲಸ ಮಾಡುತ್ತದೆ.

ವಾಧ್ವಾ ಅವರ ಹೊಸ ಕಂಪನಿಯ ಹೆಸರು Vionix Biosciences Inc. ಸಣ್ಣದಾಗಿ ಪ್ರಾರಂಭಿಸಿದ ಇದರಲ್ಲಿ ವಾಧ್ವಾ $ 500,000 ಸ್ವಂತ ಹಣವನ್ನು ಖರ್ಚು ಮಾಡಿದ್ದಾರೆ. ಮತ್ತೂ $ 500,000 ಖರ್ಚು ಮಾಡಲು ಯೋಜಿಸಿದ್ದಾರೆ. 2024ರಲ್ಲಿ ಕೆಲಸ ಆರಂಭಿಸಬಲ್ಲ ಮೂಲಮಾದರಿಯನ್ನು ಹೊರತರುವ ಉದ್ದೇಶ. ಹಾರ್ವರ್ಡ್ ವೈದ್ಯಕೀಯ ಶಾಲೆ, ಮೇಯೊ ಕ್ಲಿನಿಕ್ ಮತ್ತು ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆಗಳಿಂದ ತಜ್ಞರನ್ನು ಇವರು ಕರೆತಂದಿದ್ದಾರೆ.

ಉದ್ಯಮಿ ವಿವೇಕ್‌ ವಾಧ್ವಾ

ಉದ್ದೇಶಿತ ಸಾಧನ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದರೆ ಹಲವು ವಿಧದ ಕ್ಯಾನ್ಸರ್ ಸ್ಕ್ರೀನಿಂಗ್ (cancer screening) ಗಣನೀಯವಾಗಿ ಸುಧಾರಿಸಲಿವೆ. ತುಂಬ ಮೊದಲೇ ಪತ್ತೆಹಚ್ಚಲು ಕೂಡ ಅನುವು ಮಾಡಿಕೊಡಲಿದೆ.

ವಾಧ್ವಾಗೆ ಈಗ ವಯಸ್ಸು 66. ಭಾರತದಲ್ಲಿ ಜನಿಸಿ ಯುಎಸ್‌ಗೆ ವಲಸೆ ಬಂದವರು. ಇಲ್ಲಿನ ತಂತ್ರಜ್ಞಾನ ಉದ್ಯಮಕ್ಕೆ ಸೇರಿದರು. ಎರಡು ಕಂಪನಿಗಳನ್ನು ಸ್ಥಾಪಿಸಿದ್ದಾರೆ. ಐದು ಪುಸ್ತಕಗಳನ್ನು ಬರೆದಿದ್ದಾರೆ. ಪ್ರತಿಷ್ಠಿತ ಸಂಸ್ಥೆಗಳಲ್ಲಿ ಬೋಧನೆ ಮಾಡುತ್ತಾರೆ. ಸಿಂಗ್ಯುಲಾರಿಟಿ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರ ಮುಖ್ಯಸ್ಥ. ಪತ್ರಿಕೆಗಳಲ್ಲಿ ಅಂಕಣಕಾರರಾಗಿದ್ದು ಇವರು ಬರೆಯುತ್ತಿದ್ದ ಬರಹಗಳು ಇವರಿಗೆ ಖ್ಯಾತಿ ಮತ್ತು ಕುಖ್ಯಾತಿಯನ್ನು ತಂದಿತು. 2010ರಲ್ಲಿ ವಾಷಿಂಗ್ಟನ್ ಪೋಸ್ಟ್‌ನಲ್ಲಿ ಅಂಕಣಗಳ ಸರಣಿಯಲ್ಲಿ ಅವರು ಸಿಲಿಕಾನ್ ವ್ಯಾಲಿಯ ಬಗೆಗೆ ಬರೆಯುತ್ತಿದ್ದರು. ಆಗ ಇನ್ನಿತರ ತಜ್ಞರ ಜತೆಗೆ ಕೆಲವು ತಾತ್ವಿಕ ವಿಷಯಗಳ ಬಗ್ಗೆ ಸಂಘರ್ಷ ಹೊಂದಿದ್ದರು.

2018ರಲ್ಲಿ ಮೆಕ್ಸಿಕೋದಲ್ಲಿ ಕುಟುಂಬ ರಜೆಯಲ್ಲಿದ್ದಾಗ ಅವರ ಪತ್ನಿ ತವಿಂದರ್ ಅವರಲ್ಲಿ ಅಪರೂಪದ ಕ್ಯಾನ್ಸರ್‌ ಇರುವುದು ಪತ್ತೆಯಾಯಿತು. ವಾಧ್ವಾ ಅವರ ಜೀವನ ಬದಲಾಯಿತು. ತವೀಂದರ್‌ ಕಿಮೊಥೆರಪಿ (chemotherapy) , ಜೀನೋಮಿಕ್ ಸೀಕ್ವೆನ್ಸಿಂಗ್‌ಗೆ ಒಳಗಾದರು. ಸ್ಥಾಪಿತ ಮತ್ತು ಪ್ರಾಯೋಗಿಕ ಎರಡೂ ಔಷಧಗಳನ್ನು ಪ್ರಯತ್ನಿಸಿದರು. ಇದರ ಬಳಿಕ ವಾಧ್ವಾ ಹೆಚ್ಚಿನ ಸಮಯವನ್ನು ಕ್ಯಾನ್ಸರ್‌ ಬಗ್ಗೆ ಕಲಿಯಲು ಮೀಸಲಿಟ್ಟರು.

ಇದೆಲ್ಲದರ ಫಲವೇ ಬ್ರೀತ್‌ಲೈಸರ್‌ನ ಆವಿಷ್ಕಾರದ ನಿರ್ಧಾರವಾಗಿತ್ತು. ಪ್ರಸ್ತುತ ಪರೀಕ್ಷೆಗಳಿಗೆ ಹೋಲಿಸಿದರೆ ಹೆಚ್ಚಿನ ಮಟ್ಟದ ವಿವರಗಳನ್ನು ಒದಗಿಸುವ, ಬೇಗನೆ ನಡೆಸಲ್ಪಡುವ, ಇನ್ನಷ್ಟು ಪರೀಕ್ಷೆಗೆ ತಕ್ಷಣ ಅನುಕೂಲ ಮಾಡಿಕೊಡುವ ಒಂದು ಉಪಕರಣದ ಅಗತ್ಯವಿದೆ ಎಂದು ಮನಗಂಡರು. ಅದು ಪೋರ್ಟಬಲ್, $5,000 ಅಥವಾ ಅದಕ್ಕಿಂತ ಕಡಿಮೆ ವೆಚ್ಚದ, 100 ವ್ಯಾಟ್‌ಗಳಿಗಿಂತ ಹೆಚ್ಚು ವಿದ್ಯುತ್‌ ಬಳಸದ ಮತ್ತು ಐದು ನಿಮಿಷಗಳಲ್ಲಿ ಫಲಿತಾಂಶ ನೀಡುವಂಥದಾಗಿರಬೇಕಿತ್ತು. ಎಲ್ಲ ಸೇರಿ ಒಂದು ಡೆಸ್ಕ್‌ಟಾಪ್ ಪ್ರಿಂಟರ್‌ನ ಗಾತ್ರದಲ್ಲಿರಬೇಕು.

ವಾಧ್ವಾ ಅವರ ಪತ್ನಿ ಈಗ ಇಲ್ಲ. ಹೆಚ್ಚಿನ ಚಿಕಿತ್ಸೆಯ ಹೊರತಾಗಿಯೂ ಅವರು ನಿಧನರಾದರು. ಆಗ ಆಕೆಗೆ 57 ವರ್ಷ. ಸಾಯುವ ಮುನ್ನ ʼʼಇತರರು ಇದೇ ರೀತಿಯಲ್ಲಿ ಬಳಲುವುದನ್ನು ತಡೆಯಲು ಏನಾದರೂ ಮಾಡುವಂತೆʼʼ ಅವರು ಪತಿಯನ್ನು ಕೇಳಿಕೊಂಡಿದ್ದರಂತೆ. ಸಾಧ್ಯವಾದಷ್ಟು ಮೊದಲೇ ಕ್ಯಾನ್ಸರ್‌ ಪತ್ತೆಹಚ್ಚಿದ್ದರೆ ವಿಭಿನ್ನ ಫಲಿತಾಂಶವನ್ನೇ ಪಡೆಯಬಹುದಾಗಿತ್ತುʼʼ ಎಂದು ವಾಧ್ವಾ ಹೇಳುತ್ತಾರೆ. “ಅವಳ ಮಾತುಗಳು ಮತ್ತು ಆಲೋಚನೆಗಳು ನನಗೆ ಪ್ರೇರಣೆ ನೀಡಿದವು” ಎನ್ನುತ್ತಾರೆ ವಾಧ್ವಾ.

ಇದನ್ನೂ ಓದಿ: ತಲೆ, ಕುತ್ತಿಗೆ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆ ಗಮನಾರ್ಹ ಸಾಧನೆ: ಡಾ. ಬಿ.ಎಸ್. ಅಜಯ್‌ ಕುಮಾರ್

Exit mobile version