ನವದೆಹಲಿ: ಕ್ಯಾನ್ಸರ್ ಮಾರಕ ರೋಗ ಲಕ್ಷಣವಾಗಿದ್ದು, ಸುಧಾರಿತ ಚಿಕಿತ್ಸಾ ವಿಧಾನಗಳ ಹೊರತಾಗಿಯೂ ಕ್ಯಾನ್ಸರ್ ಪೀಡಿತರು (Cancer Disease) ಹಾಗೂ ಅವರ ಅವಲಂಬಿತರ ಜೀವನ ದುಸ್ತರವಾಗುತ್ತದೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಹೀಗಾಗಿ ಕ್ಯಾನ್ಸರ್ ಕುರಿತು ದೊಡ್ಡ ಮಟ್ಟದ ಜಾಗೃತಿಗಳು ಭಾರತದಲ್ಲಿ ನಡೆಯುತ್ತಿವೆ. ಆದಾಗ್ಯೂ ಭಾರತದಲ್ಲಿ ಕ್ಯಾನ್ಸರ್ಗಳ ಪತ್ತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ಎಂದರೆ ಕ್ಯಾನ್ಸರ್ ಪತ್ತೆಯಾಗುವ ಪ್ರಮಾಣ ಅಪಾಯದ ಮಟ್ಟ ಮೀರಿದೆ. ಇತ್ತೀಚಿನ ವರದಿಯೊಂದರ ಪ್ರಕಾರ ಭಾರತ ಕ್ಯಾನ್ಸರ್ನ ರಾಜಧಾನಿಯಾಗಿ ಪರಿವರ್ತನೆಗೊಂಡಿದೆ.
🚨 India is rapidly emerging as the “cancer capital of the world”, The study indicates that around 63 per cent of all deaths in India are due to NCDs. (Apollo Hospitals report) pic.twitter.com/Bv9JMaLfkh
— Indian Tech & Infra (@IndianTechGuide) April 8, 2024
2024 ರ ವಿಶ್ವ ಆರೋಗ್ಯ ದಿನದಂದು ಬಿಡುಗಡೆಯಾದ ಅಪೊಲೊ ಆಸ್ಪತ್ರೆಗಳ ‘ಹೆಲ್ತ್ ಆಫ್ ನೇಷನ್’ ವರದಿಯ 4 ನೇ ಆವೃತ್ತಿಯು ಭಾರತವನ್ನು “ವಿಶ್ವದ ಕ್ಯಾನ್ಸರ್ ರಾಜಧಾನಿ” ಎಂದು ಕರೆದಿದೆ.
ವರದಿಯ ಪ್ರಕಾರ, ಮೂವರು ಭಾರತೀಯರಲ್ಲಿ ಒಬ್ಬರು ಪೂರ್ವ ಮಧುಮೇಹದಿಂದ ಬಳಲುತ್ತಿದ್ದಾರೆ, ಮೂವರಲ್ಲಿ ಇಬ್ಬರು ಪೂರ್ವ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. 10ರಲ್ಲಿ ಒಬ್ಬರು ಖಿನ್ನತೆಗೆ ಒಳಗಾಗಿದ್ದಾರೆ. ಕ್ಯಾನ್ಸರ್, ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯರಕ್ತನಾಳದ ಕಾಯಿಲೆಗಳು ಮತ್ತು ಮಾನಸಿಕ ಆರೋಗ್ಯ ಅಸ್ವಸ್ಥತೆಗಳು ನಿರ್ಣಾಯಕ ಮಟ್ಟ ತಲುಪಿದೆ. ಇದು ರಾಷ್ಟ್ರದ ಆರೋಗ್ಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ.
ಏರುತ್ತಿದೆ ಕ್ಯಾನ್ಸರ್ ಪ್ರಮಾಣ
ಕ್ಯಾನ್ಸರ್ ಪ್ರಕರಣಗಳ ಉಲ್ಬಣವು ಭಾರತದಲ್ಲಿ ಮಿತಿಮೀರಿದೆ ಮತ್ತು “ವಿಶ್ವದ ಕ್ಯಾನ್ಸರ್ ರಾಜಧಾನಿ” ಎಂಬ ಬಿರುದು ಬರುವಂತೆ ಮಾಡಿದೆ ಎಂಬುದೇ ಆತಂಕಕಾರಿ. ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ಅಂಡಾಶಯದ ಕ್ಯಾನ್ಸರ್ ಭಾರತದಲ್ಲಿ ಪತ್ತೆಯಾಗುವ ಸಾಮಾನ್ಯ ಕ್ಯಾನ್ಸರ್. ಪುರುಷರಲ್ಲಿ, ಶ್ವಾಸಕೋಶದ ಕ್ಯಾನ್ಸರ್, ಬಾಯಿಯ ಕ್ಯಾನ್ಸರ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿವೆ.
ಇತರ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಕ್ಯಾನ್ಸರ್ ವಕ್ಕರಿಸಿಕೊಳ್ಳುತ್ತದೆ. ಸ್ತನ ಕ್ಯಾನ್ಸರ್ ರೋಗನಿರ್ಣಯಕ್ಕೆ ಸರಾಸರಿ 52 ವರ್ಷ, ಶ್ವಾಸಕೋಶದ ಕ್ಯಾನ್ಸರ್ಗೆ ಸರಾಸರಿ 54 ವರ್ಷವಾಗಿದೆ. ಆದರೆ, ಯುಎಸ್, ಯುಕೆ ಮತ್ತು ಚೀನಾದಲ್ಲಿ ರೋಗನಿರ್ಣಯದ ವಯಸ್ಸು 60 ಮತ್ತು 70 ವರ್ಸದ ಆಸುಪಾಸಿನಲ್ಲಿದೆ. ವರದಿಯ ಪ್ರಕಾರ, ಕ್ಯಾನ್ಸರ್ ವಿರುದ್ಧದ ಭಾರತದ ಹೋರಾಟದಲ್ಲಿ ಗಮನಾರ್ಹ ಅಡಚಣೆಯೆಂದರೆ ಅದರ ಅಸಮರ್ಪಕ ತಪಾಸಣೆ. ಇದು ಜಾಗತಿಕ ಮಾನದಂಡಗಳಿಗಿಂತ ಬಹಳ ಕಡಿಮೆಯಾಗಿದೆ.
ಇದನ್ನೂ ಓದಿ: Beef Samosa: ಗೋಮಾಂಸ ಬೆರೆತ ಸಮೋಸಾ ಮಾರಾಟ; 6 ಮಂದಿಯ ಬಂಧನ
ಕಾರಣವೇನು?
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಸಾಮಾನ್ಯ ಜೀವಕೋಶಗಳು ಬಹು-ಹಂತದ ಪ್ರಕ್ರಿಯೆಯ ಮೂಲಕ ಗೆಡ್ಡೆಯ ಕೋಶಗಳಾಗಿ ರೂಪಾಂತರಗೊಳ್ಳುವುದರಿಂದ ಕ್ಯಾನ್ಸರ್ ಬೆಳೆಯುತ್ತದೆ. ಸಾಮಾನ್ಯವಾಗಿ ಕ್ಯಾನ್ಸರ್ ತನ್ನ ಪೂರ್ವ ಸ್ಥಿತಿಯಿಂದ ಮಾರಣಾಂತಿಕವಾಗಿ ಮುಂದುವರಿಯುತ್ತದೆ. ಈ ಬದಲಾವಣೆಗಳು ವ್ಯಕ್ತಿಯ ಆನುವಂಶಿಕ ರಚನೆ ಮತ್ತು ಬಾಹ್ಯ ಅಂಶಗಳಿಂದ ಉಂಟಾಗುತ್ತದೆ.
- ಅಯೋನೈಜಿಂಗ್ ವಿಕಿರಣದಂತಹ ಭೌತಿಕ ಕ್ಯಾನ್ಸರ್ ಕಾರಕಗಳು.
- ತಂಬಾಕಿನ ಹೊಗೆಯಲ್ಲಿ ಕಂಡುಬರುವ ಘಟಕಗಳು, ಆಲ್ಕೋಹಾಲ್, ಅಫ್ಲಾಟಾಕ್ಸಿನ್ (ಆಹಾರದಲ್ಲಿನ ಮಾಲಿನ್ಯ ) ಮತ್ತು ಆರ್ಸೆನಿಕ್ (ಕುಡಿಯುವ ನೀರಿನಲ್ಲಿ ಮಾಲಿನ್ಯಕಾರಕ) ಸೇರಿದಂತೆ ಇನ್ನೂಹಲವು ರಾಸಾಯನಿಕ ಕ್ಯಾನ್ಸರ್ ಕಾರಕಗಳು.
- ನಿರ್ದಿಷ್ಟ ವೈರಸ್ ಗಳು, ಬ್ಯಾಕ್ಟೀರಿಯಾ ಅಥವಾ ಪರಾವಲಂಬಿಗಳಿಂದ ಉಂಟಾಗುವ ಸೋಂಕುಗಳಂತಹ ಜೈವಿಕ ಕ್ಯಾನ್ಸರ್ ಕಾರಕಗಳು.
ತಡೆ ಹೇಗೆ?
- ತಂಬಾಕು ಬಳಸದಿರುವುದು
- ಆಲ್ಕೋಹಾಲ್ ಸೇವನೆ ಮಾಡದಿರುವುದ ಅಥವಾ ಕಡಿಮೆ ಮಾಡುವುದು
- ಲಸಿಕೆಯನ್ನು ಶಿಫಾರಸು ಮಾಡಿದ ಗುಂಪಿಗೆ ಸೇರಿದವರಾಗಿದ್ದರೆ ಎಚ್ ಪಿವಿ ಮತ್ತು ಹೆಪಟೈಟಿಸ್ ಬಿ ವಿರುದ್ಧ ಲಸಿಕೆ ಪಡೆಯುವುದು
- ವಿಕಿರಣಕ್ಕೆ ಒಡ್ಡಿಕೊಳ್ಳುವುದನ್ನು ತಪ್ಪಿಸುವುದು (ಇದು ಪ್ರಾಥಮಿಕವಾಗಿ ಸೂರ್ಯನ ಬೆಳಕು ಮತ್ತು ಕೃತಕ ಟ್ಯಾನಿಂಗ್ ಸಾಧನಗಳಿಗೆ ಒಡ್ಡಿಕೊಳ್ಳುವುದರಿಂದ ಉಂಟಾಗುತ್ತದೆ)
- ರೇಡಾನ್ (ಯುರೇನಿಯಂನ ನೈಸರ್ಗಿಕ ಕೊಳೆಯುವಿಕೆಯಿಂದ ಉತ್ಪತ್ತಿಯಾಗುವ ವಿಕಿರಣಶೀಲ ಅನಿಲ, ಇದು ಕಟ್ಟಡಗಳಲ್ಲಿ – ಮನೆಗಳು, ಶಾಲೆಗಳು ಮತ್ತು ಕೆಲಸದ ಸ್ಥಳಗಳಲ್ಲಿ ಸಂಗ್ರಹವಾಗಬಹುದು)
ವರದಿಯ ಪ್ರಮುಖ ಅಂಶಗಳು ಇವು
- ಭಾರತೀಯರಲ್ಲಿ ಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಸ್ಲೀಪ್ ಅಪ್ನಿಯಾ (ನಿದ್ರೆಯ ಸಮಸ್ಯೆ) ಸಮಸ್ಯೆ ಗಮನಾರ್ಹ ಹೆಚ್ಚಳ ಕಂಡಿದೆ.
- ಸ್ಥೂಲಕಾಯತೆಯ ಪ್ರಮಾಣವು 2016 ರಲ್ಲಿ 9 ಪ್ರತಿಶತದಿಂದ 2023 ರಲ್ಲಿ 20 ಪ್ರತಿಶತಕ್ಕೆ ಏರಿದೆ.
- ಇದೇ ಅವಧಿಯಲ್ಲಿ ಅಧಿಕ ರಕ್ತದೊತ್ತಡ ಪ್ರಕರಣಗಳು ಶೇಕಡಾ 9 ರಿಂದ 13 ಕ್ಕೆ ಏರಿದೆ.
- ಹೆಚ್ಚಿನ ಪ್ರಮಾಣದ ಭಾರತೀಯರು ಸ್ಲೀಪ್ ಅಪ್ನಿಯಾ ಅಪಾಯದಲ್ಲಿದೆ.
ಕ್ರಮ ಅಗತ್ಯ
ವರದಿಯು ನಿಯಮಿತ ಆರೋಗ್ಯ ತಪಾಸಣೆಯ ಮಹತ್ವವನ್ನು ಎತ್ತಿ ತೋರಿಸಿದೆ. ರಕ್ತದೊತ್ತಡ ಮತ್ತು ಬಾಡಿ ಮಾಸ್ ಇಂಡೆಕ್ಸ್ ಮಟ್ಟಗಳ ಬಗ್ಗೆ ನಿಗಾ ಇಡುವ ಮೂಲಕ ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬೇಕು ಎಂದು ಹೇಳಿದೆ. ಆರೋಗ್ಯ ತಪಾಸಣೆಯ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಹೆಚ್ಚಾಗಬೇಕು ಎಂದು ಹೇಳಿದೆ.
ಅಪೊಲೊ ಆಸ್ಪತ್ರೆಯ ಉಪಾಧ್ಯಕ್ಷೆ ಡಾ.ಪ್ರೀತಾ ರೆಡ್ಡಿ ಮಾತನಾಡಿ, ಆರೋಗ್ಯ ಪರಿಸರ ವ್ಯವಸ್ಥೆ ಗಾಗಿ ರಾಷ್ಟ್ರವು ಒಗ್ಗೂಡಬೇಕು ಮತ್ತು ಏಕೀಕೃತ ದೃಷ್ಟಿಕೋನ ಹೊಂದಿರಬೇಕು. ಇದರಿಂದ ನಾವು ಎನ್ಸಿಡಿಗಳನ್ನು ನಿಜವಾದ ಅರ್ಥದಲ್ಲಿ ಎದುರಿಸಬಹುದು. ಕ್ಯಾನ್ಸರ್, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಸ್ಥೂಲಕಾಯತೆಯ ಹೆಚ್ಚುತ್ತಿರುವ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು, ತಡೆಗಟ್ಟಲು ಮತ್ತು ಹಿಮ್ಮೆಟ್ಟಿಸಲು ತಕ್ಷಣದ ಕ್ರಮಗಳಾಗಬೇಕು ಎಂದು ಹೇಳಿದ್ದಾರೆ.
ಅಪೊಲೊ ಆಸ್ಪತ್ರೆಗಳ ಅಧ್ಯಕ್ಷ ಮತ್ತು ಸಿಇಒ ಡಾ.ಮಧು ಶಶಿಧರ್ ಮಾತನಾಡಿ. ಆರೋಗ್ಯ ರಕ್ಷಣೆಗಾಗಿ ರೋಗ ಪತ್ತೆ ಹೆಚ್ಚಬೇಕು. ರೋಗನಿರ್ಣಯದ ನಿಖರತೆ ಮತ್ತು ರೋಗಿ ಕೇಂದ್ರಿತ ಚಿಕಿತ್ಸಾ ವಿಧಾನಗಳನ್ನು ಹೆಚ್ಚಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಎಂದು ಹೇಳಿದ್ದಾರೆ.