ವಾಷಿಂಗ್ಟನ್: ಜಗತ್ತನ್ನು ಕಾಡುತ್ತಿರುವ ಮಹಾ ರೋಗಗಳಲ್ಲಿ ಒಂದಾದ ಕ್ಯಾನ್ಸರ್ ಅದೆಷ್ಟೋ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಕೆಲವೇ ಕೆಲವು ಕ್ಯಾನ್ಸರ್‌ಗಳಿಗೆ ಈಗ ಚಿಕಿತ್ಸೆ ಇದೆಯಾದರೂ ಯಾವುದೂ ಪರಿಪೂರ್ಣವಾಗಿಲ್ಲ. ಅದರಲ್ಲೂ ರಕ್ತ, ಮೆದುಳು ಮತ್ತಿತರ ಭಾಗಗಳ ಕ್ಯಾನ್ಸರ್‌ಗಳು ರೋಗಿಗಳ ಬದುಕಿಗೆ ಮಾರಕವಾಗಿಯೇ ಉಳಿದಿವೆ. ಕೀಮೊ ಥೆರಪಿ, ರೇಡಿಯೊ ಥೆರಪಿಗಳ ಯಾತನೆಗಳ ನಡುವೆ ಬದುಕು ಬಾಳಬೇಕಾಗುತ್ತಿದೆ.
ಹೀಗೆ ನಿರಂತರ ನೋವು, ಯಾತನೆ ಮತ್ತು ಸಾವಿನ ಭಯದಲ್ಲೇ ಬದುಕುವ ಕ್ಯಾನ್ಸರ್ ರೋಗಿಗಳಿಗೆ ನಿಜಕ್ಕೂ ಆಶಾಕಿರಣವಾಗುವ ದೊಡ್ಡ ಬೆಳವಣಿಗೆಯೊಂದು ಅಮೆರಿಕದಲ್ಲಿ ನಡೆದಿದೆ. ವಿಶ್ವ ಮೆದುಳಿನ ಕ್ಯಾನ್ಸರ್ ದಿನ (world brain tumor day)ದಂದೇ (ಜೂನ್ 8) ಈ ವಿಷಯ ಬೆಳಕಿಗೆ ಬಂದಿದೆ.
ಗುದನಾಳದ ಕ್ಯಾನ್ಸರ್‌ನಿಂದ ಬಳಲಸುತ್ತಿದ್ದ 18 ರೋಗಿಗಳಿಗೆ ಕಳೆದ ಆರು ತಿಂಗಳಿನಿಂದ ಪ್ರಾಯೋಗಿಕ ನೆಲೆಯಲ್ಲಿ ಔಷಧವೊಂದನ್ನು ನೀಡಲಾಗುತ್ತಿತ್ತು. ಅದರ ಹೆಸರು ಡೋಸ್ಟರ್‌ಲಿಮಬ್ (Dostarlimab). ಇದೀಗ ಕೊನೆಯ ಹಂತದಲ್ಲಿ ಅವರೆಲ್ಲರನ್ನೂ ಪರೀಕ್ಷೆಗೆ ಒಳಪಡಿಸಿದಾಗ ಅವರಲ್ಲಿ ಕ್ಯಾನ್ಸರ್‌ನ ಕುರುಹುಗಳೇ ಇರಲಿಲ್ಲ. ಇದ್ದ ಕ್ಯಾನ್ಸರ್ ಗಡ್ಡೆಗಳು ಮಾಯವಾಗಿದ್ದವು. ಎಲ್ಲರೂ ಕ್ಯಾನ್ಸರ್ ಮುಕ್ತರಾಗಿರುವುದನ್ನು ತಿಳಿದಾಗ ಅವರು ಕುಣಿದು ಕುಪ್ಪಳಿಸಿದ್ದಾರೆ. ಇದು ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಮೈಲುಗಲ್ಲೆಂದು ದಾಖಲಾಗಿದೆ.
ಹೇಗೆ ಕೆಲಸ ಮಾಡುತ್ತದೆ?
ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಈ ಬಗ್ಗೆ ವಿವರವಾದ ಮಾಹಿತಿ ಪ್ರಕಟಗೊಂಡಿದೆ. ಅವರೆಲ್ಲರಿಗೆ ನೀಡಲಾಗಿದ್ದ ಡೋಸ್ಟರ್‌ಲಿಮಬ್ ಎನ್ನುವ ಔಷಧ ಹೇಗೆ ಕೆಲಸ ಮಾಡುತ್ತದೆ ಎನ್ನುವ ಬಗ್ಗೆ ಡಾ. ಆಂಡ್ರೆಯ ವಿವರಣೆ ನೀಡಿದ್ದಾರೆ. ʻದೇಹದ ನೈಸರ್ಗಿಕವಾದ ಪ್ರತಿರೋಧಕ ಶಕ್ತಿಯನ್ನು ಈ ಔಷಧ ಉದ್ದೀಪನಗೊಳಿಸುತ್ತದೆ. ಇದರಿಂದ ದೇಹದಲ್ಲಿರುವ ಕ್ಯಾನ್ಸರ್ ಕಣಗಳನ್ನು ಹೆಚ್ಚಿನ ಅಡ್ಡಪರಿಣಾಮಗಳಿಲ್ಲದೆ ನಾಶ ಮಾಡಲು ನಮಗೆ ಸಾಧ್ಯವಾಗಿದೆʼ ಎಂಬುದು ಅವರ ಮಾತು.
ಈ ಸಂಶೋಧನೆ ಮತ್ತೊಂದು ಪ್ರಮುಖ ವಿಷಯದ ಮೇಲೆ ಬೆಳಕು ಚೆಲ್ಲಿದ್ದು, ಈಗಾಗಲೇ ಹೇಳಿದಂತೆ ಹೆಚ್ಚಿನ ಅಡ್ಡಪರಿಣಾಮಗಳಿಲ್ಲದೆ ಈ ರೋಗಿಗಳು ಗುಣಮುಖರಾಗಿ ತಮ್ಮ ಎಂದಿನ ಜೀವನಕ್ಕೆ ಮರಳಿರುವುದು ವಿಶೇಷವೆನಿಸಿದೆ. ಶೇ. 3-5ರಷ್ಟು ರೋಗಿಗಳು ಮಾತ್ರವೇ ಈ ಔಷಧದಿಂದ ಪಾರ್ಶ್ವ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ. ಇಲ್ಲದಿದ್ದರೆ, ಕ್ಯಾನ್ಸರ್ ಚಿಕಿತ್ಸೆಯ ನಂತರ ಬಹಳಷ್ಟು ರೋಗಿಗಳು ತೀವ್ರವಾದ ಅಡ್ಡಪರಿಣಾಮಗಳಿಗೆ ತುತ್ತಾಗುವುದು ನಿರೀಕ್ಷಿತ ಎನ್ನುವ ಹಾಗಿತ್ತು.
ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ (ಐಸಿಎಂಆರ್) ವರದಿಯ ಪ್ರಕಾರ, 2020ರಲ್ಲಿ ಕರುಳು ಮತ್ತು ಗುದದ ಕ್ಯಾನ್ಸರ್‌ನ ರೋಗಿಗಳ ಸಂಖ್ಯೆ ಕ್ರಮವಾಗಿ 8 ಮತ್ತು 9ನೇ ಸ್ಥಾನದಲ್ಲಿದೆ. ಮಧುಮೇಹ, ಹೃದ್ರೋಗದಂಥ ತೊಂದರೆಗಳು, ಜೀವನಶೈಲಿಯಲ್ಲಿನ ದೋಷಗಳು, ಏಡ್ಸ್ ಕಾಯಿಲೆ, ಅಪಥ್ಯವಾದ ಆಹಾರಕ್ರಮ, ಧೂಮಪಾನ ಮತ್ತು ಅತಿ ತೂಕದಂಥ ಸಮಸ್ಯೆಗಳಿಂದ ಕ್ಯಾನ್ಸರ್ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಐಸಿಎಂಆರ್ ಹೇಳಿದೆ.
ಇದನ್ನೂ ಓದಿ| ಛವಿ ಮಿತ್ತಲ್ ಗೆ ಬ್ರೆಸ್ಟ್ ಕ್ಯಾನ್ಸರ್: ಪಾಸಿಟಿವ್ ಪೋಸ್ಟ್ ಹಂಚಿಕೊಂಡ ನಟಿ