ನವದೆಹಲಿ: ಕಳೆದ ವರ್ಷದ ಜುಲೈನಲ್ಲಿ ಸಿಯಾಚಿನ್‌ನಲ್ಲಿ ಹುತಾತ್ಮನಾದ ಕ್ಯಾಪ್ಟನ್ ಅನ್ಶುಮಾನ್ ಸಿಂಗ್ (Captain Anshuman Singh) ಅವರಿಗೆ ಮರಣೋತ್ತರವಾಗಿ ದೇಶದ ಎರಡನೇ ಗ್ಯಾಲಂಟ್ರಿ ಪ್ರಶಸ್ತಿಯಾದ ಕೀರ್ತಿ ಚಕ್ರ ಪ್ರಶಸ್ತಿ (Kirti Chakra Award) ಘೋಷಿಸಲಾಗಿದ್ದು, ಪತಿಯ ಪರವಾಗಿ ಅವರ ಪತ್ನಿ ಸ್ಮೃತಿ ಸಿಂಗ್ (Smriti Singh) ಅವರು ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಸ್ಮೃತಿ ಸಿಂಗ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೀರ್ತಿ ಚಕ್ರ ಪ್ರಶಸ್ತಿ ನೀಡಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾಧ್ಯಮದವರೊಂದಿಗೆ ಸ್ಮೃತಿ ಸಿಂಗ್ ಮಾತನಾಡಿದ್ದು, ಪತಿಯ ಜತೆ ಕಳೆದ ದಿನಗಳನ್ನು ನೆನೆದು ಕಣ್ಣೀರು ಹಾಕಿದ್ದಾರೆ.
“ನಾವಿಬ್ಬರು ಪ್ರೀತಿಸುತ್ತಿದ್ದೆವು. 2023ರ ಫೆಬ್ರವರಿಯಲ್ಲಿ ನಮ್ಮ ಮದುವೆಯಾಗಿತ್ತು. ಇದಾದ ಬಳಿಕ ಅನ್ಶುಮಾನ್ ಸಿಂಗ್ ಸೇನೆಯ ಕರ್ತವ್ಯಕ್ಕಾಗಿ ಗಡಿಗೆ ತೆರಳಿದ್ದರು. ನಾನು ಮತ್ತು ಅನ್ಶುಮಾನ್ ಸಿಂಗ್ 2023ರ ಜುಲೈ 18ರಂದು ದೂರವಾಣಿ ಮೂಲಕ ಮಾತನಾಡಿದ್ದೆವು. ಅವರು ನಮ್ಮ ಬಗ್ಗೆ ನೂರು ಕನಸು ಕಂಡಿದ್ದರು. ಮನೆ ಕಟ್ಟಿಸುವುದು, ಮಗು, ಇಬ್ಬರೂ 50 ವರ್ಷ ಜತೆಯಾಗಿ ಇರೋಣ ಎಂದೆಲ್ಲ ಅವರು ಹೇಳಿದ್ದರು. ಆದರೆ, ಜುಲೈ 19ರಂದು ಬೆಳಗ್ಗೆ ನಮಗೆ ಕರೆ ಬಂತು. ಅನ್ಶುಮಾನ್ ಸಿಂಗ್ ಇನ್ನಿಲ್ಲ ಎಂಬ ಸುದ್ದಿ ತಿಳಿದು ಆಘಾತವಾಯಿತು” ಎಂಬುದಾಗಿ ಸ್ಮೃತಿ ಸಿಂಗ್ ಸ್ಮರಿಸಿದ್ದಾರೆ.
ಮೊದಲ ನೋಟದಲ್ಲೇ ಪ್ರೀತಿ
ಪ್ರೀತಿಯ ಬಗ್ಗೆಯೂ ಸ್ಮೃತಿ ಸಿಂಗ್ ಮಾತನಾಡಿದ್ದಾರೆ. “ನಾವು ಮೊದಲು ಭೇಟಿಯಾಗಿದ್ದು ಕಾಲೇಜಿನಲ್ಲಿ. ನಮಗೆ ಮೊದಲ ನೋಟದಲ್ಲಿಯೇ ಪ್ರೀತಿಯಾಗಿತ್ತು. ಒಂದು ತಿಂಗಳ ನಂತರ ಅನ್ಶುಮಾನ್ ಸಿಂಗ್ ಸಶಸ್ತ್ರ ಪಡೆಗಳ ಮೆಡಿಕಲ್ ಕಾಲೇಜ್‌ಗೆ (AFMC) ಆಯ್ಕೆಯಾದರು. ಆದರೂ, ನಾವು ದೂರವಾಣಿಯಲ್ಲಿ ಮಾತನಾಡುತ್ತಿದ್ದೆವು. ಇಬ್ಬರ ಮಧ್ಯೆ ಪ್ರೀತಿ ಚಿಗುರೊಡೆಯಿತು. ಎಂಟು ವರ್ಷಗಳ ಪ್ರೀತಿಯ ಬಳಿಕ ನಾವಿಬ್ಬರು ಮದುವೆಯಾದವು. ಮದುವೆಯಾದ ಕೆಲವೇ ದಿನಗಳಲ್ಲಿ ಅವರು ನನ್ನನ್ನು ಅಗಲಿದರು” ಎಂದು ಹೇಳಿದ್ದಾರೆ.
“ಮದುವೆಯಾದ ಎರಡು-ಮೂರು ತಿಂಗಳಲ್ಲಿ ಅವರು ಸಿಯಾಚಿನ್‌ಗೆ ನಿಯೋಜನೆಗೊಂಡರು. ಅವರಿಗೆ ಜೀವನದ ಬಗ್ಗೆ ಅಪಾರ ಪ್ರೀತಿ ಇತ್ತು. ಮನೆ ಕಟ್ಟಿಸಬೇಕು, ನಮ್ಮ ಮಕ್ಕಳನ್ನು ಮುದ್ದಾಡಬೇಕು, 50 ವರ್ಷ ನಾವು ಹೀಗೆಯೇ ಬದುಕಬೇಕು ಎಂದೆಲ್ಲ ಅವರು ಹುತಾತ್ಮನಾಗುವ ಹಿಂದಿನ ದಿನ ಹೇಳಿದ್ದರು. ಆದರೆ, ಮರುದಿನ ಅವರ ಅಗಲಿಕೆಯ ಸುದ್ದಿ ತಿಳಿದು ನನಗೆ ಆಘಾತವಾಯಿತು. ನಾವು 7-8 ಗಂಟೆಗಳವರೆಗೆ ಏನಾಯಿತು ಎಂಬುದನ್ನೇ ಅರಿಯಲು ಆಗಲಿಲ್ಲ” ಎಂದಿದ್ದಾರೆ.
ಕಳೆದ ವರ್ಷ ಏನಾಗಿತ್ತು?
2023ರ ಜುಲೈ 19ರಂದು ಸಿಯಾಚಿನ್‌ನಲ್ಲಿ ಅಗ್ನಿ ದುರಂತ ಸಂಭವಿಸಿತ್ತು. ಬೆಳಗಿನ ಜಾವ ಭಾರತೀಯ ಸೇನೆಯ ಶಸ್ತ್ರಾಸ್ತ್ರಗಳನ್ನು ಇರಿಸುವ ನೆಲೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿತ್ತು. ಫೈಬರ್ ಗ್ಲಾಸ್‌ನ ಕೋಣೆಯಲ್ಲಿ ಸಿಲುಕಿದ್ದ ಹಲವು ಸೈನಿಕರನ್ನು ಕ್ಯಾಪ್ಟನ್ ಅನ್ಶುಮಾನ್ ಸಿಂಗ್ ಅವರು ರಕ್ಷಣೆ ಮಾಡಿದ್ದರು. ಆದರೆ, ರಕ್ಷಣೆ ಮಾಡಿದ ಬಳಿಕ ಅವರೇ ಅಗ್ನಿಯ ಕೆನ್ನಾಲಗೆಗೆ ಸಿಲುಕಿ ಹುತಾತ್ಮರಾಗಿದ್ದರು.
ಇದನ್ನೂ ಓದಿ: 5 Soldiers Killed: ಲಡಾಕ್‌ನ ನದಿಯಲ್ಲಿ ಸೇನಾ ವಾಹನ ಮಗುಚಿ ಭೀಕರ ದುರಂತ; ಐವರು ಯೋಧರು ಹುತಾತ್ಮ