ಚೆನ್ನೈ: ಎರಡು ಜಿಲ್ಲೆಗಳ ಸುಮಾರು 686.406 ಚದರ ಕಿಲೋಮೀಟರ್ ವ್ಯಾಪ್ತಿಯ ಕಾಡನ್ನು ತಮಿಳುನಾಡು ಸರ್ಕಾರ ʼಕಾವೇರಿ ದಕ್ಷಿಣ ವನ್ಯಜೀವಿ ಧಾಮʼ ಎಂದು ಘೋಷಿಸಿದೆ.
ಕರ್ನಾಟಕಕ್ಕೆ ಸಮೀಪವಿರುವ ಕೃಷ್ಣಗಿರಿ ಹಾಗೂ ಧರ್ಮಪುರಿ ಜಿಲ್ಲೆಗಳ 686.406 ಚದರ ಕಿಲೋಮೀಟರ್ ವ್ಯಾಪ್ತಿಯ ಕಾಡನ್ನು ತಮಿಳುನಾಡು ಸರ್ಕಾರ ಸಂರಕ್ಷಿತ ಅರಣ್ಯವೆಂದು ಘೋಷಿಸಿದೆ. ಇದು ಕಾಡಾನೆಗಳ ಪ್ರಮುಖ ವಾಸಸ್ಥಾನವಾಗಿದೆ. ಸುಮಾರು 35 ಜಾತಿಯ ಸಸ್ತನಿಗಳು, 238 ಜಾತಿಯ ಹಕ್ಕಿಗಳು ಇಲ್ಲಿವೆ.
ಇಲ್ಲಿರುವ ಕಾವೇರಿ ನದಿ ನೀರನ್ನು ಅವಲಂಬಿಸಿರುವ ಲೇತ್ಸ್ ಮೃದುಚಿಪ್ಪಿನ ಆಮೆಗಳು, ದೈತ್ಯ ಅಳಿಲುಗಳು, ಮೃದು ಮೈಯ ನೀರುನಾಯಿಗಳು, ಮಾರ್ಸ್ ಮೊಸಳೆ, ನಾಲ್ಕು ಕೊಂಬಿನ ಜಿಂಕೆ, ಮೀನಿನ ಹದ್ದು ಮುಂತಾದ ಅಪರೂಪದ ಜಾತಿಯ ವನ್ಯಜೀವಿಗಳ ಉಳಿವಿಗೆ ಈ ಕ್ರಮದಿಂದ ನೆರವಾಗಲಿದೆ ಎಂದು ಸರ್ಕಾರ ತಿಳಿಸಿದೆ.
ಕೃಷ್ಣಗಿರಿ ಜಿಲ್ಲೆಯ ಅಂಚೆಟ್ಟಿ ತಾಲೂಕು, ಧರ್ಮಪುರಿ ಜಿಲ್ಲೆಯ ಪೆನ್ನಾಗರಂ, ಪಾಲಕೋಡ್ ತಾಲೂಕುಗಳನ್ನು ಸೇರಿಸುವ ಈ ನೂತನ ವನ್ಯಜೀವಿ ಧಾಮವು ತಮಿಳುನಾಡಿನ ಕಾವೇರಿ ಉತ್ತರ ವನ್ಯಜೀವಿ ಧಾಮವನ್ನು ಕರ್ನಾಟಕದ ಕಾವೇರಿ ವನ್ಯಜೀವಿ ಧಾಮದೊಂದಿಗೆ ಬೆಸೆದು, ಕಾನನ ಪ್ರದೇಶವನ್ನು ವಿಸ್ತಾರಗೊಳಿಸಲಿದ್ದು, ಇದರಿಂಧ ವನ್ಯಜೀವಿ ಸಂರಕ್ಷಣೆಗೆ ತುಂಬಾ ನೆರವಾಗಲಿದೆ.
ಇದನ್ನೂ ಓದಿ | ಹೆಸರಘಟ್ಟ ಹುಲ್ಲುಗಾವಲು | ಸದ್ಯಕ್ಕಿಲ್ಲ ʼಸಂರಕ್ಷಿತ ಪ್ರದೇಶʼ ಘೋಷಣೆ: ಸಿಎಂ ನೇತೃತ್ವದ ಸಭೆಯಲ್ಲಿ ನಿರ್ಧಾರ
ಈ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ. ʼʼತಮಿಳುನಾಡಿನ 17ನೇ ವನ್ಯಜೀವಿಧಾಮವನ್ನು ಘೋಷಿಸಲು ಹರ್ಷಿಸುತ್ತೇನೆ. ಈ ಮಹತ್ವದ ಹೆಜ್ಜೆಯು ರಾಜ್ಯದ ವನ್ಯವೈವಿಧ್ಯವನ್ನು ರಕ್ಷಿಸಲು ನೆರವಾಗಲಿದೆʼʼ ಎಂದಿದ್ದಾರೆ.
ʼʼಇದೊಂದು ವನ್ಯಜೀವಿ ಸ್ವರ್ಗ. ಪ್ರಾಣಿಗಳು ಹಾಗೂ ಪಕ್ಷಿಗಳ ಬಹು ವೈವಿಧ್ಯವನ್ನು ಹೊಂದಿದೆ. ಆನೆಗಳು ಸೇರಿದಂತೆ ಹಲವು ಪ್ರಾಣಿಗಳು ಬಹು ವಿಸ್ತಾರವಾದ ಕಾಡನ್ನು ಅಪೇಕ್ಷಿಸುತ್ತವೆ. ಆದರೆ ತಮಿಳುನಾಡು ಹಾಗೂ ಕರ್ನಾಟಕಗಳಲ್ಲಿ ಕೆಲವು ಪ್ರದೇಶಗಳು ಈ ಸಂರಕ್ಷಿತ ವಲಯದಿಂದ ಹೊರಗಿದ್ದವು. ಹೊಸ ಧಾಮವು ಇವನ್ನೆಲ್ಲ ಒಂದೆಡೆ ಸೇರಿಸಲಿದೆʼʼ ಎಂದು ಪರಿಸರ ಮತ್ತು ಅರಣ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಪ್ರಿಯಾ ಸಾಹು ಹೇಳಿದ್ದಾರೆ.
ನೂತನ ವನ್ಯಜೀವಿಧಾಮದಲ್ಲಿ ಕೃಷ್ಣಗಿರಿ ಜಿಲ್ಲೆಯ 15 ಸಂರಕ್ಷಿತ ಅರಣ್ಯಗಳು, ಧರ್ಮಪುರಿ ಜಿಲ್ಲೆಯ 5 ಸಂರಕ್ಷಿತ ಅರಣ್ಯಗಳು ಬರಲಿವೆ. ನೂತನ ಧಾಮದಿಂದಾಗಿ ಆನೆಗಳು, ಚಿರತೆಗಳು, ಹುಲಿಗಳ ಕಾರಿಡಾರ್‌ಗಳು ವಿಸ್ತರಿಸಲಿವೆ. ಇದು ನಮ್ಮ ಕರ್ನಾಟಕದ ಮಲೆ ಮಹದೇಶ್ವರ ವನ್ಯಜೀವಿ ಧಾಮ, ಬಿಳಿಗಿರಿ ರಂಗನ ಹುಲಿ ಸಂರಕ್ಷಿತಾರಣ್ಯ, ಸತ್ಯಮಂಗಲ ಹುಲಿ ಸಂರಕ್ಷಿತಾರಣ್ಯಗಳನ್ನು ಬೆಸೆಯಲಿದೆ.
ಇದನ್ನೂ ಓದಿ | Sunday read | ಈ ಚೆಲುವೆ ವನ್ಯಜೀವಿ ಫೋಟೋಗ್ರಫಿ ಮಾಡಿದಾಗ…