ನವದೆಹಲಿ: ಚೀನಾ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಕೋವಿಡ್ (Covid-19) ಪ್ರಕರಣಗಳು ದಿಢೀರ್‌ನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಬುಧವಾರ, ಪರಿಶೀಲನಾ ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಕೋವಿಡ್ ಪರಿಸ್ಥಿತಿಯನ್ನು ಎದುರಿಸುವ ಬಗ್ಗೆ ಚರ್ಚಿಸಲಾಯಿತು.
ಎಲ್ಲಾ ಕೋವಿಡ್ ಪಾಸಿಟಿವ್ ಪ್ರಕರಣಗಳ ಮಾದರಿಗಳನ್ನು ಸಾಧ್ಯವಾದಷ್ಟು ಪ್ರತಿದಿನವೂ ಗೊತ್ತುಪಡಿಸಿದ INSACOG ಜಿನೋಮ್ ಸೀಕ್ವೆನ್ಸಿಂಗ್ ಲ್ಯಾಬೋರೇಟರೀಸ್(IGSLs)ಗೆ ಕಳುಹಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ರಾಜ್ಯಗಗಳಿಗೆ ಸೂಚಿಸಲಾಯಿತು ಎಂದು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಹೇಳಿದರು.
ಭಾರತವು, ಟೆಸ್ಟ್-ಟ್ರ್ಯಾಕ್-ಟ್ರೀಟ್-ವ್ಯಾಕ್ಸಿನೇಷನ್ ಮತ್ತು ಮಾರ್ಗದರ್ಶಿ ಪಾಲನೆ ಎಂಬ ಐದು ಅಂಶಗಳ ಆಧಾರದ ಮೇಲೆ ಕೋವಿಡ್ ತಡೆಯುವ ಕೆಲಸವನ್ನು ಮಾಡುತ್ತಿದೆ. ಸದ್ಯ ಭಾರತದಲ್ಲಿ ವಾರಕ್ಕೆ ಸರಾಸರಿ 1200 ಕೇಸ್‌ಗಳು ವರದಿಯಾಗುತ್ತಿವೆ. ಸಾರ್ವಜನಿಕ ಆರೋಗ್ಯಕ್ಕೆ ಕೋವಿಡ್ ಸವಾಲು ಜಗತ್ತಿನಾದ್ಯಂತ ಇನ್ನೂ ಮುಂದುವರಿದಿದೆ. ಜಗತ್ತಿನ ಲೆಕ್ಕ ತೆಗೆದುಕೊಂಡರೆ, ವಾರಕ್ಕೆ ಸುಮಾರು 35 ಲಕ್ಷ ಪ್ರಕರಣಗಳು ವರದಿಯಾಗುತ್ತಿವೆ ಎಂದು ರಾಜೇಶ್ ಭೂಷಣ್ ಅವರು ತಿಳಿಸಿದರು.
ಜಪಾನ್, ಅಮೆರಿಕ, ಕೋರಿಯಾ, ಬ್ರೆಜಿಲ್ ಮತ್ತು ಚೀನಾಗಳಲ್ಲಿ ದಿಢೀರ್‌ನೇ ಕೋವಿಡ್ ಪ್ರಕರಣಗಳು ಹೆಚ್ಚಾಗಿವೆ. ಹಾಗಾಗಿ, ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ (INSACOG) ನೆಟ್‌ವರ್ಕ್ ಮೂಲಕ ರೂಪಾಂತರಗಳನ್ನು ಪತ್ತೆಹಚ್ಚಲು ಪಾಸಿಟಿವ್ ಪ್ರಕರಣದ ಮಾದರಿಗಳ ಸಂಪೂರ್ಣ ಜೀನೋಮ್ ಸಿಕ್ವೆನ್ಸ್ ಅನ್ನು ಅನುಸರಿಸುವುದು ಅತ್ಯಗತ್ಯವಾಗಿದೆ ಎಂದು ಅವರು ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಆರೋಗ್ಯ, ಆಯುಷ್, ಫಾರ್ಮಾಸಿಟಿಕಲ್ಸ್, ಬಯೋಟೆಕ್ನಾಲಜಿಯ ಕಾರ್ಯದರ್ಶಿಗಳು, ಐಸಿಎಂಆರ್ ಪ್ರಧಾನ ನಿರ್ದೇಶಕ ರಾಜೀವ್ ಬಾಹ್ಲ್, ನೀತಿ ಆಯೋಗದ ಸದಸ್ಯ ವಿ ಕೆ ಪೌಲ್, ಎನ್‌ಟಿಎಜಿಐ ಚೇರ್ಮನ್ ಎನ್ ಎಲ್ ಅರೋರಾ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಇದನ್ನೂ ಓದಿ | Covid-19 | ಚೀನಾದಲ್ಲಿ ಕೋವಿಡ್ ಉಲ್ಬಣಕ್ಕೆ ಒಮಿಕ್ರಾನ್ ಬಿಎಫ್.9 ವೇರಿಯಂಟ್ ಕಾರಣ!