Site icon Vistara News

ನಿತೀಶ್‌ ಜತೆ ಜಗಳ| ರಾಜ್ಯಸಭೆ ಟಿಕೆಟ್‌ ಕೊಡದ ಬೇಸರ, ಕೇಂದ್ರ ಸಚಿವ ಆರ್‌ಸಿಪಿ ಸಿಂಗ್‌ ಸದ್ಯವೇ ಬಿಜೆಪಿಗೆ ಸೇರ್ಪಡೆ?

RCP SINGH

ನವ ದೆಹಲಿ: ಕೇಂದ್ರ ಸಂಪುಟದಲ್ಲಿ ಉಕ್ಕು ಖಾತೆಯನ್ನು ನೋಡಿಕೊಳ್ಳುತ್ತಿರುವ ಸಚಿವ ಆರ್‌ಸಿಪಿ ಸಿಂಗ್‌ ಅವರು ಸದ್ಯವೇ ಜೆಡಿಯು ಬಿಟ್ಟು ಬಿಜೆಪಿ ಸೇರಲಿದ್ದಾರೆ. ಅವರು ಹೈದರಾಬಾದ್‌ನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂಬ ವದಂತಿ ಹರಡಿತ್ತು. ಆದರೆ, ಬಿಜೆಪಿ ನಾಯಕ ಸುಶೀಲ್‌ ಕುಮಾರ್‌ ಶಿಂಧೆ ಅವರು ಇದನ್ನು ನಿರಾಕರಿಸಿದ್ದರು. ಆದರೆ, ಜೆಡಿಯುನಲ್ಲಿ ಅಸಮಾಧಾನಗೊಂಡಿರುವ ಅವರು ಪಕ್ಷ ಬಿಡುವುದಂತೂ ಪಕ್ಕಾ ಎಂದು ಮೂಲಗಳು ತಿಳಿಸಿವೆ.

ಮಾಜಿ ಐಎಎಸ್‌ ಅಧಿಕಾರಿಯಾಗಿರುವ ಆರ್‌ಸಿಪಿ ಸಿಂಗ್‌ ಅವರನ್ನು ಕೇಂದ್ರ ಸಚಿವ ಸಂಪುಟಕ್ಕೆ ತೆಗೆದುಕೊಂಡಾಗ ಯಾವ ಸದನದ ಸದಸ್ಯರೂ ಆಗಿರಲಿಲ್ಲ. ಅವರನ್ನು ಆರು ತಿಂಗಳ ಒಳಗೆ ಅಂದರೆ ಜುಲೈ ೭ರೊಳಗೆ ಒಂದು ಸದನಕ್ಕಾದರೂ ಸದಸ್ಯರಾಗಬೇಕು. ಆದರೆ, ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಯು ಅವರಿಗೆ ಟಿಕೆಟ್‌ ನೀಡಿಲ್ಲ. ಹೀಗಾಗಿ ಅವರು ಸಂಪುಟದಲ್ಲಿ ಮುಂದುವರಿಯಲು ಕಷ್ಟವಾಗಲಿದೆ. ಹೀಗಾಗಿ ಅವರು ಮುನಿಸಿಕೊಂಡು ಬಿಜೆಪಿ ಸೇರಲಿದ್ದಾರೆ ಎಂಬ ಮಾಹಿತಿ ಇದೆ.

ಜೆಡಿಯುನಲ್ಲಿ ಆರ್‌ಸಿಪಿ ಸಿಂಗ್‌ ಅವರ ಪರಿಸ್ಥಿತಿ ಸ್ವಲ್ಪ ಕಷ್ಟದಲ್ಲಿದೆ ಎನ್ನುವುದು ನಿಜ. ಆದರೆ, ಅವರು ತಕ್ಷಣವೇ ಬಿಜೆಪಿ ಸೇರುವ ಸಾಧ್ಯತೆಗಳು ಕಡಿಮೆ ಇದೆ. ಯಾಕೆಂದರೆ, ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿ ಮಿತ್ರ ಪಕ್ಷಗಳಾಗಿರುವುದರಿಂದ ಪಕ್ಷಾಂತರದಿಂದ ಸಮಸ್ಯೆ ಎದುರಾಗಬಹುದು. ಅವರು ಬಿಜೆಪಿ ಸೇರುವುದಾದರೂ ಇನ್ನು ಮೂರ್ನಾಲ್ಕು ತಿಂಗಳ ಬಳಿಕವಷ್ಟೇ ಎಂದು ಬಿಜೆಪಿ ವಕ್ತಾರರಾಗಿರುವ ಸಂತೋಷ್‌ ಪಾಠಕ್‌ ಹೇಳಿದ್ದಾರೆ. ಆರ್‌ಸಿಪಿ ಸಿಂಗ್‌ ಅವರು ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ನಾಯಕರನ್ನು ಸ್ವಾಗತಿಸುವ ಚಿತ್ರಗಳು ವೈರಲ್‌ ಆಗಿದ್ದರೂ ಅವರು ಪಕ್ಷ ಸೇರಿಲ್ಲ ಎಂದೇ ಬಿಜೆಪಿ ವಾದಿಸುತ್ತಿದೆ.

ಸಿಂಗ್‌ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನಡುವಿನ ಸಂಬಂಧ ಹಳಸಿದೆ ಎಂದು ಹೇಳಲಾಗಿದೆ. ಆದರೆ, ಸಿಂಗ್‌ ಅವರ ಬಗ್ಗೆ ಕೇಂದ್ರ ಸಂಪುಟದಲ್ಲಿ ಒಳ್ಳೆಯ ಮಾತಿದೆ. ಈ ಹಿಂದೆ ಶಿವಸೇನೆಯಿಂದ ಹೊರಬಿದ್ದ ಸುರೇಶ್‌ ಪ್ರಭು ಅವರನ್ನು ಬಿಜೆಪಿ ತನ್ನೊಳಗೆ ಸೇರಿಸಿಕೊಂಡು ರೈಲ್ವೇ ಮಂತ್ರಿಯನ್ನಾಗಿ ಮಾಡಿದಂತೆ ಇಲ್ಲೂ ಮಾಡಬಹುದು ಎಂಬ ಅಭಿಪ್ರಾಯವಿದೆ. ಅದರೆ, ಈ ಕಾರಣದಿಂದ ಜೆಡಿಯು ಜತೆಗಿನ ಸಂಬಂಧ ಹಾಳಾಗುವ ಅಪಾಯವಿರುವುದರಿಂದ ಸದ್ಯಕ್ಕೆ ಸುಮ್ಮನಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ| ಜಾರ್ಜ್‌ ಆಪ್ತ, ಕುಂದಾಪುರದ ಅನಿಲ್‌ ಹೆಗ್ಡೆಗೆ ರಾಜ್ಯಸಭೆ ಟಿಕೆಟ್‌ ನೀಡಿದ ಜೆಡಿಯು

Exit mobile version