Site icon Vistara News

ವಿಸ್ತಾರ Explainer | ಮನಮೋಹಕ ಸೆಂಟ್ರಲ್ ವಿಸ್ಟಾ ಅವೆನ್ಯೂ! ಉದ್ಘಾಟನೆಗೆ ಕ್ಷಣಗಣನೆ

Central Vista

ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯ ಒಂದು ಭಾಗವಾಗಿರುವ ಸೆಂಟ್ರಲ್ ವಿಸ್ಟಾ ಅವೆನ್ಯೂ(ರಾಜಪಥ)ವನ್ನು ಸೆ.8, ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಲಿದ್ದಾರೆ. ಸೆಂಟ್ರಲ್ ವಿಸ್ಟಾಗೆ 2019ರಲ್ಲಿ ಚಾಲನೆ ನೀಡಲಾಗಿದ್ದು, 2026ರಲ್ಲಿ ಇಡೀ ಪ್ರಾಜೆಕ್ಟ್ ಪೂರ್ಣಗೊಳ್ಳಲಿದೆ. ರಾಷ್ಟ್ರಪತಿ ಭವನ, ಹೊಸ ಪಾರ್ಲಿಮೆಂಟ್ ಭವನ, ಮರು ಬಳಕೆಯಾಗಲಿರುವ ನಾರ್ಥ್ ಮತ್ತು ಸೌಥ್ ಬ್ಲಾಕ್, ಹಳೆ ಪಾರ್ಲಿಮೆಂಟ್ ಹಾಗೂ ಇಂಡಿಯಾ ಗೇಟ್ ಸೆಂಟ್ರಲ್ ವಿಸ್ಟಾ ಆಕರ್ಷಣೆಗಳಾಗಿರಲಿವೆ. ಸೆಂಟ್ರಲ್ ವಿಸ್ಟಾ 3.2 ಕಿ.ಮೀ. ಉದ್ದ ಜಾಗದಲ್ಲಿ ಹರಡಿಕೊಂಡಿದೆ. ಒಟ್ಟು 13,450 ಕೋಟಿ ರೂ. ವೆಚ್ಚದಲ್ಲಿ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಾಗಿದೆ.

ನಾಳೆ(ಸೆ.8) ಉದ್ಘಾಟನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೆಂಟ್ರಲ್ ವಿಸ್ಟಾ ಪುನರಾಭಿವೃದ್ದಿ ಯೋಜನೆಯ ಫುಲ್ ಡಿಟೇಲ್ಸ್ ಇಲ್ಲಿದೆ…

ಏನಿದು ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆ?
ಸೆಂಟ್ರಲ್ ವಿಸ್ಟಾ ಪ್ರದೇಶವನ್ನು ಪುನರಾಭಿವೃದ್ಧಿಪಡಿಸುವ ಪ್ರಸ್ತಾಪವನ್ನು ಕೇಂದ್ರ ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸರ್ಕಾರದ ಮುಂದೆ ಇಟ್ಟಿತು. ರಾಷ್ಟ್ರಪತಿ ಭವನದ ರಾಜಪಥದಿಂದ ಇಂಡಿಯಾ ಗೇಟ್‌ದವರೆಗಿನ 3 ಕಿ.ಮೀ. ಉದ್ದದ ಪ್ರದೇಶವನ್ನು ಮೇಲ್ದರ್ಜೆಗೇರಿಸುವುದು ಈ ಪ್ರಾಜೆಕ್ಟ್ ಉದ್ದೇಶವಾಗಿದೆ. ಈಗ ಇರುವ ಸಂಸತ್ ಭವನದ ಪಕ್ಕದಲ್ಲೇ ತ್ರಿಕೋನಾಕಾರದಲ್ಲಿ ಪಾರ್ಲಿಮೆಂಟ್ ಕಟ್ಟಡ ಮತ್ತು ಕೇಂದ್ರ ಸರ್ಕಾರದ ಕಚೇರಿಗಳನ್ನು ನಿರ್ಮಾಣ ಮಾಡಲಾಗುತ್ತದೆ. ಇದೇ ಪ್ರಾಜೆಕ್ಟ್‌ನಲ್ಲಿ ಸೆಂಟ್ರಲ್ ವಿಸ್ಟಾ ಅವೆನ್ಯೂ(ರಾಜಪಥ), ನಾರ್ತ್ ಮತ್ತು ಸೌತ್ ಬ್ಲಾಕ್‌ಗಳನ್ನು ಮ್ಯೂಸಿಯಂ ಆಗಿ ಅಭಿವೃದ್ಧಿಪಡಿಸಲಾಗುತ್ತಿದೆ. 87 ಅಂತಸ್ತಿನ ಬಿಲ್ಡಿಂಗ್ ನಿರ್ಮಾಣ ಮಾಡಲಾಗುತ್ತಿದ್ದು, ಇದರಲ್ಲಿ ಹಲವು ಇಲಾಖೆಗಳ ಸಚಿವಾಲಯಗಳಿರಲಿವೆ. ಈ ಪ್ರಾಜೆಕ್ಟ್‌ಗಾಗಿ ನಿರ್ಮಾಣ ಭವನ, ಕೃಷಿ ಭವನ ಮತ್ತು ವಿಜ್ಞಾನ ಭವನಗಳನ್ನು ನಾಶಪಡಿಸಲಾಗಿದೆ.

ಈ ಯೋಜನೆಯ ಅಗತ್ಯವೇನಿತ್ತು?
ಅತ್ಯುತ್ತಮ ಸಾರ್ವಜನಿಕ ಸೌಲಭ್ಯಗಳು, ಸವಲತ್ತುಗಳು ಮತ್ತು ಪಾರ್ಕಿಂಗ್ ಸೌಲಭ್ಯಕ್ಕಾಗಿ ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿಯು ಅತ್ಯಗತ್ಯವಾಗಿತ್ತು. ಈ ವಿಸ್ತರಣಾ ಯೋಜನೆಯ ಭಾಗವಾಗಿ ಹೊಸ ಸಂಸತ್ತಿನ ಕಟ್ಟಡ ಮತ್ತು ಕೇಂದ್ರ ಸಚಿವಾಲಯಗಳಿರುತ್ತವೆ. ಈಗಿರುವ ಪಾರ್ಲಿಮೆಂಟ್ ಭವನದಲ್ಲಿ 545 ಸಂಸದರ ಕುಳಿತುಕೊಳ್ಳಬಹುದು. ಹೊಸ ಸಂಸತ್ತು ಭವನದಲ್ಲಿ 900 ಸಂಸದರು ಕುಳಿತುಕೊಳ್ಳಬಹುದು. ಆಡಳಿತಾತ್ಮಕ ಅಗತ್ಯಗಳನ್ನು ಪೂರೈಸುವುದರ ಜತೆಗೆ, ಸೆಂಟ್ರಲ್ ವಿಸ್ಟಾವನ್ನು ಆಕರ್ಷಣೀಯ ಪ್ರವಾಸೋದ್ಯಮ ಕೇಂದ್ರವಾಗಿ ರೂಪಿಸುವ ಉದ್ದೇಶವಿದೆ.

ಸೆಂಟ್ರಲ್ ವಿಸ್ಟಾ ಅವೆನ್ಯೂ
ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗೆ ಇರುವ ಸೆಂಟ್ರಲ್ ವಿಸ್ಟಾ ಅವೆನ್ಯೂವನ್ನು ರಿಪಬ್ಲಿಕ್ ಡೇ ಪರೇಡ್ ಮತ್ತು ಇತರ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲಾಗುತ್ತದೆ. ಪ್ರಾಜೆಕ್ಟ್‌ನ ಭಾಗವಾಗಿ ಸೆಂಟ್ರಲ್ ವಿಸ್ಟಾ ಅವೆನ್ಯೂ ಪುನರಾಭಿವೃದ್ಧಿ ಪ್ರಾಜೆಕ್ಟ್ ಕೆಲಸವು 2021ರ ಫೆಬ್ರವರಿ 4ರಿಂದ ಶುರುವಾಯಿತು. ಇಂಡಿಯಾ ಗೇಟ್ ಸುತ್ತ ಇದ್ದ ಹುಲ್ಲುಹಾಸು ತೆಗೆಯಲಾಯಿತು. ಮೂಲ ಸೆಂಟ್ರಲ್ ವಿಸ್ಟಾ ಅವೆನ್ಯೂ ಪಟ್ಟಿಯು ಅನೇಕ ಬದಲಾವಣೆಗೊಳಪಡಲಿದೆ.

ಹೊಸ ನಿರ್ಮಾಣಗಳು
ಹೊಸ ಸಂಸತ್ತು ಭವನ, ಸೆಂಟ್ರಲ್ ವಿಸ್ಟಾ ಅವೆನ್ಯೂ(ರಾಜಪಥ), ಕಾಮನ್ ಸೆಂಟ್ರಲ್ ಸಚಿವಾಲಯ, ಸೆಂಟ್ರಲ್ ಕಾನ್ಫರೆನ್ಸ್ ಹಾಲ್, ಉಪ ರಾಷ್ಟ್ರಪತಿಗಳಿಗೆ ಹೊಸ ಕಚೇರಿ ಮತ್ತು ನಿವಾಸ, ಪ್ರಧಾನಿಗಳ ಹೊಸ ಕಚೇರಿ ಮತ್ತು ನಿವಾಸ, ಐಜಿಎನ್‌ಸಿಎಗೆ ಹೊಸ ಸೌಲಭ್ಯಗಳು ಸೇರ್ಪಡೆಯಾಗಲಿವೆ.

ಮರು ಬಳಕೆಯ ಕಟ್ಟಡಗಳು
ಹಳೆಯ ಸಂಸತ್ತು ಭವನ, ನಾರ್ತ್ ಮತ್ತ ಸೌತ್ ಬ್ಲಾಕ್, ಪ್ರೆಸಿಡೆನ್ಷಿಯಲ್ ಗಾರ್ಡನ್ಸ್

ಯಥಾಸ್ಥಿಯಲ್ಲಿರುವ ಕಟ್ಟಡಗಳು
ರಾಷ್ಟ್ರಪತಿ ಭವನ, ಇಂಡಿಯಾ ಗೇಟ್, ರಾಷ್ಟ್ರೀಯ ಯುದ್ಧ ಸ್ಮಾರಕ, ರೈಲ್ ಭವನ ಮತ್ತು ವಾಯು ಭವನ.

ನೆಲಸಮವಾಗಲಿರುವ ಕಟ್ಟಡಗಳು
ನ್ಯಾಷನಲ್ ಆರ್ಚೀವ್ ಬಿಲ್ಡಿಂಗ್, ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್, ಉಪರಾಷ್ಟ್ರಪತಿ ಭವನ, ನ್ಯಾಷನಲ್ ಮ್ಯೂಸಿಯಮ್, ಶಾಸ್ತ್ರಿ ಭವನ, ವಿಜ್ಞಾನ ಭವನ, ಕೃಷಿ ಭವನ, ನಿರ್ಮಾಣ ಭವನ, ಉದ್ಯೋಗ ಭವನ, ರಕ್ಷಾ ಭವನ, ನೆಹರು ಭವನ.

ರಾಜಪಥ ಅಲ್ಲ ಕರ್ತವ್ಯಪಥ
ರಾಜಪಥ (Rajpath) ಹಾಗೂ ನೂತನ ಸಂಸತ್‌ ಭವನ “ಸೆಂಟ್ರಲ್‌ ವಿಸ್ಟಾ”ದ ಹುಲ್ಲುಹಾಸು ಪ್ರದೇಶಕ್ಕೆ ಕೇಂದ್ರ ಸರ್ಕಾರವು “ಕರ್ತವ್ಯ ಪಥ” (Kartavya Path) ಎಂದು ನಾಮಕರಣ ಮಾಡಲು ತೀರ್ಮಾನಿಸಿದೆ. ಬ್ರಿಟಿಷರ ಕಾಲದ ಸಂಪ್ರದಾಯ, ಚಿನ್ಹೆ, ಹೆಸರುಗಳನ್ನು ಮಾರ್ಪಾಡು ಮಾಡುವುದು ಹಾಗೂ ಅವುಗಳಲ್ಲಿ ದೇಶೀಯತೆಯನ್ನು ಅಡಕಗೊಳಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶವಾಗಿದೆ. ಅದರಂತೆ, ರಾಜಪಥ ಹಾಗೂ ಸೆಂಟ್ರಲ್‌ ವಿಸ್ಟಾದ ಹುಲ್ಲುಹಾಸು ಪ್ರದೇಶಕ್ಕೆ ಕರ್ತವ್ಯ ಪಥ ಎಂದು ಹೆಸರಿಸಲಾಗಿದೆ. ಸುಭಾಷ್‌ ಚಂದ್ರ ಬೋಸ್‌ ಮೂರ್ತಿಯಿಂದ ರಾಜಭವನದವರೆಗಿನ ಇಡೀ ಪ್ರದೇಶವನ್ನು ಇನ್ನು ಕರ್ತವ್ಯ ಪಥ ಎಂದೇ ಕರೆಯಲಾಗುತ್ತದೆ.

ಇದನ್ನೂ ಓದಿ | Rajpath | ಬ್ರಿಟಿಷರ ಕಾಲದ ಹೆಸರಿಗೆ ವಿದಾಯ, ರಾಜಪಥದ ಹೆಸರು ಬದಲಿಸಲು ತೀರ್ಮಾನ, ಏನದು ಹೊಸ ಹೆಸರು?

Exit mobile version