Site icon Vistara News

Centre vs South: ಕರ್ನಾಟಕ ಮಾದರಿ; ಇಂದು ಕೇಂದ್ರದ ವಿರುದ್ಧ ದಿಲ್ಲಿಯಲ್ಲಿ ಕೇರಳ, ತಮಿಳುನಾಡು ಸರ್ಕಾರಗಳ ಪ್ರತಿಭಟನೆ

congress protest in delhi

ಹೊಸದಿಲ್ಲಿ: ಕೇಂದ್ರ ಸರ್ಕಾರದ (Central government) ತೆರಿಗೆ ಹಣ ಬಾಕಿ ತಾರತಮ್ಯದ ವಿರುದ್ಧ, ನಮ್ಮ ಪಾಲು ನಮಗೆ ಬೇಕು ಎಂದು ಆಗ್ರಹಿಸಿ ಜಂತರ್‌ ಮಂತರ್‌ನಲ್ಲಿ ಕರ್ನಾಟಕದ ಸರ್ಕಾರದ (Karnataka government) ಸಚಿವರು, ಶಾಸಕರು ಪ್ರತಿಭಟನೆ ನಡೆಸಿದ್ದರು. ಇಂದು ಅದೇ ಮಾದರಿಯಲ್ಲಿ ಕೇರಳ ಹಾಗೂ ತಮಿಳುನಾಡಿನ (Centre vs South) ಸಚಿವರು, ಶಾಸಕರು ದಿಲ್ಲಿಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ.

ಪ್ರತಿಭಟನೆಗಳ ಮುಂದುವರಿದ ಭಾಗವಾಗಿ ಇಂದು ತಮಿಳುನಾಡು ಮತ್ತು ಕೇರಳದ ಸಚಿವರು, ಶಾಸಕರು, ಸಂಸದರು ದೆಹಲಿಯಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಈ ಹೋರಾಟದ ಪ್ರದರ್ಶನಗಳ ಮೂಲಕ ರಾಜ್ಯ ಸರ್ಕಾರಗಳು ಕಳೆದ ಕೆಲವು ವರ್ಷಗಳಿಂದ “ತೆರಿಗೆ ಹಂಚಿಕೆಯಲ್ಲಿ ತಮಗೆ ಆಗುತ್ತಿರುವ ಅನ್ಯಾಯ” ಮತ್ತು “ಅನುದಾನ ತಾರತಮ್ಯ”ವನ್ನು ಎತ್ತಿ ತೋರಿಸುವ ಗುರಿಯನ್ನು ಹೊಂದಿವೆ.

ತಮಿಳುನಾಡಿನ ಆಡಳಿತಾರೂಢ ಪಕ್ಷ ಡಿಎಂಕೆ ಮತ್ತು ಅದರ ಮೈತ್ರಿಕೂಟದ ಸಂಸದರು ಇಂದು ಸಂಸತ್ತಿನ ಸಂಕೀರ್ಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯ್‌ ವಿಜಯನ್ ಮತ್ತು ಅವರ ಎಡಪಕ್ಷ ಸರ್ಕಾರದ ಸದಸ್ಯರು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.

ನಿನ್ನೆ ದೆಹಲಿಯಲ್ಲಿ ಕರ್ನಾಟಕ ರಾಜ್ಯ ಕಾಂಗ್ರೆಸ್ ನಡೆಸಿದ ಐತಿಹಾಸಿಕ ಪ್ರತಿಭಟನೆ ಕೇಂದ್ರ ಸರ್ಕಾರವನ್ನು ತುಸು ಮಟ್ಟಿಗೆ ಅಲುಗಾಡಿಸುವಲ್ಲಿ ಯಶಸ್ವಿಯಾಗಿತ್ತು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಮುಂತಾದವರು ಮಾತನಾಡಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಪ್ರತಿಪಾದಿಸಿದ್ದರು. ನಿನ್ನೆ ಮಧ್ಯಾಹ್ನ ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸಿಎಂ ಸಿದ್ದರಾಮಯ್ಯ ಅವರ ಭಾಷಣಕ್ಕೆ ಪರೋಕ್ಷವಾಗಿ ಉತ್ತರ ನೀಡಿದ್ದರು. “ನಾನು ದಿಲ್ಲಿಗೆ ಮಾತ್ರ ಪ್ರಧಾನಿಯಲ್ಲ; ನಾನು ಬೆಂಗಳೂರಿಗೂ ಪ್ರಧಾನಿʼʼ ಎಂದಿದ್ದರು. “ಕರ್ನಾಟಕಕ್ಕೆ ಒಂದೇ ಒಂದು ಪೈಸೆಯನ್ನೂ ಬಾಕಿ ಉಳಿಸಿಕೊಂಡಿಲ್ಲ” ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (FM Nirmala Sitharaman) ಹೇಳಿದ್ದರು.

ಫೆಬ್ರವರಿ 1ರಂದು ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಅನ್ನು ಮಂಡಿಸಿದಾಗಿನಿಂದ ರಾಜ್ಯಗಳಿಗೆ ಹಣ ಹಂಚಿಕೆ ಕುರಿತು ಕೇಂದ್ರ ಮತ್ತು ರಾಜ್ಯಗಳ ನಡುವಿನ ಜಗಳ ಜೋರಾಗಿದೆ. ಸಂಸತ್ತಿನಲ್ಲಿ ನಡೆಯುತ್ತಿರುವ ಅಧಿವೇಶನವು ಈ ವಿಷಯದ ಬಗ್ಗೆ ಕೇಂದ್ರ ಮತ್ತು ಪ್ರತಿಪಕ್ಷಗಳ ನಡುವೆ ಹಲವಾರು ವಾದವಿವಾದಗಳಿಗೆ ಸಾಕ್ಷಿಯಾಗಿದೆ. ನಿಧಿ ಹಂಚಿಕೆ ವಿಷಯದಲ್ಲಿ ಎರಡು ದಿನ ಹಿಂದೆ ನಿರ್ಮಲಾ ಸೀತಾರಾಮನ್ ಮತ್ತು ಕಾಂಗ್ರೆಸ್‌ನ ಅಧೀರ್ ರಂಜನ್ ಚೌಧರಿ ಸಂಸತ್ತಿನಲ್ಲಿ ವಾದಿಸಿಕೊಂಡಿದ್ದರು.

“ರಾಜ್ಯಗಳಿಗೆ ಹಣಕಾಸು ಹಂಚಿಕೆ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ನಡೆಯುತ್ತದೆ. ಈ ಹಂಚಿಕೆಯಲ್ಲಿ ತಮಗೆ ವಿವೇಚನೆ ಬಳಸುವ ಅಧಿಕಾರ ಇಲ್ಲ” ಎಂದು ವಿತ್ತ ಸಚಿವರು ಹೇಳಿದ್ದಾರೆ. ಆಡಳಿತಾತ್ಮಕವಾಗಿ, ರಾಜ್ಯಗಳಿಗೆ ಹಣಕಾಸು ಹಂಚಿಕೆಗಳು ಏಕರೂಪದ ಮಾರ್ಗಸೂಚಿಗಳನ್ನು ಆಧರಿಸಿವೆ. ಅದರಲ್ಲಿ ಯಾವುದೇ ತಾರತಮ್ಯಕ್ಕೆ ಅವಕಾಶವಿಲ್ಲ ಎಂದು ಹಣಕಾಸು ಕಾರ್ಯದರ್ಶಿ ಟಿವಿ ಸೋಮನಾಥನ್ ನಿನ್ನೆ ತಿಳಿಸಿದ್ದಾರೆ.

ಇದನ್ನೂ ಓದಿ: Karnataka Politics : ನಾವು ಯಾರಿಗೂ ತಾರತಮ್ಯ ಮಾಡಿಲ್ಲ; ಇದು ಝೀರೊ ಅನುದಾನದ ಸರ್ಕಾರವೆಂದ ಬೊಮ್ಮಾಯಿ

Exit mobile version