Site icon Vistara News

Cervical Cancer Vaccine: ಸೆರಂ ಸಂಸ್ಥೆಯ ಎಚ್‌ಪಿವಿ ಲಸಿಕೆ ಇದೇ ತಿಂಗಳಿನಿಂದ ಮಾರಾಟಕ್ಕೆ ಲಭ್ಯ

Cervical Cancer Vaccine to Be Available in Market This Month

ನವದೆಹಲಿ: ಸರ್ವೈಕಲ್‌ ಕ್ಯಾನ್ಸರ್‌ಗೆ(ಗರ್ಭಕಂಠ ಕ್ಯಾನ್ಸರ್) ದೇಶೀಯವಾಗಿ ಅಭಿವೃದ್ಧಿ ಪಡಿಸಲಾದ ʻಸರ್ವಾವ್ಯಾಕ್‌ʼ (CERVAVAC) ಲಸಿಕೆಯನ್ನು ಫೆಬ್ರವರಿಯಲ್ಲೇ ಮಾರುಕಟ್ಟೆಗೆ ತರಲು ಸೆರಂ ಸಂಸ್ಥೆ (Serum Institute) ಸಜ್ಜಾಗಿದೆ. ೯ರಿಂದ ೧೪ ವರ್ಷ ವಯಸ್ಸಿನ ಬಾಲಕಿಯರಿಗೆ ಎರಡು ಡೋಸ್‌ಗಳಲ್ಲಿ ನೀಡಲಾಗುವ ಈ ಲಸಿಕೆಯ ಬೆಲೆ ೨,೦೦೦ ರೂ.ಗಳು(Cervical Cancer Vaccine).

ದೇಶೀಯವಾಗಿ ಅಭಿವೃದ್ಧಿ ಪಡಿಸಲಾದ ಪ್ರಥಮ ಲಸಿಕೆಯಿದು. ಕೇಂದ್ರ ಗೃಹ ಸಚಿವ ಅಮಿತ್‌ ಷಾ ಅವರು ಕಳೆದ ಜನವರಿ ೨೪ರಂದು ಇದನ್ನು ಬಿಡುಗಡೆ ಮಾಡಿದ್ದರು. ಮಹಿಳೆಯರಲ್ಲಿ ಸರ್ವೈಕಲ್‌ ಕ್ಯಾನ್ಸರ್‌ಗೆ ಕಾರಣವಾಗುವ ಹ್ಯೂಮನ್‌ ಪಾಪಿಲೋಮಾ ವೈರಸ್‌ (ಎಚ್‌ಪಿವಿ) ವಿರುದ್ಧ ಈ ಚುಚ್ಚುಮದ್ದನ್ನು ನೀಡಲಾಗುತ್ತಿದೆ. ಫೆಬ್ರವರಿ ತಿಂಗಳಲ್ಲೇ ಖಾಸಗಿ ಆಸ್ಪತ್ರೆಗಳಲ್ಲಿ ಈ ಲಸಿಕೆ ಲಭ್ಯವಾಗಲಿದ್ದು, ಎರಡು ಡೋಸ್‌ಗಳಲ್ಲಿ ಇದನ್ನು ತೆಗೆದುಕೊಳ್ಳಬೇಕಾಗುತ್ತದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಲ‍ಭ್ಯವಿರುವ ಎಚ್‌ಪಿವಿ ಲಸಿಕೆಗಳು ಅತ್ಯಂತ ದುಬಾರಿ ಬೆಲೆಯವಾಗಿದ್ದು, ಹೋಲಿಕೆಯಲ್ಲಿ ಸೆರಂ ಸಂಸ್ಥೆಯ ಲಸಿಕೆ ಕೈಗೆಟುಕುವ ಬೆಲೆಯಲ್ಲಿದೆ. ಇದರ ಮುಖಬೆಲೆ ೨,೦೦೦ ರೂ.ಗಳು. ವಿದೇಶಿ ಸಂಸ್ಥೆಗಳ ಎಚ್‌ಪಿವಿ ಲಸಿಕೆಗಳು ಮಾತ್ರವೇ ಈವರೆಗೆ ಭಾರತದಲ್ಲಿ ದೊರೆಯುತ್ತಿದ್ದು, ಅಮೆರಿಕದ ಮೆರ್ಕ್ಸ್‌ ಗಾರ್ಡಸಿಲ್‌ ಸಂಸ್ಥೆಯ ಒಂದೇ ಡೋಸ್‌ನಲ್ಲಿ ನೀಡಲಾಗುವ ಲಸಿಕೆಯ ಬೆಲೆ ೧೦,೮೫೦/- ರೂ.ಗಳು.

ರಾಷ್ಟ್ರೀಯ ಲಸಿಕಾ ಯೋಜನೆಯಡಿಯಲ್ಲಿ ಎಚ್‌ಪಿವಿ ಲಸಿಕೆಯನ್ನೂ ಸೇರಿಸಿ, ಇದನ್ನು ೯ರಿಂದ ೧೪ ವರ್ಷ ವಯಸ್ಸಿನ ಬಾಲಕಿಯರಿಗೆ ನೀಡಲು ಕೇಂದ್ರ ಆರೋಗ್ಯ ಸಚಿವಾಲಯ ಉದ್ದೇಶಿಸಿದೆ. ಇದಕ್ಕಾಗಿ ಬರುವ ಎಪ್ರಿಲ್‌ನಲ್ಲಿ ಜಾಗತಿಕ ಟೆಂಡರ್‌ ಕರೆಯುವ ನಿರೀಕ್ಷೆಯಿದೆ.

ಇದನ್ನೂ ಓದಿ: ಕೊವಿಡ್​ 19 ಲಸಿಕೆ 4ನೇ ಡೋಸ್​ ಅಗತ್ಯವಿದೆಯಾ?; ಆರೋಗ್ಯ ತಜ್ಞ ಡಾ. ಡಾ. ರಮಣ್​ ಗಂಗಾಖೇಡ್ಕರ್ ಏನು ಹೇಳ್ತಾರೆ?

ವಿಶ್ವದ ಶೇ. ೧೬ರಷ್ಟು ಮಹಿಳೆಯರು ಭಾರತದಲ್ಲಿದ್ದಾರೆ. ಆದರೆ ವಿಶ್ವದಲ್ಲಿ ವರದಿಯಾಗುತ್ತಿರುವ ಸರ್ವೇಕಲ್‌ ಕ್ಯಾನ್ಸರ್‌ಗಳ ಪೈಕಿ ಶೇ. ೨೫ರಷ್ಟು ಪ್ರಕರಣಗಳು ಭಾರತದಲ್ಲಿವೆ. ಮಾತ್ರವಲ್ಲ, ಮೂರನೇ ಒಂದು ಭಾಗದಷ್ಟು ಸಾವುಗಳು ಸಂಭವಿಸುತ್ತಿರುವುದೂ ಭಾರತದಲ್ಲೇ. ಒಂದು ಅಂದಾಜಿನ ಪ್ರಕಾರ, ಭಾರತದಲ್ಲಿ ಪ್ರತಿವರ್ಷ ಸುಮಾರು ೮೦,೦೦೦ ಮಹಿಳೆಯರು ಸರ್ವೈಕಲ್‌ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದು, ೩೫,೦೦೦ ಮಂದಿ ಸಾವನ್ನಪ್ಪುತ್ತಿದ್ದಾರೆ.

Exit mobile version