ಹೊಸದಿಲ್ಲಿ: ಭಾರತದ ಚಂದ್ರಯಾನ-3 (Chandrayaan 3) ಸಾಹಸ ಚಂದ್ರನ ನೆಲ ಸ್ಪರ್ಶಿಸಿರುವ ದಕ್ಷಿಣ ಧ್ರುವದಲ್ಲಿ ಈಗ ರಾತ್ರಿ ಕವಿಯುತ್ತಿದೆ. ಪ್ರಗ್ಯಾನ್ ರೋವರ್ (Pragyan rover) ಹಾಗೂ ವಿಕ್ರಂ ಲ್ಯಾಂಡರ್ (Vikram lander) ತಾತ್ಕಾಲಿಕವಾಗಿ ತಮ್ಮ ಕೆಲಸವನ್ನು ನಿಲ್ಲಿಸಿವೆ.
ಚಂದ್ರನ ದಕ್ಷಿಣ ಧ್ರುವದ (moon’s south pole) ಬಳಿ ಸಾಫ್ಟ್ ಲ್ಯಾಂಡಿಂಗ್ ಆಗಿರುವ ವಿಶ್ವದ ಮೊದಲ ಮಿಷನ್ ಚಂದ್ರಯಾನ-3, ಚಂದ್ರನ ರಾತ್ರಿ ಸಮೀಪಿಸುತ್ತಿದ್ದಂತೆ ಕೆಲಸವನ್ನು ನಿಲ್ಲಿಸಿದೆ. ʻಪ್ರಗ್ಯಾನ್’ ರೋವರ್ ತನ್ನ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿ “ಸುರಕ್ಷಿತವಾಗಿ ನಿಲುಗಡೆ ಮಾಡಿದೆ” ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಘೋಷಿಸಿದೆ. ರೋವರ್‌ನಿಂದ ಡೇಟಾವನ್ನು ಪಡೆದು ನೆಲಕ್ಕೆ ವರ್ಗಾಯಿಸುವ ವಿಕ್ರಮ್ ಲ್ಯಾಂಡರ್ ಅನ್ನು ಕೂಡ ಸ್ಲೀಪ್ ಮೋಡ್‌ನಲ್ಲಿ ಇರಿಸಲಾಗಿದೆ.
ಮತ್ತೆ ಎಚ್ಚರವಾಗಲಿದೆಯೇ?
ಚಂದ್ರನಲ್ಲಿಗೆ ನೌಕೆ ಕಳಿಸಿದ ಕಾರ್ಯಾಚರಣೆಯ ಉದ್ದೇಶವು ಪೂರ್ಣಗೊಂಡಿದೆ. ಇನ್ನು 14 ದಿನಗಳ (ಭೂಮಿಯ ದಿನ) ಕಾಲ ಚಂದ್ರನಲ್ಲಿ ರಾತ್ರಿ ಇರಲಿದೆ. ಈ ಸಂದರ್ಭದಲ್ಲಿ ರೋವರ್ ಹಾಗೂ ಲ್ಯಾಂಡರ್‌ನ ಬ್ಯಾಟರಿಗಳು ಸೂರ್ಯನ ಬೆಳಕು ಪಡೆಯುವುದಿಲ್ಲವಾದ್ದರಿಂದ ರಿಚಾರ್ಜ್ ಆಗುವುದಿಲ್ಲ. ಹೀಗಾಗಿ ಅವು ಕೆಲಸ ನಿಲ್ಲಿಸಿವೆ. ರಾತ್ರಿ ಮುಗಿದು ಮತ್ತೆ ಹಗಲಾದಾಗ ಎರಡೂ ಸಾಧನಗಳ ಬ್ಯಾಟರಿಗಳು ರೀಚಾರ್ಜ್ ಆಗುವಂತೆ ಇಸ್ರೋ ವಿಜ್ಞಾನಿಗಳು ಪ್ರೋಗ್ರಾಮ್ ಮಾಡಿದ್ದಾರೆ.
ರಾತ್ರಿಯ ಕತ್ತಲಿನ ಜತೆಗೆ ಈ ಸಾಧನಗಳು ಎದುರಿಸಬೇಕಾಗಿರುವ ಇನ್ನೊಂದು ಸಂಗತಿ ಎಂದರೆ ಅತಿ ಶೀತ. ರಾತ್ರಿ ಇಲ್ಲಿನ ತಾಪಮಾನ -200 ಡಿಗ್ರಿ ಸೆಲ್ಸಿಯಸ್‌ಗೂ ಹೋಗಬಹುದು. ಆದರೆ ಈ ಉಪಕರಣಗಳು ಈ ಶೀತವನ್ನು ತಡೆದುಕೊಳ್ಳಬಲ್ಲವು.
ನಾಸಾದ ಮೂನ್ ಟ್ರ್ಯಾಕರ್ ಪ್ರಕಾರ ಚಂದ್ರನಲ್ಲಿ ಸೆಪ್ಟೆಂಬರ್ 4ರಂದು ಸೂರ್ಯಾಸ್ತ ಪ್ರಾರಂಭವಾಗಿದೆ. ಚಂದ್ರಯಾನ-3ರ ಲ್ಯಾಂಡರ್ ಇರುವ ʼಶಿವಶಕ್ತಿ ಪಾಯಿಂಟ್ʼನಲ್ಲಿ ಸಂಜೆಯಾಗುತ್ತಿದ್ದು, ಸೆಪ್ಟೆಂಬರ್ 6ರ ಹೊತ್ತಿಗೆ ಗಾಢ ಕತ್ತಲಾಗಲಿದೆ. ಸೆಪ್ಟೆಂಬರ್ 22ರಂದು ಮತ್ತೆ ಹಗಲಾಗಲಿದೆ ಎಂದು ನಿರೀಕ್ಷಿಸಲಾಗಿದೆ. ʼʼಈ ಸಂದರ್ಭದಲ್ಲಿ ರೋವರ್ ಹಾಗೂ ಲ್ಯಾಂಡರ್ ಮತ್ತೊಮ್ಮೆ ಕ್ರಿಯಾಶೀಲವಾಗಲಿವೆ ಎಂದು ಆಶಿಸುತ್ತಿದ್ದೇವೆ. ಆಗದೆ ಹೋದರೆ, ಅವುಗಳು ಭಾರತದ ರಾಯಭಾರಿಯಾಗಿ ಚಂದ್ರನಲ್ಲಿ ಶಾಶ್ವತವಾಗಿ ಉಳಿಯಲಿವೆ ಎಂದು ಇಸ್ರೋ ಹೇಳಿದೆ.
ಚಂದ್ರಯಾನ 3 ಇಲ್ಲಿಯವರೆಗೆ ಏನು ಸಾಧಿಸಿದೆ?
ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ನಿಲ್ದಾಣದಿಂದ LVM3 ರಾಕೆಟ್‌ನ ಮೂಲಕ ಉಡಾವಣೆಗೊಂಡ ಚಂದ್ರಯಾನ-3, ಒಂದು ತಿಂಗಳ ಕಾಲ ಬಾಹ್ಯಾಕಾಶ ಹಾರಾಟದ ನಂತರ ಆಗಸ್ಟ್ 23ರಂದು ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿಯಿತು. ಅದರ ಕಾರ್ಯಾಚರಣೆಯ ಅವಧಿಯಲ್ಲಿ ಹಲವಾರು ಚಂದ್ರ ಪ್ರಯೋಗಗಳನ್ನು ನಡೆಸಿದೆ.
- ಪ್ರಗ್ಯಾನ್ ರೋವರ್‌ನ ಸ್ಲೀಪ್ ಮೋಡ್ ಅನ್ನು ಸಕ್ರಿಯಗೊಳಿಸುವ ಮೊದಲು ಅದು 100 ಮೀಟರ್‌ಗಿಂತಲೂ ಹೆಚ್ಚು ಕ್ರಮಿಸಿದೆ. ರೋವರ್ ವಿಕ್ರಮ್ ಲ್ಯಾಂಡರ್‌ನಿಂದ 500 ಮೀಟರ್‌ಗಳವರೆಗೆ ಮಾತ್ರ ಸಂವಹನ ಉಳಿಸಿಕೊಳ್ಳಬಹುದು.
- ರೋವರ್‌ನಲ್ಲಿರುವ ಲೇಸರ್-ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್ (LIBS) ಉಪಕರಣವು ದಕ್ಷಿಣ ಧ್ರುವದ ಬಳಿ ಚಂದ್ರನ ಮೇಲ್ಮೈಯಲ್ಲಿ ಸಲ್ಫರ್ (S) ಇರುವಿಕೆಯನ್ನು ದೃಢಪಡಿಸಿತು. ಇದು ಐತಿಹಾಸಿಕ. ಹೆಚ್ಚುವರಿಯಾಗಿ Al, Ca, Fe, Cr, Ti, Mn, Si ಮತ್ತು O ಧಾತುಗಳು ಪತ್ತೆಯಾಗಿವೆ.
- ಲ್ಯಾಂಡರ್ ದಕ್ಷಿಣ ಧ್ರುವದ ಮೇಲೆ ಪ್ಲಾಸ್ಮಾ ಪರಿಸರದ ಮಾಪನ ನಡೆಸಿತು. ಆರಂಭಿಕ ಮೌಲ್ಯಮಾಪನ ಪ್ರಕಾರ ಚಂದ್ರನ ಮೇಲ್ಮೈ ಬಳಿ ಪ್ಲಾಸ್ಮಾ ವಿರಳ ಎಂದು ಕಂಡುಬಂತು. ರೇಡಿಯೋ ತರಂಗ ಸಂವಹನಕ್ಕೆ ಈ ಪ್ಲಾಸ್ಮಾಗಳು ಅಡ್ಡಿ. ಇದು ಭವಿಷ್ಯದಲ್ಲಿ ಚಂದ್ರನ ಕಾರ್ಯಾಚರಣೆಯ ವಿನ್ಯಾಸಗಳಿಗೆ ಹೆಚ್ಚಿನ ಒಳನೋಟ ಕೊಡಲಿದೆ.
- ಚಂದ್ರಯಾನ 3 ಲ್ಯಾಂಡರ್‌ನಲ್ಲಿನ ಚಂದ್ರನ ಭೂಕಂಪನ ಚಟುವಟಿಕೆಯ ಸಾಧನ (ILSA), ಆಗಸ್ಟ್ 26ರಂದು ಕಂಪನ ಚಟುವಟಿಕೆಯನ್ನು ದಾಖಲಿಸಿಕೊಂಡಿದೆ.
- ChaSTE (ಚಂದ್ರನ ಮೇಲ್ಮೈಯ ಥರ್ಮೋಫಿಸಿಕಲ್ ಪ್ರಯೋಗ) ಉಪಕರಣವು ಚಂದ್ರನ ಮೇಲ್ಮೈಯ ಉಷ್ಣತೆಯನ್ನು ಅರ್ಥಮಾಡಿಕೊಳ್ಳಲು ಧ್ರುವದ ಸುತ್ತಲಿನ ಚಂದ್ರನ ಮೇಲ್ಮಣ್ಣಿನ ತಾಪಮಾನದ ಪ್ರೊಫೈಲ್ ಅನ್ನು ತಯಾರಿಸಿದೆ.
ಇದನ್ನೂ ಓದಿ: Chandrayaan 3: ಚಂದ್ರಯಾನ 3 ಕೌಂಟ್‌ಡೌನ್‌ಗೆ ಧ್ವನಿಯಾಗಿದ್ದ ವಲರ್ಮತಿ ಇನ್ನಿಲ್ಲ; ದೇಶವೇ ಕೇಳಿದ್ದ ಧ್ವನಿ ಅದು