ಬೆಂಗಳೂರು: ಬ್ರಿಕ್ಸ್ ಶೃಂಗಸಭೆಗಾಗಿ (BRICS Summit 2023) ದಕ್ಷಿಣ ಆಫ್ರಿಕದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಶನಿವಾರ ನೇರವಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಚಂದ್ರಯಾನ- 3ರ (Chandrayaan 3) ಯಶಸ್ಸನ್ನು ಇಸ್ರೋ (ISRO) ವಿಜ್ಞಾನಿಗಳ ಜತೆಗೆ ಸಂಭ್ರಮಿಸಲಿದ್ದಾರೆ.
ಚಂದ್ರಯಾನದ ಯಶಸ್ಸನ್ನು ಇನ್ನಷ್ಟು ಮುಂದಿನ ಹಂತಕ್ಕೆ ಕೊಂಡೊಯ್ಯಲು ಬಿಜೆಪಿ ಮುಂದಾಗಿದೆ. ಈ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಅವರನ್ನು ರೋಡ್ ಶೋ ಮೂಲಕ ಕರೆದೊಯ್ಯಲೂ ಬಿಜೆಪಿ ಚಿಂತಿಸಿದೆ. ಈ ಕುರಿತು ಕೊನೆಯ ಹಂತದ ತಯಾರಿಗಳು ನಡೆಯುತ್ತಿವೆ. ಚುನಾವಣೆ ಪ್ರಚಾರ ಸಂದರ್ಭದ ಬಳಿಕ ಇನ್ನೊಂದು ಭರ್ಜರಿ ರೋಡ್ ಶೋಗೆ ಬೆಂಗಳೂರು ತಯಾರಾಗುತ್ತಿದೆ.
ಜೋಹಾನ್ಸ್‌ಬರ್ಗ್‌ನಿಂದ ನೇರವಾಗಿ ಬೆಂಗಳೂರಿಗೆ ಬರಲಿರುವ ಮೋದಿ, ಬೆಳಗ್ಗೆ 5.55ಕ್ಕೆ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಒಂದು ಕಿಲೋಮೀಟರ್ ರೋಡ್‌ಶೋಗೆ ಬಿಜೆಪಿ ತೀರ್ಮಾನಿಸಿದೆ. 7 ಗಂಟೆಗೆ ಪೀಣ್ಯದಲ್ಲಿರುವ ಇಸ್ರೋದ ಕಮಾಂಡ್ ಸೆಂಟರ್ ಇಸ್ಟ್ರಾಕ್‌ಗೆ ಮೋದಿ ಭೇಟಿ ನೀಡಲಿದ್ದಾರೆ. ಇಸ್ರೊ ಮುಖ್ಯಸ್ಥರು, ವಿಜ್ಞಾನಿಗಳಿಗೆ ಅಭಿನಂದನೆ ಹೇಳಲಿದ್ದಾರೆ. ಬೆಳಗ್ಗೆ 8 ಗಂಟೆವರೆಗೆ ವಿಜ್ಞಾನಿಗಳ ಜತೆಗೆ ಸಭೆ ನಡೆಸಲಿದ್ದು, 8.35ಕ್ಕೆ ಎಚ್‌ಎಎಲ್‌ನಿಂದ ಹೊರಟು 11.35ಕ್ಕೆ ನವದೆಹಲಿಗೆ ತೆರಳಲಿದ್ದಾರೆ.
ನಿನ್ನೆ ಸಂಜೆ 6.04ರ ಹೊತ್ತಿಗೆ ಚಂದ್ರಯಾನದ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವವನ್ನು ಸಾಫ್ಟ್ ಲ್ಯಾಂಡಿಂಗ್ ಮಾಡಿತ್ತು. ಬ್ರಿಕ್ಸ್ ಶೃಂಗಸಭೆಗಾಗಿ ದಕ್ಷಿಣ ಆಫ್ರಿಕದ ಜೊಹಾನ್ಸ್‌ಬರ್ಗ್‌ನಲ್ಲಿರುವ ಪ್ರಧಾನಿ ಅಲ್ಲಿಂದಲೇ ಚಂದ್ರಯಾನದ ಇಸ್ರೋ ಲೈವ್ ವೀಕ್ಷಿಸಿದ್ದರಲ್ಲದೆ, ಸಾಫ್ಟ್ ಲ್ಯಾಂಡಿಂಗ್ ಆದ ಬಳಿಕ ತೆರೆಯ ಮೇಲೆ ಬಂದು ವಿಜ್ಞಾನಿಗಳ ತಂಡಕ್ಕೆ ಶುಭಾಶಯ ತಿಳಿಸಿದ್ದರು. ಇಂದು ಲ್ಯಾಂಡರ್‌ನ ಹೊಟ್ಟೆಯಿಂದ ಪ್ರಗ್ಯಾನ್ ರೋವರ್ ಇಳಿದು ಪ್ರಯೋಗಗಳನ್ನು ಆರಂಬಿಸಿದೆ.
ಇದನ್ನೂ ಓದಿ: Chandrayaan 3 : ಬ್ರಿಕ್ಸ್ ಶೃಂಗ ಸಭೆಯಲ್ಲೂ ಚಂದ್ರಯಾನ ಯಶಸ್ಸಿನ ಅಲೆ; ಮೋದಿಗೆ ಅಭಿನಂದನೆಗಳ ಸುರಿಮಳೆ