ಹೊಸದಿಲ್ಲಿ: ಐತಿಹಾಸಿಕ ಚಂದ್ರಯಾನ-3 (Chandrayaan 3) ನೌಕೆಯಿಂದ ಪ್ರತ್ಯೇಕಗೊಂಡ ಚಂದ್ರನ ನೆಲವನ್ನು ನಿನ್ನೆ ಸ್ಪರ್ಶಿಸಿದ ವಿಕ್ರಮ್ ಲ್ಯಾಂಡರ್‌ನಿಂದ (vikram lander) ರೋವರ್ ಪ್ರಗ್ಯಾನ್ (rover pragyan) ಮೆತ್ತಗೆ ಇಳಿದು ಚಲಿಸಲು ಆರಂಭ ಮಾಡಿದೆ. “ಮೇಡ್ ಇನ್ ಇಂಡಿಯಾ, ಮೇಡ್ ಫಾರ್ ದಿ ಮೂನ್, ದಿ ಸಿಎಚ್-3 ರೋವರ್ ಲ್ಯಾಂಡರ್‌ನಿಂದ ಕೆಳಗೆ ಇಳಿಯಿತು, ಭಾರತ ಚಂದ್ರನ ಮೇಲೆ ನಡೆದಾಡಿತು!” ಎಂದು ಇಸ್ರೋ ಟ್ವೀಟ್ ಮಾಡಿದೆ.
ಬುಧವಾರ ಸಂಜೆ 6.04ಕ್ಕೆ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ ನಂತರ, ಚಂದ್ರಯಾನ 3 ಚಂದ್ರನ ಮೇಲೆದ್ದ ದೂಳು ನೆಲೆಗೊಳ್ಳಲು ಕಾದಿತ್ತು. ಕೆಲ ಗಂಟೆಗಳ ನಂತರ ವಿಕ್ರಮ್ ಲ್ಯಾಂಡರ್‌ನ ಹೊಟ್ಟೆಗೆ ಜೋಡಿಸಲಾದ ಪ್ರಗ್ಯಾನ್ ರೋವರ್ ಕಳಚಿಕೊಳ್ಳುವ ಪ್ರಕ್ರಿಯೆ ಪ್ರಾರಂಭವಾಗಿತ್ತು. ವಿಕ್ರಮ್‌ನಿಂದ ಹೊರಬರುತ್ತಿರುವ ಪ್ರಗ್ಯಾನ್‌ನ ಮೊದಲ ಚಿತ್ರವನ್ನು ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರದ ಅಧ್ಯಕ್ಷ ಪವನ್ ಕೆ. ಗೋಯೆಂಕಾ ಅವರು ಹಂಚಿಕೊಂಡಿದ್ದಾರೆ.
ನಿನ್ನೆ ಸಂಜೆ 6.04ಕ್ಕೆ ಚಂದ್ರಯಾನ 3 ಚಂದ್ರನ ದಕ್ಷಿಣ ಧ್ರುವದಲ್ಲಿ ಮೃದುವಾಗಿ ಇಳಿಯಿತು. ಇದು ಲ್ಯಾಂಡಿಂಗ್‌ಗಾಗಿ ಚಂದ್ರನ ಮೇಲ್ಮೈಯಲ್ಲಿ ಸಮತಟ್ಟಾದ ಪ್ರದೇಶವನ್ನು ಆಯ್ಕೆ ಮಾಡಿತು. ಇದು ಲ್ಯಾಂಡಿಂಗ್ ಇಮೇಜರ್ ಕ್ಯಾಮೆರಾದಿಂದ ಸೆರೆಹಿಡಿಯಲಾದ ಲ್ಯಾಂಡಿಂಗ್ ಸೈಟ್‌ನ ಫೋಟೋವನ್ನು ಕಳುಹಿಸಿದೆ.
ಚಂದ್ರಯಾನ 3 ಲ್ಯಾಂಡರ್ ಮತ್ತು MOX-ISTRAC ಬೆಂಗಳೂರು ನಡುವೆ ಸಂವಹನ ಸಂಪರ್ಕವನ್ನು ಸ್ಥಾಪಿಸಲಾಯಿತು. ಲ್ಯಾಂಡರ್ ಇಳಿಯುವ ಸಮಯದಲ್ಲಿ ಕೆಲವು ಫೋಟೋಗಳನ್ನು ತೆಗೆದುಕೊಂಡು ಅದನ್ನು ಭೂಮಿಗೆ ಕಳುಹಿಸಿತು. ನಂತರ ರೋವರ್ ಪ್ರಗ್ಯಾನ್ ಲ್ಯಾಂಡರ್‌ನಿಂದ ಹೊರಬರುವ ಪ್ರಕ್ರಿಯೆ ಪ್ರಾರಂಭವಾಯಿತು. ವಿಕ್ರಮ್‌ನಿಂದ ರೋವರ್ ಇಳಿಯುತ್ತಿರುವ ಮೊದಲ ಫೋಟೋವನ್ನು ಭೂಮಿಗೆ ಕಳುಹಿಸಲಾಗಿದೆ.
ಪ್ರಗ್ಯಾನ್ ರೋವರ್ ಮುಂದಿನ 14 ದಿನಗಳವರೆಗೆ ಚಂದ್ರನ ಮೇಲ್ಮೈಯಲ್ಲಿ ಸರಣಿ ಪ್ರಯೋಗಗಳನ್ನು ನಡೆಸುತ್ತದೆ ಮತ್ತು ಆ ಡೇಟಾವನ್ನು ಲ್ಯಾಂಡರ್‌ಗೆ ಕಳುಹಿಸುತ್ತದೆ. 26 ಕೆಜಿ ತೂಗುವ ಇದು ಎರಡು ಪೇಲೋಡ್‌ಗಳನ್ನು ಹೊಂದಿದೆ. ಒಂದು ಚಂದ್ರನ ಮೇಲ್ಮೈಯ ರಾಸಾಯನಿಕ ಸಂಯೋಜನೆಯನ್ನು ವಿಶ್ಲೇಷಿಸಿದರೆ, ಇನ್ನೊಂದು ಲ್ಯಾಂಡಿಂಗ್ ಸೈಟ್ ಸುತ್ತಲೂ ಚಂದ್ರನ ಮಣ್ಣು ಮತ್ತು ಬಂಡೆಗಳ ಧಾತುರೂಪದ ಸಂಯೋಜನೆಯನ್ನು ಪರಿಶೀಲಿಸುತ್ತದೆ.