Site icon Vistara News

Chandrayaan 3: ಚಂದ್ರಯಾನದ ಯಶಸ್ಸಿನಿಂದ ಭಾರತಕ್ಕೆ ಆಗುವ ಲಾಭಗಳೇನು?

chandrayaan

ಹೊಸದಿಲ್ಲಿ: ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (SDCC) ಜುಲೈ 14ರಂದು ಉಡಾವಣೆಗೊಂಡ ಭಾರತದ ಮೂರನೇ ಚಂದ್ರಯಾನ-3 (Chandrayaan 3) ನಾಳೆ ಚಂದ್ರನನ್ನು ಸ್ಪರ್ಶಿಸಲಿದೆ. ಎಲ್ಲವೂ ಯೋಜನೆಯ ಪ್ರಕಾರ ನಡೆದರೆ ಈ ಮಿಷನ್ ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ (space research) ಮಹತ್ವದ ಮೈಲುಗಲ್ಲು ಎನಿಸಲಿದೆ. ಅಲ್ಲಿಂದಾಚೆಗೆ ಭಾರತದ ಹಿರಿಮೆ ಗರಿಮೆಗಳು ಮೊದಲಿಗಿಂತ ಹೆಚ್ಚಾಗಲಿದೆ. ಅದು ಹೇಗೆ?

ನಾಲ್ಕನೇ ದೇಶದ ಗರಿಮೆ

** ನಾಳೆ ಸಂಜೆ (ಆ.23) 6 ಗಂಟೆಯ ಹೊತ್ತಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ನಮ್ಮ ಚಂದ್ರಯಾನ-3 ನೌಕೆಯ ವಿಕ್ರಮ್ ಲ್ಯಾಂಡರ್ ಇಳಿಯಲಿದೆ. ಇದು ಯಶಸ್ವಿಯಾದರೆ ಭಾರತವು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಸಾಧಿಸಿದ ನಾಲ್ಕನೇ ದೇಶವಾಗುತ್ತದೆ. ಈ ಹಿಂದೆ ಅಮೆರಿಕ, ರಷ್ಯಾ ಮತ್ತು ಚೀನಾ ಇದನ್ನು ಸಾಧಿಸಿದ್ದವು. ಈ ಪಟ್ಟಿಯಲ್ಲಿ ಸೇರಿಕೊಳ್ಳುವುದು ಎಂದರೆ ಜಾಗತಿಕವಾಗಿ ದೊಡ್ಡ ಬಾಹ್ಯಾಕಾಶ ಶಕ್ತಿಯಾಗಿ ಹೊಮ್ಮುವುದು ಎಂದರ್ಥ.

ರಷ್ಯಾವನ್ನು ಮೀರಿಸಿದ ಹೆಗ್ಗಳಿಕೆ

** ರಷ್ಯಾದ ಲೂನಾ -25 ಮಿಷನ್‌ ಇತ್ತೀಚೆಗೆ ವಿಫಲಗೊಂಡಿತು. ಹೀಗಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಉದ್ದೇಶಿತ ಗಮ್ಯಸ್ಥಾನದಲ್ಲಿ ಮೃದುವಾದ ಇಳಿಯುವಿಕೆ ಸಾಧಿಸುವ ಮೊದಲ ದೇಶವಾಗಲು ಭಾರತಕ್ಕೆ ಅವಕಾಶವಿದೆ.

ಭಾರತದ ಮೇಲೆ ಇತರ ದೇಶಗಳ ಭರವಸೆ ವೃದ್ಧಿ

** ಖಾಸಗಿ ಬಾಹ್ಯಾಕಾಶ ಉಡಾವಣೆಗಳು ಮತ್ತು ಸಂಬಂಧಿತ ಉಪಗ್ರಹ ಆಧಾರಿತ ವ್ಯವಹಾರಗಳನ್ನು ಭಾರತ ನಡೆಸುತ್ತಿದೆ. ಈ ಕ್ಷೇತ್ರದಲ್ಲಿ ಹೂಡಿಕೆಯನ್ನು ಉತ್ತೇಜಿಸುವ ಕೇಂದ್ರದ ಯೋಜನೆಯನ್ನು ಪ್ರಮೋಟ್‌ ಮಾಡಲು ಈ ಮಿಷನ್ ಸಹಾಯ ಮಾಡುತ್ತದೆ. ಇತರ ದೇಶಗಳಿಗೆ ಭಾರತದ ಮೇಲೆ ಭರವಸೆ ಹೆಚ್ಚಲಿದೆ. ಅನೇಕ ದೇಶಗಳಿಗೆ, ಸ್ವಂತ ಬಾಹ್ಯಾಕಾಶ ಸಾಧನೆ ಮಾಡುವ ಸಾಮರ್ಥ್ಯವಿಲ್ಲ. ಅವು ಭಾರತವನ್ನು ನೆಚ್ಚುತ್ತವೆ.

ಉಡಾವಣಾ ಮಾರುಕಟ್ಟೆಯಲ್ಲಿ ಪ್ರಾಬಲ್ಯ

** ಮುಂದಿನ ದಶಕದೊಳಗೆ ಜಾಗತಿಕ ಉಡಾವಣಾ ಮಾರುಕಟ್ಟೆಯಲ್ಲಿ ತಮ್ಮ ಪಾಲನ್ನು ಐದು ಪಟ್ಟು ಹೆಚ್ಚಿಸುವ ಗುರಿಯನ್ನು ಖಾಸಗಿ ಬಾಹ್ಯಾಕಾಶ ಕಂಪನಿಗಳಿಗೆ ಭಾರತ ನೀಡಿದೆ. ಇದಕ್ಕೆ ಉತ್ತೇಜನ ಹೆಚ್ಚಲಿದೆ.

ವಿದೇಶಿ ಉಪಗ್ರಹ ಉಡಾವಣೆ ಹೆಚ್ಚಲಿದೆ

** ಬಾಹ್ಯಾಕಾಶ ಇಲಾಖೆ ಪ್ರಕಾರ, ಮಾರ್ಚ್‌ವರೆಗೆ ಭಾರತೀಯ ಬಾಹ್ಯಾಕಾಶ ತಂತ್ರಜ್ಞಾನ ವಲಯವು 167 ನೋಂದಾಯಿತ ಸ್ಟಾರ್ಟ್ಅಪ್‌ಗಳನ್ನು ಹೊಂದಿದೆ. 2022ರಲ್ಲಿ ಇಸ್ರೋದ ಉಡಾವಣಾ ವಾಹನವನ್ನು ಬಳಸಿಕೊಂಡು 44 ವಿದೇಶಿ ಉಪಗ್ರಹಗಳನ್ನು ಉಡಾಯಿಸಲಾಯಿತು. ಇಲಾಖೆಯ ಮಾಹಿತಿಯ ಪ್ರಕಾರ ಮಾರ್ಚ್ 2023ರವರೆಗೆ 37 ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ.

ಬಾಹ್ಯಾಕಾಶ ಆರ್ಥಿಕತೆ ಬಲಿಷ್ಠ

** 2023ರ ಎರಡನೇ ತ್ರೈಮಾಸಿಕದಲ್ಲಿ ಜಾಗತಿಕ ಬಾಹ್ಯಾಕಾಶ ಆರ್ಥಿಕತೆ 546 ಶತಕೋಟಿ ಡಾಲರ್‌ (45.35 ಲಕ್ಷ ಕೋಟಿ ರೂ.) ಮೌಲ್ಯವನ್ನು ಈಗಾಗಲೇ ತಲುಪಿದೆ. ಕಳೆದ ದಶಕದಲ್ಲಿ ಇದರ ಮೌಲ್ಯದಲ್ಲಿ 91 ಶೇಕಡಾ ಹೆಚ್ಚಳವಾಗಿದೆ. ಭಾರತದ ಬಾಹ್ಯಾಕಾಶ ಆರ್ಥಿಕತೆಯ ಮೊತ್ತ ಸುಮಾರು 11.37 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಬಾಹ್ಯಾಕಾಶ ಯಾನದಲ್ಲಿ ಹೊಸ ಅಧ್ಯಾಯ

** ಈ ಹಿಂದೆ ಚಂದ್ರಯಾನವನ್ನು ಪ್ರಾರಂಭಿಸಿದಾಗ ಪ್ರಧಾನಿ ನರೇಂದ್ರ ಮೋದಿ ಅವರು ʼʼಇಸ್ರೋ ಭಾರತದ ಬಾಹ್ಯಾಕಾಶ ಯಾನದಲ್ಲಿ ಹೊಸ ಅಧ್ಯಾಯವನ್ನು ಬರೆಯುತ್ತಿದೆ. ಪ್ರತಿಯೊಬ್ಬ ಭಾರತೀಯನ ಕನಸುಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಹೆಚ್ಚಿಸಲಿದೆʼʼ ಎಂದು ಹೇಳಿದ್ದರು. ಅದು ನಿಜವಾಗಲಿದೆ. ಭವಿಷ್ಯದ ತಲೆಮಾರು ಬಾಹ್ಯಾಕಾಶ ಸಂಶೋಧನೆಯನ್ನು ಹೆಚ್ಚಿನ ಆಸೆ ಕುತೂಹಲಗಳಿಂದ ತನ್ನದಾಗಿಸಿಕೊಳ್ಳಲಿದೆ.

ಲ್ಯಾಂಡಿಂಗ್ ಮುಂದೂಡಬಹುದೇ?

ಲ್ಯಾಂಡಿಂಗ್‌ ದಿನದ ಪರಿಸ್ಥಿತಿ ಅನುಕೂಲಕರವಾಗಿದ್ದರೆ ಮಾತ್ರ ಇಸ್ರೋ ಲ್ಯಾಂಡಿಂಗ್‌ಗೆ ಮುಂದಾಗಲಿದೆ ಎಂದು ಹಿರಿಯ ಇಸ್ರೋ ವಿಜ್ಞಾನಿ ತಿಳಿಸಿದ್ದಾರೆ. ಇಲ್ಲದಿದ್ದರೆ ಆಗಸ್ಟ್ 27ರಂದು ಇನ್ನೊಂದು ಪ್ರಯತ್ನ ನಡೆಸಲಾಗುವುದು ಎಂದು ಇಸ್ರೋದ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರದ ನಿರ್ದೇಶಕ ನಿಲೇಶ್ ಎಂ. ದೇಸಾಯಿ ಹೇಳಿದ್ದಾರೆ.

ಚಂದ್ರಯಾನ-3 ಚಂದ್ರನ ಮೇಲೆ ಇಳಿಯುವ ಎರಡು ಗಂಟೆಗಳ ಮೊದಲು, ಲ್ಯಾಂಡರ್ ಮಾಡ್ಯೂಲ್‌ನ ಆರೋಗ್ಯ ಮತ್ತು ಚಂದ್ರನ ಮೇಲಿನ ಪರಿಸ್ಥಿತಿಗಳ ಆಧಾರದ ಮೇಲೆ ಆ ಸಮಯದಲ್ಲಿ ಅದನ್ನು ಇಳಿಸುವುದು ಸೂಕ್ತವೇ ಅಥವಾ ಬೇಡವೇ ಎಂಬುದರ ಕುರಿತು ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ. ಯಾವುದೇ ಅಂಶ ಅನುಕೂಲಕರವಾಗಿಲ್ಲ ಎಂದು ತೋರಿದರೆ ಆಗಸ್ಟ್ 27ಕ್ಕೆ ಇಳಿಸುವಿಕೆ ಮುಂದೂಡುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: Chandrayaan 3: ಚಂದ್ರಯಾನ 3 ಇತಿಹಾಸ ಸೃಷ್ಟಿಗೆ ಕ್ಷಣಗಣನೆ; ಲೈವ್‌ ವೀಕ್ಷಣೆ ಹೇಗೆ? ಮುಂದೇನಾಗುತ್ತದೆ?

Exit mobile version