ಕ್ಯಾಲಿಫೋರ್ನಿಯಾ: 12 ವರ್ಷ ವಯಸ್ಸಿನ ಬಾಲಕಿಯೊಬ್ಬಳು ʼವೇಗದʼ ಮತ್ತು ʼಕೈಗೆಟುಕುವ ದರದ’ ಬೆಂಕಿ ಪತ್ತೆ ಸಾಧನವನ್ನು (fire alert) ವಿನ್ಯಾಸಗೊಳಿಸಿದ್ದಾಳೆ (Child Prodigy). $25,000 (20.81 ಲಕ್ಷ ರೂ.) ಗೆದ್ದಿದ್ದಾಳೆ.
12 ವರ್ಷದ ಶಾನ್ಯಾ ಗಿಲ್ (Shanya Gill) ಇದನ್ನ ಆವಿಷ್ಕರಿಸಿದಾಕೆ. ಈಗೆ ಭಾಗವಹಿಸಿದ ಸ್ಪರ್ಧೆಯಲ್ಲಿ ನಾನಾ ದೇಶಗಳು ಸುಮಾರು 16,000 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಾನ್ಯಾಳ ತಂದೆ ತಾಯಿ ಭಾರತೀಯ ಮೂಲದವರಾಗಿದ್ದು, ಕ್ಯಾಲಿಫೋರ್ನಿಯಾದ ಸ್ಯಾನ್ ಹೋಸೆಯಲ್ಲಿ ನೆಲೆಸಿದ್ದಾರೆ.
ತನ್ನ ಮನೆಯ ಹಿಂದಿದ್ದ ರೆಸ್ಟೋರೆಂಟ್ ಬೆಂಕಿಯಲ್ಲಿ ಸುಟ್ಟುಹೋದುದೇ ಈಕೆಯ ಆವಿಷ್ಕಾರಕ್ಕೆ ಪ್ರೇರಣೆಯಾಗಿತ್ತು. ಇತರ ಪ್ರಮಾಣಿತ ಸಾಧನಗಳಿಗಿಂತ ವೇಗವಾಗಿ ಬೆಂಕಿಯನ್ನು ಪತ್ತೆ ಮಾಡುವ ಸಾಧನವನ್ನು ವಿನ್ಯಾಸಗೊಳಿಸಲು ಆಕೆ ಬಯಸಿ, ಯಶಸ್ವಿಯಾಗಿದ್ದಾಳೆ.
$25,000 ಮೊತ್ತದ ಥರ್ಮೋ ಫಿಶರ್ ಸೈಂಟಿಫಿಕ್ ASCEND (ಉತ್ತೇಜಕ ಹೊಸ ಅನ್ವೇಷಣೆಗಳನ್ನು ಮಾಡುವ ಮಹತ್ವಾಕಾಂಕ್ಷೆಯ ವಿಜ್ಞಾನಿಗಳು) ಪ್ರಶಸ್ತಿಯನ್ನು ಶಾನ್ಯಾ ಗಿಲ್ ಗೆದ್ದಿದ್ದಾಳೆ. ಈಕೆ ಆವಿಷ್ಕರಿಸಿದ್ದು ʼವೇಗವಾಗಿ ಕಾರ್ಯಾಚರಿಸುವ ಮತ್ತು ಕೈಗೆಟುಕುವ ದರದ ಅಗ್ನಿ ಪತ್ತೆ ವ್ಯವಸ್ಥೆʼ ಆಗಿತ್ತು.
ಈಕೆ STEM ವಿದ್ಯಾರ್ಥಿ. “ನಮ್ಮ ಮನೆಯ ಹಿಂದೆ ರೆಸ್ಟೋರೆಂಟ್ ಬೆಂಕಿಯಲ್ಲಿ ನಾಶವಾದ ಬಳಿಕ ನನ್ನ ತಾಯಿ ಹೆಚ್ಚು ಜಾಗರೂಕರಾಗಿದ್ದರು. ಯಾವಾಗಲೂ ಮನೆಯಿಂದ ಹೊರಡುವ ಮೊದಲು ಗ್ಯಾಸ್ ಸ್ಟೌವ್ ಆಫ್ ಮಾಡಲಾಗಿದೆಯೇ ಎಂದು ಎರಡು ಬಾರಿ ಪರೀಕ್ಷಿಸಲು ನನ್ನನ್ನು ಕೇಳುತ್ತಿದ್ದರು” ಎಂದು ವಿಜೇತೆ ಶಾನ್ಯಾ ಗಿಲ್ ಹೇಳಿದ್ದಾಳೆ.
ಒಂದು ದಿನ ಥರ್ಮಲ್ ಕ್ಯಾಮೆರಾಗಳು ಶಾಖದ ಇರವನ್ನು ಪತ್ತೆ ಮಾಡುತ್ತವೆ ಎಂದು ಅವಳು ಅರಿತುಕೊಂಡಳು. ಇವುಗಳಿಂದ ಹೆಚ್ಚು ವೇಗವಾಗಿ ಮನೆಯೊಳಗಿನ ಬೆಂಕಿಯನ್ನು ಗುರುತಿಸಬಹುದೇ ಎಂದು ಪರೀಕ್ಷಿಸಲು ನಿರ್ಧರಿಸಿದಳು. ಇದನ್ನು ಬಳಸತೊಡಗಿದರೆ ನಾವು ಪ್ರತಿ ವರ್ಷ ಸಾವಿರಾರು ಜೀವಗಳನ್ನು ಉಳಿಸಬಹುದು ಎಂದಿದ್ದಾಳೆ ಶಾನ್ಯಾ.
“ಇವುಗಳನ್ನು ದೊಡ್ಡ ಪ್ರಮಾಣದಲ್ಲಿ ಇಡುವ, ಸ್ಮೋಕ್ ಡಿಟೆಕ್ಟರ್‌ನಂತೆ ಸೀಲಿಂಗ್‌ನಲ್ಲಿ ಇರಿಸುವ ಪ್ರಯೋಗಗಳನ್ನು ಮಾಡುತ್ತಿದ್ದೇನೆ. ಈ ಸಾಧನವು ಅಸ್ತಿತ್ವದಲ್ಲಿರುವ ವಿದ್ಯುತ್ ಲೈನ್‌ಗಳಿಂದ ಶಕ್ತಿಯನ್ನು ಪಡೆಯಬಲ್ಲದು ಮತ್ತು ವಿಶಾಲವಾದ ಪ್ರದೇಶದಲ್ಲಿ ನಿಗಾ ಇಡಬಲ್ಲುದು” ಎಂದು ಅವರು ವಿವರಿಸಿದರು.
ಸೊಸೈಟಿ ಫಾರ್ ಸೈನ್ಸ್ ಕೂಡ ಯೂಟ್ಯೂಬ್‌ನಲ್ಲಿ ಶಾನ್ಯಾ ತನ್ನ ಯೋಜನೆಯನ್ನು ವಿವರಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿದೆ. ಇದರಲ್ಲಿ ಆಕೆ ಪ್ರಶಸ್ತಿಯನ್ನು ಸ್ವೀಕರಿಸುವ ದೃಶ್ಯ ಸಹ ಇದೆ. ಐದು ದಿನಗಳ ಹಿಂದೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಅಂದಿನಿಂದ ಸುಮಾರು 2,000 ಜನ ವೀಕ್ಷಿಸಿದ್ದಾರೆ.
ಶಾನ್ಯಾ, ಕ್ಯಾಲಿಫೋರ್ನಿಯಾ ಮೂಲದ ಸನ್ನಿವೇಲ್ ರೇನರ್ ಮಿಡಲ್ ಸ್ಕೂಲ್‌ನಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದಾರೆ. ಪ್ರಯೋಗಗಳಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ, ಆಕೆ ಈಜು, ವಾಟರ್ ಪೋಲೋ, ಕೋಡಿಂಗ್ ಮತ್ತು ಟೀಚಿಂಗ್ ಇಷ್ಟಪಡುತ್ತಾಳೆ. ಶಾನ್ಯಾ ಬಯೋಮೆಡಿಸಿನ್‌ನಲ್ಲಿ ವೃತ್ತಿಜೀವನ ಮುಂದುವರಿಸಲು ಬಯಸಿದ್ದಾಳೆ.
ಇದನ್ನೂ ಓದಿ: Brain Tumor: ಬೆರಳಿನ ಪರೀಕ್ಷೆಯಿಂದ ಮೆದುಳಿನ ಟ್ಯೂಮರ್ ಪತ್ತೆ! ವಿಜ್ಞಾನಿಗಳಿಂದ ಹೊಸ ಆವಿಷ್ಕಾರ