Site icon Vistara News

Child Trafficking: ರಾಷ್ಟ್ರ ರಾಜಧಾನಿಯಲ್ಲಿ ಮಕ್ಕಳ ಮಾರಾಟ ಜಾಲ; ಬೆಚ್ಚಿ ಬೀಳಿಸುವಂತಿದೆ ವಂಚಕರ ಕೃತ್ಯ

Child Trafficking

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮಕ್ಕಳ ಮಾರಾಟ ಜಾಲವೊಂದನ್ನು (Child Trafficking) ಕೇಂದ್ರೀಯ ತನಿಖಾ ಸಂಸ್ಥೆ (CBI) ಅಧಿಕಾರಿಗಳು ಭೇದಿಸಿದ್ದು, ಮೂರು ನವಜಾತ ಶಿಶುಗಳನ್ನು ರಕ್ಷಿಸಿದ್ದಾರೆ. ಕೇಶವಪುರಂ (Keshavpuram) ಪ್ರದೇಶದಲ್ಲಿರುವ ಮನೆಯೊಂದರಿಂದ ಈ ಮೂರು ನವಜಾತ ಶಿಶುಗಳನ್ನು ರಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಕಳ್ಳದಂಧೆಯ ಇನ್ನಷ್ಟು ಮಾಹಿತಿ ಹೊರ ಬಂದಿದೆ.

ಸಿಬಿಐ ಮೂಲಗಳ ಪ್ರಕಾರ, ನವಜಾತ ಶಿಶುಗಳನ್ನು ಕಾಳಸಂತೆಯಲ್ಲಿ ಸರಕುಗಳಾಗಿ ಖರೀದಿಸಲಾಗುತ್ತಿತ್ತು ಮತ್ತು ಮಾರಾಟ ಮಾಡಲಾಗುತ್ತಿತ್ತು. ಸಿಬಿಐ ಪ್ರಸ್ತುತ ಮಕ್ಕಳನ್ನು ಮಾರಾಟ ಮಾಡಿದ ಮಹಿಳೆ ಮತ್ತು ಖರೀದಿದಾರರು ಸೇರಿದಂತೆ ಭಾಗಿಯಾಗಿರುವ ಎಲ್ಲರನ್ನೂ ವಿಚಾರಣೆಗೆ ಒಳಪಡಿಸುತ್ತಿದೆ.

ಸಿಬಿಐಯ ಈ ಕಾರ್ಯಾಚರಣೆಯ ವ್ಯಾಪ್ತಿ ದೆಹಲಿಯ ಗಡಿಗಳನ್ನು ಮೀರಿ ವಿಸ್ತರಿಸಿದೆ. ರಾಷ್ಟ್ರೀಯ ರಾಜಧಾನಿ ಪ್ರದೇಶದಾದ್ಯಂತ (NCR) ಏಳರಿಂದ ಎಂಟು ಮಕ್ಕಳ ಕಳ್ಳಸಾಗಣೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಸಿಬಿಐ ಬಂಧಿಸಿದೆ. ಬಂಧಿತರಲ್ಲಿ ಆಸ್ಪತ್ರೆಯ ನರ್ಸ್‌ಗಳು, ಸ್ವಚ್ಛತಾ ಸಿಬ್ಬಂದಿ ಮತ್ತಿತರರು ಸೇರಿದ್ದಾರೆ. ಕಳೆದ ಒಂದು ತಿಂಗಳಲ್ಲಿಯೇ ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ 10 ಮಕ್ಕಳನ್ನು ಮಾರಾಟ ಮಾಡಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ. 

ʼʼಸಿಬಿಐ ತನ್ನು ತನಿಖೆಯನ್ನು ಈಗ ಅನೇಕ ರಾಜ್ಯಗಳಿಗೆ ವಿಸ್ತರಿಸಿದೆ. ಹಲವಾರು ಪ್ರಮುಖ ಆಸ್ಪತ್ರೆಗಳು ತೀವ್ರ ಪರಿಶೀಲನೆಗೆ ಒಳಗಾಗಿವೆ. ನವಜಾತ ಶಿಶುಗಳನ್ನು 4ರಿಂದ 5 ಲಕ್ಷ ರೂ.ಗೆ ಮಾರಾಟ ಮಾಡಲಾಗುತ್ತಿದೆʼʼ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗುವ ವಿಧಾನ

ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್ ಗುಂಪುಗಳಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಜಾಹೀರಾತುಗಳ ಸಹಾಯದಿಂದ ಆರೋಪಿಗಳು ಭಾರತದಾದ್ಯಂತ ಮಕ್ಕಳನ್ನು ದತ್ತು ಪಡೆಯಲು ಬಯಸುವ, ಮಕ್ಕಳಿಲ್ಲದ ದಂಪತಿಯನ್ನು ಸಂಪರ್ಕಿಸುತ್ತಿದ್ದರು. ಆರೋಪಿಗಳು ಪಾಲಕರು ಮತ್ತು ಬಾಡಿಗೆ ತಾಯಂದಿರ ಬಳಿಯಿಂದ ಶಿಶುಗಳನ್ನು ಖರೀದಿಸುತ್ತಾರೆ ಮತ್ತು ಪ್ರತಿ ಮಗುವಿಗೆ 4ರಿಂದ 6 ಲಕ್ಷ ರೂ. ದರದಲ್ಲಿ ಮಾರಾಟ ಮಾಡುತ್ತಾರೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದತ್ತು ಸ್ವೀಕಾರಕ್ಕೆ ಸಂಬಂಧಿಸಿದ ನಕಲಿ ದಾಖಲೆಗಳನ್ನು ರಚಿಸುವ ಮೂಲಕ ಮಕ್ಕಳಿಲ್ಲದ ಅನೇಕ ದಂಪತಿಗೆ ಲಕ್ಷಾಂತರ ರೂ.ಗಳನ್ನು ವಂಚಿಸುವಲ್ಲಿ ಈ ಆರೋಪಿಗಳು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಕಾರ್ಯಾಚರಣೆಯ ಸಮಯದಲ್ಲಿ ಕೇವಲ 1.5 ದಿನ ಮತ್ತು 15 ದಿನಗಳ ಎರಡು ಗಂಡು ಶಿಶು ಮತ್ತು ಒಂದು ತಿಂಗಳ ಹೆಣ್ಣು ಮಗುವನ್ನು ಸಹ ಸಿಬಿಐ ರಕ್ಷಿಸಿದೆ.‌

ಇದನ್ನೂ ಓದಿ: Child Trafficking: 5 ಲಕ್ಷ ರೂ.ಗೆ ಒಂದು ಮಗು ಮಾರಾಟ; 10 ಮಕ್ಕಳನ್ನು ರಕ್ಷಿಸಿದ ಸಿಬಿಐ!

ಬಂಧಿತರು

ಸೋನಿಪತ್‌ನ ನೀರಜ್, ದೆಹಲಿಯ ಪಶ್ಚಿಮ ವಿಹಾರ್‌ನ ಇಂದು ಪವಾರ್, ಪಟೇಲ್ ನಗರದ ಅಸ್ಲಂ, ಕನ್ಹಯ್ಯ ನಗರದ ಪೂಜಾ ಕಶ್ಯಪ್, ಮಾಳವೀಯ ನಗರದ ಅಂಜಲಿ, ಕವಿತಾ ಮತ್ತು ರಿತು ಬಂಧಿತರು. ಐಪಿಸಿಯ ವಿವಿಧ ದಂಡ ನಿಬಂಧನೆಗಳು ಮತ್ತು ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ 2015ರ ಅಡಿಯಲ್ಲಿ ಬಂಧಿತ ಆರೋಪಿಗಳು ಸೇರಿದಂತೆ 10 ಜನರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version