Site icon Vistara News

Anthony Albanese: ಆಗ ಮೋದಿಯನ್ನು ಬಾಸ್‌ ಎಂದಿದ್ದಕ್ಕೆ ಆಸ್ಟ್ರೇಲಿಯಾ ಪ್ರಧಾನಿಗೆ ಈಗ ವಿಷಾದ? ಅವರು ಹೇಳಿದ್ದೇನು?

Narendra Modi And Anthony Albanese

Chill out: Australian PM Anthony Albanese tells reporter on whether he regretted calling PM Modi The Boss

ಸಿಡ್ನಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್‌ (Anthony Albanese) ಉತ್ತಮ ಸ್ನೇಹಿತರು. ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಮೋದಿ (Narendra Modi) ಅವರು ಆಂಥೋನಿ ಅಲ್ಬನೀಸ್‌ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದರು. ಅಲ್ಬನೀಸ್‌ ಅವರು ಮೋದಿ ಜತೆ ಸೆಲ್ಫಿ ತೆಗೆಸಿಕೊಂಡಿದ್ದರು. ಇದರ ಬೆನ್ನಲ್ಲೇ, ಆಂಥೋನಿ ಅಲ್ಬನೀಸ್‌ ಅವರಿಗೆ ಪತ್ರಕರ್ತನೊಬ್ಬ ತರ್ಲೆ ಪ್ರಶ್ನೆ ಕೇಳಿದ್ದಾನೆ. “ನೀವು ನರೇಂದ್ರ ಮೋದಿ ಅವರನ್ನು ದಿ ಬಾಸ್‌ (The Boss) ಎಂದು ಕರೆದಿರುವುದಕ್ಕೆ ಈಗ ಬೇಸರವಿದೆಯೇ” ಎಂದು ಪ್ರಶ್ನೆ ಕೇಳಿದ್ದಕ್ಕೆ. ಇದಕ್ಕೆ ಆಂಥೋನಿ ಅಲ್ಬನೀಸ್‌, “ಸ್ವಲ್ಪ ರಿಲ್ಯಾಕ್ಸ್‌ ಆಗು” ಎಂದು ಹೇಳುವ ಮೂಲಕ ಆತನ ಬಾಯಿ ಮುಚ್ಚಿಸಿದ್ದಾರೆ.

ಪತ್ರಕರ್ತನ ಪ್ರಶ್ನೆಗೆ ಉತ್ತರಿಸಿದ ಅವರು, “ನಿಜವಾಗಿಯೂ ನಿನಗೆ ಹಾಗೆ ಅನಿಸುತ್ತದೆಯೇ? ಸ್ವಲ್ಪ ನಿರಾಳವಾಗಿರು. ಅಮೆರಿಕದ ರಾಕ್‌ಸ್ಟಾರ್‌ ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌ ಅವರು ಸಿಡ್ನಿಯ ಫುಟ್ಬಾಲ್‌ ಮೈದಾನದಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಾಗ ನಾನೂ ಅಲ್ಲಿದ್ದೆ. ಅಲ್ಲಿ ಎಷ್ಟು ಜನ ಸೇರಿದ್ದರು ಎಂಬುದನ್ನು ಕಣ್ತುಂಬಿಕೊಂಡಿದ್ದೆ. ಅದೇ ರೀತಿ, ಮೋದಿ ಅವರು ಬಂದಾಗಲೂ ಅಷ್ಟು ಪ್ರಮಾಣದ ಜನ ಸೇರಿದ್ದರು. ಅದಕ್ಕೆ ಹಾಗೆ ಹೇಳಿದ್ದೆ. ನರೇಂದ್ರ ಮೋದಿ ಅವರು ನಮ್ಮ ದೇಶಕ್ಕೆ ಅತಿಥಿಯಾಗಿ ಬಂದಿದ್ದರು. ಅವರನ್ನು ಸ್ವಾಗತಿಸುವುದು ನನ್ನ ಕರ್ತವ್ಯ” ಎಂದು ಹೇಳಿದ್ದಾರೆ. ಭಾರತ ಹಾಗೂ ಕೆನಡಾ ಮಧ್ಯೆ ಬಿಕ್ಕಟ್ಟು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಪತ್ರಕರ್ತನು ಅಲ್ಬನೀಸ್‌ ಅವರಿಗೆ ಹೀಗೆ ಪ್ರಶ್ನೆ ಕೇಳಿದ್ದಾನೆ ಎಂದು ತಿಳಿದುಬಂದಿದೆ.

ಬಾಸ್‌ ಎಂದು ಕರೆದಿದ್ದು ಯಾವಾಗ?

ನಾಲ್ಕು ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾಗೆ ತೆರಳಿದ್ದರು. ಸಿಡ್ನಿಯ ಫುಟ್ಬಾಲ್‌ ಮೈದಾನದಲ್ಲಿ ಸುಮಾರು 20 ಸಾವಿರ ಅನಿವಾಸಿ ಭಾರತೀಯರು ಮೋದಿ ಅವರನ್ನು ಕಂಡು ಪುಳಕಿತರಾಗಿದ್ದರು. ಇದೇ ವೇಳೆ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್‌ ಅವರು ವೇದಿಕೆ ಮೇಲೆ ನಿಂತಿದ್ದರು. ಆಗ ಆಸ್ಟ್ರೇಲಿಯಾ ಪ್ರಧಾನಿ, ನರೇಂದ್ರ ಮೋದಿ ಅವರನ್ನು ಬಾಸ್‌ ಎಂದು ಕರೆದಿದ್ದರು.

ಇದನ್ನೂ ಓದಿ: Anthony Albanese: ಬೆಂಗಳೂರಲ್ಲಿ ಶೀಘ್ರ ಆಸ್ಟ್ರೇಲಿಯಾದ ಕಾನ್ಸುಲೇಟ್ ಜನರಲ್ ಆರಂಭ; ಪಿಎಂ ಆಂಥೋನಿ ಅಲ್ಬನೀಸ್

ಮೋದಿ ಅವರನ್ನು ಬಾಸ್‌ ಎಂದು ಕರೆಯಲು ಆಂಥೋನಿ ಅಲ್ಬನೀಸ್‌ ಅವರು ಕಾರಣವನ್ನೂ ಕೊಟ್ಟಿದ್ದರು. “ಅಮೆರಿಕದ ರಾಕ್‌ಸ್ಟಾರ್‌ ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌ ಅವರು ಇಲ್ಲಿಗೆ ಬಂದಾಗಲೂ ಇಷ್ಟೊಂದು ಅದ್ಧೂರಿ ಸ್ವಾಗತ ದೊರೆತಿರಲಿಲ್ಲ. ಹಾಗಾಗಿ, ನರೇಂದ್ರ ಮೋದಿ ಅವರೇ ಬಾಸ್‌” ಎಂದು ಆಂಥೋನಿ ಅಲ್ಬನೀಸ್‌ ಹೇಳಿದ್ದರು ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌ ಅವರನ್ನು ಅವರ ಅಭಿಮಾನಿಗಳು ‘ದಿ ಬಾಸ್‌’ ಎಂದು ಕರೆಯುತ್ತಾರೆ. ಹಾಗಾಗಿ, ಅಲ್ಬನೀಸ್‌ ಅವರು ಮೋದಿ ಅವರನ್ನು ಬಾಸ್‌ ಎಂದು ಕರೆದಿದ್ದರು.

Exit mobile version