ನವದೆಹಲಿ: ಭಾರತದಲ್ಲೇ ಭಾರತ ವಿರೋಧಿ ಅಪಪ್ರಚಾರಕ್ಕಾಗಿ (propaganda against India) ಚೀನಾದ ಕಮ್ಯುನಿಸ್ಟ್ ಪಾರ್ಟಿ(CCP) ಭಾರೀ ಪ್ರಮಾಣದ ಧನ ಸಹಾಯವನ್ನು ಮಾಧ್ಯಮಗಳಿಗೆ (media operations) ಒದಗಿಸುತ್ತಿದೆ ಎಂಬ ಮಾಹಿತಿಯನ್ನು ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಭಾರತ ವಿರೋಧಿ ಅಭಿಯಾನಕ್ಕೆ ಚೀನಾ ಕಮ್ಯುನಿಸ್ಟ್ ಪಾರ್ಟಿಯು (Chinese Communist Party) ಇ-ಕಾಮರ್ಸ್ ವ್ಯವಹಾರ (e Commerce) ಅಥವಾ ಸ್ಟಾರ್ಟ್ ಅಪ್‌ಗಳು (Startups) ಹಾಗೂ ಮಾಧ್ಯಮಗಳನ್ನು (Media) ಪ್ರಭಾವಶಾಲಿಯಾಗಿ ಬಳಸಿಕೊಳ್ಳುತ್ತಿದೆ ಎಂಬುದನ್ನು ಗುಪ್ತಚರ ಸಂಸ್ಥೆಗಳು ಕಂಡುಕೊಂಡಿವೆ ಎಂಬ ಮಾಹಿತಿಯನ್ನು ನ್ಯೂಯಾರ್ಕ್ ಟೈಮ್ಸ್ ತನ್ನ ತನಿಖಾ ವರದಿಯಲ್ಲಿ ತಿಳಿಸಿದೆ.
2019ರಲ್ಲಿ ಫ್ರೀಲ್ಯಾನ್ಸ್ ಜರ್ನಲಿಸ್ಟ್ ರಾಜೀವ್ ಶರ್ಮಾ ಅವರನ್ನು ದಿಲ್ಲಿ ಪೊಲೀಸರು ಬಂಧಿಸಿದ್ದರು. ಚೀನಾದ ಆದೇಶದಂತೆ ಈ ವ್ಯಕ್ತಿ ಬೇಹುಗಾರಿಕೆ ಮಾಡುತ್ತಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಬಂಧನ ನಡೆದಿತ್ತು. 2021ರಲ್ಲಿ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಇದೇ ವ್ಯಕ್ತಿಯನ್ನು ಬಂಧಿಸಿತ್ತು.
ವಿಚಾರಣೆ ವೇಳೆ ರಾಜೀವ್ ಶರ್ಮಾ ಅವರು ಹಲವು ವಿಷಯಗಳನ್ನು ಬಾಯಿ ಬಿಟ್ಟಿದ್ದರು. ಹಣಕ್ಕಾಗಿ ರಾಜೀವ್ ಶರ್ಮಾ ಚೀನಾ ಗುಪ್ತಚರ ಅಧಿಕಾರಿಗಳಿಗೆ ದೇಶದ ಸೂಕ್ಷ್ಮ ಮಾಹಿತಿಯನ್ನು ಒದಗಿಸಿದ್ದಾರೆ. ಭಾರತದ ಭದ್ರತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳಿಗೆ ವಿರುದ್ಧವಾದ ಮಾಹಿತಿಯನ್ನು ಅವರು ರವಾನಿಸಿದ್ದರು ಎಂದು ಇಡಿ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.
ಶರ್ಮಾ ಅವರು ಬರೆದ ಲೇಖನಗಳು ದಲೈ ಲಾಮಾ ಮತ್ತು ಭಾರತದ ವಿರುದ್ಧದ ಚೀನಾ ಕಮ್ಯುನಿಸ್ಟ್ ಪಾರ್ಟಿಯ ಯೋಜನೆಯ ಭಾಗಗಳಾಗಿವೆ. ಮಸೂದ್ ಅಜರ್ ಸಮಸ್ಯೆಯನ್ನು ದಲೈ ಲಾಮಾ ಜೊತೆ ಹೊಂದಾಣಿ ಮಾಡಿ ಲೇಖನ ಬರೆಯಲಾಗಿತ್ತು ಎಂಬುದನ್ನು ಗುಪ್ತಚರ ಸಂಸ್ಥೆಗಳು ಕಂಡುಕೊಂಡಿದ್ದವು.
2016ರಿಂದಲೇ ಶರ್ಮಾ ಅವರು ಚೀನಾದ ಗುಪ್ತಚರ ಸಂಸ್ಥೆಗಳ ಜತೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದರು. ಡೋಕ್ಲಾಮ್ ಸೇರಿದಂತೆ ಚೀನಾ-ಭೂತಾನ್-ಇಂಡಿಯಾ ತ್ರಿ ಜಂಕ್ಷನ್‌ನಲ್ಲಿ ಭಾರತೀಯ ಸೇನೆ ನಿಯೋಜನೆಯ ಮಹತ್ವದ ಮಾಹಿತಿಯನ್ನು ಶರ್ಮಾ ಅವರು ಚೀನಾಗೆ ರವಾನಿಸಿದ್ದರ ಎಂದು ಪೊಲೀಸರು ತಿಳಿಸಿದ್ದರು.
ಇದೇ ವೇಳೆ, ಮಾಧ್ಯಮ ಸಂಸ್ಥೆಯೊಂದು ಕೂಡ ಚೀನಾದ ಪರವಾಗಿ ಕೆಲಸ ಮಾಡುತ್ತಿದೆ. 2020 ಮೇ ತಿಂಗಳಲ್ಲಿ ಗಲ್ವಾನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಚೀನಾಗೆ ನೆರವಾಗುವಂತೆ ರಾಯಭಾರಿಯ ಸಂದರ್ಶನವನ್ನು ಏರ್ಪಡಿಸಿತ್ತು. ಈ ವಿಷಯ ಗೊತ್ತಾಗುತ್ತಿದ್ದಂತೆ ಪ್ರಸಾರ ಭಾರತೀಯ ಈ ಸಂಸ್ಥೆಯ ಜತೆಗಿನ ಸಂಬಂಧವನ್ನು ಪುನರ್ ಪರಿಶೀಲನೆ ನಡೆಸಿತ್ತು ಎಂಬ ಮಾಹಿತಿಯನ್ನು ವರದಿಯಲ್ಲಿ ತಿಳಿಸಲಾಗಿದೆ.
ದೇಶದ ಸಾರ್ವಭೌಮತ್ವ ಮತ್ತು ಭದ್ರತೆಯ ಸವಾಲೊಡ್ಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು 2020ರಲ್ಲಿ 59 ಚೀನಿ ಆ್ಯಪ್‌ಗಳನ್ನು ನಿಷೇಧಿಸಿತ್ತು. ಟಿಕ್‌ಟಾಕ್, ಯುಸಿ ಬ್ರೌಸರ್, ಶೇರ್ ಇಟ್, ಹೆಲೋ ಸೇರಿದಂತೆ ಇತರ ಆ್ಯಪ್‌ಗಳು ಜಗತ್ತಿನಾದ್ಯಂತ 50 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿದ್ದವು. ಈ ಆ್ಯಪ್‌ಗಳನ್ನು ಭಾರತೀಯರ ಮಾಹಿತಿಯನ್ನು ಚೀನಾಗೆ ರವಾನಿಸುತ್ತಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಿಷೇಧ ಹೇರಲಾಗಿತ್ತು.
ಭಾರತ-ಚೀನಾ ಸಂಬಂಧಗಳ ಕುರಿತು ನಿರಂತರವಾಗಿ ಕಾರ್ಯಕ್ರಮವನ್ನು ಪ್ರಸಾರ ಮಾಡುವ ಪ್ರಾದೇಶಿಕ ಟಿವಿ ಚಾನೆಲ್‌ಗಳು, ಚೀನಿ ವಿಶ್ವವಿದ್ಯಾಲಯಗಳಿಂದ ಟ್ರೈನಿಂಗ್ ಮತ್ತು ಪದವಿಗಳನ್ನು ಪಡೆದುಕೊಂಡಿವೆ ಎಂಬ ಸಂಗತಿಗಳನ್ನು ಭಾರತೀಯ ಗುಪ್ತಚರ ಸಂಸ್ಥೆಗಳು ಪತ್ತೆ ಹಚ್ಚಿವೆ. ಕೆಲವು ಮೂಲಗಳ ಪ್ರಕಾರ, ಚೀನಾ ಭಾರತೀಯ ಪತ್ರಕರ್ತರನ್ನು ವಿವಿಧ ಫೆಲೋಶಿಫ್ ಪ್ರೋಗ್ರಾಮ್‌ಗಳಿಗೆ ಕಳುಹಿಸಿ ಕೊಟ್ಟಿದೆ.
ಈ ಸುದ್ದಿಯನ್ನೂ ಓದಿ: China Stapled Visa: ವೀಸಾ ನೀಡಲು ಕುತಂತ್ರ; ಚೀನಾಗೆ ತೆರಳದ ಭಾರತದ ವುಶು ಕ್ರೀಡಾಪಟುಗಳು
ಚೀನಾದ ಕಮ್ಯುನಿಸ್ಟ್ ಪಾರ್ಟಿಯು ಭಾರತೀಯ ಮಾಧ್ಯಮವನ್ನು ಗುರಿಯಾಗಿಸಿಕೊಂಡಿದೆ. ಅದರಲ್ಲೂ ವಿಶೇಷವಾಗಿ ಮಲಯಾಳಂ, ತೆಲುಗು, ಒಡಿಯಾ ಮತ್ತು ಉರ್ದು ಭಾಷೆಗಳಲ್ಲಿ ವಿಷಯಗಳಿಗೆ ಅಪ್ಲಿಕೇಶನ್ ಆಧಾರಿತ ಹಣದ ನೆರವು ಒದಗಿಸಲಾಗುತ್ತದೆ. ಚೈನಾ ರೇಡಿಯೊ ಇಂಟರ್‌ನ್ಯಾಶನಲ್‌ನ ತಮಿಳು ಪ್ರಸಾರವು ಭಾರತದಲ್ಲಿ ಚೀನಾದ ಕಾರ್ಯಸೂಚಿಯನ್ನು ಪ್ರಚಾರ ಮಾಡುವ ಒಂದು ಉದಾಹರಣೆಯಾಗಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.