ನವ ದೆಹಲಿ: ಆಗಾಗ ಭಾರತದ ವಿರುದ್ಧ ಕಾಲು ಕೆದರಿ ಜಗಳಕ್ಕೆ ನಿಲ್ಲುವ ಚೀನಾ ಈ ಬಾರಿ ಲಡಾಖ್ ಭಾಗದಲ್ಲಿ ಕಿರಿಕ್ ಮಾಡಿದೆ. ಚೀನಾದ ವಿಮಾನವೊಂದು ಪೂರ್ವ ಲಡಾಖ್‌ನ ವಾಸ್ತವಿಕ ಗಡಿ ರೇಖೆಯ ಅತ್ಯಂತ ಸಮೀಪದಲ್ಲಿ ಹಾರಾಡಿದೆ. ಜೂನ್ ತಿಂಗಳ ಕೊನೆಯ ವಾರದಲ್ಲಿ ಈ ಘಟನೆ ನಡೆದಿದೆ. ಚೀನಾ ಸೇನೆಯ ಕಿತಾಪತಿಯ ಸುಳಿವನ್ನು ಪಡೆದ ಭಾರತೀಯ ವಾಯುಪಡೆ ತಕ್ಷಣವೇ ಜಾಗೃತವಾಗಿ ಯಾವುದೇ ದುಷ್ಕ್ರಮಣ ಕೃತ್ಯವನ್ನು ಎದುರಿಸಲು ಸಜ್ಜಾಯಿತು ಎಂದು ಸರಕಾರದ ಮೂಲಗಳು ತಿಳಿಸಿವೆ.
ಚೀನಾವು ಪೂರ್ವ ಲಡಾಖ್ ಭಾಗದಲ್ಲಿ ಕಳೆದ ಕೆಲವು ತಿಂಗಳಿನಿಂದ ಇಂಥ ದುಷ್ಟ ಪ್ರಯತ್ನಕ್ಕೆ ಮುಂದಾಗಿರಲಿಲ್ಲ. ಈ ಬಾರಿ ಯಾಕಿಂತ ದುಸ್ಸಾಹಸಕ್ಕೆ ಮುಂದಾಯಿತು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಬಂದಿರುವುದು ಯಾವ ವಿಮಾನ?
ಚೀನಾದ ವಿಮಾನ ಬಂದಿರುವ ಮಾಹಿತಿ ಗಡಿಭಾಗದಲ್ಲಿ ಸ್ಥಾಪಿಸಿರುವ ವಾಯುಪಡೆಯ ರೇಡಾರ್‌ನಲ್ಲಿ ದಾಖಲಾಗಿದೆ. ಚೀನಾದ ವಾಯುಪಡೆಯು ಪೂರ್ವ ಭಾಗದಲ್ಲಿ ತನ್ನ ಪ್ರದೇಶದಲ್ಲಿ ಭಾರಿ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಕೆಲವೊಂದು ಶಸ್ತ್ರಾಸ್ತ್ರಗಳ ಬಳಕೆಯನ್ನೂ ಮಾಡುತ್ತಿದೆ. ಈ ಕಾರ್ಯಾಚರಣೆಯ ವೇಳೆ ಅದು ಭಾರತದ ಗಡಿ ಭಾಗದಲ್ಲಿ ಹಾರಾಟ ನಡೆಸುವ ಮೂಲಕ ಕೆರಳಿಸುವ ಪ್ರಯತ್ನ ನಡೆಸಿದೆ.
ಭಾರತವು ಈಗಾಗಲೇ ಈ ವಿಚಾರವನ್ನು ರಾಯಭಾರಿ ಮಾಧ್ಯಮದ ಮೂಲಕ ಚೀನಾ ಮಿಲಿಟರಿಗೆ ತಿಳಿಸಿದೆ. ಮುಂದೆ ಇಂಥ ಘಟನೆಗಳು ನಡೆಯದಂತೆ ಎಚ್ಚರ ವಹಿಸುವಂತೆ ಸೂಚಿಸಿದೆ. ಅದರ ಬಳಿಕ ಈ ರೀತಿಯ ದುಸ್ಸಾಹಸಕ್ಕೆ ಚೀನಾ ವಾಯುಪಡೆ ಇಳಿದಿಲ್ಲ.
ಕಟ್ಟೆಚ್ಚರದಲ್ಲಿ ಭಾರತ
ಈ ನಡುವೆ ಭಾರತೀಯ ವಾಯುಪಡೆ ಲಡಾಖ್ ಭಾಗದಲ್ಲಿ ತನ್ನ ನಿಗಾವನ್ನು ಹೆಚ್ಚಿಸಿದೆ. ೨೦೨೦ರಿಂದಲೇ ಈ ಭಾಗದಲ್ಲಿ ಭಾರತ ಹೆಚ್ಚು ಜಾಗೃತವಾಗಿಯೇ ಇದೆ.
ಇದನ್ನೂ ಓದಿ| ತೈವಾನ್ ವಾಯುನೆಲೆಯ ಕಡೆಗೆ ಚೀನಾದ 29 ಯುದ್ಧ ವಿಮಾನಗಳ ರವಾನೆ