ಮುಂಬಯಿ: ಉತ್ತರಪ್ರದೇಶದಲ್ಲಿ ಯಾವೊಬ್ಬ ಗೂಂಡಾ ಕೂಡ ಉದ್ಯಮಿಗಳು ಮತ್ತು ಬಿಸಿನೆಸ್ ಮಾಡುವವರಿಂದ ಹಣ ಸುಲಿಗೆ ಮಾಡಲಾರ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (CM Yogi Adityanath) ಭರವಸೆ ನೀಡಿದ್ದಾರೆ.
ಉತ್ತರಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಗಣನೀಯ ಸುಧಾರಣೆಯಾಗಿದ್ದು, ಉದ್ಯಮಿಗಳು ನಿಶ್ಚಿಂತೆಯಿಂದ ಹೂಡಿಕೆ ಮಾಡಬಹುದು, ಕಂಪನಿಗಳನ್ನು ಸ್ಥಾಪಿಸಬಹುದು ಎಂದು ಯೋಗಿ ಆದಿತ್ಯನಾಥ್ ಹೂಡಿಕೆದಾರರಿಗೆ ಭರವಸೆ ನೀಡಿದರು.
ಲಖನೌದಲ್ಲಿ ಫೆಬ್ರವರಿಯಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಪೂರ್ವಭಾವಿಯಾಗಿ, ಮುಂಬಯಿನಲ್ಲಿ ಉದ್ಯಮಿಗಳು ಹಾಗೂ ಬಾಲಿವುಡ್ ನಿರ್ಮಾಪಕರುಗಳ ಜತೆಗೆ ಯೋಗಿ ಆದಿತ್ಯನಾಥ್ ಸಮಾಲೋಚನೆ ನಡೆಸಿದರು.
ರಾಜಕೀಯ ದೇಣಿಗೆಯನ್ನೂ ಉದ್ಯಮಿಗಳಿಂದ, ವರ್ತಕರಿಂದ ಬಲವಂತವಾಗಿ ವಸೂಲು ಮಾಡುವಂತಿಲ್ಲ. ಆ ರೀತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ ಎಂದು.
ಜಾಗತಿಕ ಹೂಡಿಕೆದಾರರ ಸಮಾವೇಶದಿಂದ ಉತ್ತರಪ್ರದೇಶಕ್ಕೆ 5 ಲಕ್ಷ ಕೋಟಿ ರೂ. ಬಂಡವಾಳ ಹರಿದು ಬರುವ ನಿರೀಕ್ಷೆಯನ್ನು ಉತ್ತರಪ್ರದೇಶ ಸರ್ಕಾರ ಹೊಂದಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ, ಟಾಟಾ ಸನ್ಸ್ ಮುಖ್ಯಸ್ಥ ಎನ್.ಚಂದರಶೇಖರನ್, ಆದಿತ್ಯಾ ಬಿರ್ಲಾ ಗ್ರೂಪ್ ಮುಖ್ಯಸ್ಥ ಕುಮಾರಮಂಗಳಂ ಬಿರ್ಲಾ ಮೊದಲಾದ ಉದ್ಯಮಿಗಳ ಜತೆಗೆ ಸಮಾಲೋಚನೆ ನಡೆಸಿದರು.
ಚಲನಚಿತ್ರ ವಲಯದ ನಿರ್ಮಾಪಕರು, ಕಲಾವಿದರನ್ನು ಭೇಟಿಯಾದ ಆದಿತ್ಯನಾಥ್ ಅವರು, ಉತ್ತರಪ್ರದೇಶ ಸಿನಿಮಾ ಇಂಡಸ್ಟ್ರಿಗೆ ಸ್ನೇಹಿಯಾಗಿದೆ. ಚಿತ್ರರಂಗದ ಗಣ್ಯರು ಇಲ್ಲಿ ಸಂಸದರಾಗಿದ್ದಾರೆ. ನಿಮಗೆ ಉತ್ತರಪ್ರದೇಶದ ಅಗತ್ಯತೆಗಳು ಗೊತ್ತಿರಬಹುದು ಎಂದು ಹೇಳಿದರು.
ಉತ್ತರಪ್ರದೇಶದಲ್ಲಿ ವೆಬ್ ಸೀರೀಸ್ ತಯಾರಿಸಿದರೆ 50% ಸಬ್ಸಿಡಿಯನ್ನು ನೀಡಲಾಗುವುದು ಎಂದು ಆದಿತ್ಯನಾಥ್ ಅವರು ಈ ಸಂದರ್ಭ ಘೋಷಿಸಿದರು.