Site icon Vistara News

ಕಲ್ಲಿದ್ದಲು ಕೊರತೆ, ಇನ್ನಷ್ಟು ಪವರ್‌ ಕಟ್‌ ಅನುಭವಿಸಲು ರೆಡಿಯಾಗಿ!

ಕಲ್ಲಿದ್ದಲು ಕೊರತೆಯಿಂದಾಗಿ ವಿದ್ಯುತ್‌ ಉತ್ಪಾದನೆ ಕೂಡ ತೊಂದರೆಗೀಡಾಗಿದ್ದು, ಗ್ರಾಮೀಣ ಭಾರತದ ಹಲವು ಕಡೆಗಳಲ್ಲಿ ಕಳೆದ ಒಂದು ವಾರದಿಂದ ವಿದ್ಯುತ್‌ ಕಡಿತ ಸಂಭವಿಸುತ್ತಿದೆ.

1901ರಿಂದೀಚೆಗೆ ಅತಿ ಹೆಚ್ಚಿನ ಶಾಖಯುತ ವಾತಾವರಣ ಭಾರತದಲ್ಲಿ ಕಂಡುಬಂದಿದ್ದು, ದೆಹಲಿ, ಪಂಜಾಬ್‌ ಮತ್ತು ರಾಜಸ್ಥಾನಗಳಲ್ಲಿ ಹೀಟ್‌ವೇವ್‌ ಜನತೆಯನ್ನು ತಾಪಕ್ಕೀಡುಮಾಡಿದೆ. ದಕ್ಷಿಣ ಭಾರತದಲ್ಲೂ ತಾಪಮಾನ ಹೆಚ್ಚಾಗಿದೆ. ಇದರಿಂದಾಗಿ ದೇಶಾದ್ಯಂತ ಮನೆ ಬಳಕೆ ಹಾಗೂ ಇತರೆಡೆಗಳ ವಿದ್ಯುತ್‌ ಬಳಕೆ ಪ್ರಮಾಣ ಹಲವು ಪಟ್ಟು ಹೆಚ್ಚಿದೆ. ನೀರಿನ ಕೊರತೆಯಿಂದಾಗಿ ಜಲವಿದ್ಯುತ್‌ ಉತ್ಪಾದನೆ ಆಗುತ್ತಿಲ್ಲ. ಇದು ಕಲ್ಲಿದ್ದಲು ಕೊರತೆಗೆ ಕಾರಣವಾಗಿದೆ.

ಪಂಜಾಬ್‌, ಹರಿಯಾಣ, ಬಿಹಾರ, ಜಾರ್ಖಂಡ್‌, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್‌, ಮಹಾರಾಷ್ಟ್ರಗಳ ಉಷ್ಣವಿದ್ಯುತ್‌ ಸ್ಥಾವರಗಳು ಕಲ್ಲಿದ್ದಲು ಕೊರತೆ ಅನುಭವಿಸುತ್ತಿವೆ. ಉದಾಹರಣೆಗೆ, ರಾಜಸ್ಥಾನ ಪ್ರತಿದಿನ 10,110 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುತ್ತಿದ್ದು, ಅದೀಗ 6,600ಕ್ಕೆ ಇಳಿದಿದೆ.

ಕರ್ನಾಟಕದಲ್ಲಿ ಸದ್ಯ ವಿದ್ಯುತ್‌ನ ತೀವ್ರ ಅಭಾವ ಉಂಟಾಗಿಲ್ಲ. ಔದ್ಯಮಿಕ ಘಟಕಗಳಿಗೆ ದಿನವಿಡೀ ಕರೆಂಟ್‌ ದೊರೆಯುತ್ತಿದೆ. ಆದರೆ ಹಳ್ಳಿಗಳಲ್ಲಿ ರೈತರಿಗೆ ಕೇವಲ 7 ಗಂಟೆಗಳ ವಿದ್ಯುತ್‌ ಮಾತ್ರ ದೊರೆಯುತ್ತಿದೆ. ಹೆಚ್ಚಿನ ಎಲ್ಲ ರಾಜ್ಯಗಳಲ್ಲಿ ಮನೆ ಬಳಕೆ ವಿದ್ಯುತ್‌ನ ಬೇಡಿಕೆ ಅಧಿಕಗೊಂಡಿದೆ.

ಆಂಧ್ರಪ್ರದೇಶದಲ್ಲಿ ಬೇಡಿಕೆ 46% ಹೆಚ್ಚಿದ್ದು, ಗ್ರಾಮೀಣ ಪ್ರದೇಶಗಳಿಗೆ ಸಂಜೆ 4-8 ಗಂಟೆ ವಿದ್ಯುತ್‌ ಕೊಡಲಾಗುತ್ತಿದೆ ಹಾಗೂ ರಾತ್ರಿ ಪವರ್‌ ಕಟ್ ಮಾಡಲಾಗುತ್ತಿದೆ. ಕೈಗಾರಿಕೆಗಳಿಗೆ ಎರಡು ದಿನದ ರಜೆ ಘೋಷಿಸಲಾಗಿದೆ.
ಮಹಾರಾಷ್ಟ್ರದಲ್ಲಿರುವ ಎಲ್ಲ 27 ಥರ್ಮಲ್‌ ವಿದ್ಯುತ್‌ ಸ್ಥಾವರಗಳು ಕಾರ್ಯಾಚರಿಸುತ್ತಿವೆ. ಇದು ಆರು ದಶಕಗಳ ದಾಖಲೆ. ಆದರೂ 2500 ಮೆಗಾವ್ಯಾಟ್‌ ವಿದ್ಯುತ್‌ ಕೊರತೆ ಅನುಭವಿಸುತ್ತಿದೆ. ಜಾರ್ಖಂಡ್‌, ಛತ್ತೀಸ್‌ಗಢಗಳಲ್ಲಿ ಕಲ್ಲಿದ್ದಲು ಕೊರತೆಯಿಂದಾಗಿ ಘಟಕಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಿಸುತ್ತಿಲ್ಲ.

ಕೇಂದ್ರ ವಿದ್ಯುತ್‌ ಪ್ರಾಧಿಕಾರ (ಸಿಇಎ) ಪ್ರಕಾರ 165 ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ 56ರಲ್ಲಿ ಶೇ.10ರಷ್ಟು ಕಲ್ಲಿದ್ದಲು ಮಾತ್ರ ಉಳಿದಿದೆ. ಅದರಲ್ಲಿ ಕನಿಷ್ಠ 26 ಘಟಕಗಳಲ್ಲಿ ಶೇ.5ಕ್ಕೂ ಕಡಿಮೆ ಕಲ್ಲಿದ್ದಲಿದೆ. ಕೆಲವು ಸ್ಥಾವರಗಳಲ್ಲಿ ಒಂದು ದಿನಕ್ಕೆ ಸಾಕಾಗುವಷ್ಟು ಮಾತ್ರ ಇದೆ. ಕನಿಷ್ಠ ಪಕ್ಷ 21 ದಿನಕ್ಕಾದರೂ ಸಂಗ್ರಹ ಇರಬೇಕು. ದೇಶದ ಶೇ.70ರಷ್ಟು ವಿದ್ಯುತ್‌ ಉತ್ಪಾದನೆ ಕಲ್ಲಿದ್ದಲಿನಿಂದ ಆಗುತ್ತದೆ.

ಇದನ್ನೂ ಓದಿ: Heatwaveನಿಂದ ಪಾರಾಗುವುದು ಹೇಗೆ?

ಪ್ರಯಾಣಿಕ ರೈಲುಗಳು ರದ್ದು

ಉಷ್ಣ ವಿದ್ಯುತ್‌ ಸ್ಥಾವರಗಳಿಗೆ ತುರ್ತಾಗಿ ಕಲ್ಲಿದ್ದಲು ಪೂರೈಸುವುದಕ್ಕಾಗಿ, 42 ಪ್ರಯಾಣಿಕ ರೈಲುಗಳ ಓಡಾಟವನ್ನು ರದ್ದುಗೊಳಿಸಲಾಗಿದೆ. ಇದು ತಾತ್ಕಾಲಿಕ ಕ್ರಮವಾಗಿದ್ದು, ಒಮ್ಮೆ ಕಲ್ಲಿದ್ದಲು ಪೂರೈಕೆ ಯಥಾಸ್ಥಿತಿಗೆ ಮರಳಿದ ಬಳಿಕ ಪ್ರಯಾಣಿಕ ರೈಲುಗಳನ್ನು ಮತ್ತೆ ಆರಂಭಿಸಲಾಗುತ್ತದೆ ಎಂದು ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ.

Exit mobile version